ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ವಿಷಯ ಓದಿದೆ. ಏನೆಂದರೆ ಶತಕಗಳ ಶತಕ ಬಾರಿಸಿರುವ ಸಚಿನ್‌ಗೆ ಸನ್ಮಾನ. ಗೌರ ವಾನ್ವಿತ ಕೇರಳದ ಮುಖ್ಯಮಂತ್ರಿಗಳಲ್ಲಿ ನನ್ನದೊಂದು ವಿನಂತಿ. ಸಚಿನ್‌ರವರ ಸಾಧನೆ ಅಭಿನಂದನಾರ್ಹವೆ. ಆದರೆ ಸನ್ಮಾನ ಮಾಡುವುದಕ್ಕೆ ಮೊದಲು ಸ್ವಲ್ಪ ಯೋಚಿಸಬೇಕಿತ್ತು.
ನಮ್ಮ ದೇಶದ ರಕ್ಷಣೆಗಾಗಿ ಎದೆಯೊಡ್ಡಿ ನಿಂತು ದೇಶ ರಕ್ಷಣೆಯೇ ನಮ್ಮ ಗುರಿ ಎಂದು ಯುದ್ಧದಲ್ಲಿ ಪ್ರಾಣತೆತ್ತ ಸೈನಿಕರ ಬಗ್ಗೆ ಒಂದು ಸಮಾರಂಭ ಏರ್ಪಡಿಸಿದ್ದರೆ ಅದಕ್ಕೊಂದು ಅರ್ಥವಿತ್ತು. ಇವತ್ತು ನಾವು ನೀವು ಈ ನೆಲದಲ್ಲಿ ಉಸಿರಾಡುತ್ತಿರುವುದು ನಮ್ಮ ದೇಶದ ಹೆಮ್ಮೆಯ ಸೈನಿಕರು ದುರ್ಗಮ ಪ್ರದೇಶದಲ್ಲಿ ಕಷ್ಟಪಟ್ಟು ಹೋರಾಟ ನಡೆಸುತ್ತಿರುವುದರ ಫಲದಿಂದ.
ನಮ್ಮ ರಾಷ್ಟ್ರ ರಕ್ಷಣೆಗೆ ತಮ್ಮ ಮಕ್ಕಳ ಬೆನ್ನುತಟ್ಟಿ ಅವರನ್ನು ಹರಸಿ ಕಳುಹಿಸುತ್ತಿ ರುವ ತಂದೆ ತಾಯಿಯರನ್ನು ಸನ್ಮಾನಿ ಸುವ, ಗೌರವಿಸುವ ಕೆಲಸ ಆಗಬೇಕು. ಕೇವಲ ಕ್ರಿಕೆಟಿಗರಿಂದ ನಮ್ಮ ದೇಶಕ್ಕೇನೂ ಲಾಭವಿಲ್ಲ.
ಪ್ರಶಾಂತ್ ಸಾಲಿಯಾನ್, ಕರಿಯಕಲ್ಲು
ಆನಗಳ್ಳಿ ಸೇತುವೆ ಯಾವಾಗ?
