ತುಳುವ ನಾಡ್‌ದ ಗುಂಡೊಡು ಜೋಡು ನಂದಾ ದೀಪ ಬೆಳಗಿಸಿದ


ಪಿ.ಬಿ.ಎಸ್. ಎಂಬ ಹೆಸರು ಕೇಳಿದ ಕ್ಷಣ ಸಹಜವಾಗಿಯೇ ಅನೇಕ ಹಾಡುಗಳು ಗುನುಗುವಂತಾಗುವುದು ಅವರ ಶ್ರೇಷ್ಠತೆಗೆ ಸಾಕ್ಷಿ. ಎಂಟು ಭಾಷೆಗಳನ್ನು ಬಲ್ಲ ಅವರು ಎಂಟೂ ಭಾಷೆಗಳಲ್ಲಿ ಹಾಡಿದರು.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡ ಪಿ.ಬಿ.ಶ್ರೀನಿವಾಸರ ಹುಟ್ಟೂರು. ೧೯೩೦ ಸೆಪ್ಟೆಂಬರ್ ೨೨ ರಂದು ಪಣೀಂದ್ರ ಸ್ವಾಮಿ ಮತ್ತು ಶೇಷಗಿರಿಯಮ್ಮ ದಂಪತಿಗಳ ಪುತ್ರನಾಗಿ ಪಿ.ಬಿ.ಎಸ್. ಜನಿಸಿದರು.
ತೆಲುಗು, ಕನ್ನಡ, ಮಲೆಯಾಳಂ ಹಿಂದಿ ಉರ್ದು ಇಂಗ್ಲಿಷ್ ಸಂಸ್ಕೃತಿ ಭಾಷೆಗಳಲ್ಲಿ ಹಾಡಿದ ಪಿ.ಬಿ.ಎಸ್. ಶಾಲಾ ದಿನಗಳಲ್ಲಿ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಬಿ.ಕಾಂ ಮುಗಿಸಿ ಕಾನೂನು ವ್ಯಾಸಂಗ ಮಾಡುತ್ತಿರುವಾಗ ಜೆಮಿನಿ ಸ್ಟುಡಿಯೋದ ವಾದ್ಯ ವೃಂದ ನೋಡಿಕೊಳ್ಳುವ ಹೊಣೆಗಾರಿಕೆ ಬಿತ್ತು. ವಾದ್ಯವೃಂದವನ್ನು ನೋಡಿಕೊಳ್ಳುವುದರ ಜೊತೆಗೂ ಸಂಗೀತವನ್ನು ಕಲಿಯತೊಡಗಿದ್ದು ಅವರ ಆಸಕ್ತಿಗೆ ಸಾಕ್ಷಿ.
ಪಿ.ಬಿ.ಶ್ರೀನಿವಾಸರವರು ಹಾಡಿರುವ ಕನ್ನಡ ಚಿತ್ರಗಳೆಂದರೆ ‘ಓಹಿಲೇಶ್ವರ’ ‘ಭಕ್ತ ಕನಕದಾಸ, ಶ್ರೀ ಕೃಷ್ಣಗಾರುಡಿ, ಮಹಿಷಾಸುರ ಮರ್ದಿನಿ, ಕನ್ಯಾರತ್ನ ಶ್ರೀ ಶೈಲ ಮಹಾತ್ಮೆ, ಸತೀ ಸಾವಿತ್ರಿ, ಸಂಧ್ಯಾರಾಗ, ರತ್ನಮಂಜರಿ, ರಾಜದುರ್ಗ ರಹಸ್ಯ, ಪಾರ್ವತಿ ಕಲ್ಯಾಣ, ನಂದಾದೀಪ, ನವಜೀವನ, ರಣಧೀರ ಕಂಠೀರವ ನಮ್ಮ ಊರು ನಮ್ಮ ಮಕ್ಕಳು, ನಾದಿ, ನಕ್ಕರೆ ಅದೇ ಸ್ವರ್ಗ, ಪ್ರತಿಧ್ವನಿ, ಪ್ರತಿಜ್ಞೆ, ರೌಡಿ ರಂಗಣ್ಣ, ರಾಣಿ ಹೊನ್ನಮ್ಮ, ಸತೀ ಸುಕನ್ಯ, ಸಂತ ತುಕಾರಾಂ, ಸರ್ವಮಂಗಳ, ಶ್ರೀರಾಮಾಂಜನೇಯ ಯುದ್ದ ಸೇರಿದಂತೆ ಹಲವಾರು ಕನ್ನಡ ಹಾಡುಗಳಿಗೆ ಪಿ.ಬಿ.ಶ್ರೀನಿವಾಸ್ ಧ್ವನಿಯಾಗಿದ್ದಾರೆ.
