• HOME
  • ABOUT US
  • LOCAL NEWS
  • CRIME NEWS
  • SPORTS NEWS
  • STATE NEWS
  • ASTROLOGY
  • CONTACT US
ಶಾಹಿದ್ ಅಫ್ರಿದಿ ಅಮೋಘ ಆಲ್‌ರೌಂಡಿಂಗ್ ಆಟ
ಹಂಬನ್‌ಟೋಟಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಪರಾಕ್ರಮದ ಪ್ರದರ್ಶನ ತೋರಿದ ಶಹೀದ್ ಅಫ್ರಿದಿಯ ಅತ್ಯದ್ಭುತ ಪ್ರದರ್ಶನದ ನೆರವಿನಿಂದ ಇಲ್ಲಿ ಶ್ರೀಲಂಕಾ ವಿರುದ್ಧ ದ್ವಿತೀಯ ಹಾಗೂ ಅಂತಿಮ ಟಿ-ಟ್ವೆಂಟಿ ಪಂದ್ಯವನ್ನು ಪಾಕ್ ೨೩ ರನ್‌ಗಳಿಂದ ಗೆದ್ದುಕೊಂಡು ಸರಣಿ ೧-೧ರ ಸಮಬಲದಲ್ಲಿ ಅಂತ್ಯಗೊಳಿಸಿದೆ.
ಟಾಸ್ ಗೆದ್ದ ಪಾಕ್ ಪಡೆ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿತು. ಆದರೆ ನಾಯಕನ ಈ ನಿರ್ಧಾರವನ್ನು ಮಾತ್ರ ಸಹಆಟಗಾರರು ಸಮರ್ಥಿಸಿಕೊಳ್ಳಲಿಲ್ಲ. ಲೋಕಾರುಚಿ ಹಾಗೂ ಕುಲಸೇಕರ ದಾಳಿಗೆ ತಂಡ ತರಗೆಲೆಯಂತೆ ಉದುರಿತು. ಆದರೆ ಕೆಳಕ್ರಮಾಂಕದಲ್ಲಿ ಅಫ್ರಿದಿ ಕೇವಲ ೩೩ ಎಸೆತಗಳಲ್ಲಿ ಅಜೇಯ ೫೨ ರನ್ ಗಳಿಸಿ ತಂಡಕ್ಕೆ ಆಧಾರವಾದರು. ಇದರಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸ್ ಒಳಗೊಂಡಿತ್ತು. ಪರಿಣಾಮ ತಂಡ ತಂಡ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ೧೨೨ ರನ್ ಗಳಿಸಿತು. ಹಫೀಸ್ (೨೪) ಹಾಗೂ ಶೋಯೆಬ್ ಮಲಿಕ್ (೨೭) ಕೂಡ ಕೆಲಹೊತ್ತು ಕ್ರೀಸ್‌ನಲ್ಲಿದ್ದರು. ಕುಲಸೇಕರ ಹಾಗೂ ಲೋಕಾರುಚಿ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಲಂಕಾ ಮೊಹ್ಮದ್ ಸಮಿ ಹಾಗೂ ಯಾಸಿರ್ ಅರಾಫತ್ ದಾಳಿಗೆ ಕಂಗಾಲಾಯಿತು. ತಂಡ ಕೇವಲ ೧೯.೨ ಓವರ್‌ಗಳಲ್ಲೇ ೯೯ ರನ್ ಕುಸಿದು ತೀವ್ರ ಮುಖಭಂಗಕ್ಕೀಡಾಯಿತು. ಇಬ್ಬರೂ ತಲಾ ಮೂರು ವಿಕೆಟ್ ಪಡೆದರೆ ಅಫ್ರಿದಿ ಎರಡು ವಿಕೆಟ್ ಕಬಳಿಸಿದರು.
ತಿಲಕರತ್ನೆ ದಿಲ್ಶಾನ್ (೧೮), ಕಪುಗೇದರಾ (೧೯) ಹಾಗೂ ತಿರುಮನ್ನೆ (೧೮) ಕೆಲಹೊತ್ತು ಕ್ರೀಸ್‌ನಲ್ಲಿದ್ದಾಗ ತಂಡಕ್ಕೆ ಗೆಲ್ಲುವ ಭರವಸೆ ಮೂಡಿತ್ತು. ಆದರೆ ಅಫ್ರಿದಿ ಮೊದಲಿನ ಇಬ್ಬರನ್ನು ಪೆವಿಲಿಯನ್‌ಗಟ್ಟುವ ಮೂಲಕ ತಂಡಕ್ಕೆ ಮುನ್ನಡೆ ತಂದರು. ಆದರೆ ೧೭ನೇ ಓವರ್‌ನಲ್ಲಿ ಸಮಿ ತಿರುಮನ್ನೆ ಹಾಗೂ ಪಿರೇರಾ (೦) ವಿಕೆಟ್ ಪಡೆದಾಗ ಲಂಕಾದ ಬೆನ್ನುಹುರಿಯೇ ಮುರಿದಂತಾಗಿತ್ತು. ನಂತರ ತಂಡ ಎದ್ದೇಳಲು ವಿಫಲವಾಯಿತು.
ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಫ್ರೆಂಚ್ ಓಪನ್‌ನ ಮಿಕ್ಸ್‌ಡ್ ಡಬಲ್ಸ್ ವಿಭಾಗದಲ್ಲಿ ಇಂಡೋ-ರಶ್ಯನ್ ಜೋಡಿಯಾದ ಲಿಯಾಂಡರ್ ಪೇಸ್ ಹಾಗೂ ಎಲೆನಾ ವೆಸ್ನಿನಾ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದು ಕೊಂಡಿದ್ದಾರೆ. ಮ್ಯಾಥಿಲ್ಡೆ ಜಾನ್ಸನ್ ಹಾಗೂ ಮಾರ್ಕ್ ಗಿಕ್ವೆಲ್ ವಿರುದ್ಧ ನೇರ ಅಂತರದ ಜಯಗಳಿಸುವ ಮೂಲಕ ಇಂಡೋ-ರಶ್ಯನ್ ಜೋಡಿ ಈ ಪರಾಕ್ರಮ ಮೆರೆದಿದ್ದಾರೆ. ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ರಶ್ಯಾದ ಸ್ವೆಟ್ಲೆನಾ ಕುಂಜ್ನೆಸ್ತೊವಾ ವಿರುದ್ಧ ಅಚ್ಚರಿಯ ಜಯಗಳಿಸಿದ ಇಟಲಿಯ ಸಾರಾ ಇರ್ರಾನಿ ಕೂಡ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಇದೇ ವೇಳೆ ಬೆಲರೂಸ್‌ನ ವಿಕ್ಟೋರಿಯಾ ಅಜ್ರೆಂಕಾ ಸ್ಲೊವಾ ಕಿಯಾದ ಎದುರಾಳಿ ಡೊಮಿನಿಕಾ ಸಿಬುಲ್ಕೊವಾ ವಿರುದ್ಧ ೬-೨ ಹಾಗೂ ೭-೬ರ ಸೋಲುಣ್ಣುವ ಮೂಲಕ ಕೂಟದಿಂದ ನಿರ್ಗಮಿಸಿದ್ದು, ಎಲ್ಲರ ಅಚ್ಚರಿಗೆ ಕಾರಣ ವಾಯಿತು.
ಫ್ರಾನ್ಸ್‌ನ ತಂಡದ ವಿರುದ್ಧ ಜಯಗಳಿಸಲು ಇಂಡೋ-ರಶ್ಯನ್ ಜೋಡಿ ಕೇವಲ ೪೯ ನಿಮಿಷ ಗಳೇ ಸಾಕಾದವು. ಮೊದಲ ಸುತ್ತಿನಲ್ಲಿ ಎದುರಾಳಿಗೆ ಕೇವಲ ಎರಡು ಅಂಕವನ್ನು ಬಿಟ್ಟುಕೊಟ್ಟ ಜೋಡಿ ದ್ವಿತೀಯ ಸುತ್ತಿನಲ್ಲಿ ಪರಾಕ್ರಮ ಮೆರೆದು ಒಂದು ಪಾಯಿಂಟ್ ಬಿಟ್ಟುಕೊಡಲು ನಿರಾಕರಿಸಿತು. ಅಂತಿಮವಾಗಿ ತಂಡ ೬-೨ ಹಾಗೂ ೬-೦ಯ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂದಿನ ಹಂತಕ್ಕೇರಿತು. ಇನ್ನು ದಿನದ ಅಚ್ಚರಿಯ ಫಲಿತಾಂಶವೆಂದರೆ ಮಹಿಳಾ ಸಿಂಗಲ್ಸ್. ಇಟಲಿಯ ಇರ್ರಾನಿ ವಿರುದ್ಧ ಕುಂಜ್ನೆಸ್ತಾವಾ ೬-೦ ಹಾಗೂ ೭-೫ರ ನಿರಾಶಾದಾಯಕ ಪ್ರದರ್ಶನ ನೀಡಿ ಸೋಲುಂಡ ಹೊರಬಿದ್ದರು. ಇರ್ರಾನಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮೀಸ್‌ಗೆ ಪ್ರವೇಶಿಸಿದ ಮೊದಲ ಆಟಗಾರ್ತಿ ಕೂಡ ಆಗಿದ್ದಾರೆ.
ಬ್ರಿಟನ್‌ಗೆ ಸೋಲುಣಿಸಿ ಕಂಚು ಗೆದ್ದ ಭಾರತ
ಇಪೋ: ಲೀಗ್ ಹಂತದ ಕೆಲವೊಂದು ಪ್ರಮುಖ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತ ಕೊನೆಹಂತದಲ್ಲಿ ಮೇಲೆದ್ದ ರೀತಿ ಅಮೋಘ. ಇಲ್ಲಿ ನಡೆದ ಕಂಚಿನ ಪದಕ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ೩-೧ರ ಅಚ್ಚರಿಯ ಜಯ ದಾಖಲಿಸುವ ಮೂಲಕ ಭಾರತ ಕಂಚಿನ ಪದಕ ಗೆದ್ದುಕೊಂಡಿತು. ಲೀಗ್ ಹಂತದಲ್ಲಿ ಭಾರತ ಬ್ರಿಟನ್ ವಿರುದ್ಧ ೨-೩ರ ಅಂತರದ ಸೋಲನ್ನು ಕಂಡಿತ್ತು.
ಒಟ್ಟಿನಲ್ಲಿ ಹೇಳಬೇಕೆಂದರೆ ಪಂದ್ಯದುದ್ದಕ್ಕೂ ಭಾರತ ಮೇಲುಗೈ ಸಾಧಿಸಿತ್ತು. ಆದರೂ ಗೋಲು ಗಳಿಸುವ ಕೆಲವೊಂದು ಅತ್ಯುತ್ತಮ ಅವಕಾಶಗಳನ್ನು ಕೈಚೆಲ್ಲಿದ್ದು, ಸ್ವಲ್ಪ ನಿರಾಶೆ ಮೂಡಿಸಿತು. ೩೫ನೇ ನಿಮಿಷದಲ್ಲಿ ಆಶ್ಲೆ ಜಾಕ್ಸನ್ ಪಂದ್ಯದಲ್ಲಿ ಗೋಲಿನ ಖಾತೆಯನ್ನು ಆರಂಭಿಸುವ ಮೂಲಕ ಭಾರತಕ್ಕೆ ಹಿನ್ನೆಡೆ ತಂದರು. ಆದರೆ ದ್ವಿತೀಯಾರ್ಧದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಎದುರಾಳಿಗೆ ನಡುಕ ಹುಟ್ಟಿಸಿತು. ೪೨ನೇ ನಿಮಿಷದಲ್ಲಿ ಭಾರತದ ಭರವಸೆಯ ಆಟಗಾರ ಶಿವೇಂದ್ರ ಸಿಂಗ್ ಎದುರಾಳಿ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಹಾಕಿ ಸಮಬಲ ಸಾಧಿಸಲು ನೆರವಾದರು. ಸರಿಯಾಗಿ ಹತ್ತು ನಿಮಿಷಗಳ ನಂತರ ಸಂದೀಪ್ ಸಿಂಗ್ ದಾಖಲಿಸಿದ ಗೋಲು ಬ್ರಿಟನ್‌ಗೆ ಹಿನ್ನೆಡೆ ತಂದುಕೊಟ್ಟಿತು. ಈ ವೇಳೆ ಭಾರತ ಹಲವಾರು ಉತ್ತಮ ಅವಕಾಶಗಳನ್ನು ಕಳಕೊಂಡಿತು. ಅಂತಿಮವಾಗಿ ೬೯ನೇ ನಿಮಿಷದಲ್ಲಿ ತುಷಾರ್ ಖಾಂಡೇಕರ್ ಮತ್ತೊಂದು ಗೋಲು ಗಳಿಸಿ ಮುನ್ನಡೆಯನ್ನು ೩-೧ಕ್ಕೇರಿಸಿದರು. ಅಂತಿಮ ಹಂತದಲ್ಲಿ ಗೋಲು ಗಳಿಸಲು ಇತ್ತಂಡಗಳು ವಿಫಲವಾಯಿತು. ಆದರೂ ಪಂದ್ಯವನ್ನು ತನ್ನದಾಗಿಸುವಲ್ಲಿ ಭಾರತ ಸಫಲತೆಯನ್ನು ಕಂಡಿತು.
ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರಲ್ಲೊಬ್ಬರಾಗಿದ್ದ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಮಾಜಿ ಸದಸ್ಯ ಬಿ.ವಿ.ಕಕ್ಕಿಲ್ಲಾಯ(೯೬) ಇಂದು ನಸುಕಿನ ಜಾವ ಸ್ವಗೃಹದಲ್ಲಿ ನಿಧನರಾದರು.
ಮೂಲತ: ಕೇರಳದವರಾಗಿದ್ದ ಕಕ್ಕಿಲ್ಲಾಯರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ನೆಲೆಸಿದ್ದರು. ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ಪಕ್ಷದ ಕೇಂದ್ರ ನಿರ್ದೇಶನದಂತೆ ಅವರನ್ನು ಮದ್ರಾಸ್ ಎಸೆಂಬ್ಲಿಯಿಂದ ೧೯೫೨ರಲ್ಲಿ ಮೊದಲ ರಾಜ್ಯ ಸಭೆಗೆ ಆಯ್ಕೆಗೊಳಿಸಲಾಗಿತ್ತು. ಆಗ ಅವರಿಗೆ ೩೩ ವಯಸ್ಸಾಗಿತ್ತು. ಅಧಿಕಾರದ ಎರಡು ವರ್ಷಗಳಲ್ಲಿ ರಾಜ್ಯದ ಬರಗಾಲದ ಬಗ್ಗೆ, ಆಹಾರದ ಕೊರತೆಯ ಸಮಸ್ಯೆಗಳ ಬಗ್ಗೆ, ಕೋಲಾರ ಚಿನ್ನದ ಗಣಿಗಳ ರಾಷ್ಟ್ರೀಕರಣದ ಬಗ್ಗೆ, ಹಾಸನ-ಮಂಗಳೂರು ರೈಲು ಮಾರ್ಗದ ಬಗ್ಗೆ ಹಾಗೂ ಕರ್ನಾಟಕ ಏಕೀಕರಣದ ಬಗ್ಗೆ ಒತ್ತಾಯಿಸಿ ವಿವಿಧ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಕಕ್ಕಿಲ್ಲಾಯರು ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಭಾಗವಹಿಸುತ್ತಾ ಕೇರಳದವನಾಗಿ ಪರಿಚಯಿಸಿಕೊಳ್ಳುವ ಅಭಿಲಾಷೆಯನ್ನು ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಅವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿಯೇ ಗುರುತಿಸಿಕೊಂಡಿದ್ದರು.