ಆನಗಳ್ಳಿಗೆ ಸೇತುವೆ ಮಂಜೂರಾಗಿದೆ ಎಂದು ಹೇಳಿ ಸುಮಾರು ೨೦ ವರ್ಷ ಆಗಿದೆ. ಆದರೆ ಕೆಲಸ ಯಾಕೆ ಪ್ರಾರಂ ಭವಾಗಿಲ್ಲ? ಕುಂದಾಪುರ ಪುರಸಭೆಯಿಂದ ೨೦೦ ಮೀಟರ್ ಹತ್ತಿರದಲ್ಲಿರುವ ಗ್ರಾಮ ಆನಗಳ್ಳಿ. ಇಲ್ಲಿನ ಗ್ರಾಮಸ್ಥರು ಸೇತುವೆ ನಿರ್ಮಾಣಕ್ಕಾಗಿ ಕೆಲವು ಚುನಾವಣೆಗಳಲ್ಲಿ ಮತದಾನ ಬಹಿ ಷ್ಕಾರ ಮಾಡಿದರೂ ಸೇತುವೆ ಆಗಲಿಲ್ಲ. ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಅದು ಮಾಡುತ್ತೇವೆ, ಇದು ಮಾಡು ತ್ತೇವೆ ಎಂದು ಬೊಗಳೆ ಬೇರೆ ಬಿಡುತ್ತಾರೆ. ಈ ಸೇತುವೆ ಬಗ್ಗೆ ಕೂಡಾ ಆಶ್ವಾಸನೆ ನೀಡಿ ಇದೀಗ ಸುಮ್ಮನಿದ್ದಾರೆ. ಈ ರೀತಿಯ ಸುಳ್ಳು ಆಶ್ವಾಸನೆ ಯಾಕೆ ನೀಡಬೇಕು? ಸಂಬಂಧಪಟ್ಟವರು ಅತೀ ಶೀಘ್ರದಲ್ಲಿ ಇಲ್ಲಿನ ಆನಗಳ್ಳಿ ಸೇತುವೆ ನಿರ್ಮಿಸಿ ಕೊಡ ಬೇಕಾಗಿ ವಿನಂತಿ.
ಆನಗಳ್ಳಿ ಗ್ರಾಮಸ್ಥರು, ಕುಂದಾಪುರ
ಹಾಲಾಡಿಗೆ ಮಂತ್ರಿ ಪದವಿ ನೀಡಿ
ಕುಂದಾಪುರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನ ನೀಡಬೇಕು. ಕುಂದಾಪುರದ ವಾಜಪೇಯಿ ಎಂದು ಕರೆಸಿಕೊಳ್ಳುವ ಹಾಲಾಡಿ ಸತತ ಮೂರು ಬಾರಿ ಗೆಲುವು ಸಾಧಿಸಿ ಕುಂದಾ ಪುರದಲ್ಲಿ ಬಿಜೆಪಿಯನ್ನು ತಳಮಟ್ಟ ದಿಂದ ಕಟ್ಟಿ ಬೆಳೆಸಿದವರು. ಈ ಬಾರಿ ಯಾದರೂ ಸದಾನಂದ ಗೌಡರು ಇವ ರಿಗೆ ಮಂತ್ರಿ ಸ್ಥಾನ ನೀಡಬೇಕು. ಅವ ರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯಬೇಕು. ಕುಂದಾಪುರ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಶಕ್ತಿ ಶ್ರೀನಿವಾಸ ಶೆಟ್ಟರಿಗಿದೆ. ಹೀಗಾಗಿ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮಂತ್ರಿ ಪದವಿ ನೀಡಿ ಕುಂದಾಪುರ ಅಭಿವೃದ್ಧಿ ಹೊಂದಲಿ ಎಂದು ನಮ್ಮ ಹಾರೈಕೆ
ಹಾಲಾಡಿ ಅಭಿಮಾನಿ, ಕುಂದಾಪುರ
ಕಾಟಿಪಳ್ಳದಲ್ಲಿ ಗಾಂಜಾ ಗ್ಯಾಂಗ್
ಕಾಟಿಪಳ್ಳ ಪ್ರದೇಶದಲ್ಲಿ ಗಾಂಜಾ ವ್ಯವಹಾರ ನಿರಂತರ ವಾಗಿ ನಡೆಯುತ್ತಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇದು ಅಕ್ಷರಶಃ ನಿಜ. ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಸ್ವಲ್ಪ ಸಮಯ ನೇಪಥ್ಯಕ್ಕೆ ಸರಿದ ಈ ಗಾಂಜಾ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದೆ. ಕಾಟಿಪಳ್ಳ ಹೊಲಿಗೆ ತರಬೇತಿ ಕೇಂದ್ರದ ಜಗ ಲಿಯಲ್ಲಿ ಈ ಗ್ಯಾಂಗ್ ರಾತ್ರಿಯ ನಂತರ ಬೆಳಗ್ಗಿನ ತನಕ ಸಕ್ರಿ ಯವಾಗಿದೆ. ಇದಲ್ಲದೆ ಈದ್ಗಾ ಕಂಪೌಂಡ್, ಸರಕಾರಿ ಪ್ರಾಥ ಮಿಕ ಶಾಲೆ ಕೂಡಾ ಇವರ ಅಡ್ಡೆಯಾಗಿ ಪರಿವರ್ತನೆಗೊಂ ಡಿದೆ. ಗಾಂಜಾ ಸೇವಿಸಿ ಬುದ್ಧಿ ಸ್ಥಿಮತೆಯನ್ನು ಕಳೆದು ಕೊಳ್ಳುವ ಈ ಪುಂಡರಿಂದಾಗಿ ಸುತ್ತಮುತ್ತಲಿನ ಮನೆಯವರಿಗೆ ತೊಂದ ರೆಯಾಗುತ್ತಿದೆ.
