ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯಕಾಡು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಸ್ಥಳೀಯ ಮೂವರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ-ಕಾಲಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಿನ್ನೆ ನಡೆದಿದೆ.
ಲಿಂಗಪ್ಪಯ್ಯಕಾಡು ನಿವಾಸಿ ಮಂಜುನಾಥ್ ಹಲ್ಲೆಗೊಳಗಾದವರು. ಇವರ ಮೇಲೆ ಸ್ಥಳೀಯ ನಿವಾಸಿಗಳಾದ ಮುನ್ನಾ, ನಿತಿನ್, ಪ್ರಕಾಶ್ ಹಲ್ಲೆ ನಡೆಸಿದ್ದು, ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮೂಲ್ಕಿ ಪೇಟೆಯಿಂದ ಲಿಂಗಪ್ಪಯ್ಯಕಾಡುವರೆಗೆ ಆರ್‌ಎಸ್‌ಎಸ್ ಪಥಸಂಚಲನ ನಡೆದಿದ್ದು, ಇದಕ್ಕೆ ಮಂಜುನಾಥ ಯುವಕರನ್ನು ಕರೆದುಕೊಂಡು ಹೋಗಿದ್ದನ್ನು ಆಕ್ಷೇಪಿಸಿ ಆರೋಪಿಗಳು, ‘ನೀನು ಊರಿನಲ್ಲಿ ದೊಡ್ಡ ಜನ ಆಗುವುದು ಬೇಡ, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಮಂಜುನಾಥರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಲಿಂಗಪ್ಪಯ್ಯಕಾಡು ಪರಿಸರದಲ್ಲಿ ಶಾಂತಿಭಂಗ ಪ್ರಕ್ರಿಯೆಯಲ್ಲಿ ಸೇರಿಕೊಂಡು ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದು, ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Tagged with
cnews
ಕುಂದಾಪುರ: ಸಮೀಪದ ಜಡ್ಕಲ್‌ಕಟ್ಟೆ ಬಸ್ರೀಬೈಲು ಎಂಬಲ್ಲಿ ನಾದಿನಿಯ ಮೇಲೆ ಮೋಹಗೊಂಡ ಕುಡುಕ ಅಳಿಯನೋರ್ವ ಅತ್ತೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಗೈದ ಪ್ರಕರಣ ಜರಗಿದೆ.
ಬಸ್ರೀಬೈಲು ದಿವಂಗತ ಕಿಟ್ಟ ನಾಯ್ಕನ ಹೆಂಡತಿಯಾದ ಗುಲಾಬಿ ನಾಯ್ಕ್ ಎಂಬವರಿಗೆ ಐದು ಜನ ಹೆಣ್ಣು ಮಕ್ಕಳಿದ್ದು, ಆಕೆಯ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿ ದ್ದರು. ಹಿರಿಯವಳು ಅದಾಗಲೇ ಓರ್ವನನ್ನು ಪ್ರೀತಿಸಿ ಮನೆಯಿಂದ ಬೇರೆಯಾಗಿದ್ದರೆ, ಎರಡನೇ ಮಗಳು ಭವಾನಿ ಎಂಬವಳನ್ನು ಹೀಗೆ ಮೂರು ವರ್ಷಗಳ ಹಿಂದೆ ಪ್ರೀತಿಸಲು ಆರಂಭಿಸಿದ ಸಮೀಪದ ಗಣಪತಿ ನಾಯ್ಕ್, ಅವಳನ್ನು ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗುಲಾಬಿಯ ಮನೆಯ ಅನತಿ ದೂರದಲ್ಲಿ ಅಳಿಯ ಗಣಪತಿಯ ಮನೆಯಿದ್ದು, ಆತ ಮನೆಯ ಸಮೀಪವೇ ಫ್ಯಾನ್ಸಿ ಅಂಗಡಿಯೊಂದನ್ನು ನಡೆಸುತ್ತಿದ್ದ. ಆದರೆ ಹೆಚ್ಚಾಗಿ ಅತ್ತೆ ಮನೆಯಲ್ಲೇ ಠಿಕಾಣಿ ಹೂಡುತ್ತಿದ್ದ ಗಣಪತಿಗೆ ತನ್ನ ಪತ್ನಿಯ ತಂಗಿ ಅಂಬಿಕಾಳ ಮೇಲೆ ವಕೃದೃಷ್ಟಿಯೂ ಬಿದ್ದಿದ್ದು, ಅವಳಲ್ಲಿ ಮೋಹಪರವಶನಾಗಿದ್ದಾನೆ. ಹೊತ್ತಲ್ಲದ ಹೊತ್ತಿನಲ್ಲಿ ಪದೇ ಪದೇ ಅತ್ತೆ ಮನೆಗೆ ಕುಡಿದು ಬಂದು ಅಂಬಿಕಾಳನ್ನು ಕಾಡುತ್ತಿದ್ದ. ಅಳಿಯನ ವರ್ತನೆಯಿಂದ ಬೇಸತ್ತು ಅತ್ತೆ ಗುಲಾಬಿ ಮಗಳನ್ನು ಕೇರಳದ ಮನೆಯೊಂದರಲ್ಲಿ ಕೆಲಸಕ್ಕಿರಿಸಿದ್ದಳು.
ಇದರಿಂದ ಕನಲಿ ಹೋದ ಗಣಪತಿ ನಿನ್ನೆ ಮಧ್ಯಾಹ್ನ ಸುಮಾರಿಗೆ ಮನೆಗೆ ಬಂದು ಅಡುಗೆ ಮನೆಯಲ್ಲಿದ್ದ ಅತ್ತೆಯಿಂದ ಕತ್ತಿಯೊಂದನ್ನು ಕೇಳಿ ಪಡೆದಿದ್ದ. ಅದೇ ಕತ್ತಿಯನ್ನು ಆಕೆಯ ಕುತ್ತಿಗೆಗೆ ಪ್ರಹಾರಗೈದು ನಿನ್ನ ಮಗಳನ್ನು ಕರೆಸಿ ವಿವಾಹ ಮಾಡಿಕೊಡು ಎಂದು ಕಲಹಕ್ಕೆ ನಿಂತಿದ್ದ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಅವಳಿಗೆ ಕೂಗಿಕೊಳ್ಳಲು ಅವಕಾಶ ಕೊಡದೆ ಹತ್ತಿರದಲ್ಲೇ ಇದ್ದ ದೊಣ್ಣೆಯಿಂದ ಮತ್ತೆ ತಲೆ ಮೇಲೆ ಮಾರಣಾಂತಿಕವಾಗಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಇದ್ದ ಗುಲಾಬಿ ತೆವಳುತ್ತಾ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದು, ಸಂಬಂಧಿಕರು ಅವಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಯಾಗಿಲ್ಲ. ಈ ನಡುವೆ ಆಸ್ಪತ್ರೆಯಲ್ಲಿ ತಾಯಿಯ ಶುಶ್ರೂಷೆಗೈಯುವ ಮತ್ತೋರ್ವ ನಾದಿನಿ ಪ್ರೇಮಾಳಿಗೆ ಕರೆ ಮಾಡಿದ ಗಣಪತಿ ಪುನಃ ಬೆದರಿಕೆ ಹಾಕಿದ್ದಾನೆ ಎಂದು ಪ್ರೇಮಾ ಪತ್ರಿಕೆಗೆ ತಿಳಿಸಿದ್ದಾಳೆ.
Tagged with
cnews
ಕಾರ್ಕಳ: ಇಲ್ಲಿಗೆ ಸಮೀಪದ ಅಯ್ಯಪ್ಪನಗರ ಎಂಬಲ್ಲಿ ನವವಿವಾಹಿತನೊಬ್ಬ ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ.
ಹಾಸನ ಮೂಲದ ವೆಂಕಟೇಶ್(೨೭) ಎಂಬಾತ ಘಟನೆಯಲ್ಲಿ ಸಾವಿಗೆ ಶರಣಾದವನು. ಕೆಲ ತಿಂಗಳುಗಳ ಹಿಂದೆ ಕಡೂರಿನ ರೂಪ ಎಂಬಾಕೆಯೊಂದಿಗೆ ಮದುವೆಯಾಗಿದ್ದನು.
ಕರಿಕಲ್ಲಿನ ಕೋರೆಯೊಂದರಲ್ಲಿ ದುಡಿಯುತ್ತಿದ್ದನು. ನಿನ್ನೆ ಮಧ್ಯಾಹ್ನದ ವೇಳೆಗೆ ಕ್ಷುಲಕ ಕಾರಣದಿಂದ ದಂಪತಿ ಜಗಳ ಮಾಡಿಕೊಂಡ ಬೆನ್ನಲ್ಲೇ ಶೆಡ್‌ನೊಳಗೆ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with
cnews
ಉಡುಪಿ: ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯ ಪರಿಣಾಮವಾಗಿ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದಾಗ ಸ್ಕಿಡ್ ಆಗಿ ಬೈಕ್ ಮಗುಚಿಬಿದ್ದ ಕಾರಣ ಬೈಕ್‌ನಲ್ಲಿದ್ದ ಅಪ್ಪ ಮತ್ತು ಮಗಳು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಮಾರ್ಪಳ್ಳಿ ರೈಲ್ವೆ ಸೇತುವೆ ಪಕ್ಕ ಸಂಭವಿಸಿದೆ.
ಬೈಕ್ ಸವಾರರಾದ ಚಿಟ್ಪಾಡಿ ಬೈಲ್ ನಿವಾಸಿಗಳಾದ ಸುಬ್ರಹ್ಮಣ್ಯ ಹಾಗೂ ಅಚಲಾ ಎಂಬವರೇ ಗಾಯಗೊಂಡವರು. ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ಸ್ಟೇರಿಂಗ್ ತುಂಡಾದ ಪರಿಣಾಮ ತೂಫಾನ್ ವಾಹನ ಕಮರಿಗೆ ಉರುಳಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ಮಧ್ಯಾಹ್ನ ಎಂಆರ್‌ಪಿಎಲ್ ಕಳವಾರು ‘ಸಿ ಗೇಟ್ ಬಳಿ ಸಂಭವಿಸಿದೆ. ಒಎಂಪಿಎಲ್‌ನಲ್ಲಿ ಕಾಮಗಾರಿ ಕೆಲಸವನ್ನು ನಿರ್ವಹಿ ಸುತ್ತಿರುವ ರೋಹನ್ ಕನ್‌ಸ್ಟ್ರಕ್ಷನ್‌ಗೆ ಸೇರಿದ ತೂಫಾನ್ ದುರಂತಕ್ಕೀಡಾದ ವಾಹನವಾಗಿದೆ. ಇದನ್ನು ಚೊಕ್ಕಬೆಟ್ಟು ನಿವಾಸಿ ಫೈಸರ್ ಎಂಬವರು ಚಲಾಯಿಸುತ್ತಿದ್ದರು. ಕನ್‌ಸ್ಟ್ರಕ್ಷನ್ ಕಾರ್ಮಿಕರನ್ನು ಬಿಟ್ಟು ಮರಳಿ ಬರುವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ತಿರುವಿನಲ್ಲಿಯೇ ತೂಫಾನ್ ಸ್ಟೇರಿಂಗ್ ತುಂಡಾದ ಪರಿಣಾಮ ನಿಯಂತ್ರಣ ಕಳೆದುಕೊಂಡ ತೂಫಾನ್ ಉರುಳಿಬಿದ್ದಿದೆ. ಕನ್‌ಸ್ಟ್ರಕ್ಷನ್ ಕಾರ್ಮಿಕರನ್ನು ಬಿಟ್ಟು ಬರುವಾಗ ಈ ಘಟನೆ ನಡೆದ ಕಾರಣ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ. ಒಂದು ವೇಳೆ ಕಾರ್ಮಿಕರು ಇರುವಾಗ ಘಟನೆ ನಡೆಯುತ್ತಿದ್ದರೆ ಇನ್ನಷ್ಟು ಸಾವು ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಓಮ್ನಿ ಕಾರು ಉರುಳಿಬಿದ್ದ ಘಟನೆ ರವಿವಾರ ಕಾಸರಗೋಡು ಜಿಲ್ಲೆಯ ಹೊಸಂಗಡಿಯಲ್ಲಿ ಸಂಭವಿಸಿದ್ದು, ಘಟನೆಯಲ್ಲಿ ಮಹಿಳೆ ಹಾಗೂ ಮಗು ಗಾಯಗೊಂಡಿದ್ದಾರೆ.
ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಓಮ್ನಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿಯೇ ಉರುಳಿ ಬಿದ್ದಿದ್ದು, ಓಮ್ನಿಯಲ್ಲಿದ್ದ ಮಗುವಿಗೂ ಗಾಯವಾಗಿತ್ತು. ಗಾಯಗೊಂಡ ಮಗು ಹಾಗೂ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಒಪ್ಪದ ಬಾಡಿಗೆ ವಾಹನಗಳ ಚಾಲಕರಿಗೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆಯೂ ನಡೆಯಿತು. ಬಳಿಕ ಪೊಲೀಸರು ಆಗಮಿಸಿ ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸಿದರು. ಗಂಭೀರ ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರೆ, ಮಗು ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಗಾಯಾಳುಗಳನ್ನು ಸಾಗಿಸಲು ಹಿಂದೇಟು ಹಾಕಿದ ಎರಡು ಬಾಡಿಗೆ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews
ಮಂಗಳೂರು: ನಗರದ ಜೆಪ್ಪುವಿನ ನೇತ್ರಾವತಿ ಸೇತುವೆ ಬಳಿ ಅಪರಿಚಿತ ಶವ ಪತ್ತೆಯಾಗಿದ್ದು, ಸುಮಾರು ೪೦ ವರ್ಷ ವಯಸ್ಸಾಗಿರಬೇಕೆಂದು ಅಂದಾಜಿಸಲಾಗಿದ್ದು, ವೆನ್ಲಾಕ್ ಶವಾಗಾರದಲ್ಲಿರಿಸಲಾಗಿದೆ.
Tagged with
cnews
ಮಂಗಳೂರು: ಕಳ್ಳನೋರ್ವ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಪ್ರಕರಣವೊಂದು ಬಂದರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಬೆಳಗ್ಗೆ ಗಣಪತಿ ಹೈಸ್ಕೂಲ್ ಬಳಿಯ ನಿವಾಸಿ ಅಂಜಲಿನ್ ತಾವ್ರೋ ಎಂಬವರು ಕಾರ್ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೋಗು ತ್ತಿದ್ದರು. ಆ ವೇಳೆ ಕಳ್ಳ ಕೃತ್ಯ ನಡೆಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಬಂದರ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
Tagged with
cnews

ಬೀಗದ ಬದಲು ಗೇಟ್‌ಗೆ ಹಗ್ಗ! | ಆಡಳಿತ ಮಂಡಳಿ ನಿರ್ಲಕ್ಷ್ಯ
ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಭದ್ರತೆಯ ಉದ್ದೇಶದಿಂದ ರಥಬೀದಿ ಸುತ್ತಲೂ ಬೀಗ ಹಾಕಿ ಅಳವಡಿಸಲಾಗಿದ್ದ ಗೇಟ್‌ಗಳಿಗೆ ಇದೀಗ ಬೀಗ ಮಾಯವಾಗಿ ಹಗ್ಗದಲ್ಲಿ ಕಟ್ಟಿಹಾಕಲಾಗಿದ್ದು, ಭದ್ರತಾ ವೈಫಲ್ಯ ಕಂಡು ಬಂದಿದೆ.
ಭಯೋತ್ಪಾದಕರ ಭೀತಿ ಇದೆ ಎಂದು ಹೇಳಲಾಗುತ್ತಿದ್ದ ಉಡುಪಿ ಶ್ರೀಕೃಷ್ಣ ಮಠಕ್ಕೆ ಭದ್ರತೆಯ ಹಿತದೃಷ್ಟಿಯಿಂದ ಸುಮಾರು ಒಂದೂವರೆ ವರ್ಷದ ಹಿಂದೆ ದೇವಸ್ಥಾನದ ಸುತ್ತಲೂ ಬೀಗ ಜಡಿದ ಬೃಹತ್ ಗೇಟ್ ಗಳನ್ನು ಅವಳಡಿಸಿ ವಾಹನ ಸಂಚಾರ ನಿಷೇಧಿಸಿ ಕೇವಲ ಭಕ್ತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇದರಿಂದಾಗಿ ದೇವಸ್ಥಾನದ ಸುತ್ತ ಮೌನ ವಾತಾವರಣ ನಿರ್ಮಾಣವಾಗಿತ್ತು. ಇದೀಗ ದೇವಸ್ಥಾನದ ಆಡಳಿತ ಮಂಡಳಿಗೆ ಭದ್ರತೆಯೇ ಮರೆತು ಹೋಗಿದ್ದು ಗೇಟ್‌ಗಳನ್ನು ಹಗ್ಗದ ಸಹಾಯದಿಂದ ಕಟ್ಟಿರುವುದೇ ಸಾಕ್ಷಿಯಾಗಿದೆ. ಇದೆಲ್ಲವೂ ರಥಬೀದಿಯ ವ್ಯಾಪಾರಸ್ಥರನ್ನು ಎಬ್ಬಿಸುವ ಹುನ್ನಾರ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿಂದೆ ಶಿರೂರು ಸ್ವಾಮೀಜಿಗಳು ತಮ್ಮ ಪರ‍್ಯಾಯ ಅವಧಿಯ ದಿನದಲ್ಲಿ ಸಿಎಂ ಸದಾನಂದ ಗೌಡರ ಸಮ್ಮುಖದಲ್ಲೇ ಇಲ್ಲಿನ ರಥಬೀದಿ ವ್ಯಾಪಾರಸ್ಥರನ್ನು ಎಬ್ಬಿಸಬೇಕೆಂದು ಬಹಿರಂಗವಾಗಿ ತಿಳಿಸಿದ್ದರು. ಇದೆಲ್ಲದರ ನಡುವೆ ಹಾಕಲಾಗಿರುವ ಗೇಟ್‌ಗಳನ್ನು ತೆರವುಗೊಳಿಸಿ ಮುಕ್ತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುವುದು ರಥಬೀದಿ ವ್ಯಾಪಾರಸ್ಥರ ಆಗ್ರಹವಾಗಿದೆ.
Tagged with
lnews


ವಿಟ್ಲ: ಒಣಹುಲ್ಲು ತುಂಬಿದ್ದ ಮಿನಿ ಲಾರಿಯೊಂದಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಘಟನೆ ವಿಟ್ಲದ ನೀರಕಣಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದ್ದು, ಘಟನೆಯಲ್ಲಿ ಸಾವಿರಾರು ರೂ. ನಷ್ಟ ಸಂಭವಿಸಿದೆ.
ವಿಟ್ಲ ಕಸಬಾ ಗ್ರಾಮದ ನೀರಕಣಿ ನಿವಾಸಿ ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ಮಿನಿ ಲಾರಿಯೊಂದರಲ್ಲಿ ಚಾಲಕ ಹಸೈನಾರ್(ಪುತ್ತು) ಎಂಬವರು ಒಣಹುಲ್ಲು ತುಂಬಿ ಸಿಕೊಂಡು ವಿಟ್ಲದಿಂದ ಕುಡ್ತಮುಗೇರು ಕಡೆ ಸಂಚರಿಸುತ್ತಿದ್ದರು. ಈ ಸಂದರ್ಭ ನೀರಕಣಿ ಎಂಬಲ್ಲಿ ರಸ್ತೆಯ ಮೇಲಿದ್ದ ವಿದ್ಯುತ್ ಕೇಬಲ್ ಲಾರಿಯಲ್ಲಿದ್ದ ಒಣಹುಲ್ಲಿಗೆ ತಾಗಿತು. ಲಾರಿ ನೇತ್ರಕೆರೆ ಸಮೀಪಿಸುತ್ತಿದ್ದಂತೆ ಲಾರಿಯ ಹಿಂಬದಿಯಲ್ಲಿ ಬೆಂಕಿ ಬರುವುದನ್ನು ಗಮನಿಸಿದ ಚಾಲಕ ತಕ್ಷಣವೇ ಅದನ್ನು ರಸ್ತೆ ಬದಿಯ ವಿಶಾಲವಾದ ಮೈದಾನಕ್ಕೆ ತಂದು ನಿಲ್ಲಿಸಿದ. ಬಳಿಕ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಬೆಂಕಿಯ ತೀವ್ರತೆಗೆ ಲಾರಿ ಹಿಂಬದಿ ಸಂಪೂರ್ಣವಾಗಿ ಬೆಂಕಿಗಾ ಹುತಿಯಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
Tagged with
lnews

ಸಿಕ್ಕೀತೇ ಪರಿಹಾರ?