ರಾಜಸ್ಥಾನ: ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ತಿಂಗಳಾನುಗಟ್ಟಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ನೀಡುವುದಾಗಿ ಆಸೆ ಹುಟ್ಟಿಸಿ, ಸದರಿ ಶಿಕ್ಷಕ ಹುಡುಗಿಯನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ದುರ್ಗಾಲಾಲ್ ಮೀನಾ ಎಂಬ ೨೨ ವರ್ಷದ ಯುವಕ ರಾಜಸ್ಥಾನದ ಬುಂಡಿ ಎಂಬಲ್ಲಿನ ಪಂಡಿತ್ ಸುಖಲಾಲ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ೨೦೧೧ರ ಅಕ್ಟೋಬರ್‌ನಿಂದ ಶಿಕ್ಷಕನಾಗಿ ಕೆಲಸದಲ್ಲಿದ್ದ. ಆದರೆ ೧೬ ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಉತ್ತಮ ಅಂಕಗಳನ್ನು ನೀಡುವುದಾಗಿ ಪುಸಲಾಯಿಸಿ, ಆಕೆಯ ಮೇಲೆ ನಿರಂತರವಾಗಿ ರೇಪ್ ಮಾಡಿದ್ದಾನೆ ಎಂದು ಹೆಚ್ಚುವರಿ ಎಸ್ಪಿ ಎನ್.ಎಲ್. ಪವನ್ ಶನಿವಾರ ತಿಳಿಸಿದ್ದಾರೆ. ಅತ್ಯಾಚಾರ ವಿಷಯ ಬಹಿರಂಗಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಶಿಕ್ಷಕ ದುರ್ಗಾಲಾಲ್ ಮೀನಾ ಬಾಲಕಿಗೆ ಬೆದರಿಸಿದ್ದ ಎಂದು ಎಸ್ಪಿ ಎನ್ ಎಲ್ ಪವನ್ ಹೇಳಿದ್ದಾರೆ. ಆದರೆ ಬಾಲಕಿಯ ಪೋಷಕರಿಗೆ ವಿಷಯ ತಿಳಿದುಬಂದಾಗ ತಕ್ಷಣ ಅವರು ಶಿಕ್ಷಕ ದುರ್ಗಾಲಾಲ್ ಮೀನಾ ವಿರುದ್ಧ ಶುಕ್ರವಾರ ಕೇಸ್ ದಾಖಲಿಸಿದರು. ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದರು. ಅದೇವೇಳೆ ಆಪಾದಿತ ಶಿಕ್ಷಕ ದುರ್ಗಾಲಾಲ್ ಮೀನಾನನ್ನು ವಶಕ್ಕೆ ತೆಗೆದು ಕೊಂಡರು.
ಅತ್ಯಾಚಾರ ವಿಷಯವು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬಂದಿರಲಿಲ್ಲ. ಆದರೆ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಶಿಕ್ಷಕ ದುರ್ಗಾಲಾಲ್ ಮೀನಾನನ್ನು ಸೇವೆಯಿಂದ ವಜಾಗೊಳಿಸಿದ್ದೇವೆ ಎಂದು ಶಾಲಾ ನಿರ್ದೇಶಕ ಲೋಕೇಶ್ ಸುಖವಾಲ್ ಹೇಳಿದ್ದಾರೆ.
ಮಂಗಳೂರು: ಹಾಗೆ ನೋಡಿ ದರೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯನ್ನೇ ತನ್ನ ಮನದ ರಾಜ ಎಂದು ಕೊಂಡಿರುವ ಯುವತಿಯರಿಗೇನೂ ಕೊರತೆ ಇರಲಿ ಕ್ಕಿಲ್ಲ. ಇದ್ದರೂ ಅದನ್ನು ಬಹಿ ರಂಗ ವಾಗಿ ಹೇಳಿಕೊಳ್ಳುವ ಧೈರ್ಯ ತೋರಲಿಕ್ಕಿಲ್ಲ. ಒಬ್ಬಳು ಮಾತ್ರ ತಾನು ರಾಹುಲ್ ಗಾಂಧಿಗೆ ಪರ್ಫೆಕ್ಟ್ ಮ್ಯಾಚ್ ಎಂದು ಹೇಳಿಕೊಂಡು ಬಂದು ರಂಪಾಟ ನಡೆಸಿದ್ದಾಳೆ.
ಶನಿವಾರ ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಅದರಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಕೂಡ ಬಂದಿ ದ್ದರು. ತನ್ನ ಪ್ರೇಮ ನಿವೇದನೆಗೆ ಇದೇ ಸರಿಯಾದ ಸಮಯ ಎಂದು ಕೊಂಡು ಬೆಳಗಾವಿಯ ತಿಲಕವಾಡಿ ಯಿಂದ ಹಾರಿ ಬಂದಿದ್ದವಳು ಹೀನಾ ಪಾಟೋಳಿ ಎಂಬ ಮರಾಠಿ ಮಹಿಳೆ.
ಇವಳ ಪ್ರೇಮದಾಟ ಶನಿವಾರ ದಿನವಿಡಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ನಿದ್ದೆಗೆಡಿಸಿತ್ತು. ದೆಹಲಿಯ ಎಂಐಟಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸದ್ಯ ಬೆಳಗಾವಿಯ ಕಾಲೇಜ್ ಒಂದರಲ್ಲಿ ಉಪನ್ಯಾಸಕಿ ಯಾಗಿದ್ದೇನೆ ಎಂದು ಹೇಳಿಕೊಂ ಡಿರುವ ಹೀನಾ ಪಾಟೋಳಿ, ನನಗೆ ೩೯, ರಾಹುಲ್‌ಗೆ ೪೧. ನಮ್ಮದು ಪರ್ಫೆಕ್ಟ್ ಮ್ಯಾಚ್. ಮದುವೆಯಾಗು ವಂತೆ ಅವರನ್ನು ಕೇಳಲಿದ್ದೇನೆ. ರಾಹುಲ್ ಭೇಟಿಗೆ ಒಮ್ಮೆ ಅವಕಾಶ ಕೊಡಿ ಎಂದು ಭದ್ರತಾ ಸಿಬ್ಬಂದಿ ಯನ್ನು ಗೋಗರೆಯುತ್ತಿದ್ದಳು.
ನಾನು ಕಳೆದ ಎರಡೂವರೆ ವರ್ಷ ಗಳಿಂದ ರಾಹುಲ್‌ನನ್ನು ಪ್ರೀತಿಸು ತ್ತಿದ್ದೇನೆ. ಕಳೆದ ಸೆಪ್ಟಂಬರ್ ೧೫ರಂದು ದೆಹಲಿಯಲ್ಲಿ ರಾಹುಲ್‌ರನ್ನು ಐದು ನಿಮಿಷ ಭೇಟಿಯಾಗಿದ್ದೇನೆ. ಇಂದು ಅವರನ್ನು ಭೇಟಿಯಾಗಿ ಪ್ರೇಮ ನಿವೇದನೆ ಮಾಡದೆ ನಾನು ಹಿಂದಿರುಗುವುದಿಲ್ಲ ಎಂದು ಹಠ ಹಿಡಿದ್ದಿದ್ದಳು. ಭದ್ರತಾ ಸಿಬ್ಬಂದಿಗೆ ದಿನವಿಡಿ ಆಕೆಗೆ ಕಾಯುವುದೇ ಕೆಲಸವಾಗಿತ್ತು. ಎಲ್ಲಿ ನುಗ್ಗಿ ಭದ್ರತಾ ಲೋಪದ ಸಂಕಷ್ಟ ತಂದಿಡುತ್ತಾಳೋ ಎಂಬ ಭಯ ಪೊಲೀಸರಿಗೆ ಕಾಡುತ್ತಲೇ ಇತ್ತು. ಆದರೆ ಆಕೆಗೆ ಝಡ್‌ಪ್ಲಸ್ ಭದ್ರತೆಯ ಸರ್ಪ ಗಾವಲು ಭೇದಿಸಲು ಸಾಧ್ಯವಾಗಲೇ ಇಲ್ಲ.
ರಾಹುಲ್‌ಗೆ ಕಾಲೇಜ್ ದಿನಗಳಲ್ಲಿ ಜರ್ಮನಿ ಯುವತಿಯಲ್ಲಿ ಪ್ರೀತಿಯಿತ್ತು!
ರಾಹುಲ್‌ರ ಈಗಿನ ವಯಸ್ಸಿನಲ್ಲಿ ಅವರ ತಂದೆ ರಾಜೀವ್ ಗಾಂಧಿ ಎರಡು ಮಕ್ಕಳ ತಂದೆಯಾಗಿದ್ದರು. ಮಾತ್ರವಲ್ಲ ದೇಶದ ಪ್ರಧಾನ ಮಂತ್ರಿಯಾಗಿಯೂ ಯಶಸ್ವಿ ಆಡಳಿತ ನಡೆಸುವ ಸೂಚನೆ ನೀಡಿದ್ದರು. ಆದರೆ ರಾಹುಲ್ ಇನ್ನೂ ಯುವರಾಜನ ಹಂತದಿಂದ ಮೇಲೆ ಬರಲೇ ಇಲ್ಲ. ಇಂದಿನ ಸ್ಥಿತಿಗೆ ಆವಶ್ಯ ಎನಿಸುವ ರಾಜಕೀಯ ಪ್ರಬುದ್ಧತೆ ಇನ್ನಷ್ಟೇ ಮೂಡಬೇಕಿದೆ. ಗಾಂಧಿ ಕುಟುಂಬದ ಪುತ್ರ ಎಂಬುದರ ಆಧಾರವೊಂದರಿಂದ ಮಾತ್ರ ರಾಹುಲ್ ಪ್ರಭಾವಿತ ಮತ್ತು ಪ್ರತಿಷ್ಠಿತರಾಗಿ ಉಳಿದಿದ್ದಾರೆಯೇ ಹೊರತು ತನ್ನ ಮುತ್ಸದ್ದಿತನದಿಂದಲ್ಲ ಎಂಬುದು ಅವರ ವಿರೋಧಿಗಳು ಮಾಡುವ ಟೀಕೆಯಾದರೂ ಅದರ ಹೊರತಾದುದು ರಾಹುಲ್‌ರಲ್ಲಿ ಇದೆ ಎಂದು ಕಾಂಗ್ರೆಸಿಗರು ಹೆಮ್ಮೆ ಪಡುತ್ತಾರೆ.
ಅದೇನೇ ಇರಲಿ ರಾಹುಲ್ ತನ್ನ ರಾಜಕೀಯ ಭವಿಷ್ಯಕ್ಕಾಗಿ ವ್ಯಯಕ್ತಿಕ ಜೀವನವನ್ನು ಬಲಿ ಕೊಟ್ಟಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಹುಲ್ ತನ್ನ ಕಾಲೇಜು ದಿನಗಳಲ್ಲಿಯೇ ಜರ್ಮನಿಯ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು ಎಂಬುದು ಜಗಜ್ಜಾಹೀರು. ಈ ಪ್ರೀತಿಯನ್ನು ಪ್ರೀತಿಯಿಂದಲೇ ಚಿವುಟಿ ಹಾಕಿದ್ದು, ಸೋನಿಯಾ ಗಾಂಧಿ ಎಂಬುದು ಪ್ರಚಲಿತದಲ್ಲಿರುವ ಮಾತು. ನಿಮ್ಮ ಪ್ರೀತಿ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿಯೋರ್ವನ್ನು ಕಸಿದು ಕೊಳ್ಳುತ್ತದೆ. ನಿಮ್ಮ ಮದುವೆ ದೇಶದ ಪ್ರಧಾನ ಮಂತ್ರಿಯಾಗುವ ರಾಹುಲ್ ಗಾಂಧಿಯ ಅವಕಾಶವನ್ನು ಕಸಿದುಕೊಳ್ಳುತ್ತದೆ ಎಂದು ಹತ್ತು ವರ್ಷಗಳ ಹಿಂದೆ ಸೋನಿಯಾ ಜರ್ಮನಿಯ ಬೆಡಗಿಗೆ ಪ್ರೀತಿಯಿಂದಲೆ ಹೇಳಿದ್ದರು. ರಾಹುಲ್‌ನ ಭವಿಷ್ಯಕ್ಕಾಗಿ ಆಕೆ ತನ್ನ ಪ್ರೀತಿ ತ್ಯಾಗ ಮಾಡಿದ್ದಾಳೆ ಎಂಬುದು ಕಾಂಗ್ರೆಸ್‌ಸಿಗರಲ್ಲಿಯೇ ಚಾಲ್ತಿಯಲ್ಲಿರುವ ಮಾತು.
ಜೀವನದ ಅರ್ಧ ಆಯುಷ್ಯ ಎಂದು ಹೇಳಬಹುದಾದ ವಯಸ್ಸಿ ನಲ್ಲಿದ್ದರೂ ರಾಹುಲ್ ಈ ವರೆಗೆ ಮದುವೆಯಾಗಿಲ್ಲ ಯಾಕೆ ಎಂಬುದು ಒಂದು ಪ್ರಶ್ನೆ? ರಾಹುಲ್ ಈಗಲೂ ಜರ್ಮನಿಯ ಯುವತಿಯ ಪ್ರೀತಿಯಿಂದ ಹೊರಬಂದಿಲ್ಲವೇ ಅಥವಾ ಪ್ರಧಾನಮಂತ್ರಿ ಪಟ್ಟಕ್ಕೇರಿದ ಬಳಿಕವಷ್ಟೆ ಮದುವೆಯಾಗುವುದಾಗಿ ಶಪಥ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಇದರ ಮಧ್ಯೆ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿರುವ ಗುಸುಗುಸು ಇನ್ನೂ ಕತೂಹಲಕಾರಿಯಾಗಿದೆ. ಭವಿಷ್ಯದಲ್ಲಿ ರಾಹುಲ್ ಗಾಂಧಿ ಕರಾವಳಿ ಕರ್ನಾಟಕದ ಅಳಿಯನಾದರೆ ಅದರಲ್ಲಿ ಅಚ್ಚರಿ ಪಡುವಂತಹದ್ದೇನೂ ಇಲ್ಲ ಎಂದು ದೆಹಲಿಯ ಓಡಾಟದ ಕನ್ನಡಿಗ ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ವಿಶೇಷವಾಗಿದೆ.
ಪುತ್ತೂರು: ಇಲ್ಲಿನ ಮುರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕೊಠಡಿಗಳ ಅವ್ಯವಸ್ಥೆಯಿಂದಾಗಿ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು ಹಾಗೂ ಅವ್ಯವಹಾರಗಳು ನಡೆದಿವೆಯೆನ್ನುವ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪತ್ರಕರ್ತರಿಗೆ ಅಲ್ಲಿನ ಮುಖ್ಯೋಪಾ ಧ್ಯಾಯರು ವರದಿ ಮಾಡಿದಲ್ಲಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆಯನ್ನು ಒಡ್ಡಿರುವ ಘಟನೆ ನಡೆದಿದೆ.