ಪಿ.ವಿ. ಶ್ರೀನಿವಾಸ್ ಅವರನ್ನು ಗಾಯಕರಾಗಿ ಮೊಟ್ಟ ಮೊದಲಿಗೆ ಪರಿಚಯಿಸಿದವರು ಹೆಸರಾಂತ ನಿರ್ಮಾಪಕ ನಿರ್ದೇಶಕ ಕಲಾವಿದರೂ ಆದ ನಾಗೇಂದ್ರರಾಯರು.
೧೯೫೩ರಲ್ಲಿ ಬಂದ ‘ಜಾತಕ ಫಲ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವಷ್ಟೆ ಅಲ್ಲ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಮೂಡಿಬಂದಿತ್ತು. ಈ ಚಿತ್ರದ ಮೂರು ಭಾಷೆಗಳಲ್ಲಿ ಅವರು ಹಾಡಿದ್ದಾರೆ. ನಂತರ ಹಿಂದಿಯ ಮಿನಿಸ್ಟರ್ ಸಂಪತ್ ಅನ್ನು ಹಾಡಿಗೆ ಧ್ವನಿಯಾಗ ತ್ರಿಭಾಷೆಯಿಂದ ಚತುರ್ಭಾಷೆ ಗಾಯಕರಾದರು. ಆಮೇಲೆ ಮಲಯಾಳಂನ ಹರಿಶ್ಚಂದ್ರ ಚಿತ್ರಕ್ಕೆ ಗಾಯಕರಾಗಿ ಪಂಚಭಾಷಾ ಪ್ರವೀಣರಾದರು.
ಪಿ.ಬಿಯವರು ಎಂಟು ಭಾಷೆಗಳಲ್ಲಿ ೭೨೦ ಕವಿತೆಗಳನ್ನು ರಚಿಸಿದ್ದಾರೆ. ಸಾವಿರಾರು ಆಶುಕವಿತೆಗಳನ್ನು ಬರೆದಿದ್ದಾರೆ. ಇವರು ಹಾಡಿದ ೯೮೩ ಹಾಡುಗಳಲ್ಲಿ ೨೪೦ ಚಿತ್ರಗಳು ರಾಜ್‌ಕುಮಾರ್‌ರವರ ಚಿತ್ರ ಎನ್ನುವುದು ವಿಶೇಷ. ಇದು ಒಂದು ದಾಖಲೆ. ಪಿ.ಬಿ.ಶ್ರೀನಿವಾಸ್ ಹಿನ್ನೆಲೆಗಾಯಕರು ಮಾತ್ರ ಆಗಿರಲಿಲ್ಲ. ಗೀತರಚನಾಕಾರರಾಗಿದ್ದರು. ‘ಮಕ್ಕಳ ಭಾಗ್ಯ’ ಚಿತ್ರಕ್ಕಾಗಿ ಬನ್ನಿ ಮಹಾರಾಯರೇ ಎನ್ನುವ ಹಾಡನ್ನು ಸ್ವತಃ ರಚಿಸಿ ಹಾಡಿದರು. ಭಾಗ್ಯಜ್ಯೋತಿ ಚಿತ್ರಿಕ್ಕಾಗಿ ದಿವ್ಯಗಗನ ವನವಾಸಿನಿ ಎಂಬ ಹಾಡನ್ನು ಸಂಸ್ಕೃತದಲ್ಲಿ ಬರೆದು ವಾಣಿಜಯರಾಂ ರವರೊಂದಿಗೆ ತಾವೇ ಹಾಡಿದರು. ಇಳಿದು ಬಾ ತಾಯೆ ಇಳಿದು ಬಾ ಚಿತ್ರದಲ್ಲಿ ಸ್ವತಃ ಹಾಡಿ ತೆರೆಯ ಮೇಲೆ ಅಭಿನಯಿಸಿದ್ದಾರೆ.
ತಮಿಳು ನಾಡು ಸರಕಾರ ವಿಶೇಷ ಕಾನೂನು ರೂಪಿಸಿ ಅಲ್ಲಿನ ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಿತು. ೧೯೯೮ರಲ್ಲಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪಿ.ಬಿ.ಶ್ರೀನಿವಾಸ್ ಅವರು ಶ್ರೀನಿವಾಸ ಗಾಯತ್ರಿ ವೃತ, ಗಾಯಕುಡಿಗೇಯ ಪ್ರಣವಂ ಪುಸ್ತಕಗಳ ಕರ್ತೃ ಕೂಡಾ. ಇದರಲ್ಲಿ ಎಂಟು ಭಾಷೆಗಳ ೭೨೦ ಸಂಕಲನ ಇದೇ ಮೇ. ೭ ರಂದು ಬಿಡುಗಡೆಯಾಗಬೇಕಿದ್ದು ಅಷ್ಟರಲ್ಲಿ ಅವರು ಪರಮಾತ್ಮನ ಪಾದ ಸೇರಿದರು.