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬಾರೆಬೈಲ್ ಸನಿಹದ ಕೆಪಿಟಿ ಬಳಿಯ ವ್ಯಾಸನಗರ ಸಮಸ್ಯೆಗಳ ಆಗರವಾಗಿದೆ. ಡಾಮರು ಕಾಣದ ರಸ್ತೆಗಳು, ತೆರೆದ ಚರಂಡಿಗಳು ಜನರಿಗೆ ಕೊಳಗೇರಿಯ ವಾತಾವರಣ ಉಂಟು ಮಾಡಿದ್ದರೆ, ಬಿಲ್ಡರ್‌ಗಳ ದುಂಡಾವರ್ತನೆಗೆ ಹೆದರಿ ಜನರೇ ಬೇರೆ ವಾರ್ಡ್‌ಗೆ ಗುಳೇ ಹೋಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು. ಇಲ್ಲಿ ಹತ್ತಾರು ಸಮಸ್ಯೆಗಳಿ ದ್ದರೂ ಇಲ್ಲಿಂದ ಮನಪಾಕ್ಕೆ ಆರಿಸಲ್ಪಟ್ಟ ಕಾರ್ಪೊರೇಟರ್ ಮಾತ್ರ ಅಮಾವಾಸ್ಯೆಗೋ, ಹುಣ್ಣಿಮೆಗೋ ಇಲ್ಲಿ ಕಾಣಸಿಗುತ್ತಿರುವುದು ಜನರ ಅಸಹನೆಗೆ ಕಾರಣವಾಗಿದ್ದು, ಪ್ರತಿಭಟ ನೆಗೆ ಸಜ್ಜಾಗುತ್ತಿದ್ದಾರೆ.
ಮನಪಾ ವ್ಯಾಪ್ತಿಯಲ್ಲಿ ಬರುವ ವ್ಯಾಸ ನಗರದ ನಾಗಬನ ರಸ್ತೆಗೆ ಮನಪಾಕ್ಕೆ ಸ್ಪರ್ಧಿಸಿ ಗೆದ್ದಿರುವ ಜಯಾನಾಥ್ ಅಂಚನ್ ಎಂಬ ಬಿಜೆಪಿ ಕಾರ್ಪೊರೇಟರ್ ಇದ್ದಾರೆ. ಜನರೇ ಹೇಳುವಂತೆ ಇವರನ್ನು ಕಾಣಬೇಕೆಂದರೆ ಮನಪಾ ಕಚೇರಿಗೆ ಅಲೆಯಬೇಕು. ಇವರು ಅಲ್ಲಿಯೂ ಸಿಗುವುದಿಲ್ಲ, ಇಲ್ಲಿಗೂ ಬರುವು ದಿಲ್ಲ. ಬಂದರೂ 'ನಾನು ಇದೇ ಕೊನೇ ಬಾರಿ, ಮತ್ತೆಂದೂ ಕಾರ್ಪೊರೇಟರ್ ಆಗುವುದಿಲ್ಲ ಎಂದು ಹೇಳುತ್ತಾರೆ.
ಇವರು ಇನ್ನು ಮುಂದೆ ಕಾರ್ಪೊರೇಟರ್ ಆಗಲಿ, ಬಿಡಲಿ. ಈಗ ನಮ್ಮ ಏರಿಯಾಕ್ಕೆ ಕಾರ್ಪೊರೇಟರ್ ಆಗಿರುವ ಕರ್ಮಕ್ಕಾದರೂ ಕೆಲಸ ಮಾಡಲಿ ಎನ್ನುತ್ತಾರೆ ಇಲ್ಲಿನ ನಾಗರಿಕರು.
ರಸ್ತೆಗೆ ಡಾಮರೀಕರಣವಾಗಿಲ್ಲ
ವ್ಯಾಸನಗರದ ನಾಗಬನ ರಸ್ತೆಯಲ್ಲಿ ಅನೇಕ ಮಂದಿ ಪ್ರತಿಷ್ಠಿತ ವ್ಯಕ್ತಿಗಳು ವಾಸಿಸುತ್ತಿದ್ದಾರೆ. ಅಸಂಖ್ಯ ಮಹಡಿಮನೆಗಳೂ ಇಲ್ಲಿವೆ. ಇವರೆಲ್ಲ ಪ್ರತೀವರ್ಷ ಮನಪಾಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುತ್ತಾರೆ. ಆದರೆ ಮನಪಾ ಮಾತ್ರ ಇಲ್ಲಿನ ಜನರ ಕ್ಷೇಮವನ್ನು ಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ಸ್ಥಳೀಯ ಜನರ ಗೋಳು. ಇದಕ್ಕೆ ಪೂರಕವೆಂಬಂತೆ ಇಲ್ಲಿನ ಪ್ರಧಾನ ರಸ್ತೆಗೆ ಇನ್ನೂ ಡಾಮರು ಆಗಿಲ್ಲ. ಹದಗೆಟ್ಟ ರಸ್ತೆಯಲ್ಲೇ ಪಾದಚಾರಿಗಳು, ವಾಹನ ಸವಾರರು ಸಂಚರಿಸಬೇಕು. ಇಲ್ಲಿನ ಒಂದು ಓಣಿಯ ರಸ್ತೆಗೆ ಜಲ್ಲಿಕಲ್ಲು ಹಾಕಿ ರೋಲರ್ ಎಳೆಯಲಾಗಿದೆ. ಆದರೆ ಡಾಮರು ಹಾಕುವ ಸುಳಿವು ಜನರಿಗಿನ್ನೂ ಸಿಕ್ಕಿಲ್ಲ.
ಡ್ರೈನೇಜ್ ನೀರು ಸಾರ್ವಜನಿಕ ರಸ್ತೆಗೆ
ನಾಗಬನ ರಸ್ತೆಯ ಒಂದು ಬದಿಯಲ್ಲಿ ಎಸ್.ಕೆ.ಎಸ್ ಬಿಲ್ಡರ‍್ಸ್‌ನವರು ೨೫ ಮಹಡಿಗಳ ಬೃಹತ್ ವಸತಿ ಸಮುಚ್ಛಯವನ್ನು ಕಟ್ಟಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರಿಗೆಂದು ಅನೇಕ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿದೆ. ಇಲ್ಲಿಯೇ ಶೌಚಾಲಯ-ಬಾತ್‌ರೂಂಗಳೂ ಇವೆ. ಇಲ್ಲಿಂದ ತೆರೆದ ಚರಂಡಿಯ ಮೂಲಕ ಕೊಳಚೆ ನೀರನ್ನು ನೇರವಾಗಿ ಸಾರ್ವಜನಿಕ ಸಂಚಾರದ ರಸ್ತೆಗೆ ಬಿಡಲಾಗುತ್ತಿದೆ. ರಾತ್ರಿ ಹತ್ತು ಗಂಟೆಯಿಂದ ಮುಂಜಾನೆಯವರೆಗೂ ಶೌಚಾಲಯ, ಬಾತ್‌ರೂಂನ ಕೊಳಚೆ ನೀರನ್ನು ಕಂಪೌಂಡ್‌ಗೆ ಪೈಪ್ ಅಳವಡಿಸಿ ಹೊರಕ್ಕೆ ಬಿಡಲಾಗುತ್ತದೆ. ಇಲ್ಲಿ ಚರಂಡಿ ವ್ಯವಸ್ಥೆಯೂ ಸರಿಯಿಲ್ಲದಿರುವುದರಿಂದ ನೀರು ರಭಸವಾಗಿ ರಸ್ತೆಗೆ ಮೇಲೆಯೇ ಹರಿಯುತ್ತದೆ. ರಸ್ತೆಯ ಮಣ್ಣು ಕೊಚ್ಚಿಕೊಂಡು ಹೋಗಿ ಅಲ್ಲಲ್ಲಿ ಗುಂಡಿ ನಿರ್ಮಾಣ ವಾಗಿದೆ. ಶಾಲಾ ಮಕ್ಕಳು, ಪರಿಸರದ ನಾಗರಿಕರು ರಸ್ತೆಯಲ್ಲಿ ಅಸಹ್ಯ ವಾಸನೆಯಿಂದಾಗಿ ಮೂಗಿಗೆ ಕೈಹಿಡಿದು ಸಂಚರಿ ಸಿದರೆ, ವಾಹನ ಸವಾರರು ಸರ್ಕಸ್ ಮಾಡಬೇಕಾಗಿದೆ. ಪರಿಸರದಲ್ಲಿ ಸೊಳ್ಳೆಗಳ ಕಾಟವೂ ಅಧಿಕವಾಗಿದ್ದು, ರೋಗಭೀತಿಯೂ ಎದುರಾಗಿದೆ. ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಕ್ರಮ ಕೈ ಗೊಂಡಿಲ್ಲ, ಡ್ರೈನೇಜ್ ಮತ್ತೆ ರಸ್ತೆ ಸೇರುತ್ತಿದೆ ಎಂದು ದೂರುತ್ತಾರೆ ಪರಿಸರವಾಸಿಗಳು.
ವ್ಯಾಸನಗರದಲ್ಲಿನ ಸಮಸ್ಯೆಗಳು ಒಂದೆರಡಲ್ಲ, ನಗರದ ಮಧ್ಯಭಾಗದಲ್ಲಿದ್ದರೂ ಇಲ್ಲಿನ ಜನರು ಕೊಳಗೇರಿ ನಿವಾಸಿಗಳಂತೆ ಜೀವನ ನಡೆಸುತ್ತಿದ್ದಾರೆ. ಚರಂಡಿ, ರಸ್ತೆಯ ನಿರ್ಮಾಣ ಜನರ ಬಹುಕಾಲದ ಬೇಡಿಕೆಯಾಗಿದ್ದರೂ ಅದಿನ್ನೂ ಈಡೇರಿಲ್ಲ. 'ಇದೇ ಕೊನೆಯ ಬಾರಿ ಎನ್ನುತ್ತಾ ಜನರನ್ನು ಮಾತಿನಲ್ಲೇ ಮರುಳು ಮಾಡುವ ಕಾರ್ಪೊರೇಟರ್ ಬಗ್ಗೆ ಬೇಸರ ವ್ಯಕ್ತಪಡಿಸುವ ಇಲ್ಲಿನ ಜನರು ಸಮಸ್ಯೆ ಶೀಘ್ರವಾಗಿ ಬಗೆಹರಿಯದಿದ್ದಲ್ಲಿ ಪ್ರತಿಭಟಿ ಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
Tagged with
lnews

ನವದೆಹಲಿ: ಕಾಂಗ್ರೆಸ್ಸನ್ನು ಕಂಡರಾಗದ ಆರ್‌ಎಸ್‌ಎಸ್ ಈಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾರ‍್ಯವೈಖರಿ ಯನ್ನು ಹೊಗಳುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ.
ಒಡಿಶಾದಲ್ಲಿ ಇಟಲಿ ಪ್ರಜೆ ಹಾಗೂ ಶಾಸಕನನ್ನು ಒತ್ತೆಸೆರೆಯಾಗಿರಿಸಿ ಈಗ ಮಾವೋವಾದಿಗಳ ಬಿಡುಗಡೆಗೆ ಬೇಡಿಕೆ ಇಟ್ಟಿರುವ ಬಗ್ಗೆ ಆರ್‌ಎಸ್‌ಎಸ್‌ನ ಮುಖ ವಾಣಿ 'ಆರ್ಗನೈಸರ್' ಪತ್ರಿಕೆಯಲ್ಲಿ ಬರೆದ ಸಂಪಾದಕೀಯದಲ್ಲಿ ಇಂದಿರಾ ಗಾಂಧಿ ಅವರ ಕಾರ‍್ಯದಕ್ಷತೆ ಬಗ್ಗೆ ಉಲ್ಲೇಖಿ ಸಲಾಗಿದೆ.
ಇಂದಿರಾ ಗಾಂಧಿ ಅವರು ಭಯೋ ತ್ಪಾದನೆ ವಿರುದ್ಧ ತೀಕ್ಷ್ಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ೧೯೮೪ರಲ್ಲಿ ಭಾರತೀಯ ರಾಜತಾಂತ್ರಿಕ ರವೀಂದ್ರ ಮಾತ್ರೆ ಅವರನ್ನು ಅಪಹರಿಸಿದ್ದ ಉಗ್ರರು ತಮ್ಮ ನಾಯಕ ಮಕ್ಬುಲ್ ಬಟ್ ಬಿಡುಗಡೆಗೆ ಬೇಡಿಕೆ ಇಟ್ಟಿದ್ದರು. ಆದರೆ ಇಂದಿರಾ ಗಾಂಧಿ ಅವರು ಮಕ್ಬುಲ್‌ನನ್ನು ನೇಣಿಗೆ ಹಾಕುವ ನಿರ್ಧಾರ ತೆಗೆದುಕೊಂಡಿ ದ್ದರು. ಆಗ ಉಗ್ರರು ರವೀಂದ್ರರರನ್ನು ಹತ್ಯೆಗೈದಿದ್ದರು. ಆ ಬಳಿಕವೂ ಇಂದಿರಾ ಗಾಂಧಿ ಭಯೋತ್ಪಾದಕರ ವಿರುದ್ಧ ತನ್ನ ಪಟ್ಟನ್ನು ಸಡಿಲಿಸಿರಲಿಲ್ಲ ಎಂದು ಪ್ರಶಂಸಿಸಲಾಗಿದೆ. ಆ ನಂತರದ ಯಾವುದೇ ಸರಕಾರ ಕೂಡ ಇಂತಹ ಧೈರ‍್ಯವನ್ನು ತೋರಿಸಲಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವಿದ್ದಾಗ ಕೂಡ ಕಂದಹಾರ್‌ನಲ್ಲಿ ಉಗ್ರರಿಗೆ ಮಂಡಿಯೂರಿತ್ತು ಎಂದು ಆರ್‌ಎಸ್‌ಎಸ್ ಇದೇ ವೇಳೆ ಬಿಜೆಪಿಯನ್ನು ಟೀಕಿಸಿದೆ.
Tagged with
lnews
ಬಂಟ್ವಾಳ: ಕಾಂಗ್ರೆಸ್‌ಗೆ ಮರು ಪ್ರವೇಶಿಸಲಿರುವ ವಿಟ್ಲ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ತರರ ನಿರ್ಧಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಮತ್ತೆ ಸಂಚಲನ ಉಂಟು ಮಾಡುತ್ತಿದೆ. ಕಾಂಗ್ರೆಸ್‌ಗೆ ಮರ ಳಿರುವ ಅವರ ಇಂಗಿ ತಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಡಿಸಿಸಿ ಅಧ್ಯಕ್ಷ, ಶಾಸಕ ರಮಾನಾಥ ರೈ ಹಾಗೂ ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ರೈ ಅವರ ನಡುವೆ ಕಾಣಿಸಿರುವ ಶೀತಲ ಸಮರದ ಬೆನ್ನಿಗೆ ಎದುರಾದ ಈ ರಾಜಕೀಯ ವಿದ್ಯಮಾನ ಕಾರ್ಯಕರ್ತ ವಲಯದಲ್ಲಿ ಸಹಜ ಕುತೂಹಲ ಮೂಡಿಸಿದೆ. ಅತೃಪ್ತ ಕಾಂಗ್ರೆಸಿಗ ವಲಯದಲ್ಲಂತೂ ಈಗ ಹಾಲುಂಡ ಸಂಭ್ರಮ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಬ್ರಾಹಿಂ ಮಾಸ್ತರರು ಕಣಕ್ಕಿಳಿಯುತ್ತಾರೋ, ಇಲ್ಲವೋ? ಅಂತೂ ಬಂಟ್ವಾಳ ಕ್ಷೇತ್ರದಲ್ಲಿ ನಾಯಕತ್ವದದಲ್ಲಿ ಕಾಣಿಸಿಕೊಳ್ಳುತ್ತಾರೋ? ಅಥವಾ ಇನ್ನೂ ಶಾಸಕರಾಗಿಯೇ ಉಳಿದಿರುವ ರಮಾನಾಥ ರೈ ನಾಯಕ್ವದಲ್ಲಿ ಸಕ್ರಿಯಗೊಳ್ಳುತ್ತಾರೋ ಎನ್ನುವುದು ಅವರ ಮುಂದಿರುವ ಜಟಿಲ ಪ್ರಶ್ನೆ!
ರಮಾನಾಥ ರೈ ಅವರ ಶಾಸಕತ್ವ ಅವಧಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮತ್ತೊಮ್ಮೆ ಇಬ್ಭಾಗ ಅನುಭವಿಸಬೇಕಾದದ್ದು; ಕೆ.ಎಂ. ಮುಂದಿರುವ ಇನ್ನೊಂದು ಸವಾಲು. ಕೊಡಗು, ಶುಂಠಿಕೊಪ್ಪದಿಂದ ಬಂದು ವಿಟ್ಲ ಕ್ಷೇತ್ರದಲ್ಲಿ ಮರುರಾಜಕೀಯದ ಉಗಮವನ್ನು ಕಂಡ ಇಬ್ರಾಹಿಂ ಮಾಸ್ತರ್ ಜೊತೆಗೆ ನಾಯಕರ ದಂಡೇ ಇತ್ತು. ಕಾರ್ಯಕರ್ತರೂ ಇದ್ದರು. ರೈ ಮುನಿಸೂ ಕೆ.ಎಂ. ನಾಯಕತ್ವ ಜನಪ್ರಿಯತೆ ಮುನ್ನುಡಿ ಹಾಡಿತ್ತು. ಬಿ. ಸದಾನಂದ ಪೂಂಜಾ ಹಾಗೂ ಜಿ.ಸದಾನಂದ ಮಲ್ಲಿಯವರಂತಹ ಅನುಭವಿ ನಾಯಕರು ಮಾಸ್ತರರಿಗೆ ರಾಜಕೀಯ ಮಾರ್ಗಸೂಚಿಯಾಗಿದ್ದರು. ಗೋಳ್ತಮಜಲು ಪದ್ಮನಾಭ ರೈ, ಬೊಂಡಾಲ ಜಗನ್ನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ರಾಕೇಶ್ ಮಲ್ಲಿ, ಶ್ರೀಕಾಂತ್ ಶೆಟ್ಟಿ, ಕೆ.ಎಚ್.ಅಬೂಬಕ್ಕರ್ ಮೊದಲಾದ ಯುವ ರಾಜಕಾರಣಿಗಳೂ ಅಂದು ಬೆಂಬಲಕ್ಕೆ ನಿಂತಿದ್ದರು. ಇಷ್ಟಕ್ಕೆ ತೃಪ್ತಿಪಟ್ಟುಕೊಂಡಿದ್ದ ಮಾಸ್ತರ್ ತನ್ನ ನಾಯಕತ್ವವನ್ನು ವಿಸ್ತಾರಗೊಳಿಸಿರಲಿಲ್ಲ. ಬಂಟ್ವಾಳ ರಾಜಕಾರಣದಲ್ಲಿ ಪ್ರತ್ಯೇಕ ವ್ಯಕ್ತಿತ್ವವನ್ನು ರೂಪಿಸಿದ್ದ, ಕೆ.ಎಂ.ಇಬ್ರಾಹಿಂ ಯಾವಾಗ ಜೆಡಿಎಸ್ ಸೇರಲು ಇಚ್ಛಿಸಿದ್ದರೋ ಆ ಕ್ಷಣದಿಂದಲೇ ಏಕಾಂಗಿಯಾಗಿ ಉಳಿಯಬೇಕಾಯಿತು.
ಕೆ.ಎಂ. ಇಬ್ರಾಹಿಂ ಈಗ ಮತ್ತೆ ನಿರ್ಧಾರ ಬದಲಿದ್ದು, ರೈ ನಾಯಕತ್ವಕ್ಕೆ ವಿಶೇಷ ಪರಿಣಾಮ ಬೀರುವಂತೆ ಕಾಣುತ್ತಿಲ್ಲ ಎನ್ನುವುದು ರೈ ಆಪ್ತರ ಅನಿಸಿಕೆ. ಆದರೆ ಚತುರ ರಾಜಕಾರಣಿ ಎಂದೇ ಹೇಳಲಾಗುವ ಕೆ.ಎಂ. ಇಬ್ರಾಹಿಂ ಮತ್ತೆ ಇಲ್ಲಿ ಗಿಮಿಕ್ ಪಾಲಿಟಿಕ್ಸ್ ಮಾಡದೇ ಇರುವವರಲ್ಲ. ರಾಜಕೀಯದಿಂದ ಜಿಗುಪ್ಸೆಗೊಂಡು ಕೈಕಟ್ಟಿ ಕುಳಿತಿರುವ ತನ್ನ ಅನೇಕ ಸ್ನೇಹಿತರನ್ನು ಸಂಪರ್ಕಿಸಿರುತ್ತಿರುವ ಮಾಸ್ತರ್ ಅಂಥವರಲ್ಲಿ ಕನಸು ತುಂಬಿಸಿದ್ದಾರೆ ಎನ್ನುತ್ತಾರೆ ಕೆ.ಎಂ.ಒಡನಾಡಿಗಳು. ಜಿ.ಪಂ.ಅಧ್ಯಕ್ಷ ಅಧಿಕಾರವನ್ನು ತೋರಿಸಿಕೊಟ್ಟಿದ್ದ ಸದಾನಂದ ಪೂಂಜಾರಿಗೆ ಬಳಿಕ ಯಾವುದೇ ಆಡಳಿತಾತ್ಮಕ ಸ್ಥಾನಮಾನ ಪಕ್ಷ ನೀಡಿರಲಿಲ್ಲ. ಅವರ ಗ್ರಾಮ ವಿಕಾಸ ಪರಿಕಲ್ಪನೆ ಇತರ ರಾಜಕಾರಣಿಗಳಿಗೆ ಮಾದರಿ. ಈ ಮುಖೇನ ಅವರು ಜನಾಂದೋಲನ ಮೂಡಿಸುತ್ತಿದ್ದಾರೆ. ಯುವಕರನ್ನು ಸಂಘಟಿಸಿ ಮುನ್ನುಗ್ಗುತ್ತಿರುವ ಅಶ್ವನಿ ಕುಮಾರ್ ರೈ ನಾಯಕತಕ್ಕೆ ಈಗ ಬೇಡಿಕೆಯೂ ಇದೆ. ಈ ಇಬ್ಬರು ನಾಯಕರು ಇಬ್ರಾಹಿಂ ಮಾಸ್ತರಿಗೆ ಬೆಂಬಲ ಸೂಚಿಸಿದ್ದಾದಲ್ಲಿ ಕೆ.ಎಂ. ಮರು ಪ್ರವೇಶ ಜಿಲ್ಲಾ ಕಾಂಗ್ರೆಸ್‌ನ ಸಂಚಲನ ಮೂಡಿಸೀತು.