ಶಾಲಾ ಕಂಪೌಂಡಿಗೆ ಗೇಟುಗ ಳಿಲ್ಲ. ಕೊಠಡಿಗಳಿಗೆ ಬಾಗಿಲಿಲ್ಲ, ಒಟ್ಟು ಶಾಲೆ ದುರವಸ್ಥೆಯಲ್ಲಿದೆ. ಇದರಿಂದಾಗಿ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು, ಗುಂಡು ಪಾರ್ಟಿಗಳು ನಡೆಯು ತ್ತಿರುವ ಬಗ್ಗೆ ಅಲ್ಲಿ ದೊರೆತ ಕೆಲವು ಸೊತ್ತುಗಳಿಂದ ತಿಳಿದುಬಂದಿದೆ. ಅಲ್ಲದೆ ಶಾಲೆಯ ಕಾಮಗಾರಿಯಲ್ಲಿ ಅವ್ಯವ ಹಾರ ನಡೆದಿದೆಯೆನ್ನಲಾದ ಮಾಹಿತಿ ಯೂ ಹೊರಬಿದ್ದಿತ್ತು. ಇದನ್ನು ತಿಳಿದು ಸ್ಥಳಕ್ಕೆ ತೆರಳಿದ ನಾಲ್ವರು ಪತ್ರಕರ್ತರು ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಶಾಲಾ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿದಾಗ, ನಿಮ್ಮನ್ನು ಶಾಲಾ ಆರಣದೊಳಗೆ ಪ್ರವೇಶಿಸಲು ಅನುಮತಿ ನೀಡಿದವರ‍್ಯಾರು? ನಿಮ್ಮ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಮುಖ್ಯೋಪಾಧ್ಯಾಯರು ಬೆದರಿಕೆ ಯನ್ನೂ ಒಡ್ಡಿದ್ದಾರೆ.
ಬೆಂಗಳೂರು: ದೂರದರ್ಶನ ಕಾರ್ಯಕ್ರಮವೊಂದನ್ನು ನೋಡಿ ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ದೆವ್ವ, ಭೂತ, ಪಿಶಾಚಿಗಳ ಕಾರ್ಯಕ್ರಮವನ್ನು ನೋಡಿದ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಗುರುವಾರ ರಾತ್ರಿ ಖಾಸಗಿ ವಾಹಿನಿ ಯೊಂದರಲ್ಲಿ ಪ್ರಸಾರವಾಗುವ ದೆವ್ವಗಳ ಕಾರ್ಯಕ್ರಮ ವೀಕ್ಷಿಸಿದ ಮೋಹನ್ (೧೨) ಎಂಬ ಬಾಲಕ ತೀವ್ರವಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾನೆ. ಬಳಿಕ ಶುಕ್ರವಾರ ತನ್ನ ತಾಯಿಯ ಬಳಿ ತನ್ನನ್ನು ದೆವ್ವಗಳು ಹಿಂಸಿಸುತ್ತಿವೆ ಎಂದು ಹೇಳಿಕೊಂಡಿದ್ದಾನೆ.
ಮೋಹನ್ ತಾಯಿ ಮುನಿರತ್ನಮ್ಮ ಅದೆಲ್ಲಾ ನಿಜವಲ್ಲ. ಭಯ ಬೀಳಬೇಡ ಎಂದು ಮಗನಿಗೆ ಧೈರ್ಯ ತುಂಬಿ ದ್ದಾರೆ. ಆದರೂ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ಆ ಬಾಲಕ ಸ್ನಾನಕ್ಕೆ ಹೋದವನು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾನೆ.
ಇದನ್ನು ಗಮನಿಸಿದ ಮನೆಯವರು ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಬಾಲಕನನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲದಿನಗಳ ಹಿಂದೆ ಟಿವಿ ಧಾರಾವಾಹಿ ನೋಡಿ ಅಜ್ಜಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೌಟುಂಬಿಕ ಧಾರಾವಾಹಿ ನೋಡಿ ಆ ಅಜ್ಜಿ ಆಘಾತಕ್ಕೊಳಗಾಗಿ ಮೃತಪಟ್ಟಿದ್ದರು.
ಧಾರಾವಾಹಿಯಲ್ಲಿನ ನಾಯಕಿಯನ್ನು ರೌಡಿಗಳು ಅಟ್ಟಿಸಿಕೊಂಡು ಹೋಗುವ ದೃಶ್ಯವನ್ನು ನೋಡಿ ಕಿಟಾರನೆ ಕಿರುಚಿಕೊಂಡ ಹಿರಿಯ ಜೀವ ಕುಳಿತಲ್ಲೇ ಕುಸಿದುಬಿದ್ದು ಜೀವಬಿಟ್ಟಿತ್ತು.
ಮಂಗಳೂರು: ಜೀವರಕ್ಷಕ ಸಂಘದವರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿ ಹಿಂಬರುವಷ್ಟರಲ್ಲಿ ಚಿಕ್ಕಮಗಳೂರು ಮೂಡಿಗೆರೆಯಿಂದ ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿದ್ದ ಕುಟುಂಬದ ಬಾಲಕಿಯೋರ್ವಳು ಸಮುದ್ರ ಪಾಲಾಗಿ ನಾಪತ್ತೆಯಾಗಿದ್ದು, ಇನ್ನೋರ್ವ ಬಾಲಕಿ ಯನ್ನು ಜೀವರಕ್ಷಕ ಸಂಘದವರು ರಕ್ಷಿಸಿರುವ ಘಟನೆ ಉಳ್ಳಾಲ ಮೊಗ ವೀರಪಟ್ಣದಲ್ಲಿ ನಿನ್ನೆ ಸಂಜೆ ವೇಳೆ ಜರ ಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಬ್ದುಲ್ ಶುಕೂರ್ ಕುಟುಂಬದ ರೋನಕ್ (೧೭) ನಾಪತ್ತೆ ಯಾದಾಕೆ. ಇವರ ಕುಟುಂಬದ ಒಂಭತ್ತು ಮಂದಿ ಎರಡು ಕಾರಿನಲ್ಲಿ ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿ ದ್ದರು. ಬಳಿಕ ಮೊಗವೀರಪಟ್ನ ಸಮುದ್ರ ವಿಹಾರಕ್ಕೆ ಸಂಜೆ ವೇಳೆ ತೆರಳಿದ್ದರು. ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಎಂದಿನಂತೆ ಎಚ್ಚರಿಕೆ ನೀಡುತ್ತಿದ್ದ ಸ್ಥಳೀಯ ಜೀವರಕ್ಷಕ ಸಂಘದ ಸದಸ್ಯರು ಬಲು ಜೋರಾಗಿ ಆಡುತ್ತಿದ್ದ ಶಕೂರ್ ಕುಟುಂಬಕ್ಕೆ ಎಚ್ಚರಿಕೆ ನೀಡಿ ವಾಪಸ್ಸಾಗಿದ್ದರು. ಅಷ್ಟರಲ್ಲಿ ಇಬ್ಬರು ಬಾಲಕಿಯರು ಸಮುದ್ರಪಾಲಾಗಿದ್ದರು. ಆ ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಸಮುದ್ರಕ್ಕಿಳಿದು ಈಜಾಡಿದ ಜೀವರಕ್ಷಕ ಸಂಘದ ಸದಸ್ಯರು ಹುಸ್ನಾ(೧೫) ಎಂಬಾಕೆಯನ್ನು ರಕ್ಷಿಸುವಲ್ಲಿ ಸಫಲರಾದರು. ಆದರೆ ರೋನಕ್ ಮಾತ್ರ ನಾಪತ್ತೆಯಾಗಿದ್ದಳು.
ಮಂಗಳೂರು: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕಾರು ಚಾಲಕ ನವಾಜ್(೩೫)ಎಂದು ಹೆಸರಿಸಲಾಗಿದೆ. ಬೆಂಗಳೂರಿನಿಂದ ಮಣಿಪಾಲಕ್ಕೆ ನವಾಜ್ ಕಾರಿನಲ್ಲಿ ಬರುತ್ತಿದ್ದ ವೇಳೆ ನೀರಕಟ್ಟೆ ಬಳಿ ಎದುರಿನಿಂದ ಬಂದ ಸಿಮೆಂಟ್ ಮಿಶ್ರಣ ಯಂತ್ರದ ಲಾರಿ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.
ಮಂಗಳೂರು: ನಗರದ ವೆಲೆನ್ಸಿಯಾ ಬಳಿ ಮನೆಕೆಲಸಕ್ಕಿದ್ದ ಮೈಸೂರು ಎಚ್.ಡಿಕೋಟೆಯ ಸಾಕಮ್ಮ ಯಾನೆ ಸಾಕಿ(೨೫) ಎಂಬವರು ಕಾಣೆಯಾದ ಬಗ್ಗೆ ಭಾನುವಾರ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಕೆ ಕಾಣೆಯಾದ ದಿನ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬೂದುಬಣ್ಣದ ಅಂಗಿ ಧರಿಸಿದ್ದಳು.ಕನ್ನಡ,ಕೊಂಕಣಿ,ಹಿಂದಿ,ಇಂಗ್ಲಿಷ್ ಭಾಷೆ ಮಾತನಾಡಬಲ್ಲಳು ಎಂದು ಜೋಸೆಫ್‌ಮಸ್ಕರೇನಸ್ ನೀಡಿದ ದೂರಲ್ಲಿ ತಿಳಿಸಲಾಗಿದೆ.
ಮಂಗಳೂರು: ಬಸ್ಸಿನಲ್ಲಿ ಬರುವ ವೇಳೆ ನೆಂಪು ನರಸಿಂಹ ಭಟ್ಟ ಅವರ ಪತ್ನಿ ವೀಣಾ ಎನ್. ಭಟ್ ಅವರು ಧರಿಸಿದ್ದ ೬೦ ಸಾವಿರ ರೂ. ಮೌಲ್ಯದ ಎರಡೂವರೆ ಪವನಿನ ಚಿನ್ನದ ಸರ ಕಳೆದು ಹೋಗಿದೆ.ಮೇ.೩೦ರಂದು ಪರ್ಕಳದಿಂದ ಬಸ್ಸಿನಲ್ಲಿ ಉಡುಪಿ ನಿಲ್ದಾಣಕ್ಕೆ ಬಂದಿಳಿದು ಸಾಸ್ತಾನದ ಬಸ್ ಹತ್ತುವ ವೇಳೆ ಕತ್ತು ನೋಡಿದಾಗ ಸರ ಕಾಣೆಯಾಗಿತ್ತು. ಸಿಕ್ಕಿದವರು ಉಡುಪಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಮಂಗಳೂರು: ಉಪ್ಪಿನಂಗಡಿ ಸಮೀಪದ ಶಿರಾಡಿ ಬಳಿ ಯತ್ರಾರ್ಥಿಗಳ ಟೆಂಪೊವೊಂದಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ೧೧ ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ದಾವಣಗೆರೆಯ ಯಾತ್ರಾರ್ಥಿಗಳ ತಂಡ ಧರ್ಮಸ್ಥಳದ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಸಂದರ್ಭ ಶಿರಾಡಿಯಲ್ಲಿ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಇದರಿಂದ ಟೆಂಪೊದಲ್ಲಿದ್ದ ದುಗ್ಗಮ್ಮ, ರೇಖಾ, ಪೂಜಾ, ಪರಶುರಾಮ, ಮಂಜುನಾಥ, ಹನುಮಕ್ಕ, ಶೈಲಜಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ನಾಲ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕಾಸರಗೋಡು: ಮುಳಿಯೂರಿನ ಮುಂಡಂಕೈ ಎಂಬಲ್ಲಿ ಮರಳು ಅಕ್ರಮ ಹೂಳೆತ್ತುವ ಪ್ರದೇಶಕ್ಕೆ ಮಿಂಚಿನ ದಾಳಿ ನಡೆಸಿದ ಸಹಾಯಕ ತಹಶೀಲ್ದಾರ್ ಎ.ದಾಮೋದರ ನೇತೃತ್ವದ ತಂಡ ಟಿಪ್ಪರ್ ಲಾರಿ ಮತ್ತು ೫ಟನ್ ಮರಳು ವಶ ಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೇಕೂರು ಮಡಂದೂರು ಎಂಬಲ್ಲಿ ಮರಳು ಅಕ್ರಮ ಸಾಗಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಎರಡು ವಾಹನಗಳನ್ನು ಕಂದಾಯ ಅಧಿಕಾರಿಗಳು ವಶಪಡಿಸಿದ್ದಾರೆ.
ಕಾಸರಗೋಡು:ಆನೆಬಾಗಿಲಿನಲ್ಲಿ ತಂಡವೊಂದು ಹಲ್ಲೆ ನಡೆಸಿ ಅಶೋಕ ನಗರ ನಿವಾಸಿ ಮುಜೀಬ್(೩೦), ಚೌಕಿ ಗುಡ್ಡೆ ನಿವಾಸಿ ಮಹಮ್ಮದ್ ಶಬೀರ್ (೨೫)ಎಂಬುವವರು ಗಾಯಗೊಂಡಿದ್ದಾರೆ.
ಮಂಗಳೂರು: ಸುಳ್ಯ ಐವರ್ನಾಡಿನಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಮೀರಾ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಸೋಮವಾರ ಅವರ ವಶಕ್ಕೆ ಒಪ್ಪಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿ ಸುಳ್ಯ ಪರಿಸರದ ದೇವಿಪ್ರಸಾದ್, ರವಿ ಪೂಜಾರಿ, ಮಹಾವೀರ ಮತ್ತು ಶಿವರಾಜ್ ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ೨೦೦೮ರ ಮಾ.೨ ರಂದು ಐವರ್ನಾಡಿನ ಗ್ರೀನ್‌ಲ್ಯಾಂಡ್ ಎಸ್ಟೇಟ್ ಮಾಲಕಿ ಮೀರಾ ಬಾಲಕೃಷ್ಣ (೭೬)ಅವರನ್ನು ಅವರ ಮನೆಯಲ್ಲಿ ಹಗ್ಗದಿಂದ ಕಟ್ಟಿ ಉಸಿರುಕಟ್ಟಿಸಿ ಕೊಲೆ ಮಾಡಲಾಗಿತ್ತು. ಈ ನಡುವೆ ಮನೆ ಕವಾಟಿನ ಬೀಗ ಒಡೆಯಲು ಪ್ರಯತ್ನಿಸಿದ್ದರು. ಮನೆ ಕೋಣೆಯನ್ನೆಲ್ಲಾ ಜಾಲಾಡಿದ್ದರು. ಈ ನಡುವೆ ಮನೆಕೆಲಸದ ನಿರ್ಮಲಾ ಅಲ್ಲಿಗೆ ಬಂದ ಕಾರಣ ಕೊಲೆಗಡುಕರು ಓಡಿ ಪರಾರಿಯಾಗಿದ್ದರು.
ಕೊಲೆ ನಡೆದು ವರ್ಷ ಉರುಳಿದರೂ ಸುಳಿವು ಸಿಗದಾಗ ಮೀರಾ ಅವರ ಪುತ್ರಿ ಜೋತ್ಸ್ನಾ ಅವರು ಪೊಲೀಸರಿಗೆ ಒತ್ತಡ ಹೇರಿದ್ದರು. ಈ ನಡುವೆ ಊರಿನ ಮಂದಿ ಐವರ್ನಾಡಿನಲ್ಲಿ ರಸ್ತೆ ತಡೆ ನಿರ್ಮಿಸಿ ಪ್ರತಿಭಟನೆ ನಡೆಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣವನ್ನು ಸಿಓಡಿಗೆ ಒಪ್ಪಿಸಲಾಗಿತ್ತು. ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ.