ಕನ್ನಡ ಮಾತ್ರವಲ್ಲದೆ ತುಳು ಚಿತ್ರಗಳಿಗೆ ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ. ‘ನಿಕಾದ್ ಯಾನ್ ದುಂಬಿಯಾದ್ ಬರ್ಪೆ’ ಎನ್ನುವ ತುಳು ಹಾಡು ಹಾಡುವ ಮೂಲಕ ತುಳುವನ್ನು ಸುಶ್ರಾವ್ಯವಾಗಿ ಹಾಡಬಲ್ಲೆ ಎಂದು ಸಾಬೀತು ಪಡಿಸಿ ದ್ದಾರೆ. ತುಳು ಚಿತ್ರಕ್ಕೂ ಪಿ.ಬಿ.ಶ್ರೀನಿ ವಾಸ್‌ರವರಿಗೂ ಎಲ್ಲಿಲ್ಲದ ನಂಟು. ಆರಂಭದ ದಿನದಿಂದ ಎಲ್ಲ ತುಳು ಚಿತ್ರಗಳಲ್ಲೂ ಬಿ.ಬಿ. ಶ್ರೀನಿವಾಸ್‌ರವರ ಕಂಠಸಿರಿಯಿದೆ. ತುಳು ಚಿತ್ರದ ಹಾಡುಗಳನ್ನು ಮುಂದುವರಿಸು ವುದಾದರೆ ೧೯೭೨ರಲ್ಲಿ ತೆರೆಗೆ ಬಂದ ಕೆ.ಎನ್.ಟೇಲರ್‌ರವರ ದಾರೆದ ಬುಡೆದಿ ಚಿತ್ರದಲ್ಲಿ ಪಿ.ಬಿ.ಶ್ರೀಯವರ ಸುಮಧುರವಾದ ಗಾಯನವಿದೆ.
ಕೋಟಿ ಚೆನ್ನಯ ಚಿತ್ರಕ್ಕಾಗಿ ಅಮೃತಸೋಮೇಶ್ವರರು ಬರೆದ ‘ಜೋಡು ನಂದಾ ದೀಪ ಬೆಳಗ್ಂಡ್ ತುಳುವನಾಡ್‌ದ ಗುಂಡೊಡು’ ಎಂಬ ಹಾಡನ್ನು ಸುಮಧುರವಾಗಿ ಹಾಡಿ ದ್ದಾರೆ. ೧೯೯೪ರಲ್ಲಿ ಹಿಂದು ಯುವ ಸೇನೆ ಶ್ರೀ ಗಣೇಶೋತ್ಸವ ಸಮಿತಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್‌ರವರನ್ನು ಸಮ್ಮಾನಿ ಸಲಾಯಿತು. ಅಂದು ಕೂಡ ಹಾಡನ್ನು ಹಾಡುತ್ತಾ ಚರಣ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿ ಕೊಂಡರು.
ಸುಮಧುರ ಕಂಠದ ಪಿ.ಬಿ. ಶ್ರೀನಿವಾಸ್ ಗಾನಕೋಗಿಲೆ ಎಂದೇ ಪ್ರಸಿದ್ದರಾಗಿದ್ದರು. ಸಾವಿರಾರು ಹಾಡು ಗಳನ್ನು ಹಾಡಿ ಕನ್ನಡಿಗರಿಗೆ ಅಪ್ಯಾ ಯಮಾನರಾಗಿದ್ದರು. ಅವರು ಹಾಡಿದ ಮಧುರ ಗೀತೆಗಳು ಎಂದೆಂದೂ ಹಸಿರಾಗಿ ಉಳಿಯಲಿದೆ. ಇನ್ನು ಪಿ.ಬಿ.ಶ್ರೀನಿವಾಸ್ ನೆನಪು ಮಾತ್ರ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಹೆಸರು ಎಂದೆಂದು ಅಮರವಾಗಿರಲಿ. ಮತ್ತೊಮ್ಮೆ ಹುಟ್ಟಿ ಬಾ ಗಾನ ಗಂಧರ್ವ.
       

0 comments

Write Down Your Responses