ಆ ಬಣ, ಈ ಬಣ: ಸಹವಾಸ ಸಾಕು
ಇವತ್ತು ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಬೆಳೆಸಬೇಕಾಗಿದೆ. ನಾವೆಲ್ಲಾ ಒಂದಾದರೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎನ್ನುವುದಕ್ಕೆ ಉಡುಪಿ ಲೋಕಸಭಾ ಚುನಾವಣೆಯ ಫಲಿತಾಂಶ ಸಾಕ್ಷಿ. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾವು ಸಾಮೂಹಿಕ ಹೋರಾಟ ನಡೆಸಬೇಕಾಗಿದೆ ಎಂದು ಪ್ರತಿಕ್ರಿಯಿಸಿದ ಕೆ.ಎಂ. ಇಬ್ರಾಹಿಂ ಮಾಸ್ತರ್ ಅವರು ನಾವು ಗುಂಪು ಗಾರಿಕೆ, ಬಣ ರಾಜಕೀಯ, ಹಳೆಯ ನೋವು ಗಳನ್ನು ದೂರ ಸರಿಸಿ ಒಂದಾಗಬೇಕೆಂದು ಕಿವಿ ಮಾತು ನುಡಿದರು.
ಜಯಕಿರಣ ಪ್ರತಿನಿಧಿ ಜೊತೆಗೆ ದೂರವಾಣಿ ಯಲ್ಲಿ ಮಾತನಾಡಿದ ಅವರು ವಿಟ್ಲ ಕ್ಷೇತ್ರದ ಜನ ತೆಯ ಸಹಕಾರವನ್ನು ನಾನೆಂದು ಮರೆಯಲಾರೆ. ಶಾಸಕನಾಗಿದ್ದ ಅವಧಿಯಲ್ಲಿ ನಾನು ಸಲ್ಲಿಸಿದ ಪ್ರಾಮಾಣಿಕ ಸೇವೆಯನ್ನು ಜನರು ಇನ್ನೂ ನೆನಪಿಸುತ್ತಿದ್ದಾರೆ. ಅಕ್ರಮ-ಸಕ್ರಮ ಸಮಿತಿಯ ಮುಖೇನ ೧೫ ಸಾವಿರ ಭೂ ನಿವೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಮ್ಮ ಅವಧಿಯ ಸೇವೆಯನ್ನು ಸ್ಮರಿಸಿಕೊಂಡರು. ಪಕ್ಷಕ್ಕೆ ಮರಳಲಿರುವ ಸುದ್ದಿ ತಿಳಿದ ಪಕ್ಷದ ನೂರಾರು ಕಾರ್ಯಕರ್ತರು, ಹಲವಾರು ಮುಖಂಡರು ನನ್ನನ್ನು ಅಭಿನಂದಿಸಿದ್ದಾರೆ. ನಾನು ಕೆಲವು ಮುಖಂಡರನ್ನು ಸಂಪರ್ಕಿಸಿದ್ದು, ಚರ್ಚಿಸಿದ್ದೇನೆ. ಮಡಿಕೇರಿಯಲ್ಲಿ ಎ.೨೧ರಂದು ನಡೆಯಲಿರುವ ಕಾಂಗ್ರೆಸ್ ಸಭೆಯಲ್ಲಿ ವರಿಷ್ಠರ ಸಮ್ಮುಖದಲ್ಲಿ ಪಕ್ಷಕ್ಕೆ ಮರಳಲಿದ್ದೇನೆ ಎಂದವರು ತಿಳಿಸಿದ್ದಾರೆ.
Tagged with
lnews
ಮಂಗಳೂರು: ರಾಜಕೀಯವಾಗಿ ನಾವು ತುಂಬಾ ಎತ್ತರಕ್ಕೆ ಬೆಳೆದಿದ್ದೇವೆ ಎಂದಾದರೆ ಅದಕ್ಕೆ ಕಾರಣ ವಿಶ್ವನಾಥ ಕ್ಷೇತ್ರ .ಹೀಗಾಗಿ ನಮ್ಮ ಕುಟುಂಬಕ್ಕೂ ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ವಿದೆ.ಈ ಕ್ಷೇತ್ರಕ್ಕೆ ಭೇಟಿ ನೀಡುವುದು ನನ್ನ ತಂದೆಯವರ ಒತ್ತಾಸೆಯಾಗಿತ್ತು ಎನ್ನುವ ಮೂಲಕ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ತಮ್ಮ ಯಶಸ್ಸ ರಹಸ್ಯವನ್ನು ತೆರೆದಿಟ್ಟಿದ್ದಾರೆ.
ನಿನ್ನೆ ಕೃಷ್ಣಾಪುರ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ್ಷೇತ್ರದ ಜೀರ್ಣೊದ್ದಾರದ ಸಮಯದಲ್ಲೇ ಬರಬೇಕೆಂದು ಕೊಂಡಿ ದ್ದೆ ಆದರೆ ಕಾರ್ಯ ಬಾಹುಲ್ಯ ದಿಂದ ಅದು ಸಾಧ್ಯವಾಗಿಲ್ಲ ಇಂದು ಆ ಸುದಿನ ಒದಗಿ ಬಂದ ಕಾರಣ ಬರಬೇಕಾಯಿ ತು. ೧೯೮೪ ರಲ್ಲಿ ನನ್ನ ತಂದೆಯವರು ರಾಜ್ಯ ಸರಕಾರದಲ್ಲಿ ಲೋಕೋಪ ಯೋಗಿ ಮಂತ್ರಿಯಾಗಿ ದ್ದಾಗ ಈ ಕ್ಷೇತ್ರಕ್ಕೆ ಜಾಗ ಮತ್ತು ಅನುದಾನ ಮಂಜೂರು ಮಾಡಿ ಈ ಕ್ಷೇತ್ರ ಬೆಳಗು ವಂತೆ ನೋಡಿಕೊಂಡಿ ದ್ದರು. ಆ ಬಳಿಕ ಮುಖ್ಯಮಂತ್ರಿ ಯಾದಾಗಲೂ ಅನು ದಾನವನ್ನು ನೀಡಿದ್ದರು. ಈ ಕ್ಷೇತ್ರದ ಅನುಗ್ರಹದಿಂದ ರಾಜಕೀಯವಾಗಿ ಬೆಳಗಿದ್ದೇವೆ ಎಂದು ತಂದೆಯವರು ಹೇಳು ತ್ತಿರುವುದಾಗಿ ಕುಮಾರ ಸ್ವಾಮಿ ತಿಳಿಸಿದರು. ದೇಗುಲಗಳು ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸ ಬೇಕು, ಜನರು ದೇಗುಲ ಗಳನ್ನು ತುಂಬಾ ನಂಬುತ್ತಾರೆ ಅವರ ನಂಬಿಕೆಗೆ ಹೊಡೆತ ಬೀಳಬಾರದು ಎಂದು ಕುಮಾರಸ್ವಾಮಿ ಆಶಯ ವ್ಯಕ್ತ ಪಡಿಸಿದರು. ಸೇವೆ ಎನ್ನುವುದು ಜನ ಮತ್ತು ಜನಾರ್ದನರಲ್ಲಿ ಕಾಣುವುದೇ ನಿಜವಾದದ್ದು. ರಾಜ್ಯ ಸರಕಾ ರದ ಬಗ್ಗೆ ನಾನೇನೂ ಹೇಳಲಾರೆ ಎಂದ ಕುಮಾರ ಸ್ವಾಮಿ ಕೇಂದ್ರ ಸರಕಾರ ಬರ ಪೀಡಿತರ, ಅಡಿಕೆ ಬೆಳೆಗಾರರ ಬಗ್ಗೆ ಒಲವು ತೋರ ಬೇಕು ಎಂದರು.
Tagged with
lnews
ಮಂಗಳೂರು: ಜನಸ್ಪಂದನ ಸಭೆಯು ವಿಕಲಚೇತನರಿಗಾಗಿ ಸರಕಾರ ರೂಪಿಸಿದ ಉತ್ತಮ ಯೋಜನೆಯಾಗಿದ್ದರೂ ಕೇವಲ ಸಭಾ ಕಾರ್ಯಕ್ರಮ ಮತ್ತು ಭಾಷಣಗಳಿಗಷ್ಟೇ ಸೀಮಿತವಾಗಿದೆ. ಪ್ರತಿ ಜನಸ್ಪಂದನ ಸಭೆಯಲ್ಲೂ ವೈದ್ಯಾಧಿಕಾರಿಗಳು ಗೈರುಹಾಜರಾಗುವುದು ಜನರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಪಡುಪಣಂಬೂರು ಪಂಚಾಯತ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮುಲ್ಕಿ ಬಿಲ್ಲವ ಸೇವಾ ಸಂಘದಲ್ಲಿ ನಡೆದ ಜನಸ್ಪಂದನ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ಐದು ವರ್ಷಗಳಿಂದ ಮನ್ನಬೆಟ್ಟುವಿನ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ ಎಂದು ಶ್ರೀಧರಶೆಟ್ಟಿ ಆರೋಪಿಸಿದರು. ಶಾಸಕ ಅಭಯಚಂದ್ರಜೈನ್ ಕೂಡಲೇ ಸರಕಾರಿ ಭೂಮಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
Tagged with
lnews
ಬೆಂಗಳೂರು: ನಾನು ಮುಖ್ಯ ಮಂತ್ರಿ ಆಗಬೇಕೆಂದು ದೇವರು ಬಯ ಸಿದ್ದರೆ ನಾನು ಖಂಡಿತವಾಗಿಯೂ ಮತ್ತೆ ಸಿಎಂ ಆಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದು, ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದ ಯಡ್ಡಿ ಈಗ ದೇವರ ಮೇಲೆ ಭಾರ ಹಾಕಲು ಹೊರಟಿದ್ದಾರೆ.
ಬರ ಅಧ್ಯಯನಕ್ಕಾಗಿ ರಾಯ ಚೂರಿಗೆ ತೆರಳಿದ್ದ ವೇಳೆ ಯಡಿ ಯೂರಪ್ಪ ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ಸಿಎಂ ಪಟ್ಟ ಹೋದ ಬಳಿಕ ಯಡಿಯೂರಪ್ಪ ಮನೆಯಲ್ಲಿ ಕುಳಿತು ಕೊಂಡಿದ್ದಾರೆಂದು ಜನರು ಭಾವಿ ಬಾರದು. ಬರದ ಬಗ್ಗೆ ಅಧ್ಯ ಯನ ಮಾಡಲು ಅಧಿಕಾರ ಬೇಕೆಂದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿ ದರು.
ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಬರುವು ದಾಗಲೀ ಅಥವಾ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ದೂರು ನೀಡಲು ತೆರಳಿರುವ ಬಗ್ಗೆ ತನಗೇನೂ ತಿಳಿದಿಲ್ಲ ಎಂದರು.
ಬರ ಪರಿಸ್ಥಿತಿ ತಿಳಿಯಲು ವಿಫಲ ರಾಗಿದ್ದೀರಿ ಎಂದು ನಾನು ಹೇಳಿದರೆ ಕಾಂಗ್ರೆಸ್‌ನವರು ಅದನ್ನು ಹಗುರವಾಗಿ ಪರಿಗಣಿಸಿ ದೆಹಲಿಗೆ ಹೋಗಿದ್ದರು. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರನ್ನು ವಾಪಸ್ ಕಳುಹಿಸಿರುವ ಸೋನಿಯಾ ಗಾಂಧಿ, ರಾಜ್ಯ ಪ್ರವಾಸ ಮಾಡಿ ಹಳ್ಳಿಗಳಿಗೆ ತೆರಳಿ ಎಂದು ಸೂಚಿ ಸಿರುವುದು ನನ್ನ ಮಾತಿಗೆ ಪುಷ್ಠಿ ಸಿಕ್ಕಿದಂ ತಾಗಿದೆ ಎಂದು ಯಡ್ಡಿ ತಿಳಿಸಿದರು.
Tagged with
lnews
ಮಂಗಳೂರು: ಬೆಂಗ್ರೆಯ ಭಾರತಿ ಶಿಪ್ ಯಾರ್ಡ್‌ನಲ್ಲಿ ನಿರ್ಮಾಣಗೊಂಡ ಮೊದಲು ಹಡಗು ಸಮುದ್ರಕ್ಕೆ ಸಾಗಲು ಈಗಲೂ ಅಡೆತಡೆಗಳು ಮುಂದುವರಿದಿವೆ. ನದಿಯಲ್ಲಿ ಸಾಕಷ್ಟು ನೀರಿಲ್ಲದೆ ಹಡಗು ನದಿ ತಳಕ್ಕೆ ತಾಗುತ್ತಿದ್ದು, ಹಡಗು ಮುಂದೆ ಚಲಿಸುತ್ತಿಲ್ಲ. ಹುಣ್ಣಿಮೆ ಹಾಗೂ ಅದರ ಬಳಿಕದ ನಾಲ್ಕು ದಿನ ನದಿಯಲ್ಲಿ ಸಾಕಷ್ಟು ನೀರು ಇರುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಸಮುದ್ರಕ್ಕೆ ಸಾಗಿಸುವ ಯೋಜನೆ ರೂಪಿಸಲಾಗಿತ್ತು. ಶುಕ್ರವಾರ ಹುಣ್ಣಿಮೆ ಇದ್ದುದರಿಂದ ಶನಿವಾರ ಸಮುದ್ರಕ್ಕೆ ಇಳಿಸಲು ಪ್ರಯತ್ನಿಸಲಾಗಿತ್ತು. ಇನ್ನೆರಡು ದಿನಗಳಲ್ಲಿ ಹಡಗನ್ನು ಸಮುದ್ರಕ್ಕೆ ಇಳಿಸಲಾಗದಿದ್ದಲ್ಲಿ ಮುಂದಿನ ಅಮವಾಸ್ಯೆಯವರೆಗೆ ಕಾಯಬೇಕಾಗುತ್ತದೆ.
Tagged with
lnews
ಕಾನ್ಪುರ: ಈಗಿನ ಕಾಲದಲ್ಲಿ ಪ್ರತಿನಿತ್ಯ ಶಾಲೆಗೆ ಹೋಗಲು ಹಿಂದೇಟು ಹಾಕುವ ಮಕ್ಕಳೇ ಜಾಸ್ತಿ. ಅಂಥದ್ದರಲ್ಲಿ ಕಾನ್ಪುರದ ವಿದ್ಯಾರ್ಥಿಯೊಬ್ಬ ಬರೋಬ್ಬರಿ ೧೨ ವರ್ಷಗಳ ಕಾಲ ಶಾಲೆಗೆ ಒಂದು ದಿನವೂ ರಜೆ ಮಾಡಿಲ್ಲವಂತೆ. ಅಚ್ಚರಿಯಾದರೂ ನಂಬಲೇಬೇಕಾದ ಈ ಪ್ರಸಂಗದಲ್ಲಿ ವಿದ್ಯಾರ್ಥಿ ಮೊಹಮ್ಮದ್ ಒಮರ್ ಎಂಬಾತ ಶಾಲೆಗೆ ರಜೆಯನ್ನೇ ಮಾಡದೆ ಗಿನ್ನೆಸ್ ದಾಖಲೆ ಮಾಡಲು ಹೊರಟಿದ್ದಾನೆ.
ಈತ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾನೆ. ಕಾನ್ಪುರದ ಸೈಂಟ್ ಅಲೋಷಿಯಸ್ ಕಾಲೇಜ್ ವಿದ್ಯಾರ್ಥಿಯಾಗಿರುವ ಈತನಿಗೆ ಅನಾರೋಗ್ಯ ಕಾಡಲಿಲ್ಲವೆಂದೇನಿಲ್ಲ. ಆದರೆ ಜ್ವರ, ಶೀತ, ಕೆಮ್ಮು ಇತ್ಯಾದಿ ಸಾಮಾನ್ಯ ಖಾಯಿಲೆಗಳು ಬಂದಾಗ ಆತ ಮಾತ್ರೆ ತೆಗೆದುಕೊಂಡು ಶಾಲೆಗೆ ಹೋಗುತ್ತಿದ್ದ. ಒಮ್ಮೆ ಪ್ರವಾಹ ಬಂದು ಈತನ ಮನೆಯನ್ನು ಅರ್ಧದಷ್ಟು ಮುಳುಗಿಸಿತ್ತಂತೆ. ಆದರೂ ಆ ದಿನ ರಜೆ ಮಾಡದೆ ಈತ ಶಾಲೆಗೆ ಹೋಗಿದ್ದ. ಒಮರ್ ತನ್ನ ಶಾಲೆ ಮತ್ತು ಶಿಕ್ಷಕ ವೃಂದವನ್ನು ತುಂಬಾ ಇಷ್ಟಪಡುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಆತನ ಪೋಷಕರು. ಸದ್ಯ ಈತನ ಹೆಸರನ್ನು ಗಿನ್ನೆಸ್ ಪುಸ್ತಕದಲ್ಲಿ ಸೇರಿಸಲು ಪ್ರಯತ್ನಗಳು ಸಾಗಿವೆ.
Tagged with
lnews

ಕಾರ್ಕಳ: ಶಿವಮೊಗ್ಗ ಹೊಸ ನಗರದ ಶ್ರೀರಾಮಚಂದ್ರಪುರ ಮಠಾ ಧೀಶ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಕಾರ್ಕಳ ತೆಳ್ಳಾರು ರಸ್ತೆಯ ಶೇಷಾದ್ರಿ ನಗರದಲ್ಲಿ ವೆಂಕಟ್ರಮಣ ಗೋಶಾಲೆಯನ್ನು ಉದ್ಘಾಟಿಸಿದರು.
ಗೋಶಾಲೆಯೊಂದರ ನಿರ್ಮಾಣ ಹಲವು ದೇವಳ ಕಟ್ಟಿಸಿದ ಪುಣ್ಯಕ್ಕೆ ಸಮಾನವಾಗಿದೆ. ಕಣ್ಣಿಗೆ ಕಾಣುವ ದೇವರು ಅಂದರೆ ಅದು ಗೋವುಗಳಾಗಿದ್ದು, ಅದನ್ನು ರಕ್ಷಿಸು ವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಗೋವುಗಳ ಸಂತತಿಗಳೇ ಇಲ್ಲದಿದ್ದರೆ ತಿರುಪತಿ ದೇವಸ್ಥಾನ ಕಾಣುವ ಸೌಭಾಗ್ಯ ಇರುತ್ತಿರಲಿಲ್ಲ. ಶ್ರೀನಿವಾಸ ದೇವರಿಗೂ ಗೋವಿಗೂ ಅವಿನಾಭಾವ ಸಂಬಂಧ ಇದೆ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು.
ಪಡುತಿರುಪತಿ ಎಂದೇ ಖ್ಯಾತಿ ಪಡೆದಿರುವ ವೆಂಕಟರಮಣ ದೇವಳ ವತಿಯಿಂದ ಹಾಗೂ ವಿದೇಶದಲ್ಲಿ ನೆಲೆಸಿರುವ ಗುಜರಾತು ಮೂಲದ ಲಾಲ್‌ಚಂದ್ ಗಜ್ರಾಯ್ ಅವರ ಉದಾರ ಕೊಡುಗೆಯೇ ಈ ಗೋಶಾಲೆ ತಲೆ ಎತ್ತಲು ಕಾರಣವಾಗಿದೆ. ಐದು ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಗೋಶಾಲೆಯಲ್ಲಿ ಜಾನುವಾರುಗಳ ಬದುಕಿಗೆ ಬೇಕಾದ ಅಧುನಿಕತೆಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ವಿಶೇಷವಾಗಿ ಇಲ್ಲಿ ದೇಶಿಯ ವಿಭಿನ್ನ ಭಾರತೀಯ ತಳಿಯ ಜಾನು ವಾರುಗಳು ಕಂಡುಬಂದಿದೆ. ಅವುಗ ಳನ್ನು ಶ್ರೀರಾಮಚಂದ್ರಪುರ ಮಠಾಧೀಶ ರಾಘವೇಶ್ವರ ಸ್ವಾಮೀಜಿ ನೀಡಿದ್ದಾರೆ.