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿದ ಪರಿಣಾಮ ೨೩ ಮಂದಿ ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಸುಲ್ಕೇರಿ ಎಂಬಲ್ಲಿ ನಡೆದಿದೆ. ಇವರಲ್ಲಿ ಐದು ಮಂದಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾ ಗಿದ್ದಾರೆ. ಬಸ್ಸಿನಲ್ಲಿ ಒಟ್ಟು ೩೮ ಮಂದಿ ಪ್ರಯಾ ಣಿಸುತ್ತಿದ್ದರು. ಇವರೆಲ್ಲರೂ ನಡ ಗ್ರಾಮದ ಸುರ‍್ಯ ಎಂಬಲ್ಲಿನ ನೂಚಿಲ ನಿವಾಸಿ ಅಣ್ಣಿ ಪೂಜಾರಿ ಮತ್ತು ಕುಟುಂ ಬಸ್ಥರು . ಇವರು ನಡ ಗ್ರಾಮ ನೂಚಿಲ ನಿವಾಸಿ ಸಾಂಗ್ಲಿಯ ರವಿ ಪೂಜಾರಿ ಎಂಬುವ ವೈವಾಹಿಕ ಜೀವನದ ಹತ್ತು ವರ್ಷ ತುಂಬಿದ ಸಂಭ್ರಮವನ್ನು ಆಚರಿಸಲು ವಿವಿಧ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದರು. ಪುಣ್ಯ ಕ್ಷೇತ್ರಗ ಳನ್ನೆಲ್ಲ ಸಂದರ್ಶಿಸಿ ವಾಪಸು ಬರುವ ಹೊತ್ತಿಗೆ ಬೆಳಿಗೆ ೫.೩೦ ರ ಸುಮಾರಿಗೆ ಕಾರ್ಕಳ ಗುರುವಾಯನಕೆರೆ ಮಾರ್ಗ ದಲ್ಲಿನ ಸುಲ್ಕೇರಿ ಬಸದಿ ಸನಿಹ ಪ್ರಯಾ ಣಿಸು ತ್ತಿದ್ದ ಬಸ್ಸು ಬೇರೊಂದು ವಾಹನಕ್ಕೆ ದಾರಿ ಕೊಡುವ ಧಾವಂತದಲ್ಲಿ ಚಾಲಕ ನಿಯಂತ್ರಣ ತಪ್ಪಿ ಉರುಳಿದೆ. ಹೀಗಾಗಿ ೨೩ ಮಂದಿ ಗಾಯ ಗೊಂಡಿದ್ದಾರೆ ಗುರುವಾಯ ನಕೆರೆ- ಕಾರ್ಕಳ ಮಾರ್ಗದ ಮೂಲಕ ಆನೆಗುಡ್ಡೆ, ಹಟ್ಟಿಯಂಗಡಿ, ಉಡುಪಿ ಮುರ್ಡೇಶ್ವರ ಮತ್ತಿತರ ಕ್ಷೇತ್ರಗಳಲ್ಲಿ ದೇವರ ದರ್ಶನ ಪಡೆದಿದ್ದರು.
ಬಸ್ ಉರುಳಿದ ಘಟನೆಯಲ್ಲಿ ರವಿ ಪೂಜಾರಿ (೪೬) ಆನಂದ (೫೭), ರತ್ನಾಕರ (೫೪), ದಿನೇಶ್ (೩೯), ವಿಮಲ (೫೦) , ರವಿಕಲಾ (೩೧), ಜಯಂತಿ (೩೯), ಜಯಶ್ರೀ (೨೮), ಅಕ್ಷತಾ (೨೩), ಸುಪ್ರಿತಾ (೧೯) ಯಶೋಧಾ (೪೨), ರಕ್ಷಿತಾ(೨೨), ಚಂದ್ರಿಕಾ(೪೦), ಶ್ರವಣ್ (೧೭), ರಕ್ಷಾ (೧೯), ಸುರಕ್ಷಾ (೧೩), ಅಶ್ವಿನಿ (೨೧), ಮನನ್ (೮) ಎಂಬವರು ಗಾಯ ಗೊಂಡಿದ್ದಾರೆ.
ಗಂಭೀರ ಗಾಯಗೊಂಡ ಐದು ಮಂದಿ ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಕಳ: ವಿವಾಹ ಸಮಾರಂಭsದ ಮನೆಯೊಂದರಲ್ಲಿ ಚಿನ್ನಾಭರಣ ಕಳವುಗೈಯುವ ಮೂಲಕ ಪೊಲೀಸರ ಬಂಧನಕ್ಕೊಳಗಾಗಿರುವ ಆರೋಪಿ ಮಿಯ್ಯಾರ್ ಸುಭಾಸ್ ಕೋಟ್ಯಾನ್ ವಿರುದ್ಧ ಇದೀಗ ಗ್ರಾಮಾಂತರ ಠಾಣೆಯಲ್ಲಿ ಕಳವಿಗೆ ಸಂಬಂಧಿಸಿದಂತೆ ಎರಡು ಕೇಸು ದಾಖಲಾಗಿದೆ.
ಮಂಜಲ್‌ಪಲ್ಕೆಯಲ್ಲಿ ರಾಮ್ ದೇವ್ ಹೋಟೆಲ್ ವ್ಯಾಪಾರ ನಡೆಸು ತ್ತಿರುವ ಕೃಷ್ಣ ಕಾಮತ್(೩೨) ಎಂಬವರು ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರೊಂದನ್ನು ನೀಡಿದ್ದಾರೆ. ಎರಡೂ ವರೆ ವರ್ಷದ ಹಿಂದೆ ಅಗತ್ಯ ಕೆಲಸಕ್ಕೆಂದು ಮನೆಯಿಂದ ತಂದಿದ್ದ ೮೦,೦೦೦ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಕಟ್ಟಿ ಹೋಟೆಲ್ ಕ್ಯಾಶ್‌ಡ್ರಾವರ್‌ನಲ್ಲಿ ಇಟ್ಟು ಬೀಗಹಾಕಿ, ಬೀಗದ ಕೈಯನ್ನು ಡ್ರಾಯರಿನ ಹೊರಭಾಗದಲ್ಲಿ ನೇತುಹಾಕಲಾಗಿತ್ತು. ಆ ದಿನ ಡ್ರಾಯರಿನಲ್ಲಿಟ್ಟ ಚಿನ್ನಾಭರಣ ಕಳವು ಆಗಿತ್ತೆಂದು ಅವರು ವಿವರಿಸಿದ್ದಾರೆ.
ಮಾಧ್ಯಮಗಳಲ್ಲಿ ಬಂದ ವರದಿಯ ಆಧಾರದಲ್ಲಿ ಕಾರ್ಕಳ ಠಾಣೆಗೆ ಬಂದು ವಿಚಾರಿಸಿದಾಗ ಕಳವಾದ ಚಿನ್ನಾಭ ರಣವನ್ನು ಗುರುತಿಸಿರುವುದರಿಂದ ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ವಿಯ್ಯಾರ್‌ನ ಸುಭಾಸ್ ಕೋಟ್ಯಾನ್ ಕೆದಿಂಜೆಯ ಶಾಂತಲಾ ಸ್ಟುಡಿಯೋ ದಲ್ಲಿ ದುಡಿಯುತ್ತಿದ್ದನಲ್ಲದೇ ಪ್ರತಿದಿನ ಹೋಟೆಲ್‌ಗೆ ಬಂದುಹೋ ಗುತ್ತಿದ್ದನೆಂದು ವಿವರಿಸಲಾಗಿದೆ.
ಮತ್ತೊಂದು ಕೇಸು ಕೂಡಾ ಗ್ರಾಮಾಂತರ ಠಾಣೆಯಲ್ಲಿ ದಾಖ ಲಾಗಿದೆ. ೨೦೧೨ ಜನವರಿ ೮ರಂದು ರೆಂಜಾಳದಲ್ಲಿ ರವಿ ಪೂಜಾರಿ ಎಂಬವರ ಗೃಹಪ್ರವೇಶ ನಡೆದಿತ್ತು. ಆ ಸಮಾರಂಭಕ್ಕೆ ಛಾಯಗ್ರಾಹಕನಾಗಿ ಸುಭಾಸ್ ಕೋಟ್ಯಾನ್ ಬಂದಿದ್ದು, ಕಾರ್ಯಕ್ರಮ ಬಳಿಕ ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಮಾಹಿತಿ ಬೆಳಕಿಗೆ ಬಂದಿತ್ತು. ನಿನ್ನೆ ಮಾಧ್ಯಮಗಳಲ್ಲಿ ಬಂದಿದ್ದ ವರದಿಯ ಆಧಾರದಲ್ಲಿ ರಾಣೆಗೆ ಬಂದು ನೋಡಿದಾಗ ಕಳವಾಗಿರುವ ಚಿನ್ನಾ ಭರಣ ಅದಾಗಿರುವುದರಿಂದ ಗ್ರಾಮಾಂ ತರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಎರಡು ಪ್ರಕರಣಗಳು ನಡೆದಿ ರುವಾಗ ದೂರುದಾರರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆಯೇ ಎಂಬು ದರ ಬಗ್ಗೆ ಯಾವುದೇ ಮಾಹಿತಿ ಇಲ್ಲದಿ ರುವುದು ಇಲ್ಲಿ ಗಮನಾರ್ಹವಾಗಿದೆ.
ಕಾರ್ಕಳ: ಹವಾಲಾ ಜಾಲ ಪ್ರಕರ ಣದಲ್ಲಿ ಆರೋಪಿಯೋರ್ವನನ್ನು ನಗರ ಠಾಣಾ ಪೊಲೀಸರು ಬಂಧಿಸಿ ದ್ದಾರೆ.
ಪಡುಬಿದ್ರಿ ಸರಕಾರಿ ಕಂಚಿನಡ್ಕ ಸರಕಾರಿ ಹಿ.ಪ್ರಾ.ಶಾಲೆ ಬಳಿಯ ನಿವಾಸಿ ಮಯ್ಯದ್ದಿ(೨೪) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ೧೦೦೦ ರೂಪಾಯಿ ಮುಖ ಬೆಲೆಯ ೧೦೦ ನೋಟುಗಳನ್ನು ತುಂಬಿಸಿದ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಕಾರ್ಕಳ ವಿಸ್ತೃತ ಬಸ್ಸು ನಿಲ್ದಾಣ ಬಳಿಯಲ್ಲಿ ರಾತ್ರಿ ವೇಳೆಗೆ ಕಾಯುತ್ತಿದ್ದನೆಂದು ತಿಳಿದು ಬಂದಿದೆ.
ಖಚಿತ ಮಾಹಿತಿ ತಿಳಿದ ನಗರ ಠಾಣಾಧಿಕಾರಿ ಪ್ರಮೋದ್ ಅವರ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು, ಆ ವೇಳೆಗೆ ಆರೋಪಿಯು ಮೊದಲಿಗೆ ಸಮರ್ಕಪವಾಗಿ ಉತ್ತರ ನೀಡಿರಲಿಲ್ಲವೆಂದು ತಿಳಿದುಬಂದಿದೆ.
ವಿದೇಶದಲ್ಲಿ ನೆಲೆಸಿರುವ ಭಾರತೀ ಯರು ಈ ಹಣವನ್ನು ಆರೋಪಿಗೆ ನೀಡಿ ತಿಳಿಸಿರುವ ವ್ಯಕ್ತಿಗೆ ತಲುಪಿಸಲು ಸೂಚಿಸಿರುವುದರಿಂದ ಕಾರ್ಕಳಕ್ಕೆ ಬಂದಿದ್ದ ಮಯ್ಯದ್ದಿ ಇದೀಗ ಪೊಲೀ ಸರ ಅತಿಥ್ಯಕ್ಕೊಳಗಾಗಿದ್ದಾನೆ.
ಹವಾಲಾ ಹಣ ಪಡೆಯಲು ಅಲ್ಲಿಗೆ ಬರಲಿದ್ದ ವ್ಯಕ್ತಿ ಯಾರು ಎಂಬುದು ಪೊಲೀ ಸರಿಂದ ತಿಳಿಯ ಬೇಕಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪುತ್ತೂರು : ಪುತ್ತೂರು ಪುರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಬೀರ‍್ನಹಿತ್ಲು ಎಂಬಲ್ಲಿಂದ ನಾಪತ್ತೆ ಯಾಗಿದ್ದ ಮಹಿಳೆಯೊಬ್ಬರ ಶವ ಮನೆ ಸಮೀಪದ ಹೊಂಡದಲ್ಲಿ ಪತ್ತೆಯಾಗಿದೆ.
ಪುತ್ತೂರು ತಾಲ್ಲೂಕಿನ ಚಿಕ್ಕಮು ಡ್ನೂರು ಗ್ರಾಮದ ಬೀರ‍್ನಹಿತ್ಲು ನಿವಾಸಿ ಚೋಮ ಅವರ ಪತ್ನಿ ಬೀತುರು ಯಾನೆ ಕಮಲ(೬೨) ಮೃತಪಟ್ಟ ಮಹಿಳೆ. ಬೀತುರು ಯಾನೆ ಕಮಲಾ ಅವರು ಕಳೆದ ಬುಧವಾರ ನಾಪತ್ತೆಯಾಗಿದ್ದರು. ಶನಿವಾರ ಅವರ ಶವ ಮನೆ ಸಮೀಪದ ಹೊಂಡವೊಂದರಲ್ಲಿ ಕೊಳೆತ ಸ್ಥಿತಿ ಯಲ್ಲಿ ಪತ್ತೆಯಾಗಿರುವುದಾಗಿದೆ.
ಬೀತುರು ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ. ಮೃತರ ಪುತ್ರ ಗಂಗಾರಾಮ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಕಾರು ಚಾಲಕ ನವಾಜ್(೩೫)ಎಂದು ಹೆಸರಿಸಲಾಗಿದೆ. ಬೆಂಗಳೂರಿನಿಂದ ಮಣಿಪಾಲಕ್ಕೆ ನವಾಜ್ ಕಾರಿನಲ್ಲಿ ಬರುತ್ತಿದ್ದ ವೇಳೆ ನೀರಕಟ್ಟೆ ಬಳಿ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.
ಮಂಗಳೂರು: ೧೫ ವರ್ಷಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಾಕ್ಷಿಯಿಲ್ಲ ಎನ್ನುವ ಕಾರಣ ನೀಡಿ ನಾಲ್ಕು ವರ್ಷಗಳ ಹಿಂದೆ ನ್ಯಾಯಾಲಯ ಕೈಬಿಟ್ಟ ಪ್ರಕರ ಣವನ್ನು ಸಿಬಿಐ ಅಥವಾ ಸಿಐಡಿಗೆ ಕೊಡಿ ಎನ್ನುವ ಬೇಡಿಕೆ ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವ ದಲ್ಲಿ ನಡೆದ ದಲಿತ-ಕುಂದು ಕೊರತೆ ಗಳ ಸಭೆಯಲ್ಲಿ ಕೇಳಿ ಬಂತು. ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಶಿವಪ್ಪ ರೆಂಕೆದಗುತ್ತು, ಮಾರ್ಚ್.೧೧, ೨೦೦೧ರಲ್ಲಿ ಬಂಟ್ವಾಳ ನಿವಾಸಿ ಶಿವಪ್ಪ ಬಂಗೇರ ಎಂಬವರ ಕೊಲೆ ನಡೆದಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಲು ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಾಳಿತ್ತು. ಆದರೆ ದಲಿತರು ನಡೆಸಿದ್ದ ಪ್ರತಿಭಟನೆ ಬಳಿಕ ಕೇಸ್ ದಾಖಲಿಸಲಾಗಿತ್ತು.
