• HOME
  • ABOUT US
  • LOCAL NEWS
  • CRIME NEWS
  • SPORTS NEWS
  • STATE NEWS
  • ASTROLOGY
  • CONTACT US


ಉಡುಪಿಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿ ಸಿದಾಗ ಹೆಚ್ಚು ಆತಂಕಗೊಂಡದ್ದು ಕಾಂಗ್ರೆಸ್. ನಾಮಪತ್ರ ಸಲ್ಲಿಸಿದ ಕೂಡಲೇ ಜೆಡಿಎಸ್ ಕಣದಿಂದ ಹಿಂದೆ ಸರಿಯಬೇಕು ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೆಡಿಎಸ್, ನಾವ್ಯಾಕೆ ಹಿಂದೆ ಸರಿಯಬೇಕು, ಬೇಕಿದ್ದರೆ ನೀವೇ ಹಿಂದೆ ಸರಿದು ಜಾತ್ಯತೀತ ಶಕ್ತಿಯನ್ನು ಬಲಪಡಿಸಿ ಎಂದು ಕಾಂಗ್ರೆಸ್‌ಗೆ ಮರು ಸವಾಲು ಹಾಕಿತ್ತು. ಇದೀಗ ಕಾಂಗ್ರೆಸ್ ಜೆಡಿಎಸ್ ಮೇಲೆ ಸಲ್ಲದ ಆರೋಪ, ಟೀಕೆ ಮಾಡುತ್ತಲೇ ಇದೆ. ಜೆಡಿಎಸ್‌ಗೆ ಉಡುಪಿಯಲ್ಲಿ ಶಾಶ್ವತ ಮತಗಳಿಲ್ಲ, ಅದು ಕಣದಲ್ಲಿರುವುದರಿಂದ ನಾವು ಆತಂಕಗೊಂಡಿಲ್ಲ, ನಮ್ಮ ಸ್ಪರ್ಧೆ ಏನಿದ್ದರೂ ಬಿಜೆಪಿ ಯೊಂದಿಗೆ ಎಂದು ಹೇಳುತ್ತಿದೆ. ಸಾಲದ್ದಕ್ಕೆ ಜೆಡಿಎಸ್ ಕಣದಲ್ಲಿದ್ದರೆ ಜಾತ್ಯತೀತ ಮತಗಳು ವಿಭಜನೆಯಾಗುತ್ತದೆ ಎಂಬುದನ್ನೂ ಕಾಂಗ್ರೆಸ್ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ಜೆಡಿಎಸ್ ಒಂದು ಜಾತ್ಯತೀತ ಪಕ್ಷವೇ ಅಲ್ಲ. ಹಾಗಿರುವಾಗ ಅದಕ್ಕೆ ಜಾತ್ಯತೀಯ ಮತಗಳೇ ಲಭಿಸದು ಎಂಬ ವಾದ ಕಾಂಗ್ರೆಸ್‌ನದ್ದು. ಇದು ಅದರ ಆತ್ಮಸಾಕ್ಷಿಯ ಮಾತಂತೂ ಅಲ್ಲ. ಜೆಡಿಎಸ್ ತನಗೆ ಸಹಕರಿಸುತ್ತಿಲ್ಲ ಎಂಬುದು ಖಚಿತವಾದ ಮೇಲೆ ಹೇಳುತ್ತಿರುವ ಹತಾಶೆಯ ಮಾತು ಎಂಬುದು ಸತ್ಯ.
ಈ ಹಿಂದೆ ಸದಾನಂದ ಗೌಡರು ಜೆಡಿಎಸ್‌ನ ದೇವೇ ಗೌಡರೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್‌ಗೆ ಉಡುಪಿಯಲ್ಲಿ ಜೆಡಿಎಸ್ ಸ್ಪರ್ಧಿಸುವುದು ಬೇಕಿರಲಿಲ್ಲ. ಜೆಡಿಎಸ್ ಸ್ಪರ್ಧೆಗಿಳಿದರೆ ಕಾಂಗ್ರೆಸ್ ಗೆಲುವು ಸುಲಭದ ಮಾತಲ್ಲ ಎಂಬ ಸತ್ಯ ಕಾಂಗ್ರೆಸ್‌ಗೆ ಗೊತ್ತೇ ಇದೆ. ಕಾಂಗ್ರೆಸ್ ಹೆಚ್ಚು ನಂಬಿಕೊಂಡಿರುವುದು ಮುಸ್ಲಿಂ ಮತ್ತು ಕ್ರೈಸ್ತ ಮತಗಳನ್ನು. ಒಂದೊಮ್ಮೆ ಜೆಡಿಎಸ್ ಕಣದಲ್ಲಿಲ್ಲದಿದ್ದರೆ ಆ ಎರಡು ವಿಭಾಗಗಳ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ಲಭಿಸುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಜೆಡಿಎಸ್ ಕಣದಲ್ಲಿದ್ದರೆ ಈ ಮತಗಳು ಸಮಾನವಾಗಿ ಹಂಚಿ ಹೋಗಲಿದೆ. ಹೀಗೆ ಮತ ವಿಭಜನೆಯಾದರೆ ಅದರ ಸಂಪೂರ್ಣ ಲಾಭವನ್ನು ಪಡೆಯುವುದು ಬಿಜೆಪಿ ಎಂಬುದು ನಿಸ್ಸಂಶಯ ಸಂಗತಿ. ಇದನ್ನು ಈಗಲೂ ಕಾಂಗ್ರೆಸ್ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ. ಆದರೆ ಬಹಿರಂಗ ಹೇಳಿಕೆಗೆ ಮಾತ್ರ ಉತ್ತರನ ಪೌರುಷದ ಮಾತುಗಳನ್ನೇ ಬಳಸಿ ಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಕಾಂಗ್ರೆಸ್ ಇನ್ನೂ ಕೂಡ ತನ್ನ ಮತಗಳ ಆಧಾರದಲ್ಲಿ ಗೆಲ್ಲುವ ಧೈರ್ಯ ಹೊಂದಿಲ್ಲ. ಕರ್ನಾಟಕದಲ್ಲಿ ಕಳೆದ ಮೂರ‍್ನಾ ಲ್ಕು ವರ್ಷಗಳಲ್ಲಿ ನಡೆದಿರುವ ಉಪ ಚುನಾವಣೆಗಳು ಮತ್ತು ಇತ್ತೀಚೆಗೆ ನಡೆದಿರುವ ಪಂಚ ರಾಜ್ಯ ಚುನಾವಣೆಗಳಲ್ಲೂ ಕಾಂಗ್ರೆಸ್ ಸಾಧನೆ ತುಂಬ ಕಳಪೆ ಎಂಬುದು ವೇದ್ಯವಾಗಿದೆ. ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರ ನಾಯಕತ್ವದ ಕೊರತೆ ಕಾಡುತ್ತಿಲ್ಲ, ಅದು ದೇಶಮಟ್ಟದಲ್ಲಿ ಮತದಾರರನ್ನು ಸೆಳೆದು ನಿಲ್ಲಿಸುವ ನಾಯಕತ್ವದ ಕೊರತೆಯಿಂದ ಬಳಲುತ್ತಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಕರ್ನಾಟಕದ ಪಾಲಿಗಂತೂ ಕಾಂಗ್ರೆಸ್ ತುಂಬ ದುರ್ಬಲವಾಗಿದೆ. ಬಿಜೆಪಿ ಮೇಲಿರುವ ಎಲ್ಲ ಭ್ರಷ್ಟಾಚಾರ, ಅನೈತಿಕತೆಯ ಆರೋಪ ಗಳಿಗಿಂತಲೂ ಹೆಚ್ಚು ಬಲಶಾಲಿಯಾಗಿದೆ ಕಾಂಗ್ರೆಸ್‌ನ ಒಳಜಗಳ ಮತ್ತು ದುರ್ಬಲ ಅಧ್ಯಕ್ಷತೆ. ಅಧ್ಯಕ್ಷರ ಮೇಲಿನ ಅವಿಶ್ವಾಸದಿಂದಲೇ ಅಲ್ಲವೇ ಹೈಕಮಾಂಡ್ ಕರ್ನಾಟಕದ ಉಸ್ತುವಾರಿಯನ್ನು ಕೃಷ್ಣ, ಮುನಿಯಪ್ಪ, ಮೊಯಿಲಿ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಹಂಚಿರುವುದು. ಬಿಜೆಪಿ ಸರಕಾರದ ದೌರ್ಬಲ್ಯವನ್ನು ಜನರ ಮುಂದಿಟ್ಟು ಅದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಸಂಪೂರ್ಣ ವಾಗಿ ಸೋತಿದೆ. ಇದಕ್ಕೆ ಅದರ ನಾಯಕರೇ ಕಾರಣ. ಕಾಂಗ್ರೆಸ್ ಗಿಂತ ಬಿಜೆಪಿಯೇ ಸೂಕ್ತ ಎಂದು ಜನರು ಭಾವಿಸಲು ಕೂಡ ಇದುವೇ ಕಾರಣವಾಗಿದೆ.
ಉಡುಪಿಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಬಗ್ಗೆ ಇನ್ನೂ ಆತಂಕ ಇದ್ದೇ ಇದೆ. ಒಂದೊಮ್ಮೆ ಉಡುಪಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಸ್ಥಾಪಿಸಿದರೆ ಅದು ಹಿಂದಿನ ಎಲ್ಲ ಸೋಲುಗಳ ನೋವನ್ನು ಮರೆಸುತ್ತದೆ. ಯಾಕೆಂದರೆ ಇದು ಮುಖ್ಯಮಂತ್ರಿಯ ಕ್ಷೇತ್ರ. ಆದರೆ ಉಡುಪಿಯಲ್ಲಿ ಕಾಂಗ್ರೆಸ್ ಮತದಾರರ ಮನ ಗೆಲ್ಲಲು ನಿರ್ದಿಷ್ಟ ಯೋಜನೆ ಹಾಕಿಕೊಂಡಿಲ್ಲ. ಸ್ವಂತ ಮತಗಳ ಆಧಾರದಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿಲ್ಲದ್ದರಿಂದಲೇ ಜೆಡಿಎಸ್ ಮೇಲೆ ಪರೋಕ್ಷ ಒತ್ತಡ ಹಾಕುತ್ತಿರುವುದು. ಈಗಾಗಲೇ ಕಣದ ಲ್ಲಿರುವ ಪಕ್ಷೇತರ ಮುಸ್ಲಿಂ ಅಭ್ಯರ್ಥಿಯೋರ್ವರು ತನಗೆ ಕಾಂಗ್ರೆಸ್ ಕಡೆಯಿಂದ ಬೆದರಿಕೆ ಕರೆ ಬಂದಿದೆ ಎಂದು ಆರೋಪಿಸಿದ್ದಾರೆ. ನಾಮಪತ್ರ ಹಿಂಪಡೆಯುವಂತೆ ಅವರ ಮೇಲೆ ಒತ್ತಡ ಹಾಕುತ್ತಿದೆ ಎಂಬ ಆರೋಪ ಕಾಂಗ್ರೆಸ್ ಮೇಲಿದೆ. ಅದು ನಿಜ ವಾಗಿದ್ದಲ್ಲಿ, ಆ ಪಕ್ಷ ಜೆಡಿಎಸ್ ಮೇಲೆ ಎಷ್ಟು ಭೀತಿ ಹೊಂದಿರಬೇಡ? ಓರ್ವ ಸಾಮಾನ್ಯ ಪಕ್ಷೇತರ ಅಭ್ಯರ್ಥಿಯನ್ನೇ ಕಣದಿಂದ ಹಿಂದೆ ಸರಿಯುವಂತೆ ಮಾಡುವ ಶ್ರಮದಲ್ಲಿ ಕಾಂಗ್ರೆಸ್ ಇರುವುದಾದರೆ ಅದು ಜಾತ್ಯತೀತ ಮತ ವಿಭಜನೆಯ ವಿಷಯದಲ್ಲಿ ಎಷ್ಟು ಆತಂಕ ಗೊಂಡಿದೆ ಎಂಬುದು ಸ್ಪಷ್ಟವಾಗುತ್ತಿದೆ. ಹಾಗಿರುವಾಗ ಜೆಡಿಎಸ್ ಸ್ಪರ್ಧೆಯಿಂದ ಜಾತ್ಯತೀತ ಮತ ವಿಭಜನೆಯಾಗದು ಎಂದು ಹೇಳುತ್ತಿ ರುವುದು ಕಾಂಗ್ರೆಸ್‌ನ ಆತ್ಮಸಾಕ್ಷಿ ಹೇಳಿಕೆಯಾಗಿರಲು ಹೇಗೆ ಸಾಧ್ಯ?


ಬ್ರಹ್ಮಕಲಶೋತ್ಸವ, ನಾಗಮಂಡಲ, ಉರೂಸ್ ಹಾಗೂ ಜಾತ್ರಾ ಮಹೋತ್ಸವಗಳಿಗೆ ಹೊರೆಕಾಣಿಕೆ ಹೋಗುವುದು ಒಂದು ರೂಢಿ. ಆದರೆ ಪಂಚಾಯತ್ ಹಬ್ಬಕ್ಕೆ ಹೊರೆಕಾಣಿಕೆ ಮೆರವಣಿಗೆ ಮಾಡುವ ಅಗತ್ಯತೆ ಇತ್ತಾ?

ಅಜಿತ್ ಶೆಟ್ಟಿ, ಗುರುಪುರ (ಗುರುಪುರ ನಾಗರಿಕರ ಪರವಾಗಿ)
ಗುರುಪುರದಲ್ಲಿ ಮೊನ್ನೆ ಪಂಚಾಯತ್ ಹಬ್ಬವು ಮೂಳೂರು ಮತ್ತು ಅಡ್ಡೂರು ಗ್ರಾಮದ ಸಮಸ್ತ ನಾಗರಿಕರ ಬೆಂಬಲವಿಲ್ಲದೆ ಮುಕ್ತಾಯಗೊಂಡಿದೆ. ಗುರುಪುರದ ಎರಡು ಗ್ರಾಮಗಳ ನಾಗರಿಕ ರನ್ನು ಒಂದುಗೂಡಿಸಿ ಅವರ ಅಭಿವೃದ್ಧಿಯ ಬಗ್ಗೆ ಚಿಂತನೆಯನ್ನು ಮುಂದಿಟ್ಟುಕೊಂಡು ಹೋಗುತ್ತಿರುವ ಈಗಿನ ಗ್ರಾಮ ಪಂಚಾ ಯತ್ ಅಧ್ಯಕ್ಷರಾದ ಯು.ಪಿ.ಇಬ್ರಾಹಿಂರವರಿಗೆ ಈ ಪಂಚಾಯತ್ ಹಬ್ಬದ ರೂಪುರೇಷೆಯನ್ನು ರೂಪಿಸಿಕೊಟ್ಟಿದ್ದು, ಒಂದು ಗುತ್ತಿನ ಮುಂಡಾಸು ಮಹಾರಾಜರು. ಯು.ಪಿ. ಇಬ್ರಾಹಿಂ ರವರಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ ಈ ಮುಂಡಾಸು ಮಹಾರಾಜ ನಿಗೆ ಹೆಸರು ಗಳಿಸುವ ಕಾಳಜಿ. ಇದಕ್ಕಾಗಿ ಪರಿಶ್ರಮಿಸಲು ಈ ಮುಂಡಾಸ್ ಮಹಾರಾಜರ ಕೈಕೆಳಗೆ ಬೆರಳೆಣಿಕೆ ಯಷ್ಟು ತುಂಡು ಪುಡಾರಿಗಳು. ಆದರೂ ಈ ಯು.ಪಿ.ಇಬ್ರಾಹಿಂ ಸಾಹೇಬರು ಯಾಕೆ ಇವರ ಅಡಿಯಾಳಾಗಿ ಬಿಟ್ಟರು ಎಂಬುವುದೇ ಯಕ್ಷ ಪ್ರಶ್ನೆ.
ಬ್ರಹ್ಮಕಲಶೋತ್ಸವ, ನಾಗಮಂಡಲ, ಉರೂಸ್ ಹಾಗೂ ಜಾತ್ರಾ ಮಹೋತ್ಸವಗಳಿಗೆ ಹೊರೆಕಾಣಿಕೆ ಹೋಗುವುದು ಒಂದು ರೂಢಿ. ಆದರೆ ಪಂಚಾಯತ್ ಹಬ್ಬಕ್ಕೆ ಹೊರೆಕಾಣಿಕೆ ಮೆರವಣಿಗೆ ಮಾಡುವ ಅಗತ್ಯತೆ ಇತ್ತಾ? ಪಂಚಾಯತ್ ಹಬ್ಬ ಸಮಿತಿ ಸದಸ್ಯರು ಮತ್ತು ಅಡ್ಡೂರು ಹಾಗೂ ಮೂಳೂರು ಗ್ರಾಮದ ನಾಗರಿಕರು ಒಟ್ಟು ಸೇರಿ ೨೦೦ ಮಂದಿ ಈ ಮೆರವಣಿಗೆಯಲ್ಲಿದ್ದರು.
ಫೆಬ್ರವರಿ ೨೬ ಆದಿತ್ಯವಾರ ಬೆಳಿಗ್ಗೆ ಎಂಟು ಗಂಟೆಗೆ ಶೋಭಾ ಯಾತ್ರೆ ಪ್ರಾರಂಭವಾಯ್ತು. ಪಂಚಾಯತ್ ಹಬ್ಬದ ಶೋಭಾ ಯಾತ್ರೆಯಲ್ಲಿ ಕನಿಷ್ಠ ೨೦೦೦ ಮಂದಿ ಭಾಗವಹಿಸಬೇಕಿತ್ತು. ಆದ್ರೆ ಈ ಶೋಭಾಯಾತ್ರೆಯಲ್ಲಿ ಮೂರು ಶಾಲೆಯ ಮಕ್ಕಳು ಸೇರಿ ಬರೋಬ್ಬರಿ ೨೫೦ ಮಂದಿ.
ಗಾಂಧಿವಾದಿ ಅಣ್ಣಾ ಹಜಾರೆಯವರ ಸತ್ಯಾಗ್ರಹಕ್ಕೆ ಬೆಂಬಲ ವಾಗಿ ಗುರುಪುರದಲ್ಲಿ ನಡೆದ ಸಭೆಯನ್ನು ವಿರೋಧಿಸಿದವರು ಮೊನ್ನೆ ಗಾಂಧಿ ಟೋಪಿ ಇಟ್ಟು ರೋಡ್ ಶೋ ಮಾಡ್ಕೊಂಡು ಹೋಗುತ್ತಿದ್ರು. ಗುರುಪುರದಲ್ಲಿ ಪ್ರಬಲ ಜಾತಿ ಅಂದ್ರೆ ಬಿಲ್ಲವರು. ಆದರೆ ಪಂಚಾಯತ್ ಹಬ್ಬದ ವೇದಿಕೆಯಲ್ಲಿ ಬಿಲ್ಲವರು ಇಲ್ಲ ಇತರ ಜಾತಿಯವರೂ ಇಲ್ಲ. ಕೇವಲ ಬಂಟರ ಕಾರುಬಾರು ಜಾಸ್ತಿಯಾಗಿದ್ದರಿಂದ ಇದೊಂದು ಬಂಟರ ಹಬ್ಬದ ಹಾಗೆ ಕಾಣುತ್ತಿತ್ತು ಎಂಬ ಮಾತು ಊರಿನವರ ಬಾಯಲ್ಲಿ ಹರಿದಾಡುತ್ತಿತ್ತು.
ಗುರುಪುರದಲ್ಲಿ ನಡೆಯುವ ಪಂಚಾಯತ್ ಹಬ್ಬಕ್ಕೆ ಬಂಟ್ವಾಳ, ಉಳ್ಳಾಲ ಮತ್ತು ಮೂಡಬಿದ್ರೆ ಶಾಸಕರು ಬರುವ ಅಗತ್ಯತೆ ಇತ್ತೇ...? ಹಾಗಾದರೆ ಆಸ್ಕರ್ ಫೆರ್ನಾಂಡೀಸ್ ಅವರಿಗೂ ಆಹ್ವಾನ ನೀಡಬಹು ದಿತ್ತಲ್ಲವೇ? ತಾಲೂಕು, ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯರನ್ನು ಯಾಕೆ ಈ ಹಬ್ಬಕ್ಕೆ ಕಡೆಗಣನೆ ಮಾಡಿದ್ದೀರಿ? ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ದಾರಿದೀಪದ ವ್ಯವಸ್ಥೆ, ಬಡಕರೆ, ಜಲ್ಲಿಗುಡ್ಡೆ, ನಡುಗುಡ್ಡೆ ಪರಿಸರದ ನಾಗರಿಕರಿಗೆ ಅನುಕೂಲವಾಗುವಂತಹ ಹಿಂದೂ ರುದ್ರಭೂಮಿ, ಸಾರ್ವಜನಿಕ ಶೌಚಾಲಯ, ಮುಂತಾದ ಅಗತ್ಯತೆಗಳ ಬಗ್ಗೆ ಗಮನಹರಿಸದೆ ಹಾಗೂ ಈ ಪಂಚಾಯತ್ ಹಬ್ಬಕ್ಕೆ ಮೂಳೂರು, ಅಡ್ಡೂರಿನ ಸಮಸ್ತ ನಾಗರಿಕರನ್ನು ಗಣನೆಗೆ ತೆಗೆದುಕೊಳ್ಳದೆ ಪಂಚಾಯತ್‌ನ ಅಧ್ಯಕ್ಷರು, ಬೆರಳೆಣಿಕೆಯಷ್ಟು ಸದಸ್ಯರು ಹಾಗೂ ಈ ಗುತ್ತು ಮುಂಡಾಸ್ ಮಹಾರಾಜರ ಪುಡಾರಿ ತಂಡದ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಹಕ್ಕು ಮಂಡನೆ ಮಾಡಿದ ಎಂಬ ಧೀರ ಮಹಿಳೆಯಾದರೂ ಯಾರು? ಈ ಮಹಿಳೆಗೆ ಈ ಹಕ್ಕನ್ನು ಕೊಟ್ಟವರ‍್ಯಾರು? ಅವರ ಸಾಂಸರಿಕ ಜೀವನವೇ ಡೋಲಾ ಯಮಾನವಾಗಿರುವಾಗ ಹಕ್ಕು ಮಂಡನೆ ಮಾಡುವ ಅಧಿಕಾರ ಅವರಿಗಿ ಬೇಕಿತ್ತೇ? ಆದುದರಿಂದ ಗುರುಪುರ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಯು.ಪಿ.ಇಬ್ರಾಹಿಂಯವರಲ್ಲಿ ನಮ್ಮ ವಿeಪನೆ ಏನೆಂದರೆ ನೀವು ಯಾವುದೇ ಕಾರ್ಯಕ್ರಮವನ್ನು ಮಾಡುವುದಾದರೂ ಊರಿನ ಪ್ರತಿಯೊಬ್ಬ ನಾಗರಿಕರನ್ನು ಸಂಧಿಸಿ ಅವರನ್ನೂ ಗಣನೆಗೆ ತೆಗೆದುಕೊಂಡು ಮುಂದಡಿ ಇಡಬೇಕು. ಅದನ್ನು ಬಿಟ್ಟು ಈ ಮುಂಡಾಸ್ ಮಹಾರಾಜನಿಗೆ ಕಿರೀಟ ಇಡಲು ಹೋದರೆ ನಿಮ್ಮ ಕಿರೀಟವನ್ನು ನೀವೇ ತ್ಯಾಗ ಮಾಡಬೇ ಕಾಗುತ್ತದೆ. ಇಂಥವರನ್ನು ಮುಂದಿಟ್ಟುಕೊಂಡು ಯಾವುದೇ ಸ್ಪಷ್ಟ ರೂಪುರೇಷೆ ಇಲ್ಲದ ಈ ಪಂಚಾಯತ್ ಹಬ್ಬದ ಸೋಲು ನಿಮಗೆ ಮತ್ತು ನಿಮ್ಮ ತಂಡಕ್ಕೆ ನಾವು ನಾಗರಿಕರು ಕೊಟ್ಟ ಮೊದಲ ಸಮ್ಮಾನ ಎನ್ನುವುದು ನೆನಪಿರಲಿ.


ಇಂದಿಗೂ ನಾಯಕಿ ನಾಯಕನಿಗಿಂತ ಕಡಿಮೆ ಸಂಭಾವನೆ ಪಡೆಯುವ ಸಂಪ್ರದಾಯ ಬಣ್ಣದ ಲೋಕದಲ್ಲಿದೆ. ನನ್ನ ಪ್ರಕಾರ ಇದು ಸರಿಯಲ್ಲ.

ಎಲ್ಲಾ ಕ್ಷೇತ್ರಗಳಲ್ಲೂ ತಾನು ಈಸಿ ಜಯಿಸಬಲ್ಲೆ ಎಂಬುದನ್ನು ತೋರಿಸಿದ ಮೇಲೂ ಮಹಿಳೆ ಈ ಸಮಾ ಜದಲ್ಲಿ ಸಮಾನಳೆನಿಸಿಕೊಂಡಿಲ್ಲ ಎಂಬ ನೋವು ಲಕ್ಕಿ ಸ್ಟಾರ್ ರಮ್ಯಾರಲ್ಲಿ ಜೋರಾಗಿರುವಂತಿದೆ. ಚಿತ್ರರಂಗ ದಲ್ಲಿ ನಾಯಕರಿಗೆ ಕೊಡುವಷ್ಟು ಸಂಭಾವನೆ ನಮಗೆ, ಅಂದರೆ ನಾಯಕಿಯರಿಗೆ ಯಾಕೆ ಕೊಡುವುದಿಲ್ಲ? ಈ ತಾರತಮ್ಯ ಯಾಕೆ ಎಂದವರು ಪ್ರಶ್ನಿಸಿದ್ದಾರೆ.
ರಮ್ಯಾರಿಂದ ಈ ಹೇಳಿಕೆ ಬಂದಿರೋದು ವಿಶ್ವ ಮಹಿಳಾ ದಿನದ ಅಂಗವಾಗಿ. ಚಿತ್ರರಂಗದಲ್ಲಿ ಸ್ತ್ರೀಯರ ಪರಿಸ್ಥಿತಿ ಹೇಗಿದೆ, ತಾನು ನಡೆದು ಬಂದ ಹಾದಿಯೇನು ಎಂಬುದನ್ನು ವಿಶ್ಲೇಷಣೆ ಮಾಡುತ್ತಿದ್ದ ರಮ್ಯಾ ಸಂಭಾವನೆ ತಕರಾರನ್ನೂ ಎತ್ತಿದರು.
ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ತೀರಾ ಕಡಿಮೆಯಾಗುತ್ತಿವೆ. ನಾನು ನಟಿಸಿದ ಕೊನೆಯ ಮಹಿಳಾ ಪ್ರಧಾನ ಚಿತ್ರ, ಮೀರಾ ಮಾಧವ ರಾಘವ. ಅದರ ನಂತರ ನಟಿಸಿಲ್ಲ. ಒಂದು ವೇಳೆ ಮಹಿಳಾ ಪ್ರಧಾನ ಚಿತ್ರದ ಅವಕಾಶ ಸಿಕ್ಕಿದರೆ, ಮೊದಲು ಓಕೆ ಎಂದು ಬಿಡುತ್ತೇನೆ ಎಂದವರು ಚಕ್ಕಂತ ಸಂಭಾವನೆ ವಿಚಾರ ಪ್ರಸ್ತಾಪಿಸಿದರು.
ಕಲಾವಿದರ ಸಂಭಾವನೆಯಲ್ಲೂ ಪುರುಷ ಪ್ರಾಧಾನ್ಯತೆಯೇ ಜಾಸ್ತಿ. ಇಂದಿಗೂ ನಾಯಕಿ ನಾಯಕನಿ ಗಿಂತ ಕಡಿಮೆ ಸಂಭಾವನೆ ಪಡೆಯುವ ಸಂಪ್ರದಾಯ ಬಣ್ಣದ ಲೋಕದಲ್ಲಿದೆ. ನನ್ನ ಪ್ರಕಾರ ಇದು ಸರಿಯಲ್ಲ. ನಾಯಕರಷ್ಟೇ ಸಂಭಾವನೆ ನಮಗೂ ಸಿಗಬೇಕು ಎಂದರು.