Tagged with
lnews
ಮಂಗಳೂರು: ಲೇಡಿಹಿಲ್ ಬಳಿಯ ಕರಾವಳಿ ಉತ್ಸವ ಮೈದಾನ ದಲ್ಲಿ ಪ್ರಾರಂಭಗೊಂಡಿರುವ ನಾಡಿನ ಪ್ರಸಿದ್ಧ 'ಜಂಬೋ ಸರ್ಕಸ್'ನಲ್ಲಿ ವಿಶೇಷ ಆಕರ್ಷಣೆಯಾಗಿ ಆಫ್ರಿಕಾ ಕಲಾವಿದರ ತಂಡ ಪ್ರದರ್ಶನ ನೀಡುತ್ತಿದೆ ಎಂದು ಸರ್ಕಸ್ ಕಂಪೆನಿಯ ಸಂಪರ್ಕಾಧಿಕಾರಿ ಶ್ರೀಹರಿನಾಯರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಒಟ್ಟು ಎಂಟು ಮಂದಿಯ ತಂಡ ಸೇಲೆ ಮಣಿ ಹಮಿಸಿ ರಾಜಬು ನೇತೃತ್ವದಲ್ಲಿ ನಾನಾ ಚಮತ್ಕಾರಿಕ ಆಟಗಳನ್ನು ಪ್ರದರ್ಶಿಸಲಿದೆ.ಆಫ್ರಿಕಾದ ಅಬುಬಕರ್ ಕಾಸ್ಮಾಸ್ ಮಾಂಗೋ, ಕಸಿಮ್ ಅಲೈ ಮಿಟಿಕಾ, ಗಾಡ್ಫಿ ಕೊಂಡ್ರಾಡಿ ಪಂಡಾ, ಲಿವಿಂಗ್‌ಸ್ಟನ್ ರಿಚರ್ಡ್ ಮಸೂರಾ, ಅಲೈ ಅಫಿಧಿ ಬಝ, ರುಖಿಯಾ ಶಬಾನಿ ಡುಮಿ, ರೆಹಮ ಮಶಕಾ ಪೊಂಡ ತಂಡದಲ್ಲಿದ್ದಾರೆ. ಕಾಡಿನ ಜನಜೀವನ ಅಭ್ಯಾಸದಿಂದ ಮೂಡಿರುವ ಚಮತ್ಕಾರಿಕ ಮಾನವ ಪಿರಮಿಡ್ ರಚನೆ, ಆಫ್ರಿಕದ ಸಾಂಪ್ರ ದಾಯಿಕ ಸಂಗೀತದೊಂದಿಗೆ ಬೆಂಕಿಯ ಕೆಳಗೆ ಲಿಂಬೆ ನೃತ್ಯ, ಎರಡು ಕೋಲನ್ನು ಹಿಡಿದುಕೊಂಡು ಮೇಲೆಕ್ಕೆ ಚಲಿಸುವ ಮಾತ್ರವಲ್ಲದೆ ಒಂದು ಕೋಲಿನಿಂದ ಇನ್ನೊಂದು ಕೋಲಿಗೆ ನೆಗೆಯುವ ವಿಶಿಷ್ಟ ನೃತ್ಯವನ್ನು ತಂಡ ಪ್ರದರ್ಶಿಸಲಿದೆ ಎಂದವರು ತಿಳಿಸಿದರು. ನವೀನ ಹಾಗೂ ಗಮನಾರ್ಹ ಚಮತ್ಕಾರಗಳನ್ನು ಪ್ರದರ್ಶಿಸು ಜಂಬೋ ಸರ್ಕಸ್ ಭಾರತದ ಅತಿ ದೊಡ್ಡ ಸರ್ಕಸ್ ಕಂಪನಿ ಯಾಗಿದೆ. ಒಟ್ಟು ೨೫೦ ಉದ್ಯೋಗಿಗಳು ಕಂಪನಿಯಲ್ಲಿದ್ದು, ೪೦ ಪುರುಷ ಕಲಾವಿದರು ಹಾಗೂ ೫೦ ಮಹಿಳಾ ಕಲಾವಿದರು ಚಮತ್ಕಾರಿಕ ಪ್ರದರ್ಶನ ನೀಡುತ್ತಿದ್ದಾರೆ.
Tagged with
lnews
ಮಂಗಳೂರು: ರಾಜ್ಯದ ಪೊಲೀಸ್ ಮಹಾನಿರ್ದೇಶಕರ ನೇಮಕಾತಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು 'ಅಹಿಂದ' ಅತ್ಯಂತ ಮಹತ್ವ ಪೂರ್ಣದ್ದು ಎಂದು ಸ್ವಾಗತಿಸುತ್ತದೆ.
ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರುವ ಮತ್ತು ಅವುಗಳ ರಕ್ಷಣೆ ಗಾಗಿ ಶ್ರಮಿಸುತ್ತಿರುವ ಈ ದೇಶದ ಲಕ್ಷಾಂತರ ಸಾಮಾಜಿಕ ಕಾರ‍್ಯಕರ್ತರಲ್ಲಿ ಈ ತೀರ್ಪು ಹೊಸ ಭರವಸೆ ಮೂಡಿಸಬಲ್ಲದು ಎಂದು 'ಅಹಿಂದ' ಅಭಿಪ್ರಾಯ ಪಡುತ್ತದೆ.
ಅಧಿಕಾರದ ದುರಹಂಕಾರದಿಂದ, ತನ್ನ ರಾಜಕೀಯ ಬಾಸ್‌ಗಳ ಶಹಬ್ಬಾಸ್‌ಗಿರಿಗಾಗಿ ಮಾನವ ಹಕ್ಕುಗಳನ್ನು ದಮನಿಸುವ ಮಹಿಳೆಯರ-ಮಕ್ಕಳ, ಅಸಹಾಯ ಕರ, ಶೋಷಿತರ ಮೇಲೆ ಕಾನೂನು-ಸುವ್ಯವಸ್ಥೆಯ ನೆಪವೊಡ್ಡಿ ನಿರಂತರ ದೌರ್ಜನ್ಯವೆಸಗುವ ಎಲ್ಲ ಅಧಿಕಾರ ಶಾಹಿಗೆ ಈ ತೀರ್ಪು ಕಣ್ಣು ತೆರೆಸು ವಂತಾಗಲಿ ಎಂದು 'ಅಹಿಂದ' ಹಾರೈಸುತ್ತದೆ. ರಾಜಕೀಯ ನೇತಾರರ, ಅಧಿಕಾರಶಾಹಿಗಳ ಮತ್ತು ಬಲಾಢ್ಯ ರಿಂದ ನಿರಂತರ ದಮನ-ದಬ್ಬಾಳಿಕೆಗೆ ಒಳಗಾಗುತ್ತಿರುವ ಶೋಷಿತ ಜನವರ್ಗಗಳಲ್ಲಿ ಈ ತೀರ್ಪು, 'ನಮ್ಮನ್ನು ಕೇಳುವವರು ಇದ್ದಾರೆ' ಎಂಬ 'ಆಶಾಕಿರಣ' ಮೂಡಿಸಬಲ್ಲದು ಎಂದು 'ಅಹಿಂದ' ಕಾರ‍್ಯಾಧ್ಯಕ್ಷ ಲೋಲಾಕ್ಷ, ಉಪಾಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್ ಮತ್ತು ಕಾರ‍್ಯದರ್ಶಿ ಯೂಸುಫ್ ವಕ್ತಾರ್ ಜಂಟಿ ಪತ್ರಿಕಾಹೇಳಿಕೆಯಲ್ಲಿ ತಿಳಿಸಿ ದ್ದಾರೆ.
Tagged with
lnews
ಮಂಗಳೂರು: ಕುಟುಂಬ ವೈದ್ಯರ ಸಂಘ(ರಿ) ಮಂಗಳೂರು, ಇದರ ಆಶ್ರಯದಲ್ಲಿ ಬಲ್ಮಠದಲ್ಲಿರುವ ಹೊಟೇಲ್ ಕುಡ್ಲದ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಕಾರ್ಯಾ ಗಾರವು, ಸಂಘದ ಅಧ್ಯಕ್ಷ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಗಳನ್ನು ಕೋಶಾಧಿಕಾರಿಗಳಾದ ಡಾ. ಮನೋಹರ ಆಚಾರ್ ಹಾಗೂ ಡಾ.ಎ.ಯಂ. ನಾಯ್ಕರವರು ಸಭೆಗೆ ಪರಿಚಯಿಸಿದರು. ಸಂಘದ ಕಾರ್ಯದರ್ಶಿಗಳಾದ ಡಾ.ಶೇಖರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
Tagged with
lnews
ಮಂಗಳೂರು: ಅಹಿಂದ ದ.ಕ.ಜಿಲ್ಲಾ ಸಮಿತಿಯ ಮಹಾಸಭೆಯು ಮಂಗಳೂರಿನ ವುಡ್‌ಲ್ಯಾಂಡ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ೨೦೧೨-೧೩ನೇ ಸಾಲಿಗೆ ಕಾರ್ಯಕಾರಿ ಸಮಿತಿಯನ್ನು ಚುನಾಯಿಸಲಾಯಿತು.
ಪದಾಧಿಕಾರಿಗಳ ವಿವರ ಈ ರೀತಿ ಇದೆ.
ಗೌರವಾಧ್ಯಕ್ಷರು: ವಾಸುದೇವ ಬೋಳೂರು, ಅಧ್ಯಕ್ಷರು: ಪುರುಷೋತ್ತಮ ಪೂಜಾರಿ, ಕುಪ್ಪೆಪದವು, ಕಾರ್ಯಾಧ್ಯಕ್ಷರು: ಲೋಲಾಕ್ಷ, ಉಪಾಧ್ಯಕ್ಷರುಗಳು: ಬಿ.ಎ.ಮಹಮ್ಮದ್ ಹನೀಫ್, ಪೇರೂರು ಜಾರು, ರೆನ್ನಿ ಡಿಸೋಜಾ ಹಾಗೂ ಸದಾನಂದ ಪೂಜಾರಿ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ: ಯುಸೂಪ್ ವಕ್ತಾರ್, ಜೊತೆ ಕಾರ್ಯದರ್ಶಿ: ಜೋಸೆಫ್, ರತನ್ ರೇಗೋ, ಸಂಘಟನಾ ಕಾರ್ಯದರ್ಶಿಗಳಾಗಿ: ಪದ್ಮನಾಭ, ಅಬ್ದುಲ್ ಅಝೀಝ್ ಹಕ್, ಮಹೇಶ್ ಆಯ್ಕೆಯಾದರು.
Tagged with
lnews
ಮಂಗಳೂರು: ಗಣಪತಿ ಆಂಗ್ಲ ಮಾಧ್ಯಮ ೨೦೧೨-೧೩ನೇ ಶೈಕ್ಷಣಿಕ ವರ್ಷದಿಂದ 'ಸ್ಮಾರ್ಟ್ ತರಗತಿ' ಎಂಬ ಹೊಸ ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲಾ ಶಿಕ್ಷಕ, ಶಿಕ್ಷಕಿಯರಿಗೂ ಈ ವಿಧಾನದ ಕುರಿತು ಈಗಾಗಲೇ ತರಬೇತಿಯನ್ನೂ ನೀಡ ಲಾಗಿದೆ. ಇದರ ಉದ್ಘಾಟನೆಯು ಎಪ್ರಿಲ್ ೧೦ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಗಣಪತಿ ಶಾಲೆಯ ಸಭಾಭವನದಲ್ಲಿ ನಡೆಯಲಿದೆ.
Tagged with
lnews
ಮಂಗಳೂರು: ಹಾವೇರಿ ಜಿಲ್ಲೆಯ ಹಿರೇಕೆರೂರಿನ ಕೋಡ ಗ್ರಾಮದ ಉದಯೋನ್ಮುಖ ಹಾಡುಗಾರ್ತಿ ಫರ‍್ಹಾನರು ಹಾಡಿರುವ ಖ್ಯಾತ ಗಾಯಕ ಮುಹಮ್ಮದ್ ರಫಿಯವರ ಹಾಡುಗಳ ವೀಡಿಯೊ ಆಲ್ಬಂ ಬಿಡುಗಡೆಯನ್ನು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಧರ್ಮ ದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಉರ್ದುವಿನಲ್ಲಿ ಡಿಎಡ್ ಮಾಡಿರುವ ಫರ‍್ಹಾನ ಕಂಪ್ಯೂಟರ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಸಮಾರಂಭಗಳಲ್ಲಿ ಹಿಂದಿ, ಕನ್ನಡ , ಬ್ಯಾರಿ ಹಾಡುಗಳನ್ನು ಹಾಡಿದ್ದಾರೆ.'ಮುಹಮ್ಮದ್ ಬಡ್ಡೂರ್‌ರ ಪ್ರೇರಣೆಯಿಂದ ತಾನು ಮುಹಮ್ಮದ್ ರಫಿಯವರ ಹಾಡುಗಳನ್ನು ಹಾಡಲು ಆರಂಭಿಸಿದೆ' ಎಂದು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದ ಫರ‍್ಹಾನ ಅಭಿಪ್ರಾಯಿಸಿದರು.
ಈ ಆಲ್ಬಂ ಸಂಗೀತ ಡಿಜಿಟಲ್ ಸ್ಟುಡಿಯೊದಲ್ಲಿ ಧ್ವನಿಮುದ್ರಣ ಗೊಂಡಿದ್ದು, ಇಬ್ರಾಹಿಂ ಬಡ್ಡೂರು ಛಾಯಾಗ್ರಾಹಕರಾಗಿ, ಸುಹೇಲ್ ಬಡ್ಡೂರು ಸೌಂಡ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ ಎಂದು ಮಾರ್ಗದರ್ಶನ ನೀಡಿರುವ ಮುಹಮ್ಮದ್ ಬಡ್ಡೂರು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರದೀಪ್‌ಕುಮಾರ್ ಕಲ್ಕೂರ, ಉದ್ಯಮಿ ಅಕ್ಬರ್ ಆಲಿ ಉಪಸ್ಥಿತರಿದ್ದರು.
Tagged with
lnews
ಸುಳ್ಯ: ಯುವಕರಿಬ್ಬರು ಪರಸ್ಪರ ಹೊಡೆದಾಡಿಕೊಂಡ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಬಾಳಿಲದ ಉದ್ಯಮಿ ಇಸಾಕ್ ಸಾಹೇಬ್ ಎಂಬವರ ಪುತ್ರ ಮರದ ವ್ಯಾಪಾರಿ ರಶೀದ್(೨೫), ಮೊಬೈಲ್ ಅಂಗಡಿ ನಡೆಸುತ್ತಿರುವ ಸಿದ್ದೀಕ್(೨೨) ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸುಳ್ಯ ಪೊಲೀಸರು ಇಬ್ಬರ ಮೇಲೂ ಕೇಸು ದಾಖ ಲಿಸಿದ್ದಾರೆ. ಬೆಳ್ಳಾರೆ ಪೇಟೆಯಲ್ಲಿ ತಾನು ಚಾ ಕುಡಿಯಲು ಹೊಟೇಲ್‌ಗೆ ಹೋದಾಗ ಸಿದ್ದೀಕ್ ತನಗೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾಗಿ ರಶೀದ್ ದೂರಿದ್ದಾರೆ. ತಾನು ಪೇಪರ್ ತರಲೆಂದು ಪೇಪರ್ ಸ್ಟಾಲ್‌ಗೆ ಹೋಗುವಾಗ ತನ್ನ ಮರ್ಮಾಂಗಕ್ಕೆ ಒದ್ದು, ತಲವಾರು ತೋರಿಸಿ ಬೆದರಿಸಿದ್ದು, ತಾನು ಅಲ್ಲಿಂದ ಓಡಿ ತಪ್ಪಿಸಿಕೊಂಡಿರುವುದಾಗಿ ಸಿದ್ದೀಕ್ ದೂರು ನೀಡಿದ್ದಾರೆ. ಸಿದ್ದೀಕ್ ಬಿಜೆಪಿ ಮುಖಂಡ ರಹೀಮ್ ಸಹೋದರನಾಗಿದ್ದಾನೆ. ರಶೀದ್ ತಂದೆ ಇಸಾಕ್ ಸಾಹೇಬ್ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದಾರೆ. ಹಿಂದೆ ಚುನಾವಣೆ ಸಂದರ್ಭದಲ್ಲೂ ಎರಡೂ ತಂಡಗಳ ಮಧ್ಯೆ ಘರ್ಷಣೆ ಸಂಭವಿ ಸಿತ್ತು ಎನ್ನಲಾಗಿದೆ.
Tagged with
cnews,
feature
ಸುಳ್ಯ: ಒಂಬತ್ತನೇ ಕ್ಲಾಸಿನ ವಿದ್ಯಾರ್ಥಿ ನಿಯೊಂದಿಗೆ ಲಾಡ್ಜ್‌ನಲ್ಲಿ ಮಜಾ ಉಡಾಯಿಸಿ ಆಕೆಯನ್ನು ಸುಳ್ಯ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ವಿವಾಹಿತನನ್ನು ಸುಳ್ಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಣ್ಮೂರಿನಲ್ಲಿ ೯ನೇ ತರಗತಿ ಓದು ತ್ತಿರುವ ೧೫ ರ ಹರೆಯದ ಬಾಲಕಿ ಹಾಗೂ ಪಂಜ ಸಮೀಪ ಎಲೆಕ್ಟ್ರಿಕಲ್ ಅಂಗಡಿ ಹೊಂದಿರುವ ಧನಂಜಯ(೨೯) ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸು ತ್ತಿದ್ದರು ಎನ್ನಲಾಗಿದೆ. ಧನಂಜಯನಿಗೆ ಈಗಾ ಗಲೇ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ.
ಶನಿವಾರ ಬಾಲಕಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅಲ್ಲಿಂದ ಮನೆಯ ವರಿಗೆ ತನ್ನ ಮೊಬೈಲ್‌ನಿಂದಲೇ ಕರೆ ಮಾಡಿದ ಧನಂಜಯ, ತಾನು ಕಾಲೇಜಿನ ಪ್ರಾಧ್ಯಾಪಕ ಮಾತನಾಡುತ್ತಿರುವುದು, ನಿಮ್ಮ ಮಗಳಿಗೆ ಹೆಚ್ಚಿನ ಅಭ್ಯಾಸ ನಡೆಸಲಿರುವ ಕಾರಣ ಇವತ್ತು ಹಾಸ್ಟೆಲ್‌ನಲ್ಲೇ ಉಳಿಯುತ್ತಾಳೆ ಎಂದು ಹೇಳಿದ್ದ. ಇದರಿಂದ ಸಂಶಯ ಗೊಂಡ ಮನೆಯವರು ನಂಬರ್‌ನ್ನು ಅದೇ ಊರಿನ ರಿಚಾರ್ಜ್ ಅಂಗಡಿಯವನ ಹತ್ತಿರ ತೋರಿಸಿದಾಗ, ಆತ ಇದು ಧನಂಜಯ್‌ನ ನಂಬರ್ ಎಂದು ಹೇಳಿದ್ದು, ಬಳಿಕ ಮನೆಯ ವರು ಪೊಲೀಸರಿಗೆ ದೂರು ನೀಡಿದ್ದರು.