ನಂತರ ಪ್ರಕರಣಕ್ಕೆ ಸಂಬಂಧಿಸಿ ಪುರಾವೆ ಇಲ್ಲ ಎನ್ನುವ ಕಾರಣದಲ್ಲಿ ಪೊಲೀಸರು, ನ್ಯಾಯಾಲಯಕ್ಕೆ ಸಿ.ವರದಿ ಸಲ್ಲಿಸಿದ್ದರು. ೨೦೦೭ರಲ್ಲಿ ನ್ಯಾಯಾ ಲಯವೇ ಪ್ರಕರಣವನ್ನು ರದ್ದು ಮಾಡಿತ್ತು ಎಂದು ಹೇಳಿದ ಶಿವಪ್ಪ, ಪ್ರಕರಣಕ್ಕೆ ಸಂಬಂಧಿಸಿ ಪುರಾವೆಗಳಿರುವ ಕಾರಣ ಸಿಐಡಿ ಅಥವಾ ಸಿಬಿಐಗೆ ನೀಡಿ ಇಲ್ಲವೇ ಮರುತನಿಖೆ ನಡೆಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಪಿ. ಅಭಿಷೇಕ್ ಗೋಯಲ್, ಈಗಾಗಲೇ ಪ್ರಕರಣವನ್ನು ನ್ಯಾಯಾಲಯವೇ ರದ್ದುಪಡಿಸಿದ ಕಾರಣ ಇಲಾಖೆಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಇಷ್ಟಕ್ಕೂ ಸೂಕ್ತ ಸಾಕ್ಷಿದಾರರು ಇದ್ದಲ್ಲಿ ಲಿಖಿತವಾಗಿ ನೀಡಿದರೆ ಮರುತನಿಖೆಗಾಗಿ ನ್ಯಾಯಾಲಯಕ್ಕೆ ಅಫೀಲು ಮಾಡಬಹುದು ಇಲ್ಲವೇ ಸಿಐಡಿ ಅಥವಾ ಸಿಬಿಐಗೆ ಒಪ್ಪಿಸಬಹುದು ಎಂದು ತಿಳಿಸಿದರು. ನಿನ್ನೆಯ ಸಭೆಯಲ್ಲಿ ದಲಿತರ ಸಂಖ್ಯೆ ವಿರಳವಾಗಿದ್ದ ಕಾರಣ ಹೆಚ್ಚಿನ ಚರ್ಚೆಗಳಿಲ್ಲದೆ ೪೦ ನಿಮಿಷದಲ್ಲೇ ಸಭೆ ಮುಕ್ತಾಯಗೊಂಡಿತು.
ಕಾಪು: ಮೂಳೂರು ಜುಮ್ಮಾ ಮಸೀದಿಯ ವಠಾರದಲ್ಲಿ ಭಾನುವಾರ ಬಡ ಕುಟುಂಬದ ಹತ್ತು ಜೋಡಿಗೆ ಉಚಿತ ಸಾಮೂಹಿಕ ವಿವಾಹ ಸಮಾ ರಂಭ ನಡೆಯಿತು.
 ಮೂಳೂರು ಜುಮ್ಮಾ ಮಸೀ ದಿಯ ಅಧೀನ ಸಂಸ್ಥೆಯ ಅಂಜು ಮಾನ್ ಖಾದಿಮುಲ್ ಮಸ್ಲಿಮೀನ್ ದಫ್ ಸಮಿತಿಯ ಆಶ್ರಯದಲ್ಲಿ ಅನಿವಾಸಿ ಭಾರತೀಯ ಸಂಸ್ಥೆ ಅರಫಾ ಗ್ರೂಫ್ ಆಫ್ ಕಂಪೆನಿಯ ಪ್ರಾಯೋ ಜಕತ್ವದಲ್ಲಿ ನಡೆದ ವಿವಾಹ ಸಮಾ ರಂಭದಲ್ಲಿ ಉಡುಪಿ, ದ.ಕ, ಚಿಕ್ಕಮ ಗಳೂರು, ಬೆಂಗಳೂರು, ಶಿವಮೊಗ್ಗದ ಒಟ್ಟು ಹತ್ತು ಜೋಡಿಯ ವಿವಾಹ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡರು.
ಮನ್ಸೂರು-ಉಮೈಬಾನು, ಅಬ್ದುಲ್ ಸಿರಾಜ್-ಸಮೀರಾ, ಅಬ್ದುಲ್ ರಹೀಮ್- ರೆಹನಾ, ಮುಹಮ್ಮದ್-ಝರೀನಾ, ಮುಹಮ್ಮದ್ ಸಾಧಿಕ್-ನೌಶಿಮ್, ಮುಬಾರಕ್, ನಯೀಮ್ ಭಾಷಾ,-ಮಿಲ್ಲತ್, ಅಬ್ದುಲ್ ಅಝೀಝ್-ಅಸ್ಮಾ, ಆಸೀಫ್-ಆಸುರಾಬಿ, ನವಾಝ್-ರಮ್ಲತ್ ಮುಂತಾದ ಜೋಡಿಗಳು ನವ ವಧೂವರರಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿವಾಹ ಸಮಾರಂಭ ದಲ್ಲಿ ಪವನ್ ಚಿನ್ನ, ಹಾಗೂ ವಧೂ ವರರಿಗೆ ಬೇಕಾದ ಬಟ್ಟೆಬರೆಗಳನ್ನು ನೀಡಲಾಯಿತು. ಸುಮಾರು ಆರು ಸಾವಿರ ಮಂದಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಕೇರಳದ ಕುಟ್ಯಾಡಿಯ ಪೇರೋಡ್ ಅಬ್ದುರ್ರ ಹ್ಮಾನ್ ಸಖಾಫಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಖಾಝಿ ಇಬ್ರಾಹಿಮ್ ಮುಸ್ಲಿಯಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮವು ನೆರವೇರಿತು.
ಅಬ್ದುಲ್ ಹಮೀದ್ ಮುಸ್ಲಿ ಯಾರ್ ಪಟವಾಡಿ, ಮುಹಮ್ಮದ್ ಬಾಖವಿ ಪೂಂಜಾಲಕಟ್ಟೆ, ಅಬೂ ಶಾಕಿರಾ ಬಿ.ಕೆ.ಅಬ್ದುಲ್‌ರಹಮಾನ್ ಮದನಿ, ಬಿ.ಎಮ್. ಮಮ್ತಾಜ್ ಆಲಿ ಕೃಷ್ಣಾಪುರ, ದುಬೈ ಉದ್ಯಮಿ ಎಮ್,ಇ,ಮಹಮ್ಮದ್ ಮೂಳೂರು, ಮಹಮ್ಮದ್ ಯೂಸುಫ್ ಮೂಳೂರು, ಮಸೀದಿ ಅಧ್ಯಕ್ಷ ಹಾಜಿ ಎಮ್. ಅಬ್ಬು ಮೂಳೂರು, ಮುಹಮ್ಮದ್ ಯೂಸುಫ್ ಉಮ್ಮರ್, ಮೊಯಿದಿನ್ ಶೇಖಬ್ಬ ದರ್ಕಾಸ್, ಎಮ್. ಮುಹ ಮ್ಮದ್ ಶೇಖಬ್ಬ, ಅಬ್ದುಲ್ಲಾ ತೌಫೀಕ್ ನಾವುಂದ, ಎಮ್.ಎಚ್.ಬಿ.ಮಹಮ್ಮದ್, ಅಬ್ದುಲ್ ರಝಾಕ್ ಶಾಬಾನ್, ಯು.ಅಬ್ದುಲ್ ರಝಾಕ್, ಮುಸ್ತಫಾ ಸಅದಿ, ಪಿ.ಎಮ್.ಎ.ಅಶ್ರಫ್ ರಝಾ, ಎಂ.ಎ.ಬಾವು ಮೂಳೂರು, ಅಬ್ದುಲ್ ಹಮೀದ್ ಅದ್ದು, ಅಶ್ರಫ್ ಸಖಾಫಿ, ಎ.ಕೆ.ಸುಲೇಮಾನ್, ವೈ.ಬಿ.ಸಿ. ಬಾವಾ, ಶೇಖಬ್ಬ ಅಬ್ದುಲ್ಲಾ, ರಫೀಕ್ ಅಹ್ಮದ್, ಅಬ್ದುಲ್ ರಝಾಕ್ ಉಪಸ್ತಿತರಿದ್ದರು.
ನೆರೆಮನೆಯಾತನಿಂದ ಜಮೀನಿನ ಕಟ್ಟಹುಣಿಗೆ ಅಪಾಯ

ಕೆಲವು ತಹಶೀಲ್ದಾರರೂ ಸೇರಿದಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಕರಣಿಕರುಗಳು ವರ್ಗ ಜಮೀನಿನ ಭೂ ಪರಿವರ್ತನೆಗೆ ಎಕರೆಗೆ ೨೫ಸಾವಿರದಂತೆ ಲಂಚದ ಪ್ಯಾಕೇಜ್ ನಿಗದಿ ಪಡಿಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಭೂ ವ್ಯವಹಾರ ಸೊಂಪಾಗಿರುವ ಈ ಕಾಲದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಮೃದ್ದ ಮೇವು . ಈ ಮೇಯುವ ಭರಾಟೆಯಲ್ಲಿ ವಿಠ್ಠಲ ಶೆಟ್ಟಿಯವರಂಥ ಜನಸಾಮಾನ್ಯರ ಅಳಲು ಅರಣ್ಯ ರೋಧನವಾಗು ವುದರಲ್ಲಿ ಅಶ್ಚರ್ಯವೇನಿಲ್ಲ. ಟಿವಿ ನೋಡಿ ಅಣ್ಣಾ ಹಜಾರೆಗೆ ಜೈ ಹಾಕುವ ಮಂದಿ ತಮ್ಮದೇ ಸುತ್ತಮುತ್ತಲಿನ ಅನ್ಯಾಯ, ಭ್ರಷ್ಟಾಚಾರಗಳಿಗೆ ಮಾತ್ರ ಕುರುಡಾಗುವುದು ವಿಪರ್ಯಾಸ.

ಮಂಗಳೂರು: ತನ್ನ ಜಮೀನಿನ ಕಟ್ಟಹುಣಿ ನೆರೆಮನೆಯಾತನ ಉಡಾಫೆ ಕೃತ್ಯದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯದ ಕುರಿತು ವಯೋವೃದ್ದರು ನೀಡಿದ ದೂರಿನ ಬಗ್ಗೆ ಮಂಗಳೂರು ತಹಶೀಲ್ದಾರ್ ಜಾಣಕಿವುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮಳಲಿಯ ಬಡಗುಳಿಪಾಡಿ ಗ್ರಾಮದ ವಿಠ್ಠಲ ಶೆಟ್ಟಿ ಎಂಬ ೮೧ರ ಪ್ರಾಯದ ಕೃಷಿಕರು ಇಲ್ಲಿನ ಅರ್ಬಿ ಎಂಬಲ್ಲಿ ಮೂರು ಎಕರೆ ಜಮೀನಿನಲ್ಲಿ ತೆಂಗು ಹಾಗೂ ಅಡಿಕೆ ಕೃಷಿ ಮಾಡಿ ಕೊಂಡಿದ್ದಾರೆ. ಇದರ ಪಕ್ಕದಲ್ಲೇ ಬಾಲಕೃಷ್ಣ ಪೂಜಾರಿ(೪೪) ಎಂಬವರ ಜಮೀನಿದ್ದು, ಈ ಎರಡು ಜಮೀನುಗಳ ನಡುವೆ ಸರ್ಕಾರಿ ತೋಡಿದೆ. ಸರ್ಕಾರಿ ತೋಡಿನ ಮಣ್ಣನ್ನು ಖಾಸಗಿಯವ ರ‍್ಯಾರೂ ಮುಟ್ಟುವ ಹಾಗಿಲ್ಲವಾದರೂ ಕೂಡ ಬಾಲಕೃಷ್ಣ ಪೂಜಾರಿ ಜೆಸಿಬಿ ಯಂತ್ರದ ಸಹಾಯದಿಂದ ಸುಮಾರು ಆರು ಅಡಿ ಆಳಕ್ಕೆ ಗುಂಡಿಯನ್ನು ತೋಡಿ ಆ ಮಣ್ಣನ್ನು ತನ್ನ ಜಮೀನಿಗೆ ಹಾಕಿ ಎತ್ತರ ಮಾಡಿಕೊಂಡಿದ್ದರು. ಈ ಮೂಲಕ ಕಾನೂನು ಉಲ್ಲಂಘಿಸಿದ್ದೇ ಅಲ್ಲದೇ, ಇದೀಗ ವಿಠ್ಠಲ ಶೆಟ್ಟಿಯವರ ಜಮೀನಿನ ಕಟ್ಟಹುಣಿ ನೀರಿನ ಸೆಳೆತ ದಿಂದಾಗಿ ಕೊಚ್ಚಿಕೊಂಡು ಹೋಗುವ ಅಪಾಯ ಎದುರಾಗಿದೆ.
ಬಾಲಕೃಷ್ಣ ಪೂಜಾರಿಯ ಕುಕೃತ್ಯದಿಂದ ನೊಂದು ಅಸಹಾಯಕ ವಿಠ್ಠಲ ಶೆಟ್ಟಿಯವರು ಈ ಬಗ್ಗೆ ಖುದ್ದು ತಹಶೀಲ್ದಾರ್ ರವಿಚಂದ್ರ ನಾಯಕ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿ, ಲಿಖಿತ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಇಟ್ಟರು. ಆದರೆ ತಹಶೀಲ್ದಾರ್ ಸಾಹೇಬರಿಗೆ ಈ ವೃದ್ದರ ಅಳಲು ತೀರಾ ಮಾಮೂಲಿ ಅನಿಸಿತೋ ಏನೋ.
ಈ ವಿಷಯದಲ್ಲಿ ಕಂದಾಯ ನಿರೀಕ್ಷಕರು ಏನೂ ಮಾಡುವಂತಿಲ್ಲವಾದರೂ, ಕಂದಾಯ ನಿರೀಕ್ಷಕರನ್ನು ಸ್ಥಳ ಪರಿಶೀಲನೆಗೆ ಕಳಿಸುವುದಾಗಿ ತಿಳಿಸಿ ವಿಠ್ಠಲ ಶೆಟ್ಟರನ್ನು ಸಾಗ ಹಾಕಿದರು.
ಆದರೆ ಕಂತೆಗೆ ತಕ್ಕ ಬೊಂತೆಯಾಗಿರುವ ಗುರುಪುರ ಹೋಬಳಿಯ ಕಂದಾಯ ನಿರೀಕ್ಷಕ ರಾಧಾಕೃಷ್ಣ ಎಷ್ಟು ಬಾರಿ ವಿನಂತಿಸಿದರೂ ಜಪ್ಪಯ್ಯ ಅನ್ನಲೇ ಇಲ್ಲ. ಸ್ಥಳ ಪರಿಶೀಲನೆ ಒತ್ತಟ್ಟಿಗಿರಲಿ, ಮನವಿಗೆ ಪ್ರತಿಕ್ರಿಯಿಸುವ ಗೋಜಿಗೂ ಹೋಗದೆ ತಟಸ್ಥರಾಗಿರುವುದಾಗಿಯೂ ಆರೋಪಿಸ ಲಾಗಿದೆ. ಆದರೆ ಮಳೆಗಾಲ ಪ್ರವೇಶದಿಂದಾಗಿ ಆತಂಕಿತರಾಗಿರುವ ವೃದ್ದ ವಿಠಲ ಶೆಟ್ಟರು ಕನಿಷ್ಟ ಸ್ಥಳಕ್ಕೂ ಬಾರದ ಈ ಜಡಭರಿತ ಅಧಿಕಾರಿಗಳ ಸೋಗಲಾಡಿತನದ ಮುಂದೆ ನಿಸ್ಸಾಹಯಕರಾಗಿ ಕುಳಿತಿದ್ದಾರೆ.