ಈ ಗಾಂಜಾ ವ್ಯವಹಾರದಲ್ಲಿ ಮಾಜಿ ಗಂಧಕಳ್ಳನೊಬ್ಬನ ಕೈವಾಡವಿದೆ. ಈತ ಗಾಂಜಾ ಸರಬರಾಜು ಜಾಲದ ಪ್ರಮುಖ ವ್ಯಕ್ತಿಯಾಗಿದ್ದಾನೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಈ ಗಾಂಜಾ ಗ್ಯಾಂಗನ್ನು ಮಟ್ಟಹಾಕಿ ಸಾಮಾಜಿಕ ಆರೋಗ್ಯ ವನ್ನು ಕಾಪಾಡಬೇಕಾಗಿ ವಿನಂತಿ.
ನಾಗರಿಕ, ಕಾಟಿಪಳ್ಳ
ಅಪಾಯಕಾರಿ ಹೊಂಡವನ್ನು ದುರಸ್ತಿ ಪಡಿಸುವಿರಾ?
ತೊಕ್ಕೊಟ್ಟುವಿನಿಂದ ಮಂಜನಾಡಿಯಾಗಿ ಹಾದು ಹೋಗಿರುವ ರಸ್ತೆ ಡಾಮರೀಕರಣಗೊಂಡಿರುವುದು ಸ್ವಾಗತಾರ್ಹ. ಆದರೆ ರಸ್ತೆಯ ಬದಿಯ ತೋಡಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ಕುಸಿದು ಬೀಳುತ್ತಿದೆ. ಮಂಜ ನಾಡಿ ಕಲ್ಕಟ್ಟ ಎಂಬಲ್ಲಿ ರಸ್ತೆಯ ಬದಿ ಇತ್ತೀಚೆಗೆ ತಡೆಗೋಡೆಯೊಂದು ನಿರ್ಮಿಸಲಾಗಿದೆ. ಆದರೆ ಆ ತಡೆಗೋಡೆ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ. ಇತ್ತೀಚೆಗೆ ಇದೇ ಹೊಂಡಕ್ಕೆ ಟೆಂಪೊ ವೊಂದು ಬಿದ್ದು ಟೆಂಪೊದಲ್ಲಿದ್ದವರು ಅಪಾಯದಿಂದ ಪಾರಾಗಿದ್ದರು. ವಾಹ ನಗಳಿಗೆ ಸೈಡ್ ಕೊಡಲು ಜಾಗವಿಲ್ಲದ ಈ ಸ್ಥಳದಲ್ಲಿ ಹಲವಾರು ಮಂದಿ ಜನ ಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಅವರು ಈ ಅಪಾಯಕಾರಿ ಹೊಂಡ ವನ್ನು ದುರಸ್ತಿಪಡಿಸುವ ಬಗ್ಗೆ ಗಮನಹರಿಸುವುದಿಲ್ಲ. ಎಲ್ಲಿಯಾದರೊಮ್ಮೆ ಈ ಹೊಂಡಕ್ಕೆ ದ್ವಿಚಕ್ರ ವಾಹನ ಬಿದ್ದು ಜೀವವೊಂದು ಹೋದರೆ ಮತ್ತೆ ಅದರ ದುರಸ್ತಿ ಕಾರ‍್ಯ ನಡೆಯಬಹುದೋ ಏನೊ? ಕಾನೂನು ಮತ್ತು ಸುಭದ್ರ ಆಡಳಿತದ ಬಗ್ಗೆ ಡಂಗುರ ಸಾರುವವರು ಈ ಕುಸಿದು ಬಿದ್ದಿರುವ ತಡೆಗೋಡೆ ದುರಸ್ತಿ ಮಾಡುತ್ತಿಲ್ಲ. ಪಂಚಾಯತ್‌ನಲ್ಲಿ ಕೇಳಿದರೆ ಅದು ಪಿಡಬ್ಲ್ಯೂಡಿ ಅವರು ಮಾಡಿದ್ದು, ಅವರೇ ದುರಸ್ತಿ ಮಾಡಲಿ ಎನ್ನುತ್ತಾರೆ. ನಾವು ಬೇಕಾದ ಸೌಕ ರ್ಯಗಳನ್ನು ಮಾಡಿಕೊಡುತ್ತೇವೆ ಎನ್ನುವ ಪಂಚಾಯತ್ ಇಂತಹ ದೊಡ್ಡ ಸಮಸ್ಯೆಗಳನ್ನು ಯಾಕೆ ಪರಿಹರಿಸುವುದಿಲ್ಲ?
ಬಶೀರ್, ಕಲ್ಕಟ್ಟ
ವಿದೇಶಿ ಉದ್ಯೋಗಕ್ಕೆ ಬಲಿಯಾಗದಿರಿ
ವಿದೇಶಕ್ಕೆಂದು ತೆರಳುವ ಬಹಳಷ್ಟು ಮಂದಿ ವೀಸಾ ಏಜೆಂಟರ ಮಾತಿಗೆ ಬಲಿ ಯಾಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾ ಗಿಬಿಟ್ಟಿದೆ.
ಹಲವು ಮಂದಿ ಯುವಕರಿಗೆ ವೀಸಾ ಏಜೆಂಟರು ವಿದೇಶದಲ್ಲಿ ಒಳ್ಳೆಯ ಕೆಲಸವಿ ರುವ ವೀಸಾ ಕೊಡುವುದಾಗಿ ನಂಬಿಸಿ ಅವ ರಿಂದ ಸಾವಿರಗಟ್ಟಲೆ ರೂ. ಹಣ ಪಡೆದು ವಂಚಿಸುತ್ತಿರುವ ಕಾರ್ಯ ನಡೆಯುತ್ತಿದೆ. ವಿದೇ ಶಕ್ಕೆ ತೆರಳಿದ ನಂತರ ಇವರ ನಿಜವಾದ ಬಣ್ಣ ಬಯಲಾಗುತ್ತದೆ. ಇಂಜಿನಿಯರ್, ಕಂಪ್ಯೂ ಟರ್ ಕೆಲಸ ಎಂದು ಹೇಳಿ ಹೋದವರನ್ನು ಅಲ್ಲಿ ಮನೆ ಕೆಲಸಕ್ಕೆ ನೇಮಿಸಿಕೊಂಡು ಜೀತ ದಂತೆ ದುಡಿಸುತ್ತಾರೆ. ಅಲ್ಲದೆ ತಿಂಗಳ ಸಂಬಳ ಕೇಳಿದರೆ ಅದನ್ನು ಏಜೆಂಟರಲ್ಲಿ ಕೇಳಿ ಎಂದು ದಬಾಯಿಸುತ್ತಿದ್ದು. ಇತ್ತ ಸಂಬಳವೂ ಇಲ್ಲದೆ, ಊರಿಗೂ ಬಾರಲು ಆಗದೇ ನರಕ ಸದೃಶ ಜೀವನವನ್ನು ಸಾಗಿಸಬೇಕಾಗಿದೆ. ಆದ್ದರಿಂದ ಏಜೆಂಟರ ಮಾತಿಗೆ ಬಲಿಯಾಗದೆ ಉದ್ಯೋ ಗದ ಆಸೆಯಲ್ಲಿ ಹಣ ಕಳಕೊಂಡು ಮೋಸ ಹೋಗದೆ ಎಚ್ಚರಿಕೆಯಿಂದಿರಿ.