ಈ ಜೋಡಿ ಸುಬ್ರಹ್ಮಣ್ಯದ ಕುಲ್ಕುಂದ ದಲ್ಲಿರುವ ವಸತಿಗೃಹವೊಂದರಲ್ಲಿ ರೂಂ ಪಡೆದಿದ್ದು, ರಾತ್ರಿ ಅಲ್ಲೇ ಉಳಿದಿದ್ದರು. ಭಾನುವಾರ ಬೆಳಿಗ್ಗೆ ಬಾಲಕಿಯನ್ನು ಸುಳ್ಯ ಬಸ್ ನಿಲ್ದಾಣದಲ್ಲಿ ಧನಂಜಯ್ ಬಿಟ್ಟು ಹೋಗಿದ್ದ. ತನಿಖೆ ನಡೆಸುತ್ತಿದ್ದ ಪೊಲೀಸರು ಧನಂಜಯ್‌ನ ಇಲೆಕ್ಟ್ರಿಕಲ್ ಅಂಗಡಿ ಮಾಲಕರಿಂದ ಆತನಿಗೆ ಕರೆ ಮಾಡಿಸಿ, ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದ್ದು, ಧನಂಜಯನನ್ನು ಸುಳ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Tagged with
cnews,
feature
ಮಂಗಳೂರು: ಚೊಚ್ಚಲ ಹೆರಿಗೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಮಗುವಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿದ್ದು ವೈದ್ಯರ ಬೇಜವಾ ಬ್ದಾರಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹರೇಕಳ ಸಂಪಿಗೆದಡಿ ನಿವಾಸಿ ಸುರೇಶ್ ಶೆಟ್ಟಿ ಎಂಬವರ ಪತ್ನಿ ಸುಜಾತ(೨೮) ಎಂಬ ವರನ್ನು ಚೊಚ್ಚಲ ಹೆರಿಗೆಗಾಗಿ ಬುಧವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಸೇರಿ ಸಲಾಗಿತ್ತು. ಶನಿವಾರ ಮಧ್ಯಾಹ್ನ ಸುಜಾತ ಸಾಮಾನ್ಯ ಹೆರಿಗೆಯ ಮೂಲಕ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ರಕ್ತಸ್ರಾವ ನಿಲ್ಲುತ್ತಿಲ್ಲ ಎಂದು ಹೇಳಿದ್ದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗರ್ಭಕೋಶ ತೆಗೆಯಬೇಕೆಂದು ತಿಳಿಸಿದ್ದರು ಎಂದು ಸುಜಾತಾರ ಅಕ್ಕ ರಜನಿ ತಿಳಿಸಿದ್ದಾರೆ. ಆದರೆ ಶನಿವಾರ ರಾತ್ರಿಯವರೆಗೂ ತಂಗಿಯ ಬಗ್ಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಐಸಿಯುಗೆ ಹೋಗಿ ನೋಡಿದ್ದು ಆ ವೇಳೆ ಸುಜಾತರ ಕೈಕಾಲುಗಳು ತಣ್ಣಗಾಗಿದ್ದಲ್ಲದೆ ದೇಹದ ಬಣ್ಣವೂ ಬದಲಾಗಿತ್ತು. ಇದರಿಂದ ಸಂಶಯಗೊಂಡು ದಾದಿ ಯರಲ್ಲಿ ವಿಚಾರಿಸಿದಾಗ ಮೃತಪಟ್ಟಿರುವ ಮಾಹಿತಿ ನೀಡಿದ್ದರು. ಅದು ಬಿಟ್ಟರೆ ಇನ್ಯಾವುದೇ ಮಾಹಿತಿಯನ್ನೂ ನೀಡಿಲ್ಲ ಹಾಗೂ ತಂಗಿಯನ್ನು ನೋಡಲೂ ಬಿಟ್ಟಿಲ್ಲ. ತಂಗಿಯ ಹೆರಿಗೆಯ ಸಂದರ್ಭದಲ್ಲಿ ವೈದ್ಯರಾದ ಅಪರ್ಣಾ ಅವರು ಉಪಸ್ಥಿತರಿರದೆ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ಬಿಟ್ಟುಕೊಡುವ ಮೂಲಕ ಬೇಜವಾಬ್ದಾರಿತನ ಮೆರೆದಿದ್ದರು. ಇದರಿಂದಾಗಿ ತನ್ನ ತಂಗಿ ಸಾವನ್ನಪ್ಪಿದ್ದಾರೆ ಎಂದು ರಜನಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತರ ಗಂಡ ಸುರೇಶ್ ಶೆಟ್ಟಿಯವರು ನೀಡಿದ ದೂರಿನಂತೆ ಸೆ. ೩೦೪ರ ಪ್ರಕಾರ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
Tagged with
cnews,
feature
ಮುಲ್ಕಿ: ಎಲ್ಲಾ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಬರದಿಂದ ಸಾಗುತ್ತಿದೆ. ಅದೇ ರೀತಿ ಹಳೆಯಂಗಡಿಯಲ್ಲೂ ರಾ. ಹೆ. ಅಗಲವಾಗುತ್ತಿದ್ದು, ಇದು ಮಾತ್ರ ಜನರ ಸಮಸ್ಯೆಗೆ ಕಾರಣ ವಾಗಿದೆ. ಹೆದ್ದಾರಿ ಅಗಲೀಕರಣದಿಂ ದಾಗಿ ಇಲ್ಲಿ ಜನರಿಗೆ ರಸ್ತೆದಾಟಲು ಕಷ್ಟವಾಗುತ್ತಿದೆ. ಇದಕ್ಕೆ ಯಾವುದೇ ಪರ‍್ಯಾಯ ವ್ಯವಸ್ಥೆ ಇಲ್ಲದೆ ಜನರು ಸಮಸ್ಯೆ ಎದುರಿಸುವಂತಾಗಿದೆ.
ರಸ್ತೆ ಅಗಲೀಕರಣ ಕಾಮಗಾರಿ ಪೂರ್ತಿಯಾಗಿಲ್ಲ. ಅದಕ್ಕೂ ಮೊದಲೇ ರಸ್ತೆದಾಟಲು ಕಷ್ಟವಾಗು ತ್ತಿದ್ದು, ಇಲ್ಲಿ ಕೆಲವು ಅಪಘಾತಗಳೂ ನಡೆದಿವೆ. ಅಲ್ಲದೇ ಇಲ್ಲಿ ಕೆಲವು ಶಾಲಾ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವ ಜನಿಕರಿಗೆ ರಸ್ತೆದಾಟಲು ಸರಿಯಾದ ವ್ಯವಸ್ಥೆ ಇಲ್ಲ. ಈ ಪ್ರದೇಶದಲ್ಲಿ ಹಲವು ಪ್ರತಿಷ್ಟಿತ ಯುವಕ ಮಂಡಲ, ಯುವತಿ ಮಂಡಲ ಹಾಗು ಹಲವು ಸಂಘ ಸಂಸ್ಥೆಗಳು ಇದ್ದರೂ ಈ ಸಮಸ್ಯೆಯ ಬಗ್ಗೆ ಪ್ರತಿಭಟಿಸದಿರುವುದು ಹಲವು ಅನುಮಾನಗಳಿಗೆ ಕಾರಣ ವಾಗಿದೆ. ಇಲ್ಲಿಯ ಶಾಸಕರು ಹಾಗೂ ಸಂಸದರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಈ ಮೊದಲು ಮುಲ್ಕಿಯಲ್ಲಿ ಬೈಪಾಸ್ ರಸ್ತೆಗಾಗಿ ಮುಲ್ಕಿಯ ಜನತೆ ಪ್ರತಿಭಟನೆ ನಡೆಸಿದ್ದರು. ಅದರ ಫಲವಾಗಿ ಈಗ ಅದು ಸಾಕಾರಗೊಂ ಡಿದೆ. ಮುಲ್ಕಿಯ ಜನರಿಗೆ, ಇಲ್ಲ್ಲಿಯ ಜನಪ್ರತಿನಿಧಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ತಮ್ಮ ಊರು ಒಳ್ಳೆದಾಗ ಬೇಕು, ಊರಿನ ಜನರಿಗೆ ಯಾವುದೇ ಕಷ್ಟಬಂದಾಗ ಒಗ್ಗೂಡಿ ಪ್ರತಿಭಟಿಸ ಬೇಕು ಎನ್ನುವುದು ಗೊತ್ತಿದೆ. ಆದರೆ ಹಳೆಯಂಗಡಿಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ತಮ್ಮತಮ್ಮೊಳಗೆ ಕಚ್ಚಾಡುವು ದನ್ನು ಬಿಟ್ಟು ಜನರ ಒಳಿತಿಗೆ ಯಾವುದೇ ಕೆಲಸ ಮಾಡುವುದಕ್ಕೆ ಹಿಂದೇಟು ಹಾಕುವುದರಿಂದ ಈಗ ಹಳೆ ಯಂಗಡಿಗೆ ಇಂತಾ ಪರಿಸ್ಥಿತಿ ಎದುರಾ ಗಿದೆ ಎಂಬ ಮಾತು ಕೇಳಿ ಬಂದಿದೆ.
Tagged with
lnews
ಎಂಎಸ್‌ಇಝಡ್ ತನ್ನ ನೂತನ ರಸ್ತೆ ನಿರ್ಮಾಣಕ್ಕಾಗಿ ಕೂಳೂರು ನದಿಯ ಒಂದು ಭಾಗಕ್ಕೆ ಮಣ್ಣು ಹಾಕುವ ಕೆಲ ಮಾಡುತ್ತಿದ್ದು ಇದರಿಂದ ಸಂಕಷ್ಟಕ್ಕೀಡಾಗಿರುವ ಕೂಳೂರು ನಿವಾಸಿಗಳು ಮಾಧ್ಯಮದವರನ್ನು ಸ್ಥಳಕ್ಕೆ ಕರೆಸಿಕೊಂಡು ತಮ್ಮ ನೋವನ್ನು ತೋಡಿಕೊಂಡರು
Tagged with
ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಭಾನುವಾರ ಸಂಜೆ ಭಾರೀ ಗಾಳಿ ಯೊಂದಿಗೆ ಮಳೆ ಸುರಿದಿದ್ದು ಅಲ್ಲಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಸುಮಾರು ಒಂದು ಗಂಟೆಗೂ ಅಧಿಕ ಸಮಯ ಸುರಿದ ಗುಡುಗು, ಸಿಡಿಲು ಸಹಿತ ಮಳೆಯಿಂದ ಸುಳ್ಯ ಸಮೀಪದ ಅಡ್ಕಾರ್‌ನಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ. ಐವರ್ನಾಡಿನಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾದ ಕಾರಣ ವಾಹನಗಳು ಚೊಕ್ಕಾಡಿ ಮಾರ್ಗವಾಗಿ ಸಂಚರಿಸಿದವು. ನಗರ ಸಮೀಪದ ಹಳೆಗೇಟಿನಲ್ಲಿ ಉಮರಬ್ಬ ಎಂಬವರ ಮನೆಗೆ ತೆಂಗಿನ ಮರ ಮುರಿದು ಬಿದ್ದು ಹಾನಿಯಾಗಿದ್ದು, ಹೆಂಚುಗಳು ನಾಶವಾಗಿದೆ. ಗೋಡೆ ಬಿರುಕು ಬಿಟ್ಟಿದೆ. ಇಲ್ಲೇ ಸಮೀಪದ ಹಸೈನಾರ್ ಸೌಂಡ್ಸ್‌ನ ಮತ್ತು ರಾಘವ ನಾಯ್ಕ ಎಂಬವರ ಮನೆಯ ಶೀಟ್‌ಗಳು ಹಾರಿ ಹೋಗಿದೆ. ತಾಲೂಕಿನಾದ್ಯಂತ ವ್ಯಾಪಕ ಗುಡುಗು, ಸಿಡಿಲು ಸಹಿತ ಮಳೆ ಆಗಿದ್ದು ಗಾಳಿ ಬೀಸಿದ ಕಾರಣ ಮರಗಳು ಧರಾಶಾಹಿ ಯಾಗಿದೆ, ಅಲ್ಲಲ್ಲಿ ಕೃಷಿ ನಾಶ ಉಂಟಾದ ಬಗ್ಗೆ ವರದಿಯಾಗಿದೆ. ಅಡಿಕೆ, ರಬ್ಬರ್ ಮರಗಳು ಮುರಿದು ಬಿದ್ದು ಕೃಷಿ ನಾಶವಾಗಿದೆ.
Tagged with
lnews
ಮಂಗಳೂರು : ಕಿಡಿಗೇಡಿಗಳು ಬೀಡಿ ಹಚ್ಚಿ ಒಣ ಹುಲ್ಲಿನ ಮೇಲೆ ಎಸೆದ ಪರಿಣಾಮ ಮೈದಾನಕ್ಕೆ ಬೆಂಕಿ ತುಗಲಿರುವ ಘಟನೆ ನಿನ್ನೆ ಸಂಜೆ ಬೈಕಂಪಾಡಿಯಲ್ಲಿ ನಡೆದಿದೆ.
ಬೈಕಂಪಾಡಿ ಎಪಿಎಂಸಿ ಬಳಿ ಇರುವ ಮೈದಾನದಲ್ಲಿ ಎರಡುವಾರದ ಅವಧಿಯಲ್ಲಿ ನಡೆದಿರುವ ಮೂರನೇ ಬೆಂಕಿ ಅವಘಡ ಇದಾಗಿದೆ. ಶೌಚಕ್ಕೆ ಬರುವ ಕಾರ್ಮಿಕರು ಇಲ್ಲವೆ ಕ್ರಿಕೆಟ್ ಆಡಲೆಂದು ಬರುವ ಯುವಕರು ಉದ್ದೇಶ ಪೂರ್ವಕವಾಗಿಯೇ ಈ ಕೃತ್ಯವನ್ನು ನಡೆಸುತ್ತಿದ್ದಾರೆಂದು ಸ್ಥಳೀ ಯರು ತಿಳಿಸಿದ್ದಾರೆ. ತಾವೇ ಬೆಂಕಿ ಹಂಚಿ ಬಳಿಕ ತಾವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುತ್ತಾರೆ. ಈ ಬಗ್ಗೆ ನಿಗಾ ಇರಿಸದೇ ಹೋದರೆ ಮಕ್ಕಳಾಟಿಕೆ ದುರಂತಕ್ಕೆ ಕಾರಣ ಆಗಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
Tagged with
lnews
ವಿಟ್ಲ: ಕ್ಷುಲ್ಲಕ ಕಾರಣಕ್ಕೆ ರೊಚ್ಚಿಗೆದ್ದ ಪ್ರಯಾಣಿಕನೋರ್ವ ಸರ್ಕಾರಿ ಬಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ಸಂಜೆ ವಿಟ್ಲ ಜಂಕ್ಷನ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀ ಸರು ಬಂಧಿಸಿದ್ದಾರೆ.
ಕಾಸರಗೋಡಿನ ಪೆರ್ಲ ನಿವಾಸಿ ಹುಸೈನಾರ್ ಎಂಬಾತನೇ ಬಂಧಿತ ನಾಗಿದ್ದು, ಮಂಗಳೂರಿನ ಉಳ್ಳಾಲ ದರ್ಗಕ್ಕೆ ತೆರಳಿ ವಿಟ್ಲಕ್ಕೆ ಬಂದು ಇಲ್ಲಿಂದ ಕಾಸರಗೋಡಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳಲೆತ್ನಿಸಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಅಗಿದ್ದೇನು?: ವಿಟ್ಲದಿಂದ ತನ್ನ ಮನೆಯಾದ ಕಾಸರಗೋಡಿಗೆ ತೆರಳಲು ಹುಸೈನಾರ್ ಕೆಎಸ್‌ಆರ್‌ಟಿಸಿ ಬಸ್‌ನ್ನು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಬಸ್ಸಿನ ಹಿಂಬದಿಯ ಗ್ಲಾಸಿಗೆ ಹೊಡೆದು ಸದ್ದು ಮಾಡಿದ್ದ. ಇದರಿಂದ ಕೋಪಗೊಂಡ ಬಸ್ ಚಾಲಕ ಬಸ್ಸನ್ನು ನಿಲ್ಲಿಸಿದ ವಿಟ್ಲದ ಕುಳ ನಿವಾಸಿ ಪೂವಪ್ಪ ಗೌಡ ಹುಸೈನಾರ್‌ನನ್ನು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆಯಿತು. ಈ ವೇಳೆ ಒಂದು ಹಂತದಲ್ಲಿ ರೊಚ್ಚಿಗೆದ್ದ ಹುಸೈನಾರ್ ಕರ್ತವ್ಯದಲ್ಲಿದ್ದ ಸರ್ಕಾರಿ ಬಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ. ಈ ವೇಳೆ ವಿಟ್ಲ ಬಸ್ ನಿಲ್ದಾಣದಲ್ಲಿ ಸ್ವಲ್ಪ ಮಟ್ಟಿನ ಉದ್ಧಿಗ್ನತೆ ಉಂಟಾಗಿದ್ದು, ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಹುಸೈನಾರ್‌ನನ್ನು ಸ್ಥಳದಿಂದಲೇ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಸುಳ್ಯ: ಸಿಡಿಲು ಬಡಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕುಕ್ಕುಜಡ್ಕದಲ್ಲಿ ನಡೆದಿದೆ. ಕುಕ್ಕುಜಡ್ಕದ ಎಸ್‌ಸಿ ಕಾಲನಿಯ ಬಾಬು ಎಂಬವರ ಪತ್ನಿ ಗಿರಿಜಾ(೩೮) ಮೃತ ಮಹಿಳೆ. ಗಿರಿಜಾ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಮರಕ್ಕೆ ಬಡಿದ ಸಿಡಿಲು ಇವರ ಮನೆಗೆ ಅಪ್ಪಳಿಸಿದೆ. ಸಿಡಿಲಿನ ಆಘಾತಕ್ಕೆ ಗಿರಿಜಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮನೆಯಲ್ಲಿ ಬಾಬು ಮತ್ತು ಗಿರಿಜಾ ಇದ್ದರು. ಬಾಬು ವರಾಂಡದಲ್ಲಿದ್ದರು. ಗಿರಿಜಾ ಅವರು ಪತಿ ಬಾಬು ಮಕ್ಕಳಾದ ಸೌಮ್ಯ, ಶರತ್‌ರನ್ನು ಅಗಲಿದ್ದಾರೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
Tagged with
cnews,
death
ಕಡಬದಿಂದ ಮರ್ದಲ ಕಡೆಗೆ ಹೋಗುತ್ತಿದ್ದ ಮಾರ್ಷಲ್ ಜೀಪ್ ಮರ್ದಲದ ಕಂಚಿಬೆಟ್ಟು ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪ್‌ನಲ್ಲಿದ್ದ ರೋಹಿ, ತಂಬಿ ಹಾಗೂ ರಿತೇಶ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ತೀವ್ರತೆಗೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೫ ವರ್ಷ ವಯಸ್ಸು. ನಾನು ಕಳೆದ ಎರಡು ವರ್ಷಗಳಿಂದ ಕಂಪೆನಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಕೆಲಸಕ್ಕೆ ಸೇರಿದ ಬಳಿಕ ಅಲ್ಲಿಯೇ ಕೆಲಸ ಮಾಡುವ ನಮ್ಮ ಜಾತಿಯ ಹುಡುಗನ ಪರಿಚಯವಾಯಿತು. ಅವನಿಗೂ ನನ್ನಷ್ಟೇ ಪ್ರಾಯ. ನಾವು ತುಂಬಾ ಸಮಯ ಫ್ರೆಂಡ್ಸ್ ಆಗಿದ್ದೆವು. ಆದರೆ ಒಂದು ದಿನ ಅವನೇ ನನ್ನಲ್ಲಿ ಪ್ರೀತಿ ಮಾಡುವ ವಿಷಯ ತಿಳಿಸಿದ. ಆ ಬಳಿಕ ನಾವು ಪರಸ್ಪರ ಪ್ರೀತಿಸಲು ಆರಂಭಿಸಿದೆವು. ನಾವಿಬ್ಬರೂ ಜತೆಯಲ್ಲಿ ಹಲವಾರು ಬಾರಿ ಸುತ್ತಾಡಿದ್ದೇವೆ. ನಮ್ಮ ಕಂಪೆನಿಯಲ್ಲಿ ನಮ್ಮ ಪ್ರೀತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ನಮ್ಮ ಮನೆಯಲ್ಲಿಯೂ ಈ ವಿಚಾರ ತಿಳಿದು, ಅವನನ್ನು ಮನೆಗೆ ಬಂದು ಮಾತನಾಡಲು ಹೇಳು ಎಂದರು. ನಾನು ಹೇಳಿದ್ದಕ್ಕೆ ಅವನು. ಈಗ ಬೇಡ, ಕೆಲವು ಸಮಯದ ನಂತರ ಬರುತ್ತೇನೆ ಎಂದಿದ್ದಾನೆ. ನಾನು ಆತನನ್ನು ತುಂಬಾ ಇಷ್ಟಪಟ್ಟು ತಪ್ಪು ಮಾಡಿದ್ದೇನೆ. ನಮ್ಮಿಬ್ಬರ ಮಧ್ಯೆ ಕೆಲವು ಬಾರಿ ದೈಹಿಕ ಸಂಬಂಧವೂ ನಡೆದಿದೆ. ನಾನು ಆತನನ್ನು ಮನೆಗೆ ಬನ್ನಿ ಎಂದು ಕರೆದಿದ್ದಕ್ಕೆ ನಾನು ಬರುವುದಿಲ್ಲ, ನಮ್ಮಿಬ್ಬರ ಮದು ವೆಗೆ ಸಂಪ್ರದಾಯದ ಅಡಚಣೆಯಿದೆ.