ಮೂಲ್ಕಿ: ಇಂದು ನಸುಕಿನ ೨:೨೫ರ ಸುಮಾರಿಗೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಬೈಪಾಸ್ ಬಳಿಯ ಮಾರುತಿ ಶೋರೂಂ ಮುಂದು ಗಡೆ ಕಾರು ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾ ತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣ ಬಲಿಯಾಗಿ ದ್ದಾರೆ. ಗಂಭೀರ ಗಾಯಗೊಂಡ ಇನ್ನೊಬ್ಬರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಇಂದು ನಸುಕಿನ ೨:೨೫ರ ಸುಮಾರಿಗೆ ಕೇರಳ ನೋಂದಣಿಯ(ಕೆಎಲ್ ೫೮-ಬಿ. ೮೫೦೦) ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಮೂವರು ಗಂಡಸರು ಹಾಗೂ ಒಬ್ಬ ಮಹಿಳೆಯೂ ಸೇರಿದಂತೆ ನಾಲ್ವರು ಮಣಿಪಾಲಕ್ಕೆ ಸಂಚರಿಸು ತ್ತಿದ್ದರೆನ್ನಲಾಗಿದೆ. ಕಾರು ಕಾರ್ನಾಡು ಬೈಪಾಸ್ ದಾಟಿ ಮುಂದಕ್ಕೆ ಮಾರುತಿ ಸುಝುಕಿ ಶೋರೂಂ ಸಮೀಪಿಸು ತ್ತಿದ್ದಂತೆ ಎದುರಿನಿಂದ ಡಾಮರು ಡಬ್ಬಿಗಳನ್ನು ಹೇರಿಕೊಂಡು ಸಾಗಿಬರುತ್ತಿದ್ದ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಪಡೆದಿರುವ ‘ನವಯುಗ್ ಕನ್‌ಸ್ಟ್ರಕ್ಷನ್ ಕಂಪೆನಿಗೆ ಸೇರಿದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕಾರು ಅತೀವೇಗದಲ್ಲಿದ್ದು ಡಿಕ್ಕಿಯಾದ ರಭಸಕ್ಕೆ ಮಹಿಳೆ ಹೊರಕ್ಕೆ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದಿಬ್ಬರು ಕುಳಿತ ಸೀಟಿನಲ್ಲಿಯೇ ತಲೆಯೊಡೆದು ಮೃತಪಟ್ಟ ದೃಶ್ಯ ಅಪಘಾತದ ಭೀಕರತೆಗೆ ಸಾಕ್ಷಿಯಾಗಿತ್ತು. ಕಾರಿನ ಹಿಂಬದಿ ಸೀಟಿನಲ್ಲಿದ್ದ ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಮೂಲ್ಕಿ ಠಾಣಾ ಪೊಲೀಸರು ಗಾಯಾಳುವನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟವರು ಕೇರಳ ಮೂಲದವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರಾಗಿರಬೇಕು ಎಂದು ಶಂಕಿಸಲಾಗಿದೆ. ಕಾರಿನಲ್ಲಿ ಕೇರಳ ಹಾಗೂ ಮಣಿಪಾಲ ಆಸ್ಪತ್ರೆಯ ಕಾರ್ಡ್ ಪತ್ತೆಯಾಗಿದ್ದು, ಇವರಲ್ಲಿ ಯಾರೋ ಒಬ್ಬರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗುತ್ತಿತ್ತು ಎಂದು ಶಂಕಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ರಸ್ತೆಯಲ್ಲಿ ತಾತ್ಕಾಲಿಕ ತಿರುವು ಕೊಡಲಾಗಿದೆ. ನಸುಕಿನ ವೇಳೆ ಮೂಲ್ಕಿ ಹಾಗೂ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಅತೀವೇಗದಲ್ಲಿದ್ದ ಕಾರಣ ಕಾರು ಚಾಲಕನಿಗೆ ತಿರುವು ಗಮನಕ್ಕೆ ಬಾರದೆ ಟಿಪ್ಪರ್‌ಗೆ ಡಿಕ್ಕಿ ಹೊಡೆದಿರಬೇಕೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಮೂಲ್ಕಿ ಠಾಣಾ ಪೊಲೀಸರು ಮೃತದೇಹಗಳನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಮೂಲ್ಕಿ ಠಾಣಾಧಿಕಾರಿ ಸುನಿಲ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಸುಗಮ, ಸಂಚಾರಕ್ಕೆ ಶ್ರಮಿಸಿದ್ದಾರೆ.


ಮಂಗಳೂರು: ಕುದ್ರೋಳಿ ಯಲ್ಲಿ ಕಳೆದ ಹಲವಾರು ಸಮಯಗಳಿಂದ ಅನಧಿಕೃತವಾಗಿ ನಡೆಸಲ್ಪಡುತ್ತಿದ್ದ ಕಸಾ ಯಿಖಾನೆಗೆ ನಿನ್ನೆ ಬೆಳಗ್ಗೆ ದಾಳಿ ನಡೆ ಸಿದ ಮನಪಾ ಅಧಿಕಾರಿಗಳು ಜೀವಂತ ಕುರಿಗಳು ಹಾಗೂ ಚರ್ಮ ವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕುದ್ರೋಳಿಯ ಸೇತುವೆ ಬಳಿ ನೂರ್ ಮಹಮ್ಮದ್ ಎಂಬವರಿಗೆ ಸೇರಿದ ಕಟ್ಟಡವಿದ್ದು, ದಾಖಲೆಗಳಿಗೆ ಸಂಬಂಧಿಸಿ ಸಮಸ್ಯೆಗಳಿರುವ ಕಾರಣ ಮನಪಾದಿಂದ ಪರವಾನಿಗೆ ಸಿಕ್ಕಿರಲಿಲ್ಲ. ಇದೇ ಕಟ್ಟಡದಲ್ಲಿ ಕುರಿಗಳನ್ನು ವಧೆ ಮಾಡಲಾಗುತ್ತಿದ್ದ ಬಗ್ಗೆ ಮನಪಾ ಆರೋಗ್ಯ ಇಲಾಖೆಗೆ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಐದು ಗಂಟೆಗೆ ಆರೋಗ್ಯಾಧಿಕಾರಿ ರಘುನಾಥ್, ಜಂಟಿ ಆಯುಕ್ತರಾದ ಶ್ರೀಕಾಂತ್ ರಾವ್, ಸಹಾಯಕ ಆರೋಗ್ಯಾಧಿಕಾರಿಯ ಸಹಿತ ೧೨ ಮಂದಿ ಅಧಿಕಾರಿಗಳು ಕಟ್ಟಡಕ್ಕೆ ದಾಳಿ ನಡೆಸಿದ್ದರು. ಈ ಸಂದರ್ಭ ಆಗ ತಾನೇ ವಧಿಸಲಾಗಿದ್ದ ೨೦ಕ್ಕೂ ಹೆಚ್ಚು ಕುರಿಗಳ ಚರ್ಮ ಹಾಗೂ ವಧೆಗೆ ಸಿದ್ಧವಾಗಿದ್ದ ೨೬ ಜೀವಂತ ಕುರಿಗಳು ಪತ್ತೆಯಾದವು.
ಈ ಸಂದರ್ಭ ಕಟ್ಟಡದ ಮಾಲಕ ಹಾಗೂ ಅವರ ಮಗ ಸ್ಥಳದಲ್ಲಿ ಹಾಜರಿದ್ದು, ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಲು ಮುಂದಾದರು. ಆದರೆ ಅದಕ್ಕೆ ಕಿವಿಗೊಡದ ಅಧಿಕಾರಿಗಳು ಕುರಿಗಳನ್ನು ಹಾಗೂ ಚರ್ಮವನ್ನು ವಶಕ್ಕೆ ತೆಗೆದುಕೊಂಡು ಕಟ್ಟಡಕ್ಕೆ ಬೀಗ ಜಡಿದಿದ್ದಾರೆ.
ವಶಪಡಿಸಿಕೊಳ್ಳಲಾಗಿರುವ ಕುರಿಗಳು ಹಾಗೂ ಚರ್ಮವನ್ನು ಏಲಂ ಮಾಡಲಾಗುವುದು. ಕಟ್ಟಡದಲ್ಲಿ ನಡೆಯುತ್ತಿದ್ದ ಅನಧಿಕೃತ ಕಸಾಯಿಖಾನೆಯ ಬಗ್ಗೆ ಕಮೀಷನರ್ ಅವರ ಗಮನಕ್ಕೆ ತರಲಾಗುತ್ತದೆ. ಅವರ ಸಲಹೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿ ರಘುನಾಥ್ ಪತ್ರಿಕೆಗೆ ತಿಳಿಸಿದ್ದಾರೆ.

ಮಂಗಳೂರು : ಹಲಸಿನ ಹಣ್ಣಿನ ರಾಶಿಯ ನಡುವೆ ಗೋಮಾಂಸವನ್ನಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿರು ವುದನ್ನು ಪತ್ತೆಹಚ್ಚಿದ ಶ್ರೀರಾಮ ಸೇನೆ ಕಾರ್ಯಕರ್ತರು ಟೆಂಪೋ ತಡೆ ಹಿಡಿದು ಆರೋಪಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನೀರುಮಾರ್ಗದಲ್ಲಿ ನಿನ್ನೆ ನಡೆದಿದೆ.
ಮಲ್ಲೂರಿನ ನಿವಾಸಿ ಹುಸೈನಾರ್ ಎಂಬಾತ ಜೋಕ ಟ್ಟೆಯ ಉಮ್ಮರ್ ಎಂಬಾತನ ಟೆಂಪೋದಲ್ಲಿ ೭೦ ಕೆ.ಜಿ ದನದ ಮಾಂಸವನ್ನು ಬೈಕಂಪಾಡಿಯ ಹುಸೇನ್ ಮತ್ತು ಉಪ್ಪಳದ ಅಬ್ದುಲ್ ಕುಂಞ ಎಂಬವರ ಮೂಲಕ ಅಕ್ರಮ ವಾಗಿ ಸಾಗಾಟ ಮಾಡಿಸುತ್ತಿದ್ದ. ಈ ಬಗ್ಗೆ ಯಾರಿಗೂ ಶಂಕೆ ಬರದಿರಲೆಂದು ಮಾಂಸದ ಮೇಲೆ ಹಲಸಿನ ಹಣ್ಣನ್ನು ಇರಿಸಿದ್ದ. ಅಲ್ಲದೆ ಹಿಂದೂ ಸಂಘಟನೆಯವರು ತಡೆಯುತ್ತಾರೆ ಎನ್ನುವ ಕಾರಣಕ್ಕೆ ನೀರುಮಾರ್ಗ ಮಾಣೂರು ಮಾರ್ಗವಾಗಿ ಮಾಂಸ ಸಾಗಾಟ ಮಾಡುತ್ತಿದ್ದ. ಆದರೆ ಶ್ರೀ ರಾಮ ಸೇನೆ ಕಾರ್ಯಕರ್ತರಿಗೆ ಮೊದಲೇ ಈ ಬಗ್ಗೆ ಮಾಹಿತಿ ಇದ್ದ ಕಾರಣ ಅವರು ಮಾಣೂರು ಬಳಿ ಕಾದು ಕುಳಿತು ಟೆಂಪೊವನ್ನು ತಡೆಹಿಡಿದು ಆರೋಪಿಗಳನ್ನು ಎಳೆದು ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಹಿಂದು ಸಂಘಟನೆಯವರು ಟೆಂಪೊವನ್ನು ತಡೆಹಿಡಿಯುತ್ತಿರುವಂತೆ ಹೆದರಿದ ಚಾಲಕ ಉಮ್ಮರ್ ಟೆಂಪೊ ಬಿಟ್ಟು ಪರಾರಿಯಾಗಿದ್ದಾನೆ. ಕೈಗೆ ಸಿಕ್ಕಿದ್ದ ಹುಸೇನ್ ಮತ್ತು ಅಬ್ದುಲ್ ಕುಂಞಗೆ ಶ್ರೀರಾಮ ಸೇನೆ ಕಾರ್ಯಕರ್ತರು ಗಂಭೀರವಾಗಿ ಥಳಿಸಿ ಟೆಂಪೊವನ್ನು ಜಖಂಗೊಳಿಸಿದ್ದಾರೆ ಆ ಬಳಿಕ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳು ದನ ಸಾಗಾಟದ ಬಗ್ಗೆ ಸಂಘಟನೆಯವರಿಗೆ ಶಂಕೆ ಬರದಿರಲೆಂದು ಟೆಂಪೊ ಮುಂಭಾಗಕ್ಕೆ ಓಂ ಚಿಹ್ನೆಯ ಸ್ಟಿಕ್ಕರ್ ಅಂಟಿಸಿದ್ದರು. ದನವನ್ನು ಕೇವಲ ನಾಲ್ಕು ತುಂಡು ಮಾಡಿ ಹಾಗೆಯೇ ಸಾಗಿಸಲಾಗುತ್ತಿತ್ತು. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಜರಂಗದಳ ದಾಳಿ
ಪುತ್ತೂರು: ಇಲ್ಲಿನ ಬಾಡಿಗೆ ಮನೆ ಯೊಂದರಲ್ಲಿ ಖಾಸಗಿ ಆಸ್ಪತ್ರೆ ನರ್ಸ್ ಒಬ್ಬಳೊಂದಿಗೆ ತುರ್ತು ಸೇವೆಯಲ್ಲಿದ್ದ ೧೦೮ ರಕ್ಷಾ ಕವಚ ಸಿಬ್ಬಂದಿಯೊಬ್ಬನನ್ನು ಬಜರಂಗದಳದವರು ದಾಳಿ ನಡೆಸಿ ಪೊಲೀಸರಿಗೊಪ್ಪಿಸಿರುವ ಘಟನೆ ನಡೆ ದಿದೆ.
ಪುತ್ತೂರು ಆರೋಗ್ಯ ರಕ್ಷಾ ಕವಚ ೧೦೮ ಎರ್ಮಜೆನ್ಸಿ ಮೆಡಿಕಲ್ ಟೆಕ್ನೀ ಷಿಯನ್ (ಇಎಂಪಿ) ಹಾಸನ ಮೂಲದ ಪ್ರದೀಪ ಎಂಬಾತ ಪುತ್ತೂರು ಖಾಸಗಿ ಆಸ್ಪತ್ರೆ ನರ್ಸ್ ಒಬ್ಬಳ ಜತೆ ಪುತ್ತೂರಿನ ಸಭಾಭವನ ಬಳಿ ಯಿರುವ ಬಾಡಿಗೆ ಮನೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಜರಂಗದಳ ದಾಳಿ ಮಾಡಿ ಆತನಿಗೆ ತದುಕಿ ಪೊಲೀಸರಿ ಗೊಪ್ಪಿಸಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಗೊಳಿಸಿದ್ದಾರೆಂದು ತಿಳಿದುಬಂದಿದೆ.
ಈ ಇಎಂಪಿ ಪ್ರದೀಪ ತನ್ನ ಬಾಡಿಗೆ ರೂಮಿಗೆ ಯುವತಿಯನ್ನು ಕರೆ ತಂದು ಮಜಾ ಮಾಡುತ್ತಿರುವ ಕುರಿತು ಅವರ ಮೇಲಧಿಕಾರಿಗಳಿಗೆ ದೂರು ಕೂಡಾ ಹೋಗಿತ್ತು ಎನ್ನ ಲಾಗಿದೆ. ಕಳೆದ ಒಂದು ವರ್ಷದಿಂದ ಈತ ಮತ್ತು ಇನ್ನೋರ್ವ ಸಿಬ್ಬಂದಿ ಯುವತಿಯರನ್ನು ಕರೆತಂದು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾ ರೆಂಬ ದೂರು ನೀಡಲಾಗಿತ್ತು. ಇದೀಗ ರೆಡ್ ಹ್ಯಾಂಡ್ ಆಗಿ ದಾಳಿ ನಡೆದಿದೆ.