ಇತ್ತೀಚಿನ ಪರಸಂಗ ಪ್ರಸಂಗಗಳನ್ನು ಉಲ್ಲೇಖಿಸದೆ ಪರೋಕ್ಷವಾಗಿ ಪ್ರಸ್ತಾಪಿಸಿದ ರಮ್ಯಾ, ನಾಯಕರ ಪತ್ನಿಯ ರನ್ನು ಅಪಾದಮಸ್ತಕ ಹೊಗಳಿದರು. ನಿಜಕ್ಕೂ ಹೀರೋಗಳ ಪತ್ನಿಯರು ತುಂಬಾನೇ ಸ್ಟ್ರಾಂಗ್ ಅಂದರು. ಅದಕ್ಕೆ ಕಾರಣ, ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿರುವ ಗಾಸಿಪ್. ಇದನ್ನು ಕೇಳಿಯೂ ಅವರ ಹೆಂಡತಿಯರು ಚೆನ್ನಾಗಿ ಸಂಸಾರ ಮಾಡುತ್ತಾರಲ್ಲ ಅಂತ ಅಚ್ಚರಿ ವ್ಯಕ್ತ ಪಡಿಸಿದರು. ಅವರೇ ನಿಜವಾದ ಗೃಹಿಣಿಯರು ಎಂದು ರಮ್ಯಾ ಸರ್ಟಿಫಿಕೇಟ್ ಕೂಡ ಕೊಟ್ಟರು.

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೬ ವರ್ಷ ವಯಸ್ಸು. ನಾನು ಒಬ್ಬಳನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನಾವು ವಾರಕ್ಕೊಮ್ಮೆ ಆದಿತ್ಯವಾರ ಭೇಟಿಯಾ ಗುತ್ತೇವೆ. ಅವಳನ್ನು ನಾನು ಬಹಳ ಇಷ್ಟಪಡುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ಅವಳು ಈಗ ಡಿಗ್ರಿ ಕಲಿಯುತ್ತಿದ್ದಾಳೆ. ನಾನು ಆಕೆಯನ್ನು ತುಂಬಾ ಪ್ರೀತಿಸುತ್ತಿರುವ ಕಾರಣ ತಿಂಗಳ ಹಿಂದೆ ಆಕೆಯಲ್ಲಿ ಸೆಕ್ಸ್ ಮಾಡೋಣ ಎಂದು ಕೇಳಿದ್ದಕ್ಕೆ ಆಕೆ ಒಪ್ಪಿಗೆ ಕೊಟ್ಟಿದ್ದಳು. ನಾನು ಆಕೆಯನ್ನು ಒಂದು ದಿನ ಲಾಡ್ಜ್‌ಗೆ ಕರೆದುಕೊಂಡು ಹೋದೆ. ಆಕೆ ನನಗೆ ಸಮ್ಮತಿ ನೀಡಿದಳು. ನಾನು ಮೊದಲ ಬಾರಿ ಆಕೆಯ ಜೊತೆ ಸೆಕ್ಸ್ ಮಾಡಿದೆ. ನಾವು ಅಂದು ಕೆಲವು ಬಾರಿ ಸೆಕ್ಸ್ ನಡೆಸಿದ್ದೇವೆ. ನನ್ನ ಸಮಸ್ಯೆಯೇನೆಂದರೆ, ಈ ವೇಳೆ ನಾನು ನಿರೋಧ್ ಬಳಸಿಲ್ಲ. ಈಗ ಅವಳಿಗೆ ಮುಟ್ಟು ನಿಂತಿದೆ ಎನ್ನುತ್ತಿದ್ದಾಳೆ. ನನಗೆ ಇದರಿಂದ ಭಯ ಆರಂಭವಾಗಿದೆ. ಆಕೆಯ ಮನೆಯವರು ತುಂಬಾ ಜೋರಿದ್ದಾರೆ. ಆಕೆಗೆ ತಂದೆ-ತಾಯಿ ಇಲ್ಲ. ಅಣ್ಣಂದಿರು ಅವಳನ್ನು ಓದಿಸುತ್ತಿದ್ದಾರೆ. ಈ ವಿಚಾರ ಅವರಿಗೆ ತಿಳಿದರೆ ನನ್ನನ್ನು ಬಿಡಲಿಕ್ಕಿಲ್ಲ. ನನಗೆ ಒಮ್ಮೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಅನಿಸುತ್ತದೆ. ಆಕೆ ನನ್ನನ್ನು ಬೇಗ ಮದುವೆಯಾಗು, ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ನನ್ನನ್ನು ಇನ್ನಷ್ಟು ಹೆದರಿಸುತ್ತಾಳೆ.


ಜಾತಿಯಾಧಾರಿತ ಸಂಘಟನೆಗಳು ಯಾವುದೇ ಒಂದು ರಾಜಕೀಯ ಪಕ್ಷದ ಹಿಂದೆ ಓಡಾಡುವುದು ಸರಿಯಲ್ಲ. ಯಾವುದಾದರೂ ರಾಜಕೀಯ ಪಕ್ಷ ಬಂದರೂ ಅದನ್ನು ಬಿಲ್ಲವರ ವಿರೋಧಿ ಎಂದು ಬಣ್ಣಿಸುವುದು, ಅದರಿಂದ ಬಿಲ್ಲವರಿಗೆ ಯಾವುದೇ ಲಾಭ ಇಲ್ಲ ಎಂದು ಹೇಳುವುದು ಎಷ್ಟು ಸರಿ ಎಂದೂ ಆಲೋಚಿಸಬೇಕಾಗುತ್ತದೆ. ಮಾನ್ಯ ಜನಾದನ ಪೂಜಾರಿಯವರೂ ಕಾಂಗ್ರೆಸ್‌ನ ಅನುದಾನವನ್ನು ತಂದು ಬಿಲ್ಲವರಿಗಾಗಿ ಸಾಕಷ್ಟು ಉಪಕಾರವನ್ನು ಮಾಡಿದ್ದನ್ನು ಮರೆಯಬಾರದು. ಹಾಗಿರುವಾಗ ನವೀನ್‌ಚಂದ್ರರವರು ಬಿಲ್ಲವರಿಗಾಗಿ ಎರಡು ಕೋಟಿ ರೂಪಾಯಿಗಳನ್ನು ಅನುದಾನವಾಗಿ ಪಡೆದಿರುವ ಬಗ್ಗೆ ಅವರನ್ನು ಬಿಲ್ಲವರೆಲ್ಲೂ ಅಭಿನಂದಿಸಬೇಕಾಗಿದೆ.

ನಾಗೇಶ್ ಸುವರ್ಣ, ಅಳಕೆ
ಮಾ. ೧ರ ಬಹಿರಂಗ ಪತ್ರ ವಿಭಾಗದಲ್ಲಿ ವಿಜಯ ಪೂಜಾರಿ ಎಂಬವರು ಬಿಲ್ಲವರ ಯೂನಿಯನ್ ಒಡೆಯಲು ಬಿಲ್ಲವರೇ ಯಾಕೆ ಎಂಬ ಪತ್ರಕ್ಕೆ ಪ್ರತಿಕ್ರಿಯೆ
ಈ ಪತ್ರದಲ್ಲಿ ನೆಚ್ಚಿನ ಬಿಜೆಪಿಯನ್ನು ಹೈಜಾಕ್ ಮಾಡಿ ಕೊಂಡು ಒಂದಷ್ಟು ಅನುದಾನ ಪಡೆಯುವ ಮಾಸ್ಟರ್‌ಪ್ಲಾನ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಯೂನಿಯನ್‌ಗೆ ಅದರ ಬೆಂಬಲ ಇಲ್ಲ ಎಂದು ಹೇಳಿರುವುದು ಸರಿಯಾದ ವಿಚಾರವಲ್ಲ ಯಾಕೆಂದರೆ ಜಾತಿಯಾಧಾರಿತ ಸಂಘಟನೆಗಳು ಯಾವುದೇ ಒಂದು ರಾಜಕೀಯ ಪಕ್ಷದ ಹಿಂದೆ ಓಡಾಡುವುದು ಸರಿಯಲ್ಲ. ಯಾವುದಾದರೂ ರಾಜಕೀಯ ಪಕ್ಷ ಬಂದರೂ ಅದನ್ನು ಬಿಲ್ಲವರ ವಿರೋಧಿ ಎಂದು ಬಣ್ಣಿಸುವುದು, ಅದರಿಂದ ಬಿಲ್ಲವರಿಗೆ ಯಾವುದೇ ಲಾಭ ಇಲ್ಲ ಎಂದು ಹೇಳುವುದು ಎಷ್ಟು ಸರಿ ಎಂದೂ ಆಲೋಚಿಸಬೇಕಾಗುತ್ತದೆ. ಮಾನ್ಯ ಜನಾದನ ಪೂಜಾರಿಯವರೂ ಕಾಂಗ್ರೆಸ್‌ನಲ್ಲಿದ್ದುಕೊಂಡು ಬಿಲ್ಲವರಿಗಾಗಿ ಸಾಕಷ್ಟು ಉಪಕಾರವನ್ನು ಮಾಡಿದ್ದನ್ನು ಮರೆಯಬಾರದು. ಹಾಗಿರುವಾಗ ನವೀನ್‌ಚಂದ್ರರವರು ಬಿಲ್ಲವರಿಗಾಗಿ ಎರಡು ಕೋಟಿ ರೂಪಾಯಿಗಳನ್ನು ಅನುದಾನವಾಗಿ ಪಡೆದಿರುವ ಬಗ್ಗೆ ಅವರನ್ನು ಬಿಲ್ಲ ವರೆಲ್ಲೂ ಅಭಿನಂದಿಸಬೇಕಾಗಿದೆ. ಅಭಿನಂದಿಸಲು ಮನಸ್ಸಿಲ್ಲದಿದ್ದರೆ ಸುಮ್ಮನಿರಬೇಕೇ ಹೊರತು ಇಲ್ಲ ಸಲ್ಲದ ಅಪವಾದ ಹೇರುವುದು ಸರಿಯಲ್ಲ. ಹೇಗಿದ್ದರೂ ಈ ಅನುದಾನ ಬಿಲ್ಲವರಿಗೇ ಬಂದಿರುವುದರಿಂದ ಅದು ಕಾಂಗ್ರೆಸ್‌ನ ಬಿಲ್ಲವರಾಗಲೀ, ಬಿಜೆಪಿ ಅಥವಾ ಇನ್ನಿತರ ಬಿಲ್ಲವರಿಗಾಗಲೀ ಅನುಕೂಲವೇ ಆಗುತ್ತದೆ ಹೊರತು ಯಾವುದೇ ನಷ್ಟವಿಲ್ಲ. ಬಿಲ್ಲವರಲ್ಲಿ ಕಾಂಗ್ರೆಸ್ ಬಿಲ್ಲವ, ಬಿಜೆಪಿ ಬಿಲ್ಲವ, ಕಮ್ಯುನಿಸ್ಟ್ ಬಿಲ್ಲವ ಎಂದು ಪಾಲು ಮಾಡುವ ಅಗತ್ಯವೇನಿದೆ.?
ಬಿಲ್ಲವ ಮಹಾಮಂಡಲ, ಯುವವಾಹಿನಿ, ನಾರಾಯಣ ಗುರು ವೇದಿಕೆ, ಬಿಲ್ಲವ ಜಾಗೃತಿ ಬಳಗ ಇತ್ಯಾದಿಗಳನ್ನು ಕಟ್ಟಿದ ಉದ್ದೇಶ ಏನು ಎಂದು ಇದರ ಪದಾಧಿಕಾರಿಗಳು ಮತ್ತು ಸಮಸ್ತ ಬಿಲ್ಲವರು ಆಲೋಚಿಸಬೇಕಾದ ಅವಶ್ಯಕತೆ ಇದೆ. ಯಾಕೆಂದರೆ ಇವೆಲ್ಲಾ ಸಂಘಟನೆಗಳು ಬಿಲ್ಲವರ ಸಮಗ್ರ ಉನ್ನತಿಗಾಗಿಯೇ ರಚಿಸಲ್ಪಟ್ಟದ್ದು ಎಂಬುದನ್ನು ಮರೆಯಬಾರದು. ಸಭೆ ಸಮಾರಂಭಗಳಲ್ಲಿ ಗುಂಪು ಗಳನ್ನು ಕಟ್ಟಿಕೊಂಡು ಸಾರ್ವಜನಿಕವಾಗಿ ಗಲಾಟೆ ಮಾಡುವುದು. ಒಂದು ಸಂಘಟನೆಯನ್ನು ಮತ್ತು ಅದರ ಪದಾಧಿಕಾರಿಗಳನ್ನು ಬೈಯ್ದಾಡುವುದು ಇವೆಲ್ಲಾ ಸಮಾಜದ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ.
ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇರುವಾಗ ನವೀನ್‌ಚಂದ್ರರವರಿಗೆ ಬೇರೆ ರೀತಿಯಿಂದಲೂ ಸ್ವಂತಕ್ಕಾಗಿ ಉಪಯೋಗವನ್ನು ಪಡೆದುಕೊಳ್ಳಬಹುದಾಗಿತ್ತು. ಆದರೆ ಅವರು ಬಿಲ್ಲವರಿಗಾಗಿ ಅನುದಾನವನ್ನು ಪಡೆದಿರುವಾಗ ಅದು ಅವರ ಸ್ವಂತಕ್ಕೆ ಪಡೆದುಕೊಂಡದ್ದು ಎಂಬ ರೀತಿಯಲ್ಲಿ ಕೆಲವರು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಕೆಲವೊಂದು ಸ್ವಾರ್ಥದ ವಿಚರಗಳಿಗಾಗಿ ಅಪಪ್ರಚಾರ ಮಾಡುವವರು, ಗುಲ್ಲೆಬ್ಬಿಸುವವರು ಎಲ್ಲಾ ಕಡೆಗಳಲ್ಲೂ ಇರುತ್ತಾರೆ. ಇದಕ್ಕೆ ಕಿವಿ ಗೊಟ್ಟು ಒಮ್ಮೆಲೇ ತೋಳೇರಿಸಿಕೊಂಡು ತೊಡೆ ತಟ್ಟುವರಿಗೂ ಕಡಿಮೆ ಇಲ್ಲ. ವೈಯುಕ್ತಿಕ ವಿಚಾರಗಳಲ್ಲಾದರೆ ಇದೆಲ್ಲಾ ನಡೆಯುತ್ತದೆ. ಈ ರೀತಿ ಮಾಡು ವುದರಿಂದ ಏನಾದರೂ ಅನಾಹುತಗಳಾದರೆ ಅದು ವೈಯುಕ್ತಿವಾಗಿಯೇ ಇರುತ್ತದೆ. ಆದರೆ ಸಮುದಾಯದ ಸಂಘಟನೆಗಳ ಬಗ್ಗೆ ಈ ರೀತಿ ಮಾಡುವುದರಿಂದ ಇದರ ಪರಿಣಾಮ ಸಮಸ್ತ ಸಮುದಾಯದ ಮೇಲೆ ಬೀಳುವುದಲ್ಲದೆ. ಇತರ ಸಮುದಾಯದವರಿಗೆ ನಮ್ಮ ಸಮಾಜದ ಮೇಲಿನ ಗೌರವ ಕಡಿಮೆಯಾಗುತ್ತದೆ. ನಮ್ಮ ಸಮುದಾಯದಲ್ಲೇ ಕೆಲವರು ಈ ಕಾರಣಗಳಿಗಾಗಿಯೇ ಜಾತಿ ಸಂಘಟನೆಗೆ ಸೇರುವ ಉಸಾಬರಿಯೇ ಬೇಡ ಎಂದು ತಮ್ಮಷ್ಟಕ್ಕೆ ತಾವೇ ಇದ್ದು ಬಿಡುವ ಸಾಧ್ಯತೆಗಳೂ ಇವೆ.
