ಯಡ್ಡಿ ಸಿ.ಎಂ. ಆದರೆ
ಸನ್ಯಾಸ: ಅಡ್ವಾಣಿ
ಬೆಂಗಳೂರು: ಪಕ್ಷದ
ಆಂತರಿಕ ಗೊಂದಲದಿಂದ ಬೇಸತ್ತಿರುವ ಮುಖ್ಯ ಮಂತ್ರಿ ಸದಾನಂದ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ
ಇಂಗಿತ ವ್ಯಕ್ತಪಡಿಸಿದ ಘಟನೆ ನಡೆದಿದೆ.
ತಮ್ಮನ್ನು ಪದಚ್ಯುತಿಗೊಳಿಸಲು
ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ ಮಾರ್ಚ್ ೧೮ರಂದು ತಮ್ಮ ಬೆಂಬಲಿಗರ ಸಭೆ ಕರೆದಿರುವ ಜೊತೆಗೆ ದೆಹಲಿಯ
ಪಕ್ಷದ ವರಿಷ್ಠರು ಇದಕ್ಕೆ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರದಿಂದಲೇ ಕೆಳಗಿಳಿಯಲು ತೀರ್ಮಾನಿಸಿದ್ದರು.
ಮರಳಿ ಪಟ್ಟಕ್ಕೇರಲು
ಚಡಪಡಿಸುತ್ತಿರುವ ಯಡಿಯೂರಪ್ಪ ತಮ್ಮನ್ನು ಮುಖ್ಯಮಂತ್ರಿ ಎಂದು ಘೋಷಿಸದಿದ್ದರೆ ಮಾರ್ಚ್ ೧೯ರಂದು ಸರ್ಕಾರವನ್ನೇ
ಉರುಳಿಸುವುದಾಗಿ ಬೆದರಿಕೆಯೊಡ್ಡಿದ್ದು ಇದಕ್ಕೆ ಮಣಿದಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ
ಹಾಗೂ ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಅರುಣ್ ಜೇಟ್ಲಿ ಮತ್ತೆ ಸ್ಥಾನ ನೀಡುವ ಬಗ್ಗೆ ಒಲವು ತೋರಿದ್ದಾರೆ.
ಕಳೆದ ಮೂರು ದಿನಗಳಿಂದ
ದೆಹಲಿಯಲ್ಲೇ ಬಿಡಾರ ಹೂಡಿರುವ ಯಡಿಯೂರಪ್ಪ ಪಕ್ಷದ ಮುಖಂಡರುಗಳನ್ನು ಭೇಟಿ ಮಾಡಿ, ತಮ್ಮ ಬೇಡಿಕೆ ಇಟ್ಟಿರುವುದಲ್ಲದೆ,
ಕಾನೂನಿನ ಹೋರಾಟದಿಂದ ಹೊರ ಬಂದರೆ ಮತ್ತೆ ಅಧಿಕಾರ ಗದ್ದುಗೆಗೆ ಏರಿಸುವ ವಚನವನ್ನು ಪಾಲಿಸುವಂತೆ ತಾಕೀತು
ಮಾಡಿದ್ದರು. ಯಾವ ಆರೋಪಕ್ಕೆ ಗುರಿಯಾಗಿ ಯಡಿಯೂರಪ್ಪ ಸ್ಥಾನ ತ್ಯಜಿಸಿದ್ದರು, ಅದೇ ಆರೋಪದಿಂದ ಮುಕ್ತರಾಗಿರುವ
ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಅಧಿಕಾರ ನೀಡುವ ಬಗ್ಗೆ ಅಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ
ಒಂದು ವೇಳೆ ಸುಪ್ರಿಂಕೋರ್ಟ್‌ನಲ್ಲಿ ಮೊಕದ್ದಮೆ ದಾಖಲೆಯಾದಲ್ಲಿ ಮತ್ತೆ ಅವರನ್ನು ಅಧಿಕಾರದಿಂದ ಕೆಳಗಿಳಿಸೋಣ.