ಕೋಡಿಹಳ್ಳಿ ಚಂದ್ರಶೇಖರ್ ಖೇದ
ಮಂಗಳೂರು: ಹಿಂದೆ ರಾಜಕಾ ರಣಿಗಳು ಪ್ರಾಮಾಣಿಕರಾಗಿದ್ದ ಕಾರಣ ಜನ ಗುರುತಿಸಿ ಗೌರವಿಸುತ್ತಿದ್ದರು. ಆದರೆ ಇಂದು ದರೋಡೆ, ಮೋಸ, ವಂಚನೆ ಮಾಡಿ ಗಳಿಸಿದ ಹಣವನ್ನು ಭದ್ರವಾಗಿಡುವ ಸಲುವಾಗಿ ಹಾಗೂ ಇನ್ನಷ್ಟು ಗಳಿಸುವ ಸಲುವಾಗಿ ರಾಜ ಕೀಯಕ್ಕಿಳಿಯುತ್ತಿದ್ದಾರೆ. ಇದರಿಂ ದಾಗಿ ಸೆಂಟ್ರಲ್ ಜೈಲಿನಲ್ಲಿರಬೇಕಾದ ಶೇ.೭೦ ರಷ್ಟು ಚಾಲಿಪೋಲಿಗಳು ರಾಜಕಾರಣಿ ಗಳಾಗಿ ಮಾರ್ಪಟ್ಟು ಶಾಸನ ಸಭೆ ಪ್ರವೇಶಿಸಿದ್ದಾರೆ ಎಂದು ಕರ್ನಾಟಕ ಪ್ರಜಾಪ್ರಗತಿರಂಗದ ರಾಜ್ಯಾಧ್ಯಕ್ಷರಾ ಗಿರುವ ಕೋಡಿಹಳ್ಳಿ ಚಂದ್ರಶೇ ಖರ್ ಖೇದ ವ್ಯಕ್ತಪಡಿಸಿದರು.
ನಿನ್ನೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ನಡೆದ ಕರ್ನಾ ಟಕ ಪ್ರಜಾಪ್ರಗತಿರಂಗ ಇದರ ವಿಭಾ ಗೀಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಬಡವರು, ರೈತರು, ಜನಸಾಮಾನ್ಯರ ಪರವಾಗಿ ನಾವು ಕಳೆದ ೩೩ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಆದರೆ ಇಂದಿಗೂ ಹೋರಾಟ ಮುಂದುವ ರಿಸಿದ್ದೇವೆ. ಜಿಲ್ಲಾ, ತಾಲೂಕು, ಕ್ಷೇತ್ರಮಟ್ಟದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ ಬಳಿಕ ಮನವಿ ಪತ್ರವನ್ನು ಮೊನ್ನೆ ಮೊನ್ನೆಯವರೆಗೆ ಪುಂಡು ಪೋಕರಿಯಾಗಿದ್ದ, ಹಲಾಲ್‌ಕೋರ ರಾಜಕಾರಣಿಯ ಕೈಯಲ್ಲಿ ಕೊಡ ಬೇಕಾಗಿರುವ ಕೆಟ್ಟ ಪರಿಸ್ಥಿತಿ ಬಂದೊದಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮೂರು ಪ್ರಮುಖ ಪಕ್ಷಗಳು ಆಡಳಿತ ನಡೆಸಿದರೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬುಡಕಟ್ಟು ಜನಾಂಗ, ರೈತರ ಪರವಾಗಿ ಧ್ವನಿ ಎತ್ತದೆ, ಸೋನಿಯಾ ಗಾಂಧಿ, ದೇವೇಗೌಡ, ಯಡಿಯೂರಪ್ಪ ಅವರ ಪರವಾಗಿ ಧ್ವನಿ ಎತ್ತಿರುವುದಲ್ಲದೆ ಜಾತಿ, ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದಿದ್ದಾರೆ. ಕಾಂಗ್ರೆಸ್ ೬೪ ವರ್ಷ ಗಳವರೆಗೆ ಜನರನ್ನು ವಂಚಿಸಿ ಆಡಳಿತ ನಡೆಸಿದ್ದರೆ, ಬಿಜೆಪಿಯ ಮಂತ್ರಿಗಳು ಶಾಸನ ಸಭೆಯಲ್ಲಿ ನೀಲಿಚಿತ್ರ ವೀಕ್ಷಣೆ, ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಒಂದನೇ ಸ್ಥಾನಕ್ಕೆ ತಂದರು. ಈಗ ಮತ್ತೊಮ್ಮೆ ಆಡಳಿ ತಕ್ಕೇರಲು ನಾಟಕ ಆರಂಭಿಸಿದ್ದಾರೆ. ಜನರನ್ನು ವಂಚಿಸಿ ಕೋಟಿ ನುಂಗಿದ ಸೈತಾನರಿಗೆ ಓಟು ನೀಡುವ ಬದಲು ಎಚ್ಚರಗೊಂಡು ಪರ್ಯಾಯ ರಾಜ ಕೀಯ ಪಕ್ಷವಾಗಿರುವ ಪ್ರಜಾಪ್ರಗತಿ ರಂಗವನ್ನು ಬೆಂಬಲಿಸು ವಂತೆ ಮನವಿ ಮಾಡಿದ ಅವರು, ಇಲ್ಲದಿದ್ದಲ್ಲಿ ರಾಜ್ಯಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಪಿಎಫ್‌ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ವಹಿಸಿದ್ದರು. ವೇದಿಕೆಯಲ್ಲಿ ವೆಂಕಟಸ್ವಾಮಿ, ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಆರ್.ಮೋಹನ್‌ರಾಜ್, ಲೋಲಾಕ್ಷ, ಅಬ್ದುಲ್ ಲತೀಫ್, ಅಬ್ದುಲ್ ಜಲೀಲ್ ಕೃಷ್ಣಾಪುರ, ಉದಯ ಕುಮಾರ್ ತಲ್ಲೂರು, ನಝೀರ್ ಮರವೂರು, ಸುಬ್ರಹ್ಮಣ್ಯ ಶಾಸ್ತ್ರಿ, ವಿಜಯ ಕುಮಾರ್ ಹೆಗ್ಡೆ, ಅಕ್ಬರ್ ಅಲಿ, ಸಲೀಂ ಗುರುವಾಯುನಕೆರೆ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ಉತ್ತರಕ್ಕೆ ಸಿಗುವುದೇ ಉತ್ತರ

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ ಎಂಬ ವಿಶ್ವಾಸವನ್ನು ಬಹುತೇಕರು ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಂದು ಹೇಳುವವರು ಬೊಟ್ಟು ಮಾಡಿದ್ದು ವಿಜಯಕುಮಾರ್ ಶೆಟ್ಟರತ್ತ. ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು ಇರುವ ಅವಕಾಶವನ್ನು ಕಳೆದುಕೊಳ್ಳುವಂತಾಗಬಾರದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ೧೪ಸಾವಿರ ಮತಗಳ ಅಂತರದಿಂದ ಸೋತಿದ್ದು, ಅದಕ್ಕಿಂತ ಮೊದಲಿನ ಚುನಾವಣೆಯಲ್ಲಿ ಇದ್ದ ಸೋಲಿನ ಅಂತರ ಎರಡು ಸಾವಿರ ಮಾತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈ ಕ್ಷೇತ್ರವ್ಯಾಪ್ತಿಯಲ್ಲಿ ಕೇವಲ ಒಂದು ಸಾವಿರ ಮತಗಳು ಮಾತ್ರ ಲೀಡ್ ಪಡೆದಿದ್ದರು ಎಂಬುದನ್ನು ಗಮನಿಸಬೇಕು ಎಂಬ ಲೆಕ್ಕಾಚಾರ ವಿಜಯಕುಮಾರ್ ಶೆಟ್ಟರ ಬಳಗದವರು ವೀಕ್ಷಕರಿಗೆ ನೀಡಿದ್ದಾರೆ

ಮಂಗಳೂರು: ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ. ಇದು ಕಾಂಗ್ರೆಸ್ ಪಾಲಿನ ವಿಶೇಷ ಪ್ರಕ್ರಿಯೆ ಎನ್ನಬಹುದು. ಕಳೆದ ವಾರದಲ್ಲಿ ಗೋವಾದಿಂದ ಬಂದಿದ್ದ ಕೆ.ಶಂಕರ್ ಇಲ್ಲಿನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಯಾರು ಯಾವ ಕ್ಷೇತ್ರದಲ್ಲಿ ಪ್ರಭಾವಿತರಾಗಿದ್ದಾರೆ. ಹೆಚ್ಚು ಜನಪ್ರಿಯರಾಗಿರುವವರು ಯಾರು? ಮುಂದಿನ ಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾದರೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂಬುದರ ಸಮೀಕ್ಷೆಯಂತಿರುವ ವೀಕ್ಷಕರ ಅಭಿಪ್ರಾಯ ಸಂಗ್ರಹ ಕಾಂಗ್ರೆಸ್ ಪ್ರತಿಭಾರಿ ಮಾಡುತ್ತದೆಯಾದರೂ. ಟಿಕೆಟ್ ಹಂಚಿಕೆಯ ಸಮಯ ಬಂದಾಗ ವೀಕ್ಷಕರು ಮಾತ್ರ ಮೂಕವೀಕ್ಷಕರಾಗಿಯೇ ಇರುವಂತಹದ್ದು ಈ ವರೆಗೆ ನಡೆದು ಬಂದ ಕಾಂಗ್ರೆಸ್ ಸಂಪ್ರದಾಯ. ಆದರೆ ಈ ಬಾರಿ ದ.ಕ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ವೀಕ್ಷಕರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಅಭಿಪ್ರಾಯ ಕೇಳಿದ ಬಳಿಕವೂ ಹೈಕಮಾಂಡ್ ಅಭಿಪ್ರಾಯವನ್ನೇ ನಮ್ಮ ಮೇಲೆ ಹೇರುವುದಾದರೆ ಅವರೇ ಬಂದು ಇಲ್ಲಿ ಕೆಲಸ ಮಾಡಲಿ ಎಂದು ಹೇಳಿ ಕಳುಹಿಸಿದ್ದಾರೆ. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಣಯ್ಯ ಅಂಚನ್, ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ರೋಹಿತಾಕ್ಷ ರೈ ಮೊದಲಾದವರು ಸುರತ್ಕಲ್ ಕ್ಷೇತ್ರದ ಸ್ಪಷ್ಟ ಚಿತ್ರಣವನ್ನು ವೀಕ್ಷಕರ ಮುಂದಿರಿಸಿದ್ದಾರೆ.
ದ.ಕ. ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಕಾರ್ಯಕರ್ತರದ್ದು ಇದೇ ಅಭಿಪ್ರಾಯವಾಗಿತ್ತು. ಕಾರ್ಯಕರ್ತರ ಈ ಭಾವನೆಯನ್ನು ಶಂಕರ್ ಹೈಕಮಾಂಡ್‌ಗೆ ತಲುಪಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದನ್ನು ನೋಡಬೇಕಿದೆ.
ಇಲ್ಲಿ ಸಂಗ್ರಹಿಸಲಾದ ಅಭಿಪ್ರಾಯದಲ್ಲಿ ಯು.ಟಿ.ಖಾದರ್ ಹಾಗೂ ಅಭಯಚಂದ್ರ ಜೈನ್ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳೇ ಇಲ್ಲ ಎನ್ನಬಹುದಾದ ಸ್ಥಿತಿ ಇದ್ದರೆ, ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಬಾರೀ ಪೈಪೋಟಿಯ ವಾತಾವರಣ ಇದೆ. ಮುಖ್ಯವಾಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ತಮ್ಮ ಪ್ರಭಾವ ತೋರಿಸಲು ಪರಿಶ್ರಮ ಪಟ್ಟವರದ್ದೇ ಒಂದು ಪಟ್ಟಿ ಮಾಡಬಹುದು.
ಗುರುಪುರದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆದಿತ್ತು. ವೀಕ್ಷಕರಾಗಿ ಬಂದಿದ್ದ ಗೋವಾದ ಶಂಕರ್‌ರವರು ಗುರುಪುರ ಹಾಗೂ ಸುರತ್ಕಲ್ ವಿಭಾಗಗಳ ಕಾರ್ಯಕರ್ತರ ಅಭಿಪ್ರಾಯವನ್ನು ಪ್ರತ್ಯೇಕವಾಗಿಯೇ ಕೇಳಿದ್ದಾರೆ.
 ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ ಎಂಬ ವಿಶ್ವಾಸವನ್ನು ಬಹುತೇಕರು ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಂದು ಹೇಳುವವರು ಬೊಟ್ಟು ಮಾಡಿದ್ದು ವಿಜಯಕುಮಾರ್ ಶೆಟ್ಟರತ್ತ. ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು ಇರುವ ಅವಕಾಶವನ್ನು ಕಳೆದು ಕೊಳ್ಳುವಂತಾಗಬಾರದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ೧೪ಸಾವಿರ ಮತಗಳ ಅಂತರದಿಂದ ಸೋತಿದ್ದು, ಅದಕ್ಕಿಂತ ಮೊದಲಿನ ಚುನಾವಣೆಯಲ್ಲಿ ಇದ್ದ ಸೋಲಿನ ಅಂತರ ಎರಡು ಸಾವಿರ ಮಾತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈ ಕ್ಷೇತ್ರವ್ಯಾಪ್ತಿಯಲ್ಲಿ ಕೇವಲ ಒಂದು ಸಾವಿರ ಮತಗಳು ಮಾತ್ರ ಲೀಡ್ ಪಡೆದಿದ್ದರು ಎಂಬುದನ್ನು ಗಮನಿಸಬೇಕು ಎಂಬ ಲೆಕ್ಕಾಚಾರ ವಿಜಯಕುಮಾರ್ ಶೆಟ್ಟರ ಬಳಗದವರು ವೀಕ್ಷಕರಿಗೆ ನೀಡಿದ್ದಾರೆ.
ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಎಂಬುದು ಕಾದು ನೋಡಬೇಕಷ್ಟೆ.
ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಸೋಲುವುದಕ್ಕಿಂತ ಅವರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಮಾಡಿಕೊಡಿ ಎಂಬುದು ಕಾರ್ಯಕರ್ತರನೇಕರ ಅಭಿಪ್ರಾಯವಾಗಿತ್ತು.
ತನ್ನ ಪರವಾಗಿ ಮಾತನಾಡುವವರ ಬಳಗವನ್ನು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮೊಯ್ದಿನ್ ಬಾವಾ ಕೂಡ ವೀಕ್ಷಕರಲ್ಲಿಗೆ ಕಳುಹಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ಬಾರಿ ಟಿಕೆಟ್ ತನಗೆ ದಕ್ಕಿಯೇ ದಕ್ಕುತ್ತದೆ ಎಂಬ ವಿಶ್ವಾಸ ಅವರದು.ಆದರೆ ಬಹುತೇಕ ಮುಸ್ಲಿಮರು ಅವರಿಗೆ ಟಕೇಟು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರಲ್ಲದೆ ವಿಜಯ ಕುಮಾರ್ ಶೆಟ್ಟಿಯವರ ಪರ ಮಾತನಾಡಿದ್ದಾರೆ. ಸುರತ್ಕಲ್ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕಾಂಗ್ರಸ್ ಕಾರ್ಪೋರೆಟರ್ ಗಳು ಶೆಟ್ಟಿಯವರನ್ನು ಬೆಂಬಲಿಸುತ್ತಿದ್ದಾರೆ.