ರಾಜಕೀಯವು ಸಮುದಾಯದ ಒಗ್ಗಟ್ಟನ್ನು ಒಡೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಹಾಗಿರುವಾಗ ಜಾತಿ ಸಂಘಟನೆಗಳು ರಾಜಕೀಯದಿಂದ ಹೊರತಾಗಿರುವುದು ಅತೀ ಅವಶ್ಯಕವಾಗಿದೆ. ರಾಜಕೀಯ, ಮತ ಹಾಕುವುದು ವ್ಯಕ್ತಿಗಳ ವೈಯುಕ್ತಿಕ ಅಭಿಪ್ರಾಯ. ಸಮುದಾಯದ ಸಂಘಟನೆ ಮಾಡುವಾಗ ಅದರಲ್ಲಿ ಎಲ್ಲಾ ಪಕ್ಷದವರೂ ಇರುತ್ತಾರೆ ಎಂಬುದನ್ನು ಮನಗಂಡು ಅದಕ್ಕೆ ಪೂರಕವಾಗಿ ವರ್ತಿಸಬೇಕೇ ಹೊರತು ಪೂಜಾರಿಯವರು ಕಾಂಗ್ರೆಸ್‌ನಿಂದ ಅನುದಾನ ಪಡೆದರು, ನವೀನ್ ಚಂದ್ರರು ಬಿಜೆಪಿಯನ್ನು ಹೈಜಾಕ್ ಮಾಡಿದರು ಎಂಬಂತಹಾ ಹೇಳಿಕೆಗಳನ್ನು ಕೊಡುವುದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ. ಸಮುದಾಯದ ಸಂಘಟನೆಯೊಳಗೆ ರಾಜಕೀಯದ ಹೊಲ ಸನ್ನು ತುರುಕಿ ಇಡೀ ಸಮುದಾಯವೇ ನಾರುವಂತೆ ಮಾಡುವುದನ್ನು ಬಿಟ್ಟುಬಿಡಬೇಕು.
‘ಬಿಲ್ಲವರ ಯೂನಿಯನ್ ಒಡೆಯಲು ಬಿಲ್ಲವರೇ ಯಾಕೆ? ಎಂಬ ಪ್ರಶ್ನೆಯನ್ನು ನೋಡುವಾಗ ತುಳುವಿನಲ್ಲಿರುವ ‘ಜಾತಿಗ್ ಜಾತಿ ಪಗೆ, ನಾಯಿಗ್ ನಾಯಿಪಗೆ ಎಂಬ ಮಾತು ನೆನಪಿಗೆ ಬರುತ್ತದೆ. ಯಾಕೆಂದರೆ ಯಾವುದಾದರೂ ಜಾತಿಯ ಸಂಘಟನೆ ಪ್ರಬಲವಾಗಿದ್ದಾಗ ಅದನ್ನು ಒಡೆಯಲು ಇತರ ಜಾತಿಯವರು ಬರುವುದಿಲ್ಲ. ಆ ಜಾತಿಯಲ್ಲೇ ವೈಯುಕ್ತಿಕ ಹಿತಾಸಕ್ತಿಗಾಗಿ, ಸ್ವಾರ್ಥಕ್ಕಾಗಿ ಕೆಲವರು ತಯಾ ರಾಗುತ್ತಾರೆ. ಬಿಲ್ಲವರಿಗೆ ಒಂದು ಕಾಲದಲ್ಲಿ ತಮ್ಮ ಜಾತಿಯವರು ಸಂಘಟಿ ತರಾಗಬೇಕು. ಆ ಮೂಲಕ ತಮ್ಮ ಉದ್ಧಾರವಾಗಬೇಕು ಎಂಬ ಮನೋಭಾವ ಹುಟ್ಟಿದ್ದರಿಂದ ನಾರಾಯಣ ಗುರು ಎಂಬ ಶಕ್ತಿಯ ಕೇಂದ್ರದಿಂದಾಗಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಆದರೆ ಸಂಘಟನೆ ಯಾವಾಗ ಬಲವಾಯಿತೋ ಅಂದಿ ನಿಂದಲೇ ಒಡಕು ಹುಟ್ಟಿತು. ಇತ್ತೀಚೆಗೆ ನಡೆದ ಘಟನೆಗಳು ಬಿಲ್ಲವರನ್ನು ಛಿದ್ರ ಛಿದ್ರ ಗೊಳಿಸುವ ಲಕ್ಷಣಗಳು ಕಂಡು ಬರುತ್ತಿವೆ. ಆದುದರಿಂದ ನವೀನ್ ಚಂದ್ರರವರು ಮಾಡಿರುವ ಕಾರ್ಯವನ್ನು ಯಾರೂ ಕೂಡಾ ದೂಷಿಸದೆ ತಮ್ಮಂದಾಗುವಷ್ಟು ಸೇವೆಯನ್ನು ಬಿಲ್ಲವ ಸಮಾಜಕ್ಕೆ ಅರ್ಪಿಸುವ ಅಗತ್ಯವಿದೆ.
ಯಾವುದೇ ಒಂದು ಸಿದ್ದಾಂತ, ಪದ್ಧತಿ, ವಿಧಾನ, ವ್ಯವಸ್ಥೆಗಳು ಎಂದಿಗೂ ಸಾರ್ವಕಾಲಿಕ ಸತ್ಯವಾಗಿರುವುದಿಲ್ಲ. ಒಂದು ಕಾಲದಲ್ಲಿ ಒಂದೊಂದು ವ್ಯವಸ್ಥೆಗಳು ಅನಿವಾರ‍್ಯ ಎಂದು ಅನಿಸುತ್ತದೆ. ಅನಿವಾರ‍್ಯ ಅನಿಸಿದ ವ್ಯವಸ್ಥೆ ಮತ್ತೆ ಕೆಲವು ಕಾಲ ಕಳೆದ ನಂತರ ಮತ್ತ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಮತ್ತೆ ಹಳೆಯ ಪದ್ಧತಿಯೇ ಸರಿಯಾದುದು ಎಂದನಿಸುತ್ತದೆ. ಅದೂ ತುಸು ಕಾಲದ ನಂತರ ಸವಕಲು ನಾಣ್ಯದಂತಾಗುತ್ತದೆ. ಇವೆಲ್ಲವೂ ಮಾನವನ ಮಾನಸಿಕತೆಗೆ ಅನುಗುಣವಾಗಿ ಬದಲಾವಣೆಯಾಗುತ್ತಲೇ ಸಾಗುತ್ತದೆ. ಇದು ಈ ಜಗತ್ತಿನ ನಿಯಮ. ‘ಪರಿವರ್ತನೆ ಜಗತ್ತಿನ ನಿಯಮ’ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸಾರಿದ್ದು ಇದೇ ಆಗಿರಬಹುದೇ?
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಜಗತ್ತಿನಲ್ಲಿ ಈ ವ್ಯವಸ್ಥೆಯೊಳಗೆ ಅನೇಕ ದೇಶಗಳು ಇವೆ. ಅಮೇರಿಕಾದಂತಹಾ ದೇಶಗಳಲ್ಲಿ ಪ್ರಜಾಪ್ರಭುತ್ವ ಇದೆ ಎಂದರೂ ಅದು ಕಾಲಕ್ಕೆ ತಕ್ಕಂತೆ ವ್ಯವಸ್ಥೆಯಲ್ಲಿ ಕೆಲವು ಪರಿವರ್ತನೆಗಳನ್ನು ಮಾಡಿಕೊಂಡು ತನ್ನ ದೇಶದ, ಜನತೆಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಲೇ ಬಂದಿದೆ. ಆದರೆ ನಾವು ಈ ಸಿದ್ದಾಂತಕ್ಕೆ ಚಾಚೂ ತಪ್ಪದೆ ಅಂಟಿಕೊಂಡಿರುವುದರಿಂದ. ಅಥವಾ ಬದಲಾವಣೆ ಬೇಕು ಎಂದು ಅನಿಸಿದರೂ ಬದಲಾವಣೆ ಮಾಡ ಲಾರದ ಅಸಹಾಯಕತೆ ನಮ್ಮನ್ನು ಕಾಡುತ್ತಿರುವುದರಿಂದ. ಬದಲಾ ವಣೆ ಮಾಡಿದಲ್ಲಿ ಇನ್ನಷ್ಟು ಬದಲಾವಣೆಗಾಗಿ ಸಮಾಜ ದ್ರೋಹಿ ಶಕ್ತಿಗಳು ಕಾದು ಕುಳಿತು ಒತ್ತಡ ಹೇರುತ್ತಿರುವ ಭೀತಿಯಿಂದಾಗಿ ನಾವು ನಮ್ಮ ವ್ಯವಸ್ಥೆಯಲ್ಲಿ ದಿನೇ ದಿನೇ ಅಧಃಪತನವನ್ನು ಕಾಣುತ್ತಿದ್ದೇವೆ.
ಪ್ರಜಾಪ್ರಭುತ್ವದ ಮೊದಲನೆಯ ಸ್ತಂಭ ನಾವೇ ಆಗಿದ್ದೇವೆ ಯಾಕೆಂದರೆ ಪ್ರಜೆಗಳಾದ ನಾವು ಆರಿಸಿ ಕಳುಹಿಸಿದ ನಮ್ಮ ಪ್ರತಿನಿಧಿಗಳು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುತ್ತಾರೆ. ನಮ್ಮ ಪ್ರತಿನಿಧಿಗಳು ಯಾವ ರೀತಿ ಇದ್ದಾರೆ ಎಂದು ನಮ್ಮಲ್ಲಿ ಯಾರಲ್ಲಾದರೂ ಕೇಳಿದರೆ ನಾವೇನು ಉತ್ತರ ಹೇಳುತ್ತೇವೆ? ಶುದ್ಧ, ಸ್ವಚ್ಛ ಹಸ್ತರಾಗಿದ್ದು, ಪ್ರಾಮಾಣಿಕರಾಗಿದ್ದಾರೆ ಎಂದು ನಾವು ಹೇಳುತ್ತೇವೆಯೇ? ಖಂಡಿತವಾಗಿಯೂ ಇಲ್ಲ. ಪ್ರತಿ ಯೋರ್ವ ಪ್ರಜಾ ಪ್ರತಿನಿಧಿಯೂ ಆತ ಪ್ರತಿನಿಧಿಯಾಗಿ ಆಯ್ಕೆಯಾಗುವ ಮೊದಲು ಹೇಗಿದ್ದ ಮತ್ತು ಆನಂತರ ಹೇಗಾದ ಎಂಬುದರ ಬಗ್ಗೆ ಪಟ್ಟಿ ಬಿಚ್ಚುತ್ತಾ ಸಾಗುತ್ತೇವೆ. ರಾಜಕೀಯ ಸೇರಿ ಸಾಕಷ್ಟು ದುಡ್ಡು ಮಾಡಿದ ಓಟು ಹಾಕಿದ ನಮ್ಮನ್ನೇ ಮರೆತು ಬಿಟ್ಟಿದ್ದಾನೇ ಖದೀಮ ಎಂದು ಶಾಪ ಹಾಕುತ್ತೇವೆ. ಈ ಶಾಪಗಳೆಲ್ಲವೂ ಪರೋಕ್ಷವಾಗಿ ನಮ್ಮನ್ನು ನಾವು ಬೈಯ್ದಾ ಡಿದಂತೆ ಆಗಿದ್ದರೂ ಪ್ರಜಾ ಪ್ರಭುತ್ವದ ಪ್ರಧಾನ ಕಂಬವಾದ ಶಾಸಕಾಂಗದ ಗತಿ ಏನಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ. ಸಾಕಷ್ಟು ನಿರೀಕ್ಷೆ, ಆಸೆ ಆಕಾಂಕ್ಷೆಗಳೊಂದಿಗೆ ೧೯೪೭ರ ನಂತರ ಮರುಹುಟ್ಟು ಪಡೆದ ನಾವು ನಮ್ಮನ್ನಾಳುವುದಕ್ಕೆ ವಜ್ರದ ಕಂಭವೊಂದನ್ನು ನೀಡುತ್ತಿದ್ದೇವೆ ಎಂದು ಭಾವಿಸಿದರೆ ಅದೀಗ ತುಕ್ಕು ಹಿಡಿದದ್ದು ಮಾತ್ರವಲ್ಲ ಬಿರುಕು ಬಿಟ್ಟಿದೆ. ಆ ಬಿರುಕಿನೆಡೆಯಲ್ಲಿ ಸಿಲುಕಿಕೊಂಡ ನಾವು ವಿಲವಿಲನೆ ಒದ್ದಾಡುತ್ತಿದ್ದೇವೆ ಎಂದರೂ ತಪ್ಪಿಲ್ಲ. ನಮ್ಮ ತೆರಿಗೆಯ ಹಣದಲ್ಲಿ ಕೋಟಿ ಕೋಟಿ ತೂಗುವ ನಮ್ಮ ಪ್ರತಿನಿಧಗಳ ಬಗ್ಗೆ ನಮಗೆ ತಾತ್ಸಾರವಿದೆ.