ಓರ್ವ ನಾಗರಿಕ, ಕಂಕನಾಡಿ
ಕಮಿಷನರ್ ಮೌನವೇಕೆ?
ಮೊನೆಯಷ್ಟೇ ನಡೆದ ಮಾರು ಕಟ್ಟೆ ವ್ಯಾಪಾರಸ್ಥರ ಸಭೆಯಲ್ಲಿ ಪೊಲೀ ಸರಿಗೆ ಮಾಸಿಕ ಐದು ಸಾವಿರ ರುಪಾಯಿ ನೀಡುತ್ತಿದ್ದೇವೆ ಎಂದು ವ್ಯಾಪಾರಸ್ಥರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಬಗ್ಗೆ ಜಯಕಿರಣ ಪತ್ರಿಕೆ ವರದಿ ಮಾಡಿತ್ತು. ಪೊಲೀಸರ ಹಫ್ತಾ ವ್ಯವಹಾರದ ಬಗ್ಗೆ ವ್ಯಾಪಾ ರಸ್ಥರೇ ಬಹಿರಂಗವಾಗಿ ಹೇಳುತ್ತಿರು ವಾಗ ಕಮಿಷನರ್ ಮಾತ್ರ ಈ ಬಗ್ಗೆ ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿರುವುದೇಕೇ? ಕೇಂದ್ರ ಮಾರುಕಟ್ಟೆಗೆ ಬೆಳಿಗ್ಗಿನ ಜಾವ ಭೇಟಿ ಕೊಟ್ಟರೆ ಪೊಲೀಸರ ಹಫ್ತಾ ಪುರಾಣ ಇನ್ನೂ ಬಯಲಿಗೆ ಬರಬಹುದು. ಅಲ್ಲದೇ ನಗರದ ಅನೇಕ ಲಾಡ್ಜ್‌ಗ ಳಲ್ಲಿ ಇಂದಿಗೂ ವೇಶ್ಯಾವಾಟಿಕೆ ಎಗ್ಗಿ ಲ್ಲದೆ ನಡೆಯುತ್ತಿದೆ. ಪೊಲೀಸರಿಗೆ ಈ ವಿಚಾರ ತಿಳಿದಿದ್ದರೂ ಸುಮ್ಮ ನಿದ್ದಾರೆ. ಕಾರಣ ಇಷ್ಟೇ. ತಿಂಗಳಾದರೆ ಇವರ ಖಾತೆಗೆ ನಗರದ ಪ್ರತೀ ಲಾಡ್ಜ್ ನಿಂದ ಇಂತಿಷ್ಟು ವಂತಿಗೆ ಜಮೆಯಾ ಗುತ್ತದೆ. ಇದೆಲ್ಲಾ ನಗರ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ರವರಿಗೆ ಗೊತ್ತಿಲ್ಲವೇ? ಮಾರುಕಟ್ಟೆ ವ್ಯಾಪಾರಸ್ಥರು ಹಫ್ತಾದ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿ ದ್ದರೂ ಕಮಿಷನರ್ ಯಾಕೆ ತನಿಖೆ ನಡೆಸುವ ಗೋಜಿಗೆ ಕೈಹಾಕಿಲ್ಲ? ಇತ್ತೀಚೆಗೆ ಇಲಾಖೆಯ ಅಧಿಕಾರಿ ಯೊಬ್ಬರು ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಹಣ ಪಡೆದು ಸಿಕ್ಕಿ ಬಿದ್ದಾಗಲೇ ಆಯುಕ್ತರು ಇತ್ತ ಗಮನ ಹರಿಸ ಬೇಕಿತ್ತು. ಇಲಾಖೆಯಲ್ಲಿ ನಡೆ ಯುತ್ತಿರುವ ಕಾಂಚಾಣದ ಆಟ ವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇ ಕಿತ್ತು. ಆದರೆ ಇಂತಹ ಕೆಲಸ ನಡೆ ದಿಲ್ಲ. ಇನ್ನಾದರೂ ನಗರ ಪೊಲೀಸ್ ಆಯುಕ್ತರು ಇತ್ತ ಗಮನ ಹರಿಸಿ. ಇಲಾಖೆಯ ಮಾನ ಇನ್ನಷ್ಟು ಹರಾ ಜಾಗುವ ಮುನ್ನ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಿ.