ಹಿಂದು, ಮುಸ್ಲಿಂ ಮತ್ತು ಕ್ರೈಸ್ತರ ಓಟುಗಳು ಸಮ ಪ್ರಮಾಣದಲ್ಲಿ ಸೆಳೆಯುವ ಶಕ್ತಿನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಗೆ ಇದೆ ಎಂದು ಅವರ ಪರ ಮಾತನಾಡಿದ ಕಾರ್ಯಕರ್ತರು ತಿಳಿಸಿದ್ದಾರೆ. ಇಂಟೆಕ್‌ಗೆ ಒಂದು ಸ್ಥಾನವಾದರೂ ದ.ಕ. ಜಿಲ್ಲೆಯಲ್ಲಿ ಬಿಡಲೇ ಬೇಕು. ಮಂಗಳೂರು ಉತ್ತರ ಇದಕ್ಕೆ ಸೂಕ್ತವಾದ ಸ್ಥಳ ಎಂದು ರಾಕೇಶ್ ಮಲ್ಲಿ ಪರಮಾತನಾಡಿದವರು ಹೇಳಿ ಬಂದಿದ್ದಾರೆ. ಯಾರು ಹಿತವರು ಇವರೊಳಗೆ ಎಂಬುದನ್ನು ಶಂಕರ ನಿರ್ಧರಿಸಿ ಹೈಕಮಾಂಡ್‌ಗೆ ತಿಳಿಸಲಿದ್ದಾರೆ. ಆದರೆ ಇವರ ಅಭಿಪ್ರಾಯಕ್ಕೆ ಮನ್ನಣೆ ಇದೆಯೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದು ಬಿಡುತ್ತದೆ.
ಜೆರಾಲ್ಡ್ ಸಾವಿನ ಹಿಂದೆ ಹುಟ್ಟಿಕೊಂಡ ಪ್ರಶ್ನೆ
ಮಂಗಳೂರು: ಕಳೆದ ಮೇ ೧೩ರಂದು ನಸುಕಿನ ವೇಳೆ ಕರ್ತವ್ಯ ನಿರತರಾಗಿದ್ದಾಗಲೇ ಶಾಕ್‌ಗೆ ತುತ್ತಾಗಿ ಸಾವನ್ನಪ್ಪಿದ ಮೆಸ್ಕಾಂ ಲೈನ್‌ಮೆನ್ ಜೆರಾಲ್ಡ್ ವೇಗಸ್ ಸಾವಿಗೆ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಮನೆಮಂದಿ ಆರೋಪ ಮಾಡಿರುವ ಬೆನ್ನಿಗೆ ಇಲಾಖಾ ಅಧಿಕಾರಿಗಳ ವಿರುದ್ಧ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ಎಚ್ಚರಿಕೆ ಯನ್ನು ನೀಡಿದ್ದಾರೆ.
ಈ ಹಿಂದೆ ಸಂಭವಿಸಿರುವ ಮಾರಣಾಂತಿಕ ಗಾಯ-
ಸಾವುಗಳ ವಿವರ:
೧. ಐದು ವರ್ಷಗಳ ಹಿಂದೆ ಮೈದಾನ ಶಾಖಾ ವ್ಯಾಪ್ತಿಯಲ್ಲಿ ಅಬ್ರಾಹಂ ಮಾರ್ಗದಾಳು ಎಂಬವರಿಗೆ ಹೈಟೆನ್ಷನ್ ಲೈನ್ ಆಕ್ಸಿಡೆಂಟ್‌ನಿಂದ ದೇಹ ಸುಟ್ಟಿದ್ದು, ಬದುಕುಳಿದಿರುತ್ತಾರೆ.
೨. ೨೦೦೪ರಲ್ಲಿ ಮಲ್ಲಿಕಟ್ಟೆ ಶಾಖಾ ವ್ಯಾಪ್ತಿಯ ನಂತೂರಿನಲ್ಲಿ ಪ್ರೈವೇಟ್ ವರ್ಕರ್ ಒಬ್ಬರು ಕಂಬದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಜೆ.ಇ.ಶಶೀಂದ್ರ ಅವರು ಸ್ವತ: ಚಾರ್ಜ್ ಮಾಡಿಸಿ ಆತನ ಸಾವಿಗೆ ಕಾರಣರಾಗಿರುತ್ತಾರೆ.
೩. ೨೦೧೧ರ ಅಕ್ಟೋಬರ್ ತಿಂಗಳಲ್ಲಿ ಬಜ್ಪೆ ಶಾಖಾ ವ್ಯಾಪ್ತಿಯಲ್ಲಿ ರಮೇಶ್ ಎಂಬ ಲೈನ್‌ಮೆನ್ ಅಂದಿನ ಶಾಖಾಧಿ ಕಾರಿ ಕೆ.ರಾಮಚಂದ್ರ ಅವರ ಬೇಜವಾ ಬ್ದಾರಿಯಿಂದ ಪ್ರಾಣ ಕಳೆದುಕೊಂಡರು.
೪. ಕೈಕಂಬ ಶಾಖಾ ವ್ಯಾಪ್ತಿಯ ಜೆ.ಇ. ಜಗದೀಶ ಮೂರ್ತಿ ಹಾಗೂ ಲೈನ್‌ಮೆನ್ ಯಶವಂತ ಎಂಬವರ ಬೇಜ ವಾಬ್ದಾರಿಯಿಂದಾಗಿ ಹೆಚ್.ಟಿ. ವೈರ್ ಕಟ್ ಆಗಿ ಬಿದ್ದಿದ್ದರೂ ಅದನ್ನು ಗಮನಿಸದೆ ಅಮಾಯಕ ವ್ಯಕ್ತಿ ಸಾವನ್ನಪ್ಪಿದ್ದರು.
೫. ಬೆಳುವಾಯಿ ಶಾಖಾ ವ್ಯಾಪ್ತಿ ಯಲ್ಲಿ ಜೆ.ಇ. ಅಶೋಕ್ ಬೇಜವಾ ಬ್ದಾರಿಯಿಂದ ಹೆಚ್.ಟಿ. ವೈರ್ ಕಟ್ ಆಗಿ ಬಿದ್ದು ವೃದ್ಧೆ ವೈರ್ ತುಳಿದು ಸಾವನ್ನಪ್ಪಿದ್ದರು.
೬. ೨೦೧೦ರ ನವೆಂಬರ್ ೧೮ರಂದು ಕಾವೂರು ಶಾಖಾ ವ್ಯಾಪ್ತಿಯಲ್ಲಿ ಜೆ.ಇ. ಲಿಂಗಪ್ಪ ಗೌಡ ಎಂಬವರು ಬೆಂಗಳೂರು ಮೂಲದ ಲೈನ್‌ಮೆನ್ ಪ್ರಾಣೇಶ್ ಕಂಬದಲ್ಲಿ ಕರ್ತವ್ಯ ನಿರತರಾ ಗಿರುವಾಗಲೇ ಚಾರ್ಜ್ ಮಾಡಿಸಿ ಆತನ ಸಾವಿಗೆ ಕಾರಣವಾಗಿದ್ದರು.
೭. ೨೦೧೦ರ ಜೂನ್ ೨೭ರಂದು ಮಣ್ಣಗುಡ್ಡ ಶಾಖಾ ವ್ಯಾಪ್ತಿಯಲ್ಲಿ ಮೆಸ್ಕಾಂ ಅಧಿಕಾರಿ ರಾಜೇಶ್ ಅವರು ಯಶ್ ಎನ್ನುವ ಲೈನ್‌ಮೆನ್ ಕಂಬದಲ್ಲಿರು ವಾಗಲೇ ಚಾರ್ಜ್ ಮಾಡಿಸಿದ ಪರಿಣಾಮ ಆತ ಕೆಳಕ್ಕೆಸೆಯಲ್ಪಟ್ಟು ಗಂಭೀರ ಗಾಯ ಗಳೊಂದಿಗೆ ಬದುಕುಳಿದಿರುವುದು.
೮. ೨೦೧೧ರ ಜುಲೈ ೧೭ರಂದು ಮಂಜಪ್ಪ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೋಟೆಲ್ ಅಯೋಧ್ಯ ರೆಸ್ಟೋರೆಂಟ್, ಪಿ.ವಿ. ಎಸ್. ಸರ್ಕಲ್ ಬಳಿಯ ಟ್ರಾನ್ಸ್ ಫಾರ್ಮರ್ ಕಂಬವನ್ನು ಸ್ಥಳಾಂತರ ಮಾಡಿದ್ದು, ಕ್ಲ್ಯಾಂಪ್ ಕುಸಿದು ಬಿದ್ದು ಲೈನ್‌ಮೆನ್ ಬಾಲರಾಜ್ ಗಂಭೀರ ಗಾಯಗೊಂಡು ಬದುಕುಳಿದಿರುವುದು.
೯. ೨೦೧೧ರ ನವೆಂಬರ್ ೨೫ರಂದು ಸುರತ್ಕಲ್-ಕಾಟಿಪಳ್ಳ ಶಾಖೆಯ ಜೆ.ಇ. ಜಯಶೆಟ್ಟಿ ಅವರು ಲೈನ್‌ಮೆನ್ ರವಿಕುಮಾರ್ ಎಂಬವರನ್ನು ಕರೆದು ಕೊಂಡು ಹೋಗಿ ಲೈನ್ ಆಫ್ ಮಾಡಿ ಸದೆ ಜಾರ್ಜ್‌ನಲ್ಲಿರುವಂತೆಯೇ ಕಂಬ ವನ್ನು ಹತ್ತಿಸಿದ ಪರಿಣಾಮ ಆತ ಬಲಗೈಯನ್ನೇ ಕಳೆದುಕೊಂಡಿದ್ದಾರೆ.
೧೦. ಉಳ್ಳಾಲ ಶಾಖಾ ವ್ಯಾಪ್ತಿಯ ಲೈನ್‌ಮೆನ್ ಪ್ರವೀಣ್ ಎಂಬವರು ಕೂಡಾ ಇದೇ ರೀತಿ ಅಧಿಕಾರಿಗಳ ಮಾತಿಗೆ ಬೆಲೆಕೊಟ್ಟು ಬಲಗೈಯನ್ನೇ ಕಳೆದುಕೊಂಡಿದ್ದಾರೆ.
೧೧. ಪಣಂಬೂರು ಶಾಖಾ ವ್ಯಾಪ್ತಿಯಲ್ಲಿ ನಾಲ್ಕು ಲೈನ್‌ಮೆನ್‌ಗಳಿಗೆ ಕರ್ತವ್ಯದಲ್ಲಿದ್ದ ಸಂದರ್ಭ ಮಾರಣಾಂ ತಿಕ ಗಾಯಗಳಾಗಿದ್ದರೂ ಜೆ.ಇ. ರೆಹಮತ್ ಎಂಬವರು ಈ ಬಗ್ಗೆ ಅಧಿಕಾರಿಗಳು ಚಕಾರವೆತ್ತದ ಹಾಗೆ ನೋಡಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಮೇ ೧೩ರಂದು ಲೈನ್‌ಮೆನ್ ಜೆರಾಲ್ಡ್ ವೇಗಸ್ ಅವ ರನ್ನು ಕರ್ತವ್ಯ ನಿರ್ವಹಿಸಲು ಕರೆದು ಕೊಂಡು ಹೋಗಿ ಹೆಚ್.ಟಿ. ಲೈನ್‌ನಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಬೇರೆ ಲೈನ್‌ನಿಂದ ಚಾರ್ಜ್ ಮಾಡಿಸಿ ಆತನ ಜೀವ ಬಲಿತೆಗೆದುಕೊಂಡಿದ್ದಾರೆ. ಜೆ.ಇ. ಗುರುಮೂರ್ತಿ ಅಜಾಗರೂಕತೆಯಿಂದ ಆಗಿರುವ ಪ್ರಕರಣಗಳನ್ನು ಮುಚ್ಚಿ ಹಾಕಲು ಶ್ರಮಿಸಲಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.
ಈ ಮಧ್ಯೆ ಜೆರಾಲ್ಡ್ ವೇಗಸ್ ಅವರು ಮೃತಪಟ್ಟ ಹತ್ತು ದಿನಗಳೊಳಗೆ ಮೆಸ್ಕಾಂ ಮಂಗಳೂರು ಡಿವಿಜನ್‌ನ ಮುಖ್ಯ ಕಾರ್ಯ ನಿರ್ವಹಣಾ ಇಂಜಿ ನಿಯರ್ ಅವರು ವೇಗಸ್ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡಲು ಶ್ರಮಿ ಸಿದ್ದು, ಪರಿಹಾರದ ಚೆಕ್ ಇಲಾಖಾ ಸಂಬಂಧಪಟ್ಟವರಿಗೆ ತಲುಪಿದ್ದು, ಆದರೆ ವೇಗಸ್ ಅವರ ಮನೆಮಂದಿಗೆ ಇನ್ನಷ್ಟೇ ತಲುಪಬೇಕಾಗಿದೆ.
ಇಷ್ಟು ಮಾತ್ರವಲ್ಲದೆ ಮೆಸ್ಕಾಂ ಇಲಾಖೆಯಲ್ಲಿರುವ ಜೆ.ಇ.ಗಳು ಕಳ್ಳತನ, ಫೋರ್ಜರಿಯಲ್ಲಿ ತೊಡಗಿ ಕೊಂಡಿದ್ದರೂ ಹಿರಿಯ ಅಧಿಕಾರಿ ಗಳು ಈ ಬಗ್ಗೆ ಗಮನಿಸದೆ ಯೋಗ್ಯ ತನಿಖೆ ನಡೆಸುತ್ತಿಲ್ಲ ಎಂಬ ಆರೋಪ ನಾಗರಿಕರಿಂದ ಕೇಳಿಬಂದಿದೆ. ಈ ಮೇಲಿನ ಎಲ್ಲಾ ಪ್ರಕರಣಗಳ ಬಗ್ಗೆ ಮರುತನಿಖೆ ನಡೆಸಿ ಸತ್ಯಾಂಶವನ್ನು ಬಯಲಿ ಗೆಳೆಯಬೇಕೆಂದು ಆಗ್ರಹಿಸಿ ರುವ ಸಾರ್ವಜನಿಕರು ಮೆಸ್ಕಾಂ ಇಲಾಖೆ ಮುಂದಿನ ಮಳೆಗಾಲದಲ್ಲಿ ಬೇಜ ವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಮತ್ತಷ್ಟು ಮಂದಿ ಲೈನ್ ಮೆನ್‌ಗಳ ಪ್ರಾಣಹರಣವಾಗುವುದನ್ನು ತಪ್ಪಿಸಲಿ ಎಂದು ಮನವಿ ಮಾಡಿ ದ್ದಾರೆ. ಮೆಸ್ಕಾಂ ಮೇಲಿನ ಜನರ ನಂಬಿಕೆ ಹುಸಿಯಾಗುವ ಮುನ್ನ ಹಿರಿಯ ಅಧಿಕಾರಿವರ್ಗ ಎಚ್ಚೆತ್ತು ತನಿಖೆ ನಡೆಸಿ ನ್ಯಾಯ ಒದಗಿಸಬೇ ಕಾದ್ದು ತುರ್ತು ಅಗತ್ಯವೂ ಆಗಿದೆ.

ಗುರುಮೂರ್ತಿ ಅಮಾನತು
ಜೆರಾಲ್ಡ್ ವೇಗಸ್ ಅವರು ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿ ಗುರುಮೂರ್ತಿ ಎಂಬವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆದರೆ ವೇಗಸ್ ಅವರ ಮನೆಮಂದಿ ಮತ್ತು ಜನತೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇವಲ ಅಮಾನತು ಶಿಕ್ಷೆ ಮಾತ್ರ ಸಾಲದು ಬದಲಿಗೆ ಕೊಲೆ ಪ್ರಕರಣ ದಾಖಲಿಸಿ ಹೆಚ್ಚಿನ ಚಿಕಿತ್ಸೆ ವಿಧಿಸಬೇಕು ಮತ್ತು ಇನ್ನಷ್ಟು ಮುಗ್ಧ ಜೀವಗಳು ಬಲಿಯಾ ಗುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
Newer Posts Older Posts Home
Recent Updates
Recomment to Your Friends
Current Views
Blog Archive
Copyright © 2012. Basnetg.com. All rights reserved.
Home