ಎರಡನೆಯ ಕಂಬವಾದ ಕಾರ್ಯಾಂಗದ ಗತಿ ಏನಾಗಿದೆ ಎಂದರೆ ಯಾವುದಾದರೂ ಅತ್ಯಗತ್ಯ ಕೆಲಸಕ್ಕಾಗಿ ಒಂದು ಅರ್ಜಿ ಹಿಡಿದು ಸರಿಕಾರಿ ಕಚೇರಿಗೆ ಕಾಲಿಟ್ಟರೇನೇ ಗೊತ್ತಾಗುತ್ತದೆ. ಸರಕಾರಿ ಇಲಾಖೆಗಳಲ್ಲಿ ನಮ್ಮ ಅವಶ್ಯಕತೆಗಳ ಪೂರೈಸಿಕೊಳ್ಳುವುದಕ್ಕಾಗಿ ಯಾವುದಾದರೂ ಏಜೆಂಟನಿಗೆ, ಅಥವಾ ಪ್ರತಿನಿಧಿಗೆ ‘ಸರಕಾರಿ ಆಫೀಸಿನ ಕಂಬ ಕಂಬಗಳಿಗೆ ತಿನ್ನಿಸುವುದಕ್ಕಾಗಿ’ ಎಂದು ಒಂದಿಷ್ಟು ಹಣ ಕೊಟ್ಟು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವವರಿಗೆ ಇದರ ತೀವ್ರತೆ ಅರ್ಥವಾಗಲಾರದು. ಸ್ವತಃ ಒಂದು ಅರ್ಜಿ ಹಿಡಿದು ಸರಕಾರಿ ಕಚೇರಿಗೆ ಹೋದರೆ ನಮ್ಮ ಕಾರ್ಯಾಂಗ ವ್ಯವಸ್ಥೆ ಎಷ್ಟು ಹದಗೆಟ್ಟು ಹೋಗಿದೆ ಎಂದು ತಿಳಿದು ಬರುತ್ತದೆ. ಇದೆಲ್ಲಾ ಸಣ್ಣ ಪುಟ್ಟ ಕೆಲಸಗಳ ವಿಚಾರವಾಯಿತು. ಇನ್ನು ಉನ್ನತ ಮಟ್ಟದಲ್ಲಿ ಕೆಲಸ ಕಾರ್ಯಗಳು ಆಗಬೇಕಾದರೆ ಅದಕ್ಕಾಗಿ ಪರದಾಡುವ ಪರಿ ಕಂಡಾಗ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ ಅಥವಾ ದಳ್ಳಾಲಿಗಳ ಸಾಮ್ರಾಜ್ಯದಲ್ಲಿ ಇದ್ದೇವೆಯೇ ಎಂಬ ಸಂಶಯ ಬಾರದೇ ಇರಲಾರದು. ಹಳ್ಳಿಯಿಂದ ದಿಲ್ಲಿಯವರೆಗೆ ಸರಕಾರಿ ಕಚೇರಿಗಳ ಪರಿಸ್ಥಿತಿ ಒಂದೇ ರೀತಿ ಇದೆ. ಹಳ್ಳಿಯಲ್ಲಿ ಸಣ್ಣ ಮಟ್ಟದಲ್ಲಿದ್ದರೆ ದಿಲ್ಲಿಯಲ್ಲಿ ದೊಡ್ಡ ಮಟ್ಟದಲ್ಲಿದೆ. ಇಲ್ಲೆಲ್ಲಾ ಜನಸಾಮಾನ್ಯರನ್ನು ಹಾರ್ದಿಕವಾಗಿ ಸ್ವಾಗತಿಸುವುದು ಗೋಡೆಯ ಮೇಲೆ ಬರೆದ ಬರಹಗಳು ಮಾತ್ರ. ಐದಾರು ವರ್ಷಗಳ ಕಾಲ ಒಂದು ಬರಹ ಕಂಡು ಬಂದರೆ ಮತ್ತೆ ಇನ್ನೊಮ್ಮೆ ಹೋದಾಗ ಇನ್ನೊಂದು ಕಣ್ಣಿಗೆ ತಂಪು ನೀಡುವ ಬರಹ ಕಂಡು ಬರುತ್ತದೆಯೇ ಹೊರತು ಅದಕ್ಕೆ ತಕ್ಕಂತಹಾ ಕೆಲಸ ಕಾರ್ಯಗಳು ನಡೆಯುವುದು ಕಂಡು ಬರುವುದಿಲ್ಲ. ಇದೆಲ್ಲಾ ನಮಗೆ ಮಾಮೂಲಿಯಾಗಿ ಬಿಟ್ಟಿದೆ. ಯಾವನಾದರೂ ಪುಣ್ಯಾತ್ಮನೊಬ್ಬ ಅತೀ ಶೀಘ್ರವಾಗಿ, ನಮಗೆ ಬೇಕಾದ ಕೆಲಸಕಾರ್ಯಗಳನ್ನು ಮಾಡಿಕೊಟ್ಟರೆ ಅತನಿಗೆ ನಮ್ಮಿಂದ ಏನೂ ಲಾಭವಾಗದಿದ್ದರೂ ‘ಈತನಿಗೆ ಏನೋ ದೊಡ್ಡದಾದ ಲಾಭ ಇರಬೇಕು. ಇಲ್ಲವಾದರೆ ಇಷ್ಟು ಸುಲಭವಾಗಿ ನಮ್ಮ ಕೆಲಸ ಮಾಡಿಕೊಡುವವರು ಈ ಕಾಲದಲ್ಲಿ ಇಲ್ಲ’ ಎಂಬ ಭಾವನೆ ಒಂದು ಕ್ಷಣ ನಮ್ಮ ಮನಸ್ಸಲ್ಲಿ ತೇಲಿ ಬರುವಷ್ಟರ ಮಟ್ಟಿಗೆ ನಮ್ಮ ಪರಿಸ್ಥಿತಿ ಮುಟ್ಟಿದೆ.
ಮೂರನೆಯದಾಗಿ ನ್ಯಾಯಾಂಗ. ಈ ಕಂಬದ ಗತಿಯೇನಾಗಿದೆ ಎಂದು ಇತ್ತೀಚೆಗೆ ನಡೆದ ಘಟನೆಗಳು ನಮಗೆ ಸಾರಿ ಹೇಳುತ್ತಿದೆ. ಸಾಮಾನ್ಯ ವ್ಯಕ್ತಿಯೋರ್ವ ಏನಾದರೂ ಅಪರಾಧ ಮಾಡಿದರೆ. ಅಥವಾ ಆರೋಪಿ ಎಂದು ಪರಿಗಣಿಸಲ್ಪಟ್ಟರೆ ಒಂದೆರಡು ದಿನಗಳ ಕಾಲ ನ್ಯಾಯಾಂಗ ಬಂಧನ ಖಡ್ಡಾಯವಾಗಿರುತ್ತದೆ. ಇಲ್ಲಿ ಕೆಲವು ಸ್ಥಿತಿವಂತರು ಅನಾರೋಗ್ಯದ ನೆಪ ವೊಡ್ಡಿ ಆಸ್ಪತ್ತೆಗಳಿಗೆ ದಾಖಲಾಗುವುದು ಇದೆ. ಇತ್ತೀಚೆಗೆ ಆರೋಪಿಗಳೆಂದು ಪರಿಗಣಿಸಲಾದ ನ್ಯಾಯದ ಪರ ವಾದಿಸುವವರು. ಯುವಕರಾಗಿದ್ದೂ, ಗಟ್ಟಿ ಮುಟ್ಟಾಗಿದ್ದರೂ ಅವರು ಬಂಧಿಸಲ್ಪಟ್ಟ ನಂತರ ಆನಾರೋಗ್ಯದ ನೆಪವೊಡ್ಡಿ ಆಸ್ಪತ್ತೆಗೆ ದಾಖಲಾದರು. ಬಂಧನ ಬಂಧನವೇ ಆದರೂ ಅದರಲ್ಲೂ ಒಂದು ನಾಟಕ. ಸ್ವತಃ ನ್ಯಾಯವಾದಿಗಳೂ ಈ ನಾಟಕದಲ್ಲಿ ಭಾಗಿಗಳಾದರು ಎಂದಾದರೆ ಈ ವ್ಯವಸ್ಥೆಯಲ್ಲಿ ನಿರೀಕ್ಷಿಸುವುದೇನಿದೆ? ಇದು ಒಂದು ಸಣ್ಣ ಉದಾಹರಣೆಯಷ್ಟೇ. ಇನ್ನು ದೊಡ್ಡ ದೊಡ್ಡ ಮಟ್ಟದಲ್ಲಿ ನಡೆಯುವ ವ್ಯವಹಾರಗಳನ್ನು ಹೇಳುವ ಅಗತ್ಯವಿಲ್ಲ.
ಪ್ರಜಾಪ್ರಭುತ್ವದ ನಾಲ್ಕನೆಯ ಕಂಬ ಎಂದು ಮಾಧ್ಯಮಗಳನ್ನು ಪರಿಗಣಿಸಲಾಗಿದೆ. ಈ ಕಂಬದಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ ಮುದ್ರಣ, ದೃಶ್ಯ, ಶ್ರಾವ್ಯ ಎಂಬಿತ್ಯಾದಿಯಾಗಿ ಆಧುನಿಕ ಪರಿಕರಗಳನ್ನೂ ಒಳಗೊಂಡು ಜನ ಮಾನಸದಲ್ಲಿ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿದೆ. ಆದರೆ ಇದು ಅಂಕೆಯನ್ನು ಮೀರುತ್ತಿದೆ ಎಂಬ ಭಾವನೆ ಹೆಚ್ಚಿನವರಲ್ಲಿ ಉಂಟಾಗುತ್ತಿದೆ. ಮಾಧ್ಯಮಗಳು ಉಸಿರಾಡಬೇಕಾದರೆ ಜಾಹೀರಾತು ಅತ್ಯವಶ್ಯಕ. ಜಾಹೀರಾತು ಹರಿದು ಬರಬೇಕಾದರೆ. ಟಿಆರ್‌ಪಿ ಎಂಬ ಅಳತೆಗೋಲು ಸಾಧನವಾಗುತ್ತದೆ. ಕೆಲವು ಮಾಧ್ಯಮಗಳು ಟಿಆರ್‌ಪಿಗಾಗಿ ಏನನ್ನು ಮಾಡಲೂ ಸಿದ್ಧ ಎಂಬದು ಕಂಡು ಬರುತ್ತಿದೆ. ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ದೃಶ್ಯ ಮಾಧ್ಯಮಗಳನ್ನು ನೋಡುವ ಸಂಜೆಯ ಹೊತ್ತಿನಲ್ಲಿ. ಅವರ ಜ್ಞಾನವನ್ನು ಹೆಚ್ಚಿಸುವ ವಿಚಾರಗಳನ್ನು ತೋರಿಸಬೇಕು ಎಂಬುದು ಒಂದು ಸಾಮಾನ್ಯ ಜ್ಞಾನ. ಆದರೆ ಇಲ್ಲಿ ತೋರಿಸಲಾಗುವುದು ಏನು ಎಂದರೆ ಜನ ಸಾಮಾನ್ಯರಿಗೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಚಲನಚಿತ್ರಗಳ ವೈಭವೀಕರಣ, ಭೀತಿ ಹುಟ್ಟಿಸುವ ಭೂಕಂಪ ಇತ್ಯಾದಿಗಳ ಗ್ರಾಫಿಕ್ಸ್‌ಗಳ ಮಿಶ್ರಣ. ಜತೆಗೆ ಸಂಜೆಯ ಹೊತ್ತಿಗೆ ಬೀದಿಗಿಳಿಯಲು ಹೆದರಿಕೆಯಾಗುವ. ಯಾರನ್ನೂ ನಂಬದೆ ಇರುವ, ಕೊನೆಗೆ ತಮ್ಮ ಮನೆ ಯವರ, ಸಮೀಪದ ಕುಟುಂಬದವರ ಮೇಲೂ ಸಂಶಯ ಹುಟ್ಟುವಂತೆ ಮಾಡುವ ಅತಿರಂಜಿತ ಅಪರಾಧ ಸುದ್ದಿಗಳ ಮಹಾಪೂರ. ಕೆಲವು ದೃಶ್ಯ ಮಾಧ್ಯಮಗಳು ಜನರ ಅಭಿಪ್ರಾಯಗಳನ್ನು ಪ್ರಸಾರಿಸುವ ಬದಲು ತಮಗೆ ಬೇಕಾದಂತೆ ಅಭಿಪ್ರಾಯ ರೂಪಿಸುವ ಕಾರ್ಯಗಳಲ್ಲಿ ಮಗ್ನರಾಗಿರುವುದು, ರಾಜಕೀಯ ಪಕ್ಷಗಳ, ವಿದೇಶಿ ಕಂಪೆನಿಗಳ ಕೈಗೊಂಬೆಗಳಂತೆ ವರ್ತಿಸುತ್ತಿರು ವುದು ಕಂಡು ಬರುತ್ತಿದೆ. ಜನರಿಗೆ ಮಾಧ್ಯಮಗಳ ಮೇಲಿರುವ ನಂಬಿಕೆಯೇ ಕಳೆದು ಹೋಗಿ ಅದೊಂದು ದುಡ್ಡು ಮಾಡುವ ದಂಧೆ ಎಂದು ಭಾಸ ವಾಗುತ್ತಿದೆ.
ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯ ನಾಲ್ಕೂ ಕಂಬಗಳು ದುರ್ಬಲವಾ ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೂ ಜನಜೀವನ ಇದನ್ನೆಲ್ಲಾ ಸಹಿಸಿಕೊಂಡು ತನ್ನ ಪಾಡಿಗೆ ಮುಂದು ವರಿಯುತ್ತಿದೆ. ಈ ಮುಂದು ವರಿಕೆಯನ್ನು ಮುಂದುವರಿ ಸಿಕೊಂಡು ಹೋಗುವಂತಹಾ ಆ ಐದನೆಯ ಕಂಬ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ.