ಅಲ್ಲಿಯವರೆಗೂ ನಾವು ಕೊಟ್ಟ ಮಾತನ್ನು ಉಳಿಸಿಕೋಳ್ಳೋಣ ಎಂಬ ವಾದವನ್ನು ಗಡ್ಕರಿ ಪಕ್ಷದ ಇತರ ಮುಖಂಡರೊಟ್ಟಿಗೆ
ವಾದ ಮಂಡಿಸಿದ್ದಾರೆ. ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಗಡ್ಕರಿ ಸದಾನಂದ ಗೌಡರಿಗೆ ಮಾಹಿತಿ
ತಲುಪಿಸಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಮುಖ್ಯಮಂತ್ರಿಯವರು ತಮ್ಮ ಪ್ರವಾಸ ಮೊಟುಕುಗೊಳಿಸಿ,
ನಗರಕ್ಕೆ ಆಗಮಿಸಿದ ಅವರು ಕಾನೂನು ಸಚಿವ ಸುರೇಶ್‌ಕುಮಾರ್ ಹಾಗೂ ಇತರ ಹಿತೈಷಿಗಳ ಜೊತೆ ಸಮಾಲೋಚನೆ ನಡೆಸಿ,
ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು.
ಯಡಿಯೂರಪ್ಪನವರ ಬಿಗಿಮುಷ್ಠಿ
ನಡುವೆ ತಾವು ಅಧಿಕಾರದಲ್ಲಿ ಮುಂದುವರೆಯಲು ಸಹಕರಿಸುತ್ತಿರುವ ಪಕ್ಷದ ಹಿರಿಯ ಧುರೀಣ ಲಾಲ್‌ಕೃಷ್ಣ ಅಡ್ವಾಣಿ
ಅವರ ಗಮನಕ್ಕೆ ತಂದು ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಲು ತೀರ್ಮಾನಿಸಿದರು. ಮುಖ್ಯಮಂತ್ರಿಯವರು
ಅಡ್ವಾಣಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪಕ್ಷದ ಪ್ರಚಲಿತ ವಿದ್ಯಮಾನಗಳು, ರಾಷ್ಟ್ರೀಯ ಅಧ್ಯಕ್ಷರ
ಸಂದೇಶವನ್ನು ವಿವರಿಸಿ, ತಾವು ಪಕ್ಷದ ಶಿಸ್ತಿನ ಸಿಪಾಯಿಯಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ
ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯ ಬಜೆಟ್‌ನ್ನು ಮಂಡಿಸಲು ಈ ಸಲ ಯಡಿಯೂರಪ್ಪ ಅವರಿಗೆ ಅವಕಾಶ
ನೀಡಬೇಕೋ ಇಲ್ಲವೆ ನಾನೇ ಮಂಡಿಸಬೇಕೆಂಬುದರ ಬಗ್ಗೆ ಸ್ಪಷ್ಟಪಡಿಸಿ, ಈ ಗೊಂದಲಗಳಿಂದ ಇನ್ನೂ ಅಧಿವೇಶನ
ಕರೆಯಲು ಸಾಧ್ಯವಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸ್ಪಷ್ಟ
ಭರವಸೆ ನೀಡಿದ ಅಡ್ವಾಣಿ, ನೀವು ಯಾವ ಕಾರಣಕ್ಕೂ ಕೆಳಗಿಳಿಯುವುದಿಲ್ಲ. ಒಂದು ವೇಳೆ ನಿಮ್ಮನ್ನು ಕೆಳಗಿಳಿಸಿ
ಯಡಿಯೂರಪ್ಪ ಅವರನ್ನು ಮರಳಿ ಮುಖ್ಯಮಂತ್ರಿ ಮಾಡುವ ಯತ್ನಕ್ಕೆ ಯಾರಾದರೂ ಕೈ ಹಾಕಿದರೆ ನಾನೇ ರಾಜಕೀಯ
ಸನ್ಯಾಸ ಸ್ವೀಕರಿಸುತ್ತೇನೆ ಎಂದರು.ಬಿಜೆಪಿ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಆಗುವುದು ಬೇಕೋ, ಅಡ್ವಾಣಿ
ರಾಜಕೀಯ ಸನ್ಯಾಸ ಸ್ವೀಕರಿಸುವುದು ಬೇಕೋ, ಎಂಬುದು ಇತ್ಯರ್ಥವಾಗಬೇಕು. ಎಲ್ಲಿಯವರೆಗೆ ನಾನು ರಾಜಕೀಯ
ಸನ್ಯಾಸ ತೆಗೆದುಕೊಳ್ಳುವ ಸನ್ನಿವೇಶ ಉದ್ಭವವಾಗುವುದಿಲ್ಲವೋ ಅಲ್ಲಿಯವರೆಗೆ ನೀವು ಮುಖ್ಯಮಂತ್ರಿ ಹುದ್ದೆಯಿಂದ
ಕೆಳಗಿಳಿಯುವ ಪ್ರಶ್ನೆ ಬರುವುದಿಲ್ಲ. ಹೀಗಾಗಿ ನೀವು ಹಿಂದೆ ಮುಂದೆ ನೋಡದೇ ಬಜೆಟ್ ಅಧಿವೇಶನ ಕರೆಯಿರಿ.