ಸಂಕೇತ್ ನಾಯಕ್, ಕಂಕನಾಡಿ
ಟಿವಿ ಮಾಧ್ಯಮದಲ್ಲೂ ಕೆಸರೆರಚಾಟವೇ?
ಅತಿಯಾದರೆ ಅಮೃತವೂ ವಿಷ ಎನ್ನುವುದು ಬಹುಶಃ ಇದಕ್ಕೇ ಇರಬೇಕು. ವೈಯಕ್ತಿಕ ಹಿತಾಸಕ್ತಿಯಿಂದ ಜನ ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ಮಾಧ್ಯಮ ಲೋಕವೂ ಹೊರತಾಗಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಭೀಮಾ ತೀರದ ಹಂತಕರು ಚಿತ್ರದ ವಿವಾದ. ಇತ್ತೀಚೆಗೆ ಸಿನಿಮಾ ರಂಗದಲ್ಲಿ ವಿವಾದಗಳು ಸಾಮಾನ್ಯ. ಚಿತ್ರ ಹಿಟ್ ಆಗಲು ಇದೊಂದು ಗಿಮಿಕ್ ಕೂಡ ಹೌದು. ಇದೇ ಸಾಲಿಗೆ ಸೇರಿ ಒಂದೆರೆಡು ದಿನಗಳಲ್ಲಿ ತಣ್ಣಗಾಗಬೇಕಿದ್ದ ‘ಭೀಮಾ ತೀರದ ಹಂತಕರು ಚಿತ್ರದ ವಿವಾದ ದಿನಕಳೆದಂತೆ ವೈಯಕ್ತಿಕ ಪ್ರತಿಷ್ಠೆಯ ಹುಚ್ಚು ಅಲೆಯಲ್ಲಿ ಮುಳುಗಿ ತೇಲುತ್ತಿದೆ. ಸುದ್ದಿ ಮಾಧ್ಯಮಗಳಿಗಂತೂ ಒಂದೆರೆಡು ಘಂಟೆಗಳ ವ್ಯರ್ಥ ಚರ್ಚೆಗಳಿಗೆ ಈ ಸಣ್ಣ ವಿಚಾರ ವೇದಿಕೆಯಾಗಿದೆ. ಇತ್ತೀಚೆಗೆ ಈ ವಿವಾದವೇ ತನ್ನ ದಿಕ್ಕು ಬದಲಾಯಿಸಿದಂತೆ ತೋರುತ್ತಿದೆ.
ಈ ಹಿಂದೆ ಪತ್ರಿಕಾ ಮಾಧ್ಯಮಗಳು ಪರಸ್ಪರ ಕೆಸರೆರೆಚಾಟ ನಡೆಸುತ್ತಿದ್ದದ್ದು ಸಾಮಾ ನ್ಯವಾಗಿತ್ತು. ಆದರೆ ಈ ತನಕ ಇಲೆಕ್ಟ್ರಾನಿಕ್ ಮೀಡಿಯಾಗಳು ಈ ತಕರಾರಿಗೆ ಕೈ ಹಾಕಿರ ಲಿಲ್ಲ. ಆದರೆ ಮೊನ್ನೆಯ ವಿವಾದಲ್ಲಿ ಅದೂ ನಡೆದು ಹೋಗಿದೆ. ಭೀಮಾ ತೀರದ ವಿವಾ ದದಲ್ಲಿ ಆರಂಭವಾದ ಸಣ್ಣ ಚರ್ಚೆ ಈಗ ಒಬ್ಬ ವ್ಯಕ್ತಿಯ ಮಾನ ಹರಣದಲ್ಲಿ ಬಂದು ನಿಂತಿದೆ. ಈ ಹಿಂದೆ ತನ್ನ ಮೇಲೆ ಬಂದ ಅದೆಷ್ಟೋ ಆರೋಪಗಳಿಗೆ ಉತ್ತರಿಸಲಾಗದೇ ತಪ್ಪಿಸಿಕೊಂಡಿದ್ದ ಪತ್ರಿಕಾ ಆಂಕಣಕಾರರೊಬ್ಬರು ಮತ್ತೊಬ್ಬರ ಮಾನ ಹರಣಕ್ಕೆ ಮುಂದಾ ಗಿದ್ದಾರೆ. ಕೋಟ್ಯಂತರ ಜನತೆ ವೀಕ್ಷಿಸುವ ಟಿವಿ ಮಾಧ್ಯಮದಲ್ಲಿ ಈ ರೀತಿಯ ಕೆಸರೆರೆಚಾ ಟದ ಅಗತ್ಯವಿದೆಯೇ? ಟಿವಿ ಮಾಧ್ಯಮದ ಘನತೆಗೆ ಇದು ತಕ್ಕುದಲ್ಲ.