ಮಂಗಳೂರು: ತಮ್ಮ ಮೇಲೆ ದೂರು ನೀಡಿದ ಕಾರಣದಿಂದ ಕುಪಿತಗೊಂಡ ಯುವಕರಿಬ್ಬರು ರಾತ್ರಿ ವೇಳೆ ಮನೆಗೆ ನುಗ್ಗಿ ಮಹಿಳೆ ಮತ್ತು ಆಕೆಯ ಸಹೋದರನ ಮೇಲೆ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ಸಿ.ರೋಡ್ ಸಮೀಪದ ಅಜ್ಜಿನಡ್ಕದ ರಹ್‌ಮತ್ ಮತ್ತು ಅವರ ಸಹೋದರ ಮನ್ಸೂರ್ ಎಂಬವರೇ ಹಲ್ಲೆಗೊಳಗಾದವರು. ರಹ್‌ಮತ್‌ರ ಗಂಡ ವಿದೇಶದಲ್ಲಿ ರುವ ಕಾರಣ ಮಹಿಳೆ ನಾಲ್ವರು ಪುಟ್ಟ ಮಕ್ಕಳ ಜೊತೆ  ಅಜ್ಜಿನಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಪಕ್ಕದ ಮನೆಯ ಅಬ್ಬಾಸ್ ಮತ್ತು ಆತನ ಸಹೋದರ ಮಹಮ್ಮದ್ ಎಂಬವರು ರಾತ್ರಿ ವೇಳೆ ಮನೆಯ ಬಾಗಿಲನ್ನು ಬಡಿಯುವುದು ಹಾಗೂ ಮನೆಯೊಳಗೆ ಇಣುಕುತ್ತಿದ್ದರು ಎನ್ನಲಾಗಿದೆ.
ಅಲ್ಲದೆ ಬಚ್ಚಲು ಮನೆಯಲ್ಲಿ ಸ್ನಾನ ಮಾಡುವ ದೃಶ್ಯ ತಮ್ಮ ಮೊಬೈಲ್‌ನಲ್ಲಿ ಇದ್ದು ಅದನ್ನು ಇತರರಿಗೆ ತೋರಿಸುವುದಾಗಿ ಬೆದರಿಸುತ್ತಿದ್ದರು. ಇದರಿಂದ ನೊಂದು ಶನಿವಾರದಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಅದೇ ಕಾರಣದಿಂದ ಶನಿವಾರ ರಾತ್ರಿ ೮.೩೦ರ ವೇಳೆಗೆ ಯುವಕರು ತನ್ನ ಮನೆಗೆ ನುಗ್ಗಿ ಜುಟ್ಟು ಹಿಡಿದು ಹಲ್ಲೆ ಮಾಡಿದ್ದಾರೆ. ಆ ಸಂದರ್ಭ ತನ್ನ ಸಹೋದರ ಮನ್ಸೂರ್ ಮನೆಯಲ್ಲಿದ್ದು ಅಡ್ಡ ಬಂದಾಗ ಆತನಿಗೂ ಹಲ್ಲೆ ಮಾಡಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿರುವುದಾಗಿ ರಹ್‌ಮತ್ ತಿಳಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ರಹ್‌ಮತ್ ಮತ್ತು ಮನ್ಸೂರ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಇಂದು ವಿಚಾರಣೆಗಾಗಿ ಎರಡೂ ಕಡೆಯವರನ್ನು ಠಾಣೆಗೆ ಹಾಜರಾಗಲು ಸೂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯೊಂದಿಗೆ ರಾಸಲೀಲೆ
ಮಂಗಳೂರು: ಕ್ರಿಕೆಟ್ ಮುಗಿಸಿಕೊಂಡು ಬರುತ್ತಿದ್ದವರನ್ನು ಕಂಡು ಆವರಣ ಗೋಡೆಯಿಂದ ಜಿಗಿದ ಬಂಗಾರದ ಕೆಲಸ ಮಾಡುವ ಯುವಕನೋರ್ವ ಕ್ರಿಕೆಟ್ ತಂಡದ ಕೈಗೆ ಸಿಕ್ಕಿಬಿದ್ದು ಸರಿಯಾಗಿ ಇಕ್ಕಿಸಿಕೊಂಡ ಘಟನೆ ಮೊನ್ನೆ ಮಧ್ಯರಾತ್ರಿ ಬಿ.ಸಿ.ರೋಡಿನಲ್ಲಿ ನಡೆದಿದ್ದು, ಯುವಕ ಅನ್ಯಮತೀಯ ಮಹಿಳೆಯ ಜೊತೆ ರಾಸಲೀಲೆಗೆ ಹೋಗಿದ್ದೇ ಘಟನೆಗೆ ಕಾರಣವಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಶನಿವಾರ ಬಿ.ಸಿ.ರೋಡಿನಲ್ಲಿ ನಡೆದಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಯುವಕರು ಪಂದ್ಯದಲ್ಲಿ ಸೋತ ಬಳಿಕ ಎರಡು ಗಂಟೆಗೆ ಲೊರೆಟ್ಟೋಪದವು ಟಿಪ್ಪು ನಗರಕ್ಕೆ ವಾಪಸಾಗುತ್ತಿದ್ದರು ಎನ್ನಲಾಗಿದೆ. ಅದೇ ವೇಳೆ ಹೋಟೆಲ್ ಮಾಲಕನೊಬ್ಬನ ಮನೆಗಿಂತ ಅರ್ಧ ಕಿ.ಮೀ. ದೂರದಲ್ಲಿ ಬೈಕೊಂದು ನಿಂತಿರುವುದನ್ನು ಕಂಡ ಯುವಕರು ಸಂಶಯಗೊಂಡು ತಮ್ಮ ವಾಹನ ವನ್ನು ದೂರದಲ್ಲಿ ನಿಲ್ಲಿಸಿ ನಡೆದು ಕೊಂಡು ಹೋಗಿದ್ದರು ಎನ್ನಲಾಗಿದೆ. ಅದೇ ವೇಳೆ ಮುಸುಕುಧಾರಿ ಯುವಕ ನೋರ್ವ ಹೊಟೇಲ್ ಮಾಲಕನ ಮನೆಂii ಆವರಣ ಗೋಡೆಯನ್ನು ಜಿಗಿದು ಓಡ ತೊಡಗಿದ್ದು ಇದರಿಂದ ಇನ್ನಷ್ಟು ಸಂಶಯಗೊಂಡ ಯುವಕರು ಆತನ ಬೆನ್ನು ಹತ್ತಿ ಹಿಡಿದಾಗ ಯುವಕ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಅವಿನಾಶ್ ಎಂದು ತಿಳಿಯಿತೆನ್ನಲಾಗಿದೆ.
ಆತನನ್ನು ಚೆನ್ನಾಗಿ ತದುಕಿದ ಯುವಕರು ಬಳಿಕ ಗೋಡೆ ಹಾರಿದ ಹಿಂದಿನ ರಹಸ್ಯವನ್ನು ವಿಚಾರಿಸುತ್ತಿದ್ದಾಗ ಮನೆಯ ಮಾಲಕನೂ ಕ್ರಿಕೆಟ್ ಮುಗಿಸಿ ಆಗಮಿಸಿದ್ದರು. ಅವರು ಕೂಡಾ ಯುವಕನನ್ನು ವಿಚಾರಿಸಿದಾಗ ಮಾಲ ಕನ ಹೆಂಡತಿಯ ಬಳಿ ಬಂದಿದ್ದಾಗಿ ಹಾಗೂ ಗಂಡ ಹೊರಹೋಗಿರುವ ಬಗ್ಗೆ ಮಹಿಳೆಯೇ ಫೋನ್ ಮಾಡಿ ಮಾಹಿತಿ ನೀಡಿದ್ದಾಗಿ ಯುವಕ ಬಾಯಿ ಬಿಟ್ಟಿದ್ದಾನೆ.
ಆತನ ಮಾತಿನ ಸತ್ಯಾಸತ್ಯ ತೆಯನ್ನು ಅರಿಯಲು ಮೊಬೈಲ್ ಪರಿಶೀಲಿಸಿದಾಗ ಮಹಿಳೆಯಿಂದ ಹೋಗಿದ್ದ ಸಾಕಷ್ಟು ಕರೆಗಳು ಇದ್ದವೆ ನ್ನಲಾಗಿದೆ. ಅಲ್ಲದೆ ಮಹಿಳೆ ಚಿನ್ನದ ಖರೀದಿಗಾಗಿ ಅಂಗಡಿಗೆ ಹೋದಾಗ ಅಲ್ಲಿ ಯುವಕನ ಪರಿಚಯವಾಗಿದ್ದು, ಆಕೆಯೇ ತನ್ನ ಮೊಬೈಲ್ ನಂಬ್ರವನ್ನು ಚೀಟಿಯಲ್ಲಿ ಬರೆದು ನೀಡಿ ಸೆಟ್ಟಪ್ ಮಾಡಿದ್ದರಿಂದ ತಾನು ವಾರ ವಾರವೂ ರಾತ್ರಿ ವೇಳೆ ಗಾಳ ಹಾಕಲು ಬರುತ್ತಿರುವುದಾಗಿ ಯುವಕ ತಿಳಿಸಿದ್ದನೆನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಹೊಟೇಲ್ ಮಾಲಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸುವಾಗ ಬೆಳಿಗ್ಗೆ ೭.೦೦ ಗಂಟೆಯಾಗಿದ್ದು ಅದುವರೆಗೆ ಯುವಕರ ಹಿಡಿತದಲ್ಲಿದ್ದ ‘ಬಂಗಾರದ’ ಯುವಕ ಚೆನ್ನಾಗಿ ಒದೆ ತಿಂದಿದ್ದನು ಎನ್ನಲಾಗಿದೆ. ಬೆಳಿಗ್ಗೆ ಬಂದ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದಿದ್ದರು. ಆದರೆ ಠಾಣೆಗೆ ಹೋದ ಹಟೇಲ್ ಮಾಲೀಕ ಈಗಾಗಲೇ ತನ್ನ ಮರ್ಯಾದೆ ಊರಿನಲ್ಲಿ ಮೂರಾಬಟ್ಟೆಯಾಗಿದ್ದು ಇನ್ನು ಎಫ್‌ಐಆರ್ ಆದರೆ ಎಲ್ಲಾ ಕಡೆಯೂ ಮಾನ ಹೋಗುವ ಕಾರಣ ಪ್ರಕರಣವನ್ನು ಅಲ್ಲಿಗೇ ಮುಚ್ಚಿಬಿಡಲು ಒಪ್ಪಿದ ಕಾರಣ ಅವಿನಾಶ್‌ನ ಮೇಲೆ ಪಿಟ್ಟಿಕೇಸ್ ಹಾಕಲಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಡುಬಿದ್ರಿ: ಗಾಳಿ ತುಂಬಿದ ಟ್ಯೂಬ್ ಬಳಸಿ ಸಮುದ್ರದಲ್ಲಿ ಮೀನು ಗಾರಿಕೆ ನಡೆಸುತ್ತಿದ್ದ ಉಚ್ಚಿಲ ಬಡಾ ಗ್ರಾಮದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಉಚ್ಚಿಲ ಮಹಾಲಿಂಗೇಶ್ವರ ರಸ್ತೆಯ ರಮಣಿ ಸಂಜೀವ ಸುವರ್ಣ ಎಂಬವರ ಮಗ ಮಾಧವ ಎಸ್ ಬಂಗೇರಾ (೩೫) ಮೃತಪಟ್ಟ ಯುವಕ.
ಮಲ್ಪೆಯಲ್ಲಿ ಪರ್ಸೀನ್ ಮೀನು ಗಾರಿಕೆ ನಡೆಸುತ್ತಿದ್ದ ಮಾಧವ ಅಲ್ಲಿ ರಜೆ ಇದ್ದ ಕಾರಣ ಮನೆಗೆ ಬಂದಿದ್ದು, ಭಾನುವಾರ ಬೆಳಿಗ್ಗೆ ಟ್ಯೂಬ್ ಬಳಸಿ ಮೀನುಗಾರಿಕೆಗೆ ತೆರಳಿ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ. ಆದರೆ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರಲಿಲ್ಲ. ಮಧ್ಯಾಹ್ನದ ಬಳಿಕ ಮಾಹಿತಿ ಸಿಕ್ಕ ಸ್ಥಳೀಯರು ಹುಡುಕಾಟ ನಡೆಸಿದ್ದು, ಸಂಜೆ ಸುಮಾರು ಏಳು ಗಂಟೆಗೆ ಎರ್ಮಾಳು ಯುಪಿಸಿಎಲ್ ಪೈಪ್‌ಲೈನ್ ಬಳಿ ಶವ ಪತ್ತೆ ಆಗಿದೆ. ಅವಿವಾಹಿತ ಮಾಧವ ಬಂಗೇರಾ, ತಾಯಿ ರಮಣಿಯೊಂದಿಗೆ ವಾಸಿಸುತ್ತಿದ್ದು, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ವಿದ್ಯುತ್ ತಂತಿಗೆ ಸಿಲುಕಿ ನವಿಲು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೊಯ್ಲದಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ. ಕೊಯ್ಲದ ಪಶು ಸಂಗೋಪನಾ ಕ್ಷೇತ್ರದ ಆವರಣದಲ್ಲಿ ಮುಂಜಾನೆ ನವಿಲಿನ ಶವ ಪತ್ತೆಯಾಗಿದ್ದು, ಮುಂಜಾನೆ ಕರ್ತವ್ಯದಲ್ಲಿದ್ದ ಕಾವಲುಗಾರ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದ ಮೇಲಾಧಿಕಾರಿಗಳು ಮಹಜರು ನಡೆಸಿ ಶವ ದಫನ್ ಮಾಡಿದರು. ಕೊಯ್ಲ ಫಾರ್ಮ್‌ನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿ ನವಿಲು ಮೃಪಟ್ಟಿರಬಹುದು ಎಂದು ಪಶು ವೈದ್ಯರು ತಿಳಿಸಿದ್ದಾರೆ.




ಬೆಳ್ತಂಗಡಿ: ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಿ ಸನಿಹದ ಉರ್ದ್ಯಾರು ಜಲಪಾತದ ಬಳಿ ಶನಿವಾರ ಸಂಜೆ ನಕ್ಸಲ್ ನಿಗ್ರಹ ದಳದವರು ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಂಡಿದ್ದಾರೆ. ಓರ್ವ ಎಎನ್‌ಎಫ್ ಪೇದೆ ಗಾಯಗೊಂಡಿದ್ದು ನಕ್ಸಲರು ತಪ್ಪಿಸಿಕೊಂಡಿದ್ದಾರೆ.