ನಾನು ಮತ್ತು ನೀನು ಒಂದೇ ಬರಿ ಎಂದು ಹೇಳಿದ್ದಾನೆ. ನಾನು ಆತನ ಮಾತನ್ನು ಕೇಳಿ ಅತ್ತುಬಿಟ್ಟೆ. ನಾವು ಮದುವೆಯಾ ಗಲು ಸಾಧ್ಯವಿಲ್ಲವೇ ಎಂದು ಕೇಳಿದ್ದಕ್ಕೆ ನನಗೂ ಇದು ಮೊದಲು ಗೊತ್ತಿರಲಿಲ್ಲ, ಆದರೆ ಬರಿ ಒಂದೇ ಇದ್ದವರು ಮದುವೆಯಾಗಬಾ ರದು, ನಮಗೆ ಮದುವೆಯಾದರೆ ಸಮಸ್ಯೆಯಿದೆ ಎಂದಿದ್ದಾರೆ. ನನಗೆ ಏನು ಮಾಡಬೇ ಕೆಂದೇ ತೋಚುತ್ತಿಲ್ಲ. ಅವರು ಮತ್ತು ನಾನು ಒಂದೇ ಬರಿ ಆದರೆ ಸಮಸ್ಯೆಯಿ ದೆಯೇ? ನಾನು ಈಗಾಗಲೇ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ಏನು ಮಾಡಲಿ? ನನಗೆ ದಿಕ್ಕೇ ತೋಚುತ್ತಿಲ್ಲ. ಮನೆಯಲ್ಲಿ ಈ ವಿಷಯ ತಿಳಿಸಿದರೆ ನನ್ನನ್ನು ಕೆಟ್ಟದಾಗಿ ನೋಡಬಹುದು. ಹೀಗಾಗಿ ಮನೆಯಲ್ಲಿ ವಿಷಯ ತಿಳಿಸಿಲ್ಲ. ಅವನು ಈಗ ಮುಂಚಿನಷ್ಟು ಮಾತಾಡುತ್ತಿಲ್ಲ. ನಾನು ಏನು ಕೇಳಿದರೂ ರೇಗಾಡುತ್ತಾನೆ. ನಾನೇನು ಮಾಡಲಿ? ನನಗೆ ಸರಿಯಾದ ಸಲಹೆಯನ್ನು ಕೊಡಿ.
ಸಮಸ್ಯೆ: ಇಂತಹ ಸಮಸ್ಯೆ ಕೆಲವೊಂದು ಪ್ರೇಮ ಸಂಬಂಧದಲ್ಲಿ ಕಂಡು ಬರು ತ್ತದೆ. ಪರಸ್ಪರ ಒಂದೇ ಜಾತಿಯ ಪ್ರೇಮಿಗಳು ಜಾಣರಾದರೆ ಮೊದಲೇ ಇಂತಹ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಕೆಲವರು ಈ ಬಗ್ಗೆ ಗಮನ ಕೊಡುವುದು ಮದುವೆಯ ವಿಷಯ ಬಂದಾಗ ಮಾತ್ರ. ಪ್ರೀತಿಸುವಾಗ ಅಡ್ಡ ಬರದ ಸಂಪ್ರದಾಯ ಮದುವೆಯಾಗುವಾಗ ಅಡ್ಡ ಬರುತ್ತದೆ. ಆತ ದೂರವಾಗಲು ಬರಿ ಎಂಬ ಸಂಪ್ರದಾಯ ಮಾತ್ರ ಕಾರಣವೇ? ಅಥವಾ ನೆಪವೇ? ಎಂದು ತಿಳಿದುಕೊಳ್ಳಿ. ಯಾಕೆಂದರೆ ಕಾನೂನು ಪ್ರಕಾರ ಒಂದೇ ಬರಿ ಹೊಂದಿರುವವರು ವಿವಾಹವಾಗುವುದರಿಂದ ಏನೂ ಸಮ ಸ್ಯೆಯಿಲ್ಲ. ಆದರೆ ಒಂದೇ ಬರಿಯಾದರೆ ಅಣ್ಣ-ತಂಗಿ ಸಂಬಂಧ ಬರುತ್ತದೆ, ಇದರಿಂದ ಮುಂದೆ ಹುಟ್ಟಲಿರುವ ಮಕ್ಕಳು ಅಂಗ ವೈಕಲ್ಯತೆಯನ್ನು ಹೊಂದುತ್ತಾರೆ ಎನ್ನುವುದೇ ಸಮಸ್ಯೆ. ಇದು ಅನೇಕ ಬಾರಿ ದೃಢ ಪಟ್ಟಿದೆ ಕೂಡಾ. ನಿಮ್ಮ ವಿಷಯದಲ್ಲಿ ನೀವಿ ಬ್ಬರೂ ಪ್ರೀತಿ-ಪ್ರೇಮವೆಂದು ಈಗಾಗಲೇ ಬಹಳಷ್ಟು ಮುಂದು ವರಿದಿದ್ದೀರಿ. ನಿಮ್ಮ ನಡುವೆ ಲೈಂಗಿಕ ಸಂಬಂಧವೂ ನಡೆದಿದೆ.
ನಿಮಗೆ ನೀವು ಒಂದೇ ಬರಿ ಎನ್ನುವುದು ಮೊದಲೇ ತಿಳಿದಿರಲಿಲ್ಲವೇ? ಇಂತಹ ಸಮಯದಲ್ಲಿ ಮನೆಯವರಿಗೆ ನೇರ ವಾಗಿ ವಿಷಯವನ್ನು ತಿಳಿಸಿ, ಅವರ ಜತೆ ಚರ್ಚಿಸುವುದು ಒಳ್ಳೆ ಯದು. ಬರಿಯ ಮೂಲ ಹುಡುಕಿದರೆ ಸಂಬಂಧ ತಿಳಿದು ಬರುತ್ತದೆ. ಎಷ್ಟು ತಲೆಮಾರುಗಳ ಹಿಂದಿನ ಸಂಬಂಧ ಎಂದು ತಿಳಿಯಲು ಪ್ರಯತ್ನಿಸಿ ಹತ್ತಕ್ಕಿಂತ ಹೆಚ್ಚು ತಲೆಮಾರು ಕಳೆದಿ ದ್ದರೆ ಬರಿ ಸಮಸ್ಯೆಯಾಗಲಾರದು. ಕೂಡಲೇ ಮನೆಯವರಿಗೆ ಇದ್ದ ವಿಷಯ ತಿಳಿಸಿಬಿಡಿ. ಅವರು ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸಬಹುದು. ಪ್ರೀತಿ ಮಾಡಿದಾತನನ್ನು ಕಾರಣ ಕೊಡದೆ ದೂರವಾಗಲು ಬಿಡಬೇಡಿ. ಆತನೇ ನಿಮ್ಮನ್ನು ಮುಂದೆ ಬಂದು ಪ್ರೀತಿಸಿದವನು ಎಂದು ನೆನಪಿಟ್ಟುಕೊಳ್ಳಿ. ಆತ ಮಾತು ಕಡಿಮೆ ಮಾಡಿದ್ದಕ್ಕೆ ಸಕಾರಣ ತಿಳಿದುಕೊಳ್ಳಿ.
Tagged with
gupta
ಎ. ೫ರ ಚಾವಡಿ ವಿಭಾಗದಲ್ಲಿ ಪುತ್ತೂರಿನ ಲೋಕನಾಥರು ಲೋಕಸಭೆ ಸಂಸದ, ಸಚಿವರಾಗಿದ್ದ ಪೂಜಾರಿಯವರ ಬಗ್ಗೆ ಎರಡನೇ ಪತ್ರ ಬರೆದಿದ್ದಾರೆ. ಈ ಸಲ ತಲೆಖರ್ಚು ಮಾಡುವುದಕ್ಕೆ ಪ್ರಾರಂಭಿಸಿದ್ದು ಸಂತಸದ ವಿಚಾರ - ತಲೆ ಕೆರೆದುಕೊಳ್ಳಲಿಲ್ಲ!.
ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನಮ್ಮ ದೇಶದ ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳಲ್ಲಿ ನಮ್ಮ ಜಿಲ್ಲೆಯವರೇ ಆದ ಜನಾದನ ಪೂಜಾರಿಯವರು ಸಚಿವರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ್ದು ಸತ್ಯವಾದ ವಿಚಾರ. ಅವರ ಅವಧಿ ಯಲ್ಲಿ ಒಟ್ಟು ಕಾರ್ಯಗಳು ಯಾವುದು? ಸಚಿವ, ಸಂಸದ, ರಾಜ್ಯಸಭಾಸದಸ್ಯ ರಾಗಿ ಸಚಿವ ಸ್ಥಾನದ ಇತಿಮಿತಿಯೊಳಗೆ ಅವರು ಮಾಡಿದ ಕಾರ್ಯದ ಸಂಪೂರ್ಣ ಚಿತ್ರಣದ ಶೋಧನೆಯನ್ನು ಲೋಕನಾಥರು ಮಾಡಬೇಕು. ಅದನ್ನು ಮಾಡದೆ ವಾದ ಮಾಡಲು ಮನ ಮಾಡಿರುವುದು ಇವರ ಮೆದುಳನ್ನು ಉಪಯೋಗಿಸಲಿ ಲ್ಲವೆಂಬುದು ಸ್ಪಷ್ಟ. ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ನನಗೆ ಮೆದುಳೇ ಇಲ್ಲ ವೆಂಬ ಅಭಿಪ್ರಾಯ ಲೋಕನಾಥರದ್ದು.
ಈಗ ಜನಪ್ರತಿನಿಧಿಯಾದವರು ಜನಸೇವೆ ಮಾಡಬೇಕಾದ್ದು ಅವರ ಕರ್ತವ್ಯ. ನೇರವಾಗಿ ಲೋಕನಾಥರೇ ಪೂಜಾರಿಯವರಿಗೆ ಪತ್ರ ಬರೆದು ನೀವು ಸಚಿವ ರಾಗಿ, ಸಂಸದರಾಗಿ ಒಟ್ಟು ನಿಮ್ಮ ಕೆಲಸ, ಸಾಧನೆ ಏನು? ಇಸವಿ ಸಮೇತ, ಯಾವ ಶಿಫಾರಸ್ಸು ಮಾಡಿದ್ದೀರಿ. ಯಾವ ಕಂಪೆನಿ ಸ್ಥಾಪನೆಗೆ ಕ್ರಮ, ಶ್ರಮ ಅಥವಾ ಅಭಿವೃದ್ಧಿಗೆ ನೀವು ಕೈಗೊಂಡ ಕಾರ್ಯಗಳು ಯಾವುದು ಇವನ್ನು ಉಲ್ಲೇಖಿಸಿ ಮಾಹಿತಿ ಕೊಡಿ ಅಂತ ಕೇಳಿ. ಆಗ ನಿಮಗೆ ಸವಿವರ ಮಾಹಿತಿ ಸಿಗ ಬಹುದು. ಅನಂತರ ಪೂಜಾರಿಯವರು ಏನೂ ಮಾಡಿಲ್ಲ. ಮಲ್ಯರು, ಮೊಲಿ ಯವರು, ಇನ್ನಿತರರು ಮಾಡಿದ್ದನ್ನು ತಾನು ಅಥವಾ ನೀವು ಅಂದುಕೊಂ ಡಂತೆ ಅವರ ಹೊಗಳು ಭಟರು ಪರಾಕ್ ಹೇಳುತ್ತಿದ್ದಾರೆಂದು ಪ್ರಚಾರ ಅಥವಾ ಪತ್ರ ಬರೆಯಿರಿ. ಆಗ ನಿಮ್ಮ ವಾದಕ್ಕೆ ಗಟ್ಟಿತನ ಬರುತ್ತದೆ. ವಾದದಲ್ಲಿ ಫಲ ಕಡಿಮೆ ಶೋಧಿಸಿ ತಿಳಿಯಿರಿ. ಪೂಜಾರಿ ಏನು ಮಾಡಿದ್ದಾರೆ ಎಂದು ಶೋಧನೆ ಮಾಡಿ, ನಿಮ್ಮ ಶೋಧನೆಯ ವ್ಯಾಪ್ತಿಯೊಳಗೆ ಪೂಜಾರಿಯವರು ಮಾಡಿದ್ದು ಏನೂ ಇಲ್ಲ ಅಂತ ನಿಮಗನಿಸಿದರೆ ನನಗೆ ಮೆದುಳೇ ಇಲ್ಲ ಅಂತ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ನಾನು ಪೂಜಾರಿಯವರ ಬಗ್ಗೆ ಇಷ್ಟು ಬರೆ ದದ್ದು ವ್ಯರ್ಥ ಅಂತಲೇ ಒಪ್ಪಿಕೊಳ್ಳುತ್ತೇನೆ. ನೀವು ಶೋಧನೆ ಮಾಡಿ ಆಗ ಪೂಜಾರಿ ಏನು ಎಂಬುವುದು ತಿಳಿಯುತ್ತದೆ. ಶೋಧನೆಯಿಂದ ಪೂಜಾರಿ ಏನೂ ಅಲ್ಲ ಅಂತ ನೀವು ಸಾಬೀತುಪಡಿಸಿದರೆ ಆಗ ನಾನು ನನ್ನ ಬಗ್ಗೆ ನಾಚಿಕೆ ಪಟ್ಟುಕೊಳ್ಳುತ್ತೇನೆ.
ನಾಚಿಕೆಯಾಗುವುದಿಲ್ಲವೇ? ಎಂಬ ಪ್ರಶ್ನೆ ಎತ್ತಿದ್ದೀರಿ. ನಾನು ಜನಾದನ ಪೂಜಾರಿಯವರ ಹೊಗಳು ಭಟ ಅಲ್ಲ. ಬೇಕಾದರೆ ನೀವು ಜನಾರ್ದನ ಪೂಜಾ ರಿಯವರಲ್ಲಿಯೇ ಕೇಳಿ. ಹಾಗೆ ನೋಡಿದರೆ ಈ ದೇಶದ ಪ್ರಾಮಾಣಿಕ ಪ್ರಧಾನ ಮಂತ್ರಿಯಾಗಿದ್ದ ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರೇ ಒಂದು ಸಮಾ ರಂಭದಲ್ಲಿ ಪೂಜಾರಿಯವರು ಪ್ರಾಮಾಣಿಕರು, ಶ್ರಮ ಪಡುವವರು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಶ್ರೇಷ್ಠ ಮನುಷ್ಯ ಅಂತ ಹೇಳಿದ್ದು ನಿಮಗೂ ಗೊತ್ತಿ ರಬಹುದು. ಒಳ್ಳೆಯ ಕಾರ್ಯ ಶ್ಲಾಘಿಸಿದರೆ ನಿಮಗೆ ಅದು ನಾನೊಬ್ಬ ಹೊಗಳು ಭಟ ಅಂತ ಕಾಣುತ್ತದೆ.
ಓರ್ವ ಪ್ರಾಮಾಣಿಕ ವ್ಯಕ್ತಿಯ ಬಗ್ಗೆ ಪಕ್ಷ - ಜಾತಿ ಮತ ನೋಡದೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಯಾಕೆ ನಾಚಿಕೆ ಪಡಬೇಕು. ನಾಚಿಕೆ ಪಡು ವುದು ಯಾವಾಗ. ಇನ್ನೊಬ್ಬನ ಹೆಂಡತಿ ಮೇಲೆ ಕೈ ಮಾಡಿದರೆ, ತುಂಬಿದ ಸಭೆಯಲ್ಲಿ ಅಸಹ್ಯತನ ತೋರಿದರೆ, ದೇವಾಲಯ ಪವಿತ್ರ ಸ್ಥಳಗಳಲ್ಲಿ ನೋಡ ಬಾರದ್ದನ್ನು, ಮಾಡಬಾರದ್ದನ್ನು ಮಾಡಿದರೆ. ಅಥವಾ ಮಾಡುವವರ ಬಗ್ಗೆಯಾ ಗಲಿ, ಬಡಜನರ ದುಡ್ಡನ್ನು ಆಸ್ತಿಪಾಸ್ತಿ ನುಂಗಿ, ಭೂ ಕಬಳಿಕೆ ಮಾಡಿ ಜೈಲು ಸೇರಿದವರ ಬಗ್ಗೆ ಮುಂತಾದವರ ಬಗ್ಗೆ ಹೊಗಳಿಕೆಯ ಬರಹ ಬರೆದರೆ ನಾಚಿಕೆ ಪಡಬೇಕು. ಪೂಜಾರಿ ಇಂಥದ್ದೇನೂ ಮಾಡಿಲ್ಲ. ಅವರ ಬಗ್ಗೆ ಬರೆಯುವುದಕ್ಕೆ ನಾಚಿಕೆ ಅಥವಾ ಅವರನ್ನು ಹೊಗಳಲು ನಾಚಿಕೆ ಯಾಕೆ ಪಡಬೇಕು.
ಸಾಲದ ದುರುಪಯೋಗ ಹಾಗೆ ಆಗಿದೆ. ಸಾಲ ಪಡಕೊಂಡವರು ಉದ್ದೇಶಿತ ವಿಚಾರಕ್ಕೆ ಆ ದುಡ್ಡನ್ನು ಬಳಸಿಲ್ಲ. ಅನುತ್ಪಾದಕ ಕ್ಷೇತ್ರಕ್ಕೆ ಬಳಕೆಯಾದ್ದರಿಂದ ಸಾಲ ಗಾರರಾಗಿ ಸತ್ತು ಹೋದದ್ದು.
ಬ್ಯಾಂಕ್ ಶ್ರೀಮಂತರಿಗೆ ಮಾತ್ರವೆಂದಿದ್ದ ಕಾಲ ಅದು. ಬಡ ಜನರಿಗೆ ಬ್ಯಾಂಕಿನ ಬಾಗಿಲು ತೆರೆದದ್ದು ಸಾಲ ಮೇಳದ ಮೂಲಕ. ಸಾಲ ಕೊಡುವಾಗ ಬ್ಯಾಂಕಿನ ಕ್ರಮ ಅನುಸರಿಸಿಯೇ ನೀಡಿದ್ದರೂ ತೆಗೆದುಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಿ ಉನ್ನತ ಸ್ಥಿತಿಗೆ ತಲುಪಿದ ನೈಜ ಚಿತ್ರಣಗಳಿವೆ. ಕೆಲವರು ತಲೆ ಖರ್ಚು ಮಾಡಿಲ್ಲ. ಕುಡಿದು ಜೂಜಾಟ, ವೇಶ್ಯಾ ಸಂಗ ಮಾಡಿ ಇನ್ನೇನೋ ಮಾಡಿ ಸಾಲದಲ್ಲಿ ಮುಳುಗಿದರು. ಇದಕ್ಕೆ ಅವರೇ ಹೊಣೆ ಅಲ್ಲದೆ ಪೂಜಾರಿ ಕಾರಣ ಅಂತ ನೀವು ಹೇಳುವುದಕ್ಕೆ ಅರ್ಥ ಇಲ್ಲ. ಯಾರು ತಲೆ ಖರ್ಚು ಮಾಡಿ ದುಡ್ಡನ್ನು ಉತ್ಪಾದಕ ಕ್ಷೇತ್ರಕ್ಕೆ ವಿನಿ ಯೋಗಿಸಿದ್ದಾರೋ ಅಂಥವರು ಇಂದಿಗೂ ಒಳ್ಳೆಯ ಸ್ಥಿತಿಯಲ್ಲಿ ಇದ್ದಾರೆ.
ಕೋಳಿ ಮಾಂಸ, ಮದ್ಯ, ದುಡ್ಡು ವಿತರಿಸಿದ್ದರಿಂದ ನನಗೆ ನಷ್ಟ ಆಗಿದೆಯೇ ಅಂತ ಪ್ರಶ್ನೆ ಎತ್ತಿದ್ದೀರಿ. ಸ್ವಸ್ಥ ಸಮಾಜ ಕಟ್ಟಬೇಕಲ್ಲದೆ, ಕುಡುಕ ಸಮಾಜ ಕಟ್ಟುವು ದರಿಂದ ಅಥವಾ ದುರಾಭ್ಯಾಸಕ್ಕೆ ಜನರನ್ನು ದೂಡುವ ಪ್ರಕ್ರಿಯೆ ಅಥವಾ ದುಡ್ಡು, ಮಾಂಸ, ಮದ್ಯ ಇದರ ಆಮಿಷ ತೋರಿಸಿ ಮತ ಪಡೆಯುವ ಪ್ರಕ್ರಿಯೆ ಒಟ್ಟು ವ್ಯವಸ್ಥೆಗೆ ಮಾರಕ. ಅದರಿಂದ ನಷ್ಟವಲ್ಲದೆ ಲಾಭ ಇಲ್ಲ. ಪರಿಮಳ ಬರುವ ಮಲ್ಲಿಗೆ ಹಂಚುವಿಕೆಯಿಂದ ಸಮಾಜಕ್ಕೇನೂ ನಷ್ಟ ಇಲ್ಲ. ಮಂಗಳೂರಿಗೆ, ಸಂಸದರಾಗಿ ಸಚಿವರಾಗಿ ಒಟ್ಟು ಅವರ ಕೆಲಸ ಏನು? ಅಥವಾ ಸಚಿವ, ಸಂಸದ, ರಾಜ್ಯ ಸಭಾ ಸದಸ್ಯರಾಗಿ ಅವರು ಮಾಡಿದ ಎಲ್ಲಾ ಕಾರ್ಯಗಳ ಮಾಹಿತಿ ಕೋರಿ ನಿಮ್ಮ ಸಂಪೂರ್ಣ ವಿಳಾಸ ಬರೆದು ಪತ್ರ ಬರೆಯಿರಿ. ನಿಮಗೆ ಉತ್ತರ ಸಿಗಬಹುದು. ಯಾರು ಯಾರಲ್ಲಿ ಕೇಳಿದರೆ ಅಥವಾ ನನ್ನಂಥ ಮೆದುಳು ಇಲ್ಲದವರಲ್ಲಿ ಕೇಳಿ ಪ್ರಯೋಜನವಿಲ್ಲ. ನೀವು ಮೆದುಳು ಇರುವವರಾದುದರಿಂದ ನೇರವಾಗಿ ಕೇಳಿ.