ನೊಂದ ವೀಕ್ಷಕ, ಮಂಗಳೂರು
ರಾಜ್ಯದ ರಾಜಕೀಯ ಒಡೆದ ಮನೆ
ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡ ಳಿತ ನಡೆಸುತ್ತಿದ್ದು ಅದರೊಳಗಡೆಯೇ ಎರಡು ಬಣಗಳ ನಿರ್ಮಾಣವಾಗಿ ಕಚ್ಚಾಟ ನಡೆಸು ತ್ತಿದೆ. ಯಡಿಯೂರಪ್ಪ ತಮ್ಮನ್ನು ಮುಖ್ಯ ಮಂತ್ರಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದಿರುವುದು ದುರದೃಷ್ಟಕರ.
ಸದಾನಂದ ಗೌಡ ಮತ್ತವರ ಬಣದ ಸದಸ್ಯರು ಇದನ್ನು ವಿರೋಧಿಸುತ್ತಾ ಕಚ್ಚಾಟ ನಡೆಸುತ್ತಿರುವುದರಿಂದ ರಾಜ್ಯದ ಜನತೆ ಬಿಜೆಪಿ ಬಗ್ಗೆ ಭ್ರಮ ನಿರಸನ ಹೊಂದುವಂತೆ ಮಾಡಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯ ಕೂಡಾ ಕುಂಠಿತಗೊಂಡಿದೆ.
ರಾಜಕೀಯ ನಾಯಕರು ಅಧಿಕಾರಕ್ಕಾಗಿ ಕಚ್ಚಾಟ ನಡೆಸದೆ ಜನರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದರೆ ರಾಜ್ಯ ನೆಮ್ಮದಿ ಕಾಣಬಹುದು. ಇಲ್ಲವಾದಲ್ಲಿ ಬಿಜೆಪಿ ಕುಸಿಯುವುದು ಖಂಡಿತಾ.
ಸುರೇಶ, ಬಿ.ಸಿ.ರೋಡ್
ಕುಡುಪುವಿನಲ್ಲಿ ವೇಗ ತಡೆ ನಿರ್ಮಾಣವಾಗಲಿ
ನಗರದ ಪ್ರಸಿದ್ಧ ಕುಡುಪು ದೇವಸ್ಥಾನದ ಎದುರು ರಸ್ತೆಯಲ್ಲಿ ವೇಗ ತಡೆ ನಿರ್ಮಾಣದ ಅಗತ್ಯತೆ ಇತ್ತೀಚೆಗಂತೂ ತುಂಬಾ ಕಂಡುಬಂದಿದೆ. ಮಂಗ ಳೂರು ಕಡೆಯಿಂದ ಧಾವಿಸುವ ಬಸ್ಸುಗಳು ಹಾಗೂ ವಾಮಂಜೂರು ಕಡೆ ಯಿಂದ ಯಮದೂತರಂತೆ ಧಾವಿಸುವ ಬಸ್ಸುಗಳು ಕುಡುಪು ರಸ್ತೆಯಾಗಿ ಧಾವಿಸುವುದರಿಂದ ದಾರಿಹೋಕರಿಗೂ ಮಾತ್ರವಲ್ಲದೆ ಭಕ್ತಾಧಿಗಳಿಗೂ ರಸ್ತೆ ದಾಟಲು ತುಂಬಾ ಕಷ್ಟವಾಗಿದೆ.