ನಿಮ್ಮ ಉದ್ದೇಶದಂತೆ ಮಾರ್ಚ್ ೨೧ರಂದು ರಾಜ್ಯ ಬಜೆಟ್‌ನ್ನು ಮಂಡಿಸಿರಿ ಎಂದು ಈ ಚರ್ಚೆಯ ಸಂದರ್ಭದಲ್ಲಿ
ಲಾಲ್‌ಕೃಷ್ಣ ಅಡ್ವಾಣಿ ಅಭಯ ನೀಡಿದರು. ಅಡ್ವಾಣಿಯವರು ನೀಡಿದ ಅಭಯದ ಹಿನ್ನೆಲೆಯಲ್ಲಿಯೇ ಧೈರ್ಯ ತಂದುಕೊಂಡ
ಮುಖ್ಯಮಂತ್ರಿ ಡಿ.ವಿ. ಇದ್ದಕ್ಕಿದ್ದಂತೆ ಬಜೆಟ್ ಅಧಿವೇಶನ ಕರೆಯಲು ಅಗತ್ಯವಾದ ಪ್ರಕ್ರಿಯೆಗೆ ಚಾಲನೆ
ನೀಡಿದರು.
ಡಿ.ವಿ. ಮುಖ್ಯಮಂತ್ರಿ
ಸ್ಥಾನದಲ್ಲಿ ಮುಂದುವರಿಯುವುದು
ಅನುಮಾನ: ಧನಂಜಯ್ ಕುಮಾರ್
ಬೆಂಗಳೂರು: ಮುಖ್ಯಮಂತ್ರಿ
ಡಿ.ವಿ. ಸದಾನಂದಗೌಡ ಮಾರ್ಚ್ ೧೮ರ ನಂತರ ಅಧಿಕಾರದಲ್ಲಿ ಮುಂದುವರೆಯುವುದರ ಬಗ್ಗೆ ಕೇಂದ್ರದ ಮಾಜಿ ಸಚಿವ
ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಧನಂಜಯಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ
ಮಾತನಾಡುತ್ತಿದ್ದ ಅವರು ಹಣಕಾಸು ಇಲಾಖೆ ಹೊತ್ತಿರುವ ಸದಾನಂದ ಗೌಡರು ಮಾರ್ಚ್ ೨೧ ರಂದು ಮುಂಗಡಪತ್ರ
ಮಂಡಿಸುವುದು ಅನುಮಾನ.
ಉಡುಪಿ ಚಿಕ್ಕಮಂಗಳೂರು
ಲೋಕಸಭಾ ಉಪಚುನಾವಣೆ ಆಗುವವರೆಗೂ ಗೌಡರೇ ಮುಖ್ಯಮಂತ್ರಿ. ಆನಂತರ ಶಾಸಕಾಂಗ ಪಕ್ಷ ಯಾರನ್ನು ತನ್ನ ನಾಯಕನ್ನಾಗಿ
ಆಯ್ಕೆ ಮಾಡಿಕೊಳ್ಳುತ್ತದೂ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಮುಗುಂ ಆಗಿ ಹೇಳಿದ್ದಾರೆ.
ಮಾರ್ಚ್ ೨೧ರಂದು ಬಿಜೆಪಿ
ಮುಖ್ಯಮಂತ್ರಿಗಳೇ ಬಜೆಟ್ ಮಂಡಿಸುವುದು ಖಚಿತ ಆದರೆ ವ್ಯಕ್ತಿಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಚಿಕ್ಕಮಂಗಳೂರು-ಉಡುಪಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಬಾರಿ ಅಂತರದಿಂದ ಗೆಲುವು ಸಾಧಿಸುತ್ತದೆ
ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ನಾಯಕರುಗಳ ಹೇಳಿಕೆಗಳೆಲ್ಲ ಅಪ್ಪಟ ಸುಳ್ಳು
ಎಂದರು.