ಅಶೋಕ್ ಹಲಾಯಿ, ಬಂಟ್ವಾಳ
Tagged with
chavadi
ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂ ದರ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಭದ್ರತೆಗೆ ಸಂಬಂಧಿಸಿ ಕಾರ್ಯಕ್ರಮ ನಡೆ ಯುತ್ತಿತ್ತು. ಇದರಲ್ಲಿ ಭಾರತದ ರಕ್ಷಣಾ ವಿಭಾ ಗವನ್ನು ಇತರೆ ದೇಶಗಳ ರಕ್ಷಣಾ ವಿಭಾಗಗ ಳಿಗೆ ಹೋಲಿಸಿ ಈ ವಾಹಿನಿ ಉತ್ತಮವಾ ಗಿಯೇ ಕಾರ್ಯಕ್ರಮ ನೀಡಿತ್ತು. ಆದರೆ ಮರು ದಿನ ಫೇಸ್‌ಬುಕ್‌ನಲ್ಲಿ ಈ ವಾಹಿನಿಯ ವಿರು ದ್ಧವೇ ಕೆಲವರು ಕಿಡಿಕಾರಿದ್ದರು. ಇದನ್ನು ಗಮ ನಿಸಿದಾಗ ನನಗೆ ಒಂದಂತೂ ಸ್ಪಷ್ಟವಾಯಿತು. ವೈಫಲ್ಯಗಳನ್ನು ಬಿಚ್ಚಿಟ್ಟರೆ ಸಾಮಾನ್ಯ ನಾಗ ರಿಕನಿಗೂ ಕೋಪ ಬರುತ್ತದೆ ಎನ್ನುವುದು. ಈ ವಾಹಿನಿಯ ಕಾರ್ಯಕ್ರಮವನ್ನು ನಾನೂ ವೀಕ್ಷಿಸಿದ್ದೇನೆ. ಇಲ್ಲಿ ಪ್ರಸಾರಗೊಂಡಿರುವ ಇಂಚಿಂಚು ವಿಚಾರವೂ ನಮ್ಮ ದೇಶವನ್ನು ಬೆಚ್ಚಿ ಬೀಳಿಸುವಂಥದ್ದು. ಈ ಬಗ್ಗೆ ಫೇಸ್‌ಬುಕ್ ನಂತಹ ಸಾಮಾಜಿಕ ತಾಣದಲ್ಲಿ ಜಾಗೃತಿ ಮೂಡಿಸುವ ಬದಲು ಕೆಲ ವಿಕೃತ ಮನಸ್ಕರು ಅಲ್ಲೂ ಮಾಧ್ಯಮದ ದೂಷಣೆಗಿಳಿದಿದ್ದಾರೆ. ಬಹುಶಃ ಇದರಿಂದಲೇ ಏನೋ ನಮ್ಮ ದೇಶ ದಲ್ಲಿ ರಾಜಕಾರಣಿಗಳ ‘ಕೈ ಮೇಲಾಗಿರುವುದು.
ಮಾಧ್ಯಮವೊಂದು ಎಚ್ಚರಿಸುವ ಕೆಲಸ ಮಾಡಿದಾಗ ಈ ಬಗ್ಗೆ ದೇಶದ ನಾಗರಿಕರಾಗಿ ನಾವು ಯೋಚಿಸಬೇಕು. ಪ್ರತೀ ವರ್ಷ ಕೋಟ್ಯ ಂತರ ರುಪಾಯಿ ದೇಶದ ರಕ್ಷಣೆಗೆಂದೇ ಎತ್ತಿ ಡುವ ಸರ್ಕಾರ ಈ ಹಣವನ್ನು ಏನು ಮಾಡು ತ್ತಿದೆ ಎಂದು ಪ್ರಶ್ನಿಸುವ ಬದಲು ಮಾಧ್ಯ ಮದ ಕಾರ್ಯಕ್ರಮಗಳನ್ನೇ ನಾವಿಂದು ಪ್ರಶ್ನಿ ಸುತ್ತಿದ್ದೇವೆ. ಹಾಗಂತ ಮಾಧ್ಯಮಗಳು ತಪ್ಪು ಮಾಡುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಮೊನ್ನೆಯ ಕಾರ್ಯಕ್ರಮ ದೇಶದ ಜನತೆಯನ್ನು ಎಚ್ಚರಿಸುವ ದೃಷ್ಟಿಯಲ್ಲಿ ಉತ್ತಮ ಕಾರ್ಯಕ್ರಮ ವೆನ್ನಬಹುದು. ಒಂದೆರೆಡು ಕಡೆಗಳಲ್ಲಿ ವಾಹಿನಿ ಸ್ವಲ್ಪ ಅತಿರೇಖ ಎನ್ನುವಂತಹ ಪದಗಳನ್ನು ಬಳ ಸಿದ್ದನ್ನು ಬಿಟ್ಟರೆ ಭಾರತಕ್ಕೆ ಅವಮಾನವಾಗು ವಂತಹ ವಿಚಾರಗಳು ಅಲ್ಲಿರಲಿಲ್ಲ. ಅಲ್ಲದೇ ಕೆಲವರು ಈ ಬಗ್ಗೆ ಚರ್ಚಿಸುವ ಬದಲು ನಮ್ಮಿಂದ ಮಾಧ್ಯಮವನ್ನೇ ‘ಚಿತ್ರಾನ್ನ ಮಾಡಲು ಸಾಧ್ಯವಿದೆ ಎನ್ನುವ ಮಾತನ್ನು ಈ ತಾಣದಲ್ಲಿ ದಾಖಲಿಸಿ ದ್ದರು.
ನಮಗೆ ದೇಶದಲ್ಲಿ ನಡೆಯುತ್ತಿರುವ ರಾಜ ಕೀಯ ಸಂಘರ್ಷವನ್ನೇ ನಿಲ್ಲಿಸಲು ಸಾಧ್ಯವಾ ಗಿಲ್ಲ ಎಂದ ಮೇಲೆ ಮುಂದೆ ವಿದೇಶಿಯರು ದಾಳಿ ನಡೆಸಿದರೆ ನಮ್ಮಿಂದ ತಡೆಯಲು ಸಾಧ್ಯವೇ? ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಕೆಲ ಕಾರ್ಯ ಕ್ರಮಗಳು ಅತಿಯಾಗುತ್ತಿದೆ ಎನ್ನುವುದೇನೋ ಸತ್ಯ. ಆದರೆ ಎಲ್ಲವನ್ನೂ ಒಂದೇ ದೃಷ್ಟಿಕೋನ ದಲ್ಲಿ ನೋಡುವುದನ್ನು ಬಿಡಬೇಕಷ್ಟೇ. ಅಷ್ಟಕ್ಕೂ ಮೊನ್ನೆ ಸುದ್ದಿವಾಹಿನಿ ಪ್ರಸಾರ ಮಾಡಿದ ಕಾರ್ಯ ಕ್ರಮ ಅವರ ಖಾಸಗಿ ಮೂಲಗಳಿಂದ ಬಹಿರಂ ಗಗೊಂಡದ್ದಲ್ಲ. ಬದಲಾಗಿ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯ ಮೂಲವೊಂದು ಬಿಚ್ಚಿಟ್ಟ ಸತ್ಯ!
ಇಂದಿಗೂ ಚೀನಾ ನಮ್ಮ ದೇಶದ ಮೇಲೆ ಒಂದು ರೀತಿಯಲ್ಲಿ ಯುದ್ಧ ನಡೆಸುತ್ತಿದೆ. ಚೀನಾದ ಎಲ್ಲಾ ವಸ್ತುಗಳು ಸದ್ದಿಲ್ಲದೆ ನಮ್ಮ ಕೈಗಳಲ್ಲಿ ರಾರಾಜಿಸುತ್ತಿದೆ. ವಿದೇಶಿಗರ ವಸ್ತುಗ ಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಅಷ್ಟೇ ಯಾಕೆ ಈ ಚೀನಾ ನಿರ್ಮಿತ ಮೊಬೈಲ್ ಬ್ಯಾಟರಿ ಸ್ಫೋಟಿಸಿ ಎಷ್ಟು ಜನ ಸತ್ತಿಲ್ಲ? ಇದೂ ಒಂದು ರೀತಿಯಲ್ಲಿ ಭಾರತದ ಮೇಲೆ ಚೀನಾ ಸಾರಿದ ಯುದ್ಧವೇ ಅಲ್ಲವೇ?
ಚೀನಾ ಈ ವಸ್ತುಗಳನ್ನು ತನ್ನ ದೇಶದಲ್ಲಿ ಅಧಿಕೃತವಾಗಿ ಮಾರಾಟ ಮಾಡುವುದಿಲ್ಲ ಎನ್ನು ವುದು ನೆನಪಿರಲಿ! ಆದರೆ ನಮಗೆ ಇದೆಲ್ಲಾ ಅರ್ಥವಾಗಬೇಕಲ್ಲ. ನಮಗೆ ದೂಷಿಸುವುದು ಗೊತ್ತೇ ವಿನಃ ಚಿಂತಿಸುವುದು ಗೊತ್ತಿಲ್ಲ. ಒಂದು ವೇಳೆ ಪ್ರತಿಯೊಬ್ಬ ಭಾರತೀಯನೂ ಚಿಂತಿಸಿ ದ್ದರೆ ೨ಜಿ ಹಗರಣ, ಗಣಿ ಹಗರಣ, ಅಷ್ಟೇ ಯಾಕೆ ಒಂದೇ ಕುಟುಂಬಗಳ ಕೈಯಲ್ಲಿ ಈ ದೇಶದ, ರಾಜ್ಯದ ಆಡಳಿತವನ್ನು ನಾವು ಕೊಡು ತ್ತಿರಲಿಲ್ಲ. ಮಾಧ್ಯಮಗಳು ಸತ್ಯ ವಿಚಾರ ಬಿಚ್ಚಿ ಟ್ಟ್ಟಾಗ ಅದನ್ನು ವಿರೋಧಿಸಿ ಬುದ್ದಿವಂತರಾ ಗುವ ಕೆಲವರು ಇದನ್ನೇ ರಾಷ್ಟ್ರ ರಕ್ಷಣೆಯ ಜಾಗೃತಿ ಎಂದು ಯಾಕೆ ಅಂದುಕೊಳ್ಳಬಾರದು?
ಮೊನ್ನೆ ಶಾಸಕರ ಸೆಕ್ಸ್ ವೀಕ್ಷಣೆ ಹಗರಣ ವನ್ನೂ ಮಾಧ್ಯಮಗಳು ಬಯಲಿಗೆ ತಂದಾಗ ಮಾಧ್ಯಮವನ್ನೇ ದೂಷಿಸಿದವರು ಹೆಚ್ಚಾಗಿದ್ದರು. ಇಲ್ಲಿ ಕೆಲವೊಂದು ಮಾಧ್ಯಮಗಳು ಎಡವಿದೆ ಎನ್ನಬಹುದು. ಆದರೆ ಮೊನ್ನೆಯ ಕಾರ್ಯಕ್ರ ಮವನ್ನು ದೂಷಿಸಿ ಫೇಸ್‌ಬುಕ್ ಸಾಮಾಜಿಕ ತಾಣದಲ್ಲಿ ಹೆಸರು ಗಳಿಸುವ ಅಗತ್ಯತೆ ಏನಿತ್ತು? ಯಾವುದೇ ಫಲಾಪೇಕ್ಷೆಯಿಲ್ಲದೆ ಅಣ್ಣಾ ಹಜಾರೆ ನಡೆಸಿದ ಸತ್ಯಾಗ್ರಹವನ್ನೇ ಟಿವಿಯಲ್ಲಿ ಕಂಡು ‘ಅಜ್ಜೆರೆಗ್ ಉಂದು ಪೂರಾ ಬೋಡಿತ್ತ್ಂಡಾ?’ ಎಂದು ಉದ್ಗರಿಸಿದ ನಮ್ಮ ಸಮಾಜ, ಮಾಧ್ಯಮ ವರದಿಗೆ ಇನ್ನು ಹೇಗೆ ತಾನೇ ಸ್ಪಂದಿಸಲು ಸಾಧ್ಯ?
ಸರ್ಕಾರಿ ಶಾಲೆ ನಕ್ಸಲರನ್ನು ಸೃಷ್ಟಿಸುತ್ತಿದೆ ಎಂಬ ರವಿಶಂಕರ್ ಗುರೂಜಿಯವರ ಮಾತು ಫೇಸ್‌ಬುಕ್‌ನಲ್ಲಿ ಟೀಕೆಗೆ ಒಳಪಡಲಿಲ್ಲ. ಅಷ್ಟೇ ಯಾಕೆ ಈ ಬಗ್ಗೆ ಚರ್ಚೆಯೂ ನಡೆಯಲಿಲ್ಲ. ಕಾರಣ ಇವರೊಬ್ಬ ಧಾರ್ಮಿಕ ನಾಯಕ ಎಂಬ ಹಣೆಪಟ್ಟಿ ಕಟ್ಟಿಕೊಂಡವರಲ್ಲವೇ? ಈ ಕಾರಣದಿಂದ ಫೇಸ್‌ಬುಕ್‌ನಲ್ಲಿ ಇವರ ಉಸಾ ಬರಿಗೆ ಯಾರೊ ಬ್ಬರೂ ಕೈ ಹಾಕಿಲ್ಲ. ಬಹುಶಃ ಇದೇ ಇರಬೇಕು ವಿಪರ್ಯಾಸ.
ನಿತ್ಯಾನಂದರಂತಹ ಸ್ವಾಮೀಜಿಗಳು ಏನೇ ತಪ್ಪು ಮಾಡಿ ಸಿಕ್ಕಿಬಿದ್ದರೂ ಮತ್ತೆ ಅವರ ಪಾದಕ್ಕೆರಗುವ ಇಲ್ಲಿ ಬಿಚ್ಚಿಡುವ ಸತ್ಯಕ್ಕೆ, ಪತ್ತೆ ಹಚ್ಚುವ ವೈಫಲ್ಯಗಳಿಗೆ ಬೆಲೆ ಎಲ್ಲಿರುತ್ತದೆ? ನಮ್ಮನ್ನು ನಾವು ತಿದ್ದಿಕೊಳ್ಳುವ ಬದಲು ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಅನಿಷ್ಟ ಗಳನ್ನು ಬೆಂಬಲಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರೆಯಲಿ!
ಧ್ವನಿ, ಮಂಗಳೂರು
Tagged with
bahiranga
ಇಂಥ ನೀಚ, ನಾಚಿಕೆಗೆಟ್ಟ ಸರಕಾರವನ್ನು ನಾವೆಂದೂ ಕಂಡಿ ರಲಿಕ್ಕಿಲ್ಲ. ಉಡುಪಿಯ ಮಲ್ಪೆ ಬೀಚ್‌ನಲ್ಲಿ ಸರಕಾರಿ ಕೃಪಾಪೋ ಷಿತ ರೇವ್‌ಪಾರ್ಟಿ ನಡೆಸಿದ್ದೂ ಅಲ್ಲದೆ, ಇದೀಗ ತನಿಖೆಯ ಹೆಸ ರಿನಲ್ಲಿ ಜನರನ್ನು ಮೂರ್ಖರನ್ನಾ ಗಿಸಲು ಹೊರಟಿದೆ. ಖುದ್ದು ಉಡುಪಿ ಜಿಲ್ಲಾಧಿಕಾರಿ, ಶಾಸಕರ ಸಮೇತ ಜನಪ್ರತಿನಿಧಿಗಳು ಅರೆ ಬೆತ್ತಲೆ ವಿದೇಶಿಯರ ಜೊತೆ ಮೋಜು ಮಾಡಿ ದ್ದಕ್ಕೆ ಮಾಧ್ಯಮಗಳ ಬಳಿ ಸಾಕ್ಷ್ಯಾಧಾರವಿದೆ. ವೇದಿಕೆಯ ಪಕ್ಕದಲ್ಲಿ ಬಹಿರಂಗ ಕಾಮ ಕೇಳಿ ನಡೆಸಿದ್ದಕ್ಕೆ ಪುರಾವೆಯೂ ಇದೆ. ಆದರೂ ಜಿಲ್ಲಾಧಿಕಾರಿ ರೇಜು ಅವರು, ‘ಹಾಗೇನೂ ನಡೆದಿಲ್ಲ. ಎಲ್ಲವೂ ಸಭ್ಯವಾ ಗಿಯೇ ನಡೆದಿದೆ’ ಎಂದಿರುವುದು ದುರ ದೃಷ್ಟಕರ. ಬಹುಶ: ರೇವ್‌ಪಾರ್ಟಿಯಲ್ಲಿ ಅವರು ಹಾಗೂ ಅವರ ಮನೆಮಂದಿಯೂ ಕುಣಿದು ಕುಪ್ಪಳಿಸಿರಬಹುದು. ಅದೇನೇ ಆಗಲಿ, ಸಂಸ್ಕೃತಿ ಎಂದು ಬೊಬ್ಬಿರಿಯುವ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಪಕ್ಷದ ನೇತಾರರು ಎಲ್ಲವನ್ನೂ ನೋಡಿಯೂ ಕಣ್ಮುಚ್ಚಿಕೊಂಡಿರು ವುದು ಮಾತ್ರ ಸರಿಯೆಂದು ಒಪ್ಪು ವಂತಿಲ್ಲ.
ರೇವ್ ಪಾರ್ಟಿ ಹೆಸರಿನಲ್ಲಿ ಸಂಸ್ಕೃತಿಯ ಅಧ:ಪತನವಾಗು ವಾಗ ಪ್ರತಿಭಟಿಸದ ಇವರು ತನಿ ಖೆಯಿಂದ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ಜನರಲ್ಲಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಸುನಿಲ್‌ಕು ಮಾರ್ ಹೀನಾಯವಾಗಿ ಸೋಲುವಂ ತಾಯಿತು. ಆಗಿದ್ದು ಆಗಿಹೋಯಿತು. ಇನ್ನು ಮುಂದಾದರೂ ಸಚ್ಚಾರಿತ್ರ್ಯವನ್ನು ಬೆಳೆಸಿಕೊಳ್ಳಲು ಬಿಜೆಪಿ, ಸಂಘ ಪರಿವಾ ರದ ಮುಖಂಡರು ಪ್ರಯತ್ನಿಸುವುದೊ ಳಿತು. ಹರೀಶ್, ಮಲ್ಪೆ
Tagged with
nimminda
ಮಂಗಳೂರು ಹಾಗೂ ಸುತ್ತಮುತ್ತಲಿನ ಕೆಲವೊಂದು ಗೃಹೋಪ ಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ಕಳಪೆ ಗುಣಮಟ್ಟದ ವಸ್ತುಗ ಳನ್ನು ಮಾರಾಟ ಮಾಡುತ್ತಾರೆ. ಹೆಸರಾಂತ ಕಂಪೆನಿಯ ವಸ್ತುಗಳ ಬದಲು ತಮ್ಮದೇ ಕಂಪೆನಿಯ ಲೇಬಲ್ ಹಾಕಿ ಮಾರಾಟ ಮಾಡುತ್ತಾರೆ. ಆದರೆ ಬೆಲೆಯಲ್ಲಿ ಯಾವುದೇ ಪ್ರಮುಖ ವ್ಯತ್ಯಾಸವಿರುವುದಿಲ್ಲ. ಇಲ್ಲಿ ಗ್ರಾಹಕರು ಮೋಸ ಹೋಗುತ್ತಾರೆಯೇ ಹೊರತು ಕಂಪೆನಿಗೆ ಯಾವುದೇ ನಷ್ಟವಾಗು ವುದಿಲ್ಲ. ಕಳಪೆ ವಸ್ತುಗಳನ್ನು ನೀಡಿಯೂ ಕಂಪೆನಿ ತನ್ನದೇ ಸರಿ ಎಂದು ವಾದಿಸುತ್ತದೆ. ಗ್ರಾಹಕ ನ್ಯಾಯಾಲಯಕ್ಕೆ ಹೋದರೆ ನ್ಯಾಯ ಸಿಗುತ್ತದೆ ಎಂದಾದರೂ ಇಲ್ಲಿ ಜನಸಾಮಾನ್ಯರು ನ್ಯಾಯಾಲಯಕ್ಕೆ ಹೋಗುವ ಮನಸ್ಸು ಮಾಡುವುದಿಲ್ಲ. ಇದೇ ಅವರು ಮೋಸ ಹೋಗಲು ಪ್ರಮುಖ ಕಾರಣ ವಾಗುತ್ತದೆ. ಆದ್ದರಿಂದ ಜನರು ಇನ್ನಷ್ಟು ಬುದ್ಧಿವಂತರಾಗಬೇಕು. ಕಳಪೆ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆ ಇಲ್ಲವೇ ಕಂಪೆನಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಾಗಿ ವಿನಂತಿ.