ಶಾಲಾ ವಿದ್ಯಾರ್ಥಿಗಳಂತೂ ತಮ್ಮ ಜೀವವನ್ನು ಒತ್ತೆ ಇಟ್ಟು ರಸ್ತೆ ದಾಟ ಬೇಕಾಗಿದೆ. ಕುಡುಪು ಜಂಕ್ಷನ್‌ನಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿದಲ್ಲಿ ಜನ ಸಾಮಾನ್ಯರು ಮಾತ್ರವಲ್ಲದೆ ಭಕ್ತಾಧಿಗಳಿಗೂ ಇದರಿಂದ ನೆಮ್ಮದಿ ಉಂಟಾ ಗುತ್ತದೆ. ಕೆಲವೊಮ್ಮೆ ವಾಮಂಜೂರು ಕಡೆಯಿಂದ ಬರುವ ಬಸ್ಸುಗಳು ರಸ್ತೆ ಬದಿಯಲ್ಲಿ ನಿಲ್ಲಿಸುವ ಬದಲು ಮಾರ್ಗ ಮಧ್ಯದಲ್ಲೇ ನಿಲ್ಲಿಸುವುದರಿಂದ ಹಿಂದಿನಿಂದ ಬರುವ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ.
ಸ್ಥಳೀಯ ಮಹಾನಗರಪಾಲಿಕೆಯ ಸದಸ್ಯರು, ಅಧಿಕಾರಿಗಳು ಜನರ ಸಮಸ್ಯೆಯನ್ನು ಅರಿತುಕೊಂಡು ಇಲ್ಲಿ ರಸ್ತೆ ಉಬ್ಬು ನಿರ್ಮಿಸಿ ಜನರ ಜೀವ ವನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ವಿನ್ಸೆಂಟ್ ಮೊರಾಸ್, ಕುಡುಪು
ವಕ್ಫ್ ಆಸ್ತಿ ಬಗ್ಗೆ ಪಿಎಫ್‌ಐ ಹೋರಾಡಲಿ
ಇತ್ತೀಚೆಗೆ ಬೆಳಕಿಗೆ ಬಂದ ೨೫೦೦ ಲಕ್ಷ ಕೋಟಿ ರೂ.ಗಳ ವಕ್ಫ್ ಹಗರ ಣದ ಬಗ್ಗೆ, ವಕ್ಫ್ ಆಸ್ತಿಗಳ ಬಗ್ಗೆ ನೈಜ ವಾರೀಸುದಾರರ ಬಗ್ಗೆ ಮುಸ್ಲಿಂ ಸಮು ದಾಯಕ್ಕೆ ಪ್ರಜ್ಞೆ ಮತ್ತು ಜನಜಾಗೃತಿ ಯನ್ನು ಮೂಡಿಸುವ ಕಾರ್ಯಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡು ಸದ್ರಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಹೋರಾಟ ಅಗತ್ಯವಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಗ್ಗೆ ಮುಸ್ಲಿ ಮರು ವಿಶ್ವಾಸವಿಟ್ಟಿದ್ದು, ವಕ್ಫ್ ಆಸ್ತಿ ಬಗ್ಗೆ ಪಿಎಫ್‌ಐ ಹೋರಾಟ ನಡೆಸಿ ಅಕ್ರಮ ಹಗರಣವನ್ನು ಬಯಲಿಗೆಳೆಯ ಬೇಕು. ಈ ಮೂಲಕ ಸಂಘಟನೆ ಯಿಂದ ಉತ್ತಮ ಕೆಲಸವಾಗಲಿ.
ಬಿ. ಮುಹಮ್ಮದ್ ಸಿನಾಬ್, ಉಪ್ಪಿನಂಗಡಿ