ಸುರೇಶ್ ಗೌಡ, ಕೈಕಂಬ
Tagged with
nimminda
ಐಡಿಯ ಮೊಬೈಲ್ ಸೇವೆಗೆ ಗ್ರಾಮಾಂತರ ಪ್ರದೇಶ ಗಳಲ್ಲಿ ನೆಟ್‌ವರ್ಕ್ ಸ್ವಲ್ಪವೂ ಸಿಗುವುದಿಲ್ಲ. ಕಿನ್ನಿಗೋಳಿ ಪೇಟೆ ದಾಟಿದರೆ ಮೂಡಬಿದ್ರೆ ಕಡೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಐಡಿಯಾ ಮೊಬೈಲ್ ನೆಟ್‌ವರ್ಕ್ ಕಾರ್ಯ ಗತವಾಗಿರುವುದಿಲ್ಲ. ಈ ಭಾಗದ ಗ್ರಾಹಕರು ಆಫರ್‌ಗೆ ಮರುಳಾಗಿ ಐಡಿಯಾ ಸಿಮ್ ಪಡೆದುಕೊಂಡಿದ್ದು ನೆಟ್ ವರ್ಕ್ ಸಮಸ್ಯೆಯಿಂದಾಗಿ ಕಂಗಾಲಾಗಿದ್ದಾರೆ. ಆದ್ದರಿಂದ ಇನ್ನಾದರೂ ಐಡಿಯಾ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚೆಚ್ಚು ಟವರ್ ನಿರ್ಮಾಣ ಮಾಡಲಿ.
ಕೀರ್ತನ್, ದಾಮಸ್‌ಕಟ್ಟೆ
Tagged with
nimminda
ರಾಜ್ಯ ಧಾರ್ಮಿಕ ಪರಿಷತ್ತು ‘ಎ ಗ್ರೇಡ್ ದೇವಾಲ ಯಗಳಿಗೆ ನೇಮಕಾತಿಯ ಪರಿಶೀಲನೆಗಾಗಿ ಪವರ್ಗ ‘ಎ ಅಧಿಸೂಚಿತ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಸದಸ್ಯತ್ವ ಕೋರಿ ಸ್ವೀಕೃತವಾಗಿರುವ ಅರ್ಜಿ ಯನ್ನು ಪರಿಶೀಲಿಸಲು ದಿನಾಂಕ ೮/೩/೨೦೧೨ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಕರೆ ಯಲಾಗಿತ್ತು. ಮಾಹಿತಿ ಹಕ್ಕಿನಂತೆ ದೇವಾಲಯಗಳಿಗೆ ಸದಸ್ಯರ ನೇಮಕಾತಿ ಆದೇಶದ ಪ್ರತಿಯನ್ನು ಕೇಳಲಾಗಿ ಧಾರ್ಮಿಕ ದತ್ತಿ ಆಯುಕ್ತರ ಕಛೇರಿಯವರು ೨/೪/೨೦೧೨ರಂದು ನೀಡಿದ ಹಿಂಬರಹದಲ್ಲಿ ದಿ.೮/೩/೨೦೧೨ರ ನಿರ್ಣಯವು ಮಾನ್ಯ ಅಧ್ಯಕ್ಷರು, ರಾಜ್ಯ ಧಾರ್ಮಿಕ ಪರಿ ಷತ್‌ರವರಿಗೆ ಅನುಮೋಧನೆಗೆ ಕಳುಹಿಸಲಾಗಿದೆ. ಸ್ವೀಕೃ ತವಾದ ಕೂಡಲೇ ಒದಗಿಸಲಾಗುವುದೆಂದು ತಿಳಿಸಿದ್ದರು. ಹಾಗಾದರೆ ಮಾರ್ಚ್ ೨೮, ೨೯ರಂದು ಕೊಲ್ಲೂರು, ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧಿಕಾರ ಸ್ವೀಕಾರ ಹೇಗೆ ಮಾಡಿತು? ಮುಖ್ಯಮಂ ತ್ರಿಗಳಿಂದ ಸಹಿ ಆಗದಿದ್ದರೂ ಅಧಿಕಾರ ಸ್ವೀಕರಿಸಿ ಕಾರು ಬಾರು ಮಾಡಲಾಗುತ್ತಿದೆಯಾದರೆ ಈ ಸರ್ಕಾರದಲ್ಲಿ ಕಾನೂನಿಗೆ ಬೆಲೆ ಇಲ್ಲ. ಆರ್.ಎಸ್.ಎಸ್ ಮುಖಂಡನ ಮಾತೇ ಆದೇಶವೇ? ಈ ಬಗ್ಗೆ ಸರ್ಕಾರ, ಜನಪ್ರತಿನಿ ಧಿಗಳು ಉತ್ತರಿಸಬೇಕು.
ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್
Tagged with
nimminda
ಬೈಕಂಪಾಡಿ, ಪಣಂಬೂರು ಪರಿಸರ ದಲ್ಲಿ ಹೆದ್ದಾರಿಯನ್ನು ಆಕ್ರಮಿಸಿಕೊಂಡೇ ಲಾರಿ, ಟ್ಯಾಂಕರ್ ಮತ್ತಿ ತರ ವಾಹನಗಳು ನಿಲ್ಲು ತ್ತವೆ. ಕೆಲವು ಘನ ಗಾತ್ರದ ವಾಹನಗಳು ಎಷ್ಟು ದಿನಗಳು ಕಳೆ ದರೂ ಇಲ್ಲಿಯೇ ನಿಂತಿ ರುತ್ತವೆ. ಇವುಗಳ ಮೇಲೆ ಸಂಬಂಧಪಟ್ಟ ವರು ಕ್ರಮ ಕೈಗೊಳ್ಳುವುದಿಲ್ಲ.
ಹೆದ್ದಾರಿ, ಸಬ್ ವೇ ಎಲ್ಲೆಲ್ಲೂ ಲಾರಿಗಳದ್ದೇ ದಂಡು. ಲಾರಿಗಳ ನಿಲುಗ ಡೆಗೆ ಪಣಂಬೂರು ಬಳಿ ಸೂಕ್ತ ಸ್ಥಳಾವಕಾಶವಿದ್ದರೂ ಇಲ್ಲಿ ಲಾರಿಗಳನ್ನು ನಿಲ್ಲಿಸುತ್ತಿಲ್ಲ. ಪಣಂಬೂರು ಪೊಲೀಸರು, ಹೆದ್ದಾರಿ ಪ್ರಾಧಿಕಾರ ಇತ್ತ ಅಗತ್ಯ ಗಮನಹರಿಸಬೇಕು. ಹೆದ್ದಾರಿ ಬದಿ ನಿಲ್ಲುವ ಲಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕು. ಇದರಿಂದ ಸಂಭಾವ್ಯ ಅನಾಹುತವನ್ನು ತಪ್ಪಿಸಬಹುದಾಗಿದೆ.
ಕೆ.ಆರ್., ರಾಘವೇಂದ್ರ, ಕೂಳೂರು
Tagged with
nimminda
ನಾನು ವಿದೇಶದಲ್ಲಿರುವ ಕಾರಣ ನಮ್ಮ ಊರಿನ ಸುದ್ದಿ ತಿಳಿದುಕೊಳ್ಳಲು ಅವಕಾಶಗಳಿರಲಿಲ್ಲ. ನಾನು ಊರಿನಲ್ಲಿದ್ದಾಗ ಜಯಕಿರಣ ಪತ್ರಿಕೆಯ ನಿತ್ಯ ಓದು ಗನಾಗಿದ್ದೆ. ಕಳೆದ ಬಾರಿ ಊರಿಗೆ ಬಂದಾಗ ಪತ್ರಿಕೆಯ ಬದಲಾವಣೆಯನ್ನು ಕಂಡು ಆಶ್ಚರ್ಯವಾಯಿತು. ಪತ್ರಿಕೆ ಹಿಂದಿಗಿಂತ ತುಂಬಾ ಬದಲಾಗಿದೆ. ಅಲ್ಲದೇ ಅಂತ ರ್ಜಾಲದಲ್ಲೂ ಜಯಕಿರಣ ಪತ್ರಿಕೆಯನ್ನು ಓದಬಹುದು ಎಂಬುದು ಇಲ್ಲಿಗೆ ಬಂದ ಮೇಲೆ ತಿಳಿಯಿತು. ನಾನೀಗ ಸೌದಿಯಲ್ಲಿದ್ದು, ಇಲ್ಲಿ ಇಂಟರ್‌ನೆಟ್‌ನಲ್ಲಿ ಪ್ರತಿನಿತ್ಯ ಪತ್ರಿಕೆ ಓದುತ್ತೇನೆ. ಬದಲಾವಣೆ ಸಹಜವೆಂಬಂತೆ ಇಂಟರ್ ನೆಟ್ ಆವೃತ್ತಿಯು ಅದ್ಬುತವಾಗಿ ಮೂಡಿಬರುತ್ತಿದೆ. ನನ್ನ ಊರಿನ ಬಹುತೇಕ ಎಲ್ಲಾ ಸುದ್ದಿಗಳನ್ನು ಈ ಮುಖಾ ಂತರವೇ ತಿಳಿದುಕೊಳ್ಳುತ್ತಿದ್ದೇನೆ. ಪತ್ರಿಕೆ ನಿಷ್ಟಕ್ಷಪಾತ ವಾದ ಸುದ್ದಿಯನ್ನು ಪ್ರಕಟಿಸುವ ಮೂಲಕ ಈ ಹಿಂದೆಯೇ ಉತ್ತಮವಾಗಿ ಮೂಡಿಬರುತ್ತಿತ್ತು. ಇದೀಗ ಇಂಟರ್‌ನೆಟ್ ಆವೃತ್ತಿಯು ಕೂಡ ಉತ್ತಮವಾಗಿದೆ. ಅಂತರ್ಜಾಲ ಆವೃತ್ತಿ ಯಾವುದೇ ಇಂಗ್ಲೀಷ್ ವೆಬ್‌ಸೈ ಟ್‌ಗೆ ಕಮ್ಮಿಯಿಲ್ಲ. ಅವುಗಳನ್ನೂ ಮೀರಿಸುವಂತೆ ಇನ್ನೂ ಸ್ವಲ್ಪ ಬದಲಾವಣೆ ವೆಬ್‌ಸೈಟ್‌ನಲ್ಲಿ ಆಗಲಿ. ಓದುಗನಿ ಗಾಗಿಯೇ ಇರುವ ನಿಮ್ಮ ಕೆಲ ವಿಭಾಗಗಳಿಗೆ ನಾನೂ ಬಿಡುವು ಮಾಡಿಕೊಂಡು ಪತ್ರ ಬರೆಯಲು ಪ್ರಯತ್ನಿ ಸುತ್ತೇನೆ. ನಿಮ್ಮ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ನನ್ನ ಬೆಂಬಲ ಇದ್ದೇ ಇದೆ. ನಿಸಾರ್ ಅಹಮದ್,
ಸೌದಿ ಅರೇಬಿಯಾ(ಈಮೇಲ್ ಮೂಲಕ)
Tagged with
nimminda
ಮಂಗಳೂರು ಬೆಳೆಯುತ್ತಿದೆ, ಅಪರಾಧ ಪ್ರಕರ ಣಗಳು ಹೆಚ್ಚುತ್ತಿದೆ ಎಂಬ ಉದ್ದೇಶದಿಂದ ಸರ್ಕಾರ ಮಂಗಳೂರಿಗೆ ನೂತನ ಕಮಿಷನರೇಟ್ ವ್ಯವಸ್ಥೆಯನ್ನು ಜಾರಿಗೆ ತಂದಿತು. ಆದರೆ ಇದರಿಂದ ಮಂಗಳೂರಿನ ಅಪರಾಧ ಪ್ರಕರಣಗಳಿಗಾಗಲೀ, ಗಲಭೆಗಾಗಲೀ ಯಾವುದೇ ಬ್ರೇಕ್ ಬಿದ್ದಿಲ್ಲ. ಹಿಂದಿಗಿಂತಲೂ ಸ್ವಲ್ಪ ಹೆಚ್ಚೇ ಎನ್ನುವಂತೆ ದುಷ್ಕೃತ್ಯಗಳು ಮುಂದುವರೆದಿವೆ. ಪೊಲೀ ಸರಿಗೆ ದಿನದ ೨೪ ಘಂಟೆಯೂ ನಗರವನ್ನು ಸುತ್ತು ಹೊಡೆಯಲು ಪಿಸಿಆರ್ ವಾಹನ, ನಗರದ ಮೂಲೆ ಮೂಲೆಗೆ ಸಿಸಿ ಕ್ಯಾಮರಾ ಸೇರಿದಂತೆ ಆಧುನಿಕ ತಂತ್ರ ಜ್ಞಾನಗಳನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ. ಆದರೆ ಇದ್ಯಾವುದರಿಂದಲೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಗಾಗಿಲ್ಲ. ಮೊನ್ನೆ ಕ್ರೈಸ್ತರ ಪ್ರಾರ್ಥ ನೆಯ ಮೇಲೆಯೇ ದುಷ್ಕರ್ಮಿಗಳು ಕಲ್ಲು ತೂರಿರು ವುದು ನಮ್ಮ ಪೊಲೀಸರ ವೈಫಲ್ಯಕ್ಕೆ ಸಾಕ್ಷಿ. ಇನ್ನು ದಿನಪೂರ್ತಿ ವಾಹನದಲ್ಲೇ ಮಲಗಿರುವ ಪಿಸಿಆರ್ ಸಿಬ್ಬಂ ದಿಯೂ ಇತ್ತ ಗಮನಹರಿಸಿರಲಿಲ್ಲ. ತಕ್ಷಣಕ್ಕೆ ಸ್ಪಂದನೆ ಎನ್ನುವುದೂ ಇವರಿಗೆ ಮರೀಚಿಕೆಯಾಗಿದೆ. ನಗರದಲ್ಲಿ ನಡೆದ ಹತ್ಯೆಗಳ, ದರೋಡೆ ಪ್ರಕರಣಗಳ ಅರೋಪಿಗಳ ಪತ್ತೆಯೂ ಇಲಾಖೆಯಿಂದ ಸಾಧ್ಯವಾಗಿಲ್ಲ. ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಡಲು ಕೋಟ್ಯಂತರ ರುಪಾಯಿ ಖರ್ಚು ಮಾಡಿ ಸ್ಥಾಪಿಸಿದ ಕಮಿಷನರೇಟ್ ಜಿಲ್ಲೆಯಲ್ಲಿ ಸಾಧಿಸಿದ್ದು ಏನೂ ಇಲ್ಲ. ಇವರ ಸಾಧನೆ ಒಂದೇ. ಅದು ಸುಸಜ್ಜಿತ ಕಮಿಷನ ರೇಟ್ ಕಚೇರಿ ಸ್ಥಾಪನೆ. ಇನ್ನಾದರೂ ಮಾನ್ಯ ಪೊಲೀಸ್ ಆಯುಕ್ತರಾದ ಸೀಮಂತ್‌ಕುಮಾರ್ ತನ್ನ ಇಲಾಖೆಯತ್ತ ಗಮನ ಹರಿಸಲಿ.
ಇಸ್ಮಾಯಿಲ್, ಬಂದರ್
Tagged with
nimminda
ಮಳೆಗಾಲದಲ್ಲಿ ನೀರು ಪೋಲು ಮಾಡಿರುವುದರ ಪರಿಣಾಮವನ್ನು ಬೇಸಿಗೆ ಕಾಲದಲ್ಲಿ ನಾವು ಅನುಭವಿಸು ವಂತಾಗಿದೆ. ಈಗಾಗಲೇ ಮಂಗಳೂರು ಹಾಗೂ ಸುತ್ತ ಮುತ್ತ ನೀರಿಗಾಗಿ ಹಾಹಾಕಾರ ಮುಗಿಲುಮುಟ್ಟಿದೆ. ಕೆಲವು ಕಡೆಗಳಲ್ಲಿ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡ ಲಾಗುತ್ತಿದೆ. ಆದರೂ ನೀರಿನ ಸಮಸ್ಯೆ ಬಗೆಹರಿದಿಲ್ಲವೆಂದೇ ಹೇಳಬೇಕು. ಜನಪ್ರತಿನಿಧಿಗಳು ಸಕಾಲದಲ್ಲಿ ನೀರನ್ನು ಪೂರೈಕೆ ಮಾಡಲು ಮುಂದಾಗಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕಾರ್ಪೊರೇಟರ್‌ಗಳು ಗಮನಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪಾಲಿಕೆಯ ವಿರುದ್ಧ ಜನರು ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ. ಪರಿ ಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ ಎಚ್ಚೆತ್ತುಕೊಳ್ಳಿ.
ಪ್ರೀತೇಶ್, ಜಪ್ಪಿನಮೊಗರು
Tagged with
nimminda
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗ ದಳ ಮತ್ತಿತರ ಹಿಂದೂ ಸಂಘಟನೆಗಳು ಮತ್ತೆ ಅಕ್ರಮ ಗೋಸಾಗಾಟ ತಡೆಯಲು ಮುಂದಾಗಿವೆ. ಕಾನೂನುಬದ್ಧವಾಗಿ ಗೋಸಾಗಾಟ ನಡೆಯುತ್ತಿಲ್ಲವಾದ್ದರಿಂದ ಇದನ್ನು ತಡೆಯುವುದು ತಪ್ಪಲ್ಲ ಎನ್ನಬ ಹುದು.
ಆದರೆ ಇಂಥ ಘಟನೆಗಳೇ ಮುಂದೆ ಸಮಾಜದ ಅಶಾಂತಿಯನ್ನು ಕದಡಬಹುದು. ಇದಕ್ಕೆ ಈಗಾಗಲೇ ಗೋ ಸಾಗಾಟದ ಹೆಸ ರಿನಲ್ಲಿ ಜಿಲ್ಲೆಯಲ್ಲಿ ನಡೆದಿರುವ ಘರ್ಷಣೆ, ಕೋಮುಗಲಭೆಯ ಉದಾಹರಣೆ ನಮ್ಮ ಕಣ್ಮುಂದಿದೆ. ಹೀಗಿರುವಾಗ ಬಜರಂಗಿಗ ಳಿಗೆ ಗೋಸಾಗಾಟ ತಡೆಯಲು ಅವಕಾಶ ಮಾಡಿಕೊಡುವುದು ಪೊಲೀಸರದ್ದೇ ತಪ್ಪು. ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸು ವುದು, ಹಾಗೆ ಸಾಗಿಸುವಾಗ ಸತ್ತ ಗೋವು ಗಳನ್ನು ಮಾಂಸ ಮಾಡಿ ಮಾರುವುದು ಇದನ್ನೆಲ್ಲ ನೈಜ ಮುಸ್ಲಿಮರು ಒಪ್ಪಿಕೊಳ್ಳು ವಂತಿಲ್ಲ. ನಮ್ಮ ಕಾನೂನಿನಲ್ಲೂ ಗೋ ಸಾಗಾಟ ಮಾಡಲು ಸೂಕ್ತ ನಿಯಮಾವಳಿ ಗಳಿವೆ. ಹೀಗಿದ್ದೂ ಕದ್ದು ಗೋವುಗಳನ್ನು ಸಾಗಿಸುವುದು ಸರಿಯೆನ್ನಲಾದೀತೇ? ಗೋಸಾಗಾಟ ನಡೆಯುವುದು ಮತ್ತು ಅದನ್ನು ಬಜರಂಗಿಗಳು ತಡೆಯುವುದು ಮುಂದಿನ ದಿನಗಳಲ್ಲಿ ಸಾಮಾಜಿಕ ಕಂಟಕ ವಾಗಿ ಪರಿಣಮಿಸಬಹುದು. ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ತಕ್ಷಣ ಗಮನಿಸಬೇಕು. ಹೆದ್ದಾರಿಯನ್ನು ಬಳಸಿ ಕೊಂಡು ನಡೆಯುತ್ತಿರುವ ಗೋಸಾಗಾಟ ವನ್ನು ಇಲಾಖೆಯೇ ತಡೆಯಲು ಮುಂದಾ ಗಬೇಕು. ಬಜರಂಗಿಗಳಿಗೆ ಕಾನೂನು ಕೈಗೆ ತ್ತಿಕೊಳ್ಳಲು ಅವಕಾಶ ನೀಡಿದರೆ ಜಿಲ್ಲೆ ಮತ್ತೊಮ್ಮೆ ಗಲಭೆಗೆ ಈಡಾಗುವ ಸಾಧ್ಯ ತೆಯಿದೆ. ರಹೀಂ ಕೆ, ಪುತ್ತೂರು
Tagged with
nimminda