ಅಮೆರಿಕಾ ನಿರ್ಮಿತ ಅಟೋ ಪಿಸ್ತೂಲ್, ೩೮ ಹ್ಯಾಂಡ್ ಗ್ರೆನೇಡ್, ಡಿಬಿಬಿ ಎಲ್ ಗನ್ ಒಂದು, ಎಸ್‌ಎಲ್‌ಆರ್ ಬಂದೂಕಿಗೆ ಉಪಯೋಗಿಸುವ ೧೪೦ ರೌಂಡ್ಸ್ ಮದ್ದುಗುಂಡುಗಳು, ೧೧ ಇಲೆಕ್ಟ್ರಾನಿಕ್ ಡಿಟೋನೇಟರ್‌ಗಳು, ೦.೩೦೩ ಪಿಸ್ತೂಲಿಗೆ ಉಪಯೋಗಿಸುವ ೧೦೬ ರೌಂಡ್ಸ್ ಮದ್ದುಗುಂಡುಗಳು, ೯ಎಮ್‌ಎಮ್ ಶಸ್ತ್ರಕ್ಕೆ ಉಪಯೋಗಿಸುವ ೭ ರೌಂಡ್ಸ್ ಮದ್ದುಗುಂಡುಗಳು ಹೀಗೆ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ನಕ್ಸಲರಿಂದ ಭಾರೀ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕ್ಸಲ್‌ರ ಇರುವಿಕೆಯ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ೩೦೦ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಸ್ಫೋಟಕ ನಿಷ್ಕ್ರೀಯ ದಳದವರು ಆಗಮಿಸಿದ ಬಳಿಕ ಸ್ಫೋಟಕಗಳನ್ನು ಘಟನಾ ಸ್ಥಳದಿಂದ ಬೆಳ್ತಂಗಡಿ ಠಾಣೆಗೆ ತರಲಾಯಿತು. ಸ್ಫೋಟಕಗಳನ್ನು ಬಾಕ್ಸ್‌ಗಳಲ್ಲಿ ಇರಿಸಲಾಗಿದ್ದು, ಅದರ ಮೇಲೆ ಸಿ.ಪಿ.ಐ.(ಮಾವೋಯಿಸ್ಟ್) ಎಂದು ಬರೆಯಲಾಗಿರುವುದಾಗಿ ತಿಳಿದುಬಂದಿದೆ. ಕೊಲ್ಲಿ ಸನಿಹದ ಕೃಷ್ಣಗಿರಿಯ ತಪ್ಪ ಲಲ್ಲಿ ಸುಮಾರು ೨೫ಕ್ಕೂ ಹೆಚ್ಚು ನಕ್ಸಲರು ಬೀಡುಬಿಟ್ಟಿ ದ್ದಾರೆ ಎಂಬ ಮಾಹಿತಿಯನ್ನು ಪಡೆದ ನಕ್ಸಲ್ ನಿಗ್ರಹ ದಳದ ಪೊಲೀಸರು ಶನಿವಾರ ಮುಂಜಾನೆ ಪಶ್ಚಿಮ ಘಟ್ಟದ ದಟ್ಟಾರಣ್ಯದಲ್ಲಿ ಕೂಂಬಿಂಗ್ ನಡೆಸಿದರು. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ನಿಗ್ರಹದಳದ ಹಾಗೂ ನಕ್ಸಲರ ಮಧ್ಯೆ ಸುಮಾರು ಒಂದು ತಾಸು ಗುಂಡಿನ ಚಕಮಕಿ ನಡೆದಿದೆ.
ಆದರೆ ಈ ಕಾರ್ಯಾಚರಣೆಯಿಂದ ನಕ್ಸರು ಕೈ ಸಿಗದಿದ್ದರೂ ಅವರು ಸಂಗ್ರಹಿಸಿಟ್ಟ ಅಪಾರ ಪ್ರಮಾಣದ ಶಸ್ತ್ರಾಸ್ತಗಳು, ಮದ್ದು ಗುಂಡುಗಳು, ದಿನಬಳಕೆಯ ವಿವಿಧ ಸಾಮಗ್ರಿಗಳು ದೊರೆತಿವೆ. ಅವೆಲ್ಲವನ್ನೂ ಪೊಲೀಸರು ವಶಪಡಿ ಸಿಕೊಂಡಿದ್ದಾರೆ. ಇದೇ ಸಂದರ್ಭ ಸದಾಶಿವ ಚೌಧುರಿ ಎಂಬ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ. ದಟ್ಟಾರಣ್ಯ ಹಾಗೂ ತುತ್ತತುದಿಯಲ್ಲಿ ಕ್ಯಾಂಪ್ ಹೂಡಿದ್ದ ಸುಮಾರು ೧೫ರಿಂದ ೨೫ ನಕ್ಸಲರು ೧೪ ಕಡೆ ನೀಲಿ ಟಾರ್ಪಲುಗಳನ್ನು ಕೆಳಗೆ ಮೇಲೆ ಹಾಕಿಕೊಂಡಿದ್ದರು. ಬೆಟ್ಟದ ತುದಿಯಲ್ಲಿ ಇವರಿದ್ದು ಮೂರು ಕಡೆ ಪಾಳಿ ಪಾಳಿಯಂತೆ ಕಾವಲು ಕಾಯುತ್ತಿದ್ದರು. ಬೆಟ್ಟದ ಕೆಳಗಿನಿಂದ ಯಾರು ಬರುತ್ತಾರೆ ಎಂಬುದು ಸರಿಯಾಗಿ ಗುರುತು ಹಿಡಿಯಬಹುದಾದ ಪ್ರದೇಶ ಅದಾಗಿತ್ತು. ಒಂದು ಕಡೆ ಅಡುಗೆ ಟೆಂಟ್ ಇದ್ದು ತೊರೆಯೊಂದು ಹರಿಯುತ್ತಿರುವ ಅತ್ಯಂತ ಪ್ರಶಾಂತ, ಸುಂದರ ವಾತಾವರಣದಲ್ಲಿ ನಕ್ಸಲರಿದ್ದರು. ಕೆಳಗಿನಿಂದ ಯಾರು ಬರುತ್ತಾರೆ ಎಂಬುದನ್ನು ತಿಳಿದುಕೊಂಡ ನಕ್ಸಲರು ಪೊಲೀಸರ ಚಲನವಲನಗಳನ್ನು ಗುರುತಿಸಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರೊಂದಿಗೆ ಮುಖಾಮುಖಿ ನಡೆದಿದೆ ಎಂದೂ ಹೇಳಲಾಗುತ್ತಿದ್ದರೂ ಅದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ ಗೋಯಲ್ ತಿಳಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಾಹಿತ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ ಹೊರ ರಾಜ್ಯದ ನಕ್ಸಲಿಯರು ಬಂದಿರುವುದು ಬಹುತೇಕ ಖಚಿತಗೊಂಡಂತಾಗಿದೆ. ಇದನ್ನು ಗಮನಿಸಿದರೆ ಬೀಡುಬಿಟ್ಟ ಸ್ಥಳದಲ್ಲಿ ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ಸುರಕ್ಷಿತ ತಾಣವೆಂದು ಕೊಲ್ಲಿ ಪ್ರದೇಶದ ಸುತ್ತಮುತ್ತಲಿನ ದಟ್ಟಾರಣ್ಯವನ್ನು ಆಯ್ಕೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನೆಲ್ಲಾ ಸಿಕ್ಕಿದೆ?
ತಮಿಳು, ತೆಲುಗು ಸಾಹಿತ್ಯಗಳು, ರೇಡಿಯೋಗಳು, ಸಣ್ಣ ಕ್ಯಾಸೆಟ್‌ಗಳು, ಎಲ್‌ಟಿಟಿ ಪ್ರಭಾಕರನ್ ಫೋಟೊ, ಪೆಂಡೆಂಟ್, ಬೆಳ್ತಂಗಡಿ ತಾಲೂಕು ಹಾಗೂ ಕುದುರೆಮುಖ ರಕ್ಷಿತಾರಣ್ಯದ ನಕ್ಷೆಗಳು. ಡೈರಿಗಳು, ಕಮ್ಯುನಿಸ್ಟ್ ಸಾಹಿತ್ಯ, ಫ್ರಂಟ್‌ಲೈನ್ ಪಾಕ್ಷಿಕ, ಸಾಮಾನ್ಯ ಜ್ಞಾನದ ಪುಸ್ತಕಗಳು, ವಿವಿಧ ಭಾಷೆ ಕಲಿಯುವ ಪುಸ್ತಕಗಳು, ಮಾರ್ಕ್ಸ್‌ವಾದಿ ಪುಸ್ತಕಗಳು, ಪತ್ರಿಕೆಗಳು, ವಿವಿಧ ನಮೂನೆಯ ಶೂಗಳು, ಔಷಧಿಗಳು, ಲ್ಯಾಪ್ ಟ್ಯಾಪ್ ಬ್ಯಾಗ್, ಬಿಸ್ಕಟ್ ಪೊಟ್ಟಣ, ಪುರುಷರ ಹಾಗೂ ಮಹಿಳೆಯ ವಿವಿಧ ಬಗೆಯ ಉಡುಪುಗಳು, ಚಪ್ಪಲಿಗಳು, ಮೊಬೈಲ್, ಸಣ್ಣ ಸೋಲಾರ್ ಪ್ಯಾನೆಲ್, ದಿಕ್ಸೂಚಿ, ಮೊಬೈಲ್, ಕರಿಮಣಿ, ಶಸ್ತ್ರಾಸ್ತ್ರಗಳನ್ನು ಹೇಗೆ ಉಪಯೋಗಿಸಬೇಕೆನ್ನುವ ಮಾಹಿತಿಯುಳ್ಳ ಡೈರಿ, ಕಾಡತೂಸುಗಳು, ಬುಲೆಟ್‌ಗಳು, ಅಡುಗೆ ಮಾಡುವ ಸಣ್ಣ, ದೊಡ್ಡ ಪಾತ್ರೆಗಳು, ಅಡುಗೆ ದವಸ ಧಾನ್ಯಗಳು, ಕಂಬಳಿ ಮೊದಲಾದ ಹೊದಿಕೆಗಳು ಇವೆ. ಇವೆಲ್ಲವನ್ನೂ ಸೇರಿಸಿದಾಗ ಒಟ್ಟು ಅರ್ಧ ಲಾರಿಯಷ್ಟು ಸಾಮಾನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸುಮಾರು ಎರಡೂವರೆ ತಿಂಗಳಿನಿಂದ ದ.ಕ., ಚಿಕ್ಕಮಗಳೂರು ಹಾಗೂ ಉಡುಪಿ ಪೊಲೀಸರ ಮತ್ತು ನಕ್ಸಲ್ ನಿಗ್ರಹದಳದ ನಿಖರವಾದ ಕಾರ್ಯಾಚರಣೆಯಿಂದ ಈ ಎಲ್ಲಾ ವಸ್ತುಗಳು ದೊರೆತಿವೆ. ಬೆಟ್ಟದ ತುದಿಯನ್ನು ತಲುಪಲು ಅತಿ ಶೀಘ್ರವಾಗಿ ಸಾಧ್ಯವಿಲ್ಲದ ಹಾಗೂ ಕಠಿಣ ಪ್ರದೇಶವಾಗಿರುವ ಕಾರಣ ನಕ್ಸಲರಿಗೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸುಲಭವಾಗಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ರೀತಿಯ ಶಸ್ತ್ರಾಸ್ತ್ರಗಳು ದೊರಕಿದೆ. ಇಷ್ಟೊಂದು ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಇದೇ ಮೊದಲ ಬಾರಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ಪ್ರತಾಪ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ ಸಿಕ್ಕಿರುವ ಡೈರಿಗಳನ್ನು ಪರಿಶೀಲಿಸಲಾಗುವುದು. ಕಾರ್ಯಾಚರಣೆಯನ್ನು ಯಾವ ಕಾರಣಕ್ಕೂ ನಿಲ್ಲಿಸಲಾಗುವುದಿಲ್ಲ. ಎಲ್ಲಾ ಕಡೆ ನಾಕಾಬಂಧಿಯನ್ನು ನಡೆಸಲಾಗಿದೆ. ಕೆಲ ದಿನಗಳಲ್ಲಿ ನಕ್ಸಲರು ಕೈಗೆ ಸಿಗುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಮುಂದಿನ ತನಿಖೆಯನ್ನು ಪುತ್ತೂರು ಎಎಸ್‌ಪಿ ಅನುಚೇತ್ ಮುಂದುವರಿಸಲಿದ್ದಾರೆ. ಅಲ್ಲದೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಮೂರು ಜಿಲ್ಲೆಗಳ ಪೊಲೀಸರನ್ನು ಹಾಗೂ ನಕ್ಸಲ್ ನಿಗ್ರಹದಳ ಸಿಬ್ಬಂದಿಯನ್ನು ಅವರು ಅಭಿನಂದಿಸಿದ್ದಾರೆ.

ಪುತ್ತೂರು: ಬಾಡಿಗೆ ನೀಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿದ ಪ್ರಕರಣ ಶನಿವಾರ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಎಂ ಬಲ್ಲಿ ನಡೆದಿದೆ.
ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಸೋಮಶೇಖರ್ ಹಲ್ಲೆಗೊಳಗಾದ ವ್ಯಕ್ತಿ. ಇವರಿಗೆ ಸ್ಥಳೀಯ ನಿವಾಸಿ ಪ್ರವೀಣ್ ಶೆಟ್ಟಿ ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಪ್ರವೀಣ್ ಶೆಟ್ಟಿ ಅವರ ಮಾರುತಿ ಓಮ್ನಿ ಕಾರಿನ ಬಾಡಿಗೆ ವಿಚಾರದಲ್ಲಿ ಜಗಳ ನಡೆಸಿ ತನಗೆ ಹಲ್ಲೆ ನಡೆಸಿರುವುದಾಗಿ ಗಾಯಾಳು ಸೋಮ ಶೇಖರ್ ಆರೋಪಿಸಿದ್ದಾರೆ. ಗಾಯಾ ಳು ಸೋಮಶೇಖರ್ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಮಂಗಳೂರು: ಕಾಂಚನ್ ಟೆಕ್ಸ್ ಟೈಲ್ಸ್‌ನ ಮ್ಯಾನೇಜರ್ ದಿನೇಶ್ ರಾಜ್ ಎಂಬಾತನನ್ನು ಹತ್ಯೆಗೈದ ಆರೋ ಪಿಗಳಿಗೆ ಆಶ್ರಯ ನೀಡಿ ಸಹಕರಿಸಿದ್ದ ಮತ್ತೊಬ್ಬ ಆರೋಪಿಯನ್ನು ಬಂದರು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಬೆಂಗಳೂರು ನಿವಾಸಿ ಸೈಯದ್ ಅಜಿಂ ಎಂಬಾತನೇ ಬಂಧಿತ ಆರೋ ಪಿಯಾಗಿದ್ದಾನೆ. ಈತ ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ ಆರೋಪಿಗಳಿಗೆ ಉಳಿದುಕೊಳ್ಳಲು ಮತ್ತು ಹತ್ಯೆಗೆ ಬಳಸಿದ ತಲವಾರನ್ನು ಅಡಗಿಸಿಡಲು ಸ್ಥಳವಕಾಶ ನೀಡಿದ್ದ ಎಂದು ತಿಳಿದು ಬಂದಿದೆ. ಈ ಮೂಲಕ ದಿನೇಶ್‌ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದಂತಾಗಿದೆ.
ವಾರದ ಹಿಂದೆಯಷ್ಟೆ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಉಳ್ಳಾಲದ ಜಲಾಲುದ್ದಿನ್ ಹಾಗೂ ಕಾಸರಗೋಡಿನ ಮಸಾದ್ ಎಂಬವರು ಪೊಲೀಸರಿಗೆ ಶರಣಾಗಿದ್ದರೆ, ಬಳಿಕ ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಅನುಸಾರ ಮತ್ತೊಬ್ಬ ಆರೋಪಿ ಸೈಯದ್ ಅಜಿಂನನ್ನು ಬಂಧಿಸಲಾಗಿದೆ.
ಕುಖ್ಯಾತ ಪಾತಕಿ ರಶೀದ್ ಮಲಬಾರಿಯ ಅಣತಿಯಂತೆ ತಾವು ಈ ಕೃತ್ಯವನ್ನು ನಡೆಸಿರುವುದಾಗಿ ಆರೋಪಿಗಳಾದ ಉಳ್ಳಾಲದ ಜಲಾಲುದ್ದೀನ್ ಹಾಗೂ ಆತನ ಸಹಚರ ಮಸಾದ್ ತಿಳಿಸಿದ್ದು, ಕೊಲೆಯಾಗಿರುವ ದಿನೇಶ್ ರಾಜ್ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದೇ ಕೊಲೆಗೆ ಕಾರಣ ಎಂದು ಆರೋಪಿಗಳು ತಿಳಿಸಿದ್ದಾರೆ. ಪತ್ನಿಯೊಂದಿಗೆ ವಿಚ್ಛೇದನವನ್ನು ಪಡೆದಿರುವ ದಿನೇಶ್‌ರಾಜ್ ತನ್ನ ಬಾಡಿಗೆ ಮನೆ ಸಮೀಪದ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಯುವತಿಯ ಮನೆಮಂದಿಗೂ ತಿಳಿದಿದ್ದು ಅವರು ಇವರ ಪ್ರೇಮಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಯುವತಿಗೆ ಬೇರೆ ಮದುವೆ ಮಾಡಲು ಯತ್ನಿಸುತ್ತಿದ್ದರು. ಆದರೆ ಇದಕ್ಕೆ ದಿನೇಶ್‌ರಾಜ್ ಅವಕಾಶ ಮಾಡಿಕೊಡುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಯುವತಿಯ ತಂದೆ ದಿನೇಶ್‌ರಾಜ್ ಕೊಲೆಗೆ ರಶೀದ್ ಮಲಬಾರಿಗೆ ಸುಪಾರಿ ನೀಡಿದ್ದರು ಎಂದು ಆರೋಪಿಗಳು ತಿಳಿಸಿದ್ದರಾದರೂ ಹೆಚ್ಚಿನ ಯಾವುದೇ ಮಾಹಿತಿ ನಮಗೆ ತಿಳಿದು ಬಂದಿಲ್ಲ. ನಾವು ಹಣವನ್ನು ಪಡೆದು ಈ ಕೃತ್ಯ ನಡೆಸಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ದಿನೇಶ್ ರಾಜ್ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಅಂಗಡಿಗೆ ನುಗ್ಗಿದ್ದ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಪರಾರಿಯಾಗಿದ್ದರು. ಈ ಘಟನೆಗೆ ಅಂಗಡಿಯ ಪಾಲುದಾರರಾದ ದೀಪಕ್ ಮತ್ತು ವಿಜಯ್ ಸಾಕ್ಷಿಯಾಗಿದ್ದರು.

ಮಂಜೇಶ್ವರ: ಟ್ಯಾಂಕರ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತ ದಲ್ಲಿ ಕುಂಬಳೆ ಸಮೀಪದ ಮಾವಿನಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಗಂಭೀರ ಗಾಯಗೊಂಡಿರುವ ಘಟನೆ ನಿನ್ನೆ ಮಂ ಜೇಶ್ವರದಲ್ಲಿ ಸಂಭವಿಸಿದೆ.
ಅಬ್ದುಲ್ ಲತೀಫ್ ಮಂಗಳೂರಿ ನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು: ಅಡಿಕೆ ಮರದಿಂದ ಬಿದ್ದು ಕಾರ್ಮಿಕನೊಬ್ಬ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಪಲ್ಲ ಎಂಬಲ್ಲಿ ನಡೆದಿದೆ.
ಪಾಣಾಜೆ ಗ್ರಾಮದ ಕಲ್ಲಪದವು ನಿವಾಸಿ ಬಾಬು(೩೮) ಗಾಯಗೊಂಡವರು. ಬಾಬು ಅವರು ಪಲ್ಲದ ಶಂಕರನಾರಾಯಣ ಭಟ್ ಎಂಬವರ ತೋಟದಲ್ಲಿ ಅಡಿಕೆ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಕಾಲು ಮುರಿತಕ್ಕೊಳಗಾಗಿರುವ ಬಾಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು: ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಶನಿವಾರ ಪುತ್ತೂರು ಕಾಣಿಯೂರು ರಸ್ತೆಯ ಸರ್ವೆ ಭಕ್ತಕೋಡಿ ಸಮೀಪದಲ್ಲಿ ನಡೆದಿದೆ.
ಭಕ್ತಕೋಡಿ ಸಮೀಪದ ಗಡಪಿಲ ಎಂಬಲ್ಲಿ ಬಸ್ ಮತ್ತು ಆಕ್ಟೀವ್ ಹೋಂಡಾ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ, ಸ್ಕೂಟರ್ ಸವಾರ ಸರ್ವೆ ಗ್ರಾಮದ ಬೊಟ್ಯಾಡಿ ನಿವಾಸಿ ಭಾಸ್ಕರ್(೪೯) ಮತ್ತು ಸಹಸವಾರ ಮುಂಡೂರು ನಿವಾಸಿ ಪ್ರವೀಣ್(೩೦) ಗಾಯಗೊಂಡರು.

ಪುತ್ತೂರು: ಚೊಚ್ಚಲ ಹೆರಿಗೆಗೆಂದು ತವರು ಮನೆಗೆ ಹೋಗಿದ್ದ ಪತ್ನಿಯನ್ನು ತನ್ನ ಮನೆಗೆ ಕಳಿಸಿಲ್ಲ ಎಂಬ ಕಾರಣಕ್ಕಾಗಿ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯವು ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಪುತ್ತೂರು ನಗರದ ಬನ್ನೂರು ನಿವಾಸಿ ತಿಮ್ಮ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿ. ತವರು ಮನೆಗೆ ಹೆರಿಗೆಗೆಂದು ಬಂದಿದ್ದ ಪತ್ನಿಯನ್ನು ಮನೆಗೆ ಕಳುಹಿಸದಿರುವ ಕುರಿತು ಫೆ.೬ರಂದು ವಿಚಾರಿಸಲೆಂದು ತೆರಳಿದ್ದ ತಿಮ್ಮ ಅತ್ತೆ ಲಲಿತಾ ಅವರಿಗೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿತ್ತು. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಎಂ.ಪಿ. ಅಬೂಬಕ್ಕರ್ ಮತ್ತು ಕುಮಾರ್‌ನಾಥ್ ವಾದಿಸಿದ್ದರು

ಮಂಗಳೂರು: ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನನ್ನು ತಡೆದು ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ.
ಮೊಟ್ಟೆತ್ತಡ್ಕ ನಿವಾಸಿ ಹರೀಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಗೆ ಯುವಕರ ಗುಂಪು ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಯುವಕರ ಗುಂಪು ರಸ್ತೆಯಲ್ಲಿ ಬರುತ್ತಿದ್ದ ಓಮ್ನಿ ಕಾರ್ ಮೇಲೂ ಕಲ್ಲು ತೂರಾಟ ನಡೆಸಿ ಅದರ ಗಾಜು ಪುಡಿಗೈದಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು: ಯುವಕನನ್ನು ಇರಿದು ಕೊಲೆಗೈಯಲೆತ್ನಿಸಿದಾಗ ತಡೆಯಲು ಬಂದ ಪೊಲೀಸರಿಗೆ ಹಲ್ಲೆಗೈದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಕೊಲೆಯತ್ನಕ್ಕಾಗಿ ನಾಲ್ಕು ವರ್ಷ ಕಠಿಣ ಸಜೆ ಮತ್ತು ಇನ್ನೊಂದು ಸೆಕ್ಷನ್‌ನಲ್ಲಿ ಒಂದೂವರೆ ವರ್ಷ ಸಜೆ ಸೇರಿದಂತೆ ಒಟ್ಟು ಐದೂವರೆ ವರ್ಷ ಸಜೆ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಅಡೂರು ಗ್ರಾಮದ ಕುಳೆತ್ತಲಂ ಚಟ್ಟಿಮೂಲ ವೀಡಿನ ಬಿ. ಎ. ರಫೀಕ್ ಯಾನೆ ಇಬ್ರಾಹಿಂ(೨೭) ಎಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
೨೦೦೧ ಆಗಸ್ಟ್ ೧೪ರಂದು ಅಡೂರು ವಳ್ಳಿಂಗೋಡಿನಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಬಳವಂತಡ್ಕ ಪಳ್ಳತ್ತಂತಾಲ್ ನಿವಾಸಿ ಪದ್ಮನಾಭ ನಾಯ್ಕ್(೪೦) ಎಂಬವರನ್ನು ಇರಿದು ಗಂಭೀರವಾಗಿ ಗಾಯಗೊಳಿಸಿದಾಗ ತಡೆಯಲು ಹೋದ ಪದ್ಮನಾಭರ ಬೈಕ್‌ನ ಹಿಂದುಗಡೆ ಸೀಟ್‌ನಲ್ಲಿ ಕುಳಿತ್ತಿದ್ದ ಕಾಸರಗೋಡು ಸ್ಪೆಷಲ್ ಬ್ರಾಂಚ್ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಮಧು ಮದನನ್ ಎಂಬವರ ಮೇಲೂ ಹಲ್ಲೆ ನಡೆಸಿದ ಆರೋಪದಂತೆ ರಫೀಕ್ ಯಾನೆ ಇಬ್ರಾಹಿಂನ ವಿರುದ್ಧ ಅದೂರು ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಮಂಗಳೂರು :ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಕತ್ತಿನಿಂದ ನಾಲ್ಕು ಪವನ್ ತೂಕದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಘಟನೆ ಅರ್ಕುಳದಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯ ತುಪ್ಪೆಕಲ್ಲಿನ ನಿವಾಸಿ ನಮಿತಾ ಎಂಬವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ ೨:೧೫ರ ಸುಮಾರಿಗೆ ಅರ್ಕುಳದಿಂದ ಮೇರಮಜಲು ಕಡೆಗೆ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಆಚೆಈಚೆ ಓಡಾಡಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡುಕತ್ತಿನಲ್ಲಿದ್ದ ಸರವನ್ನು ಅಪಹರಿಸಿ ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್ ಎಂಬಲ್ಲಿ ನಿನ್ನೆ ಬೈಕ್‌ಗೆ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಕೋಟೆಕಾರ್ ನಿವಾಸಿ ಅಬೂಬಕರ್ ಎಂಬವರು ನಿನ್ನೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಹಿಂಬದಿಯಿಂದ ಅತೀವೇಗವಾಗಿ ಬಂದ ರಿಕ್ಷಾವೊಂದು ಬೈಕ್‌ಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಬೈಕ್ ಸವಾರ ಅಬೂಬಕರ್ ಗಾಯಗೊಂ ಡರು. ರಿಕ್ಷಾ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು: ಮಹಿಳೆಯೋರ್ವವಳಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಗಂಗೊಳ್ಳಿಯ ಮೈತ್ರಿ ಎಚ್. ಕೆ. ಎಂಬಾಕೆ ನ್ಯಾಯಾಲಯದಲ್ಲಿ ವರದಕ್ಷಿಣೆ ಕಿರುಕುಳ ಸಂಬಂಧ ದೂರು ದಾಖಲಿಸಿದ್ದಾರೆ. ರವಿಕುಮಾರ್ ಎಂಬವರನ್ನು ಮೈತ್ರಿ ಎಚ್. ಕೆ. ಎಂಬವರು ಮದುವೆಯಾಗಿದ್ದರು. ವರದಕ್ಷಿಣೆಗಾಗಿ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ಮೈತ್ರಿ ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿ ದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ:ಎಂಟು ಮಂದಿ ಬಂಧನ: ಪಣಂಬೂರಿನ ಸಮೀಪದ ಕೆಐಒಸಿಎಲ್ ಕಂಪೆನಿ ಬಳಿ ಬಯಲಿನಲ್ಲಿ ಜೂಜಾಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ ಅಜೀಜ್, ದಿವಾಕರ, ಕೆ.ಎನ್. ಸುರೇಶ್, ಸುರೇಶ್‌ರೈ, ಲಕ್ಷ್ಮೀಶ, ಸತೀಶ್‌ಕುಮಾರ್, ಮೊಹಮ್ಮದ್ ಆಲಿ ಮತ್ತು ಕುಶಾಲಪ್ಪ ಎಂದು ಹೆಸರಿಸಲಾಗಿದೆ. ಬಂಧಿತರಿಂದ ೪,೩೫೦ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಬಸ್-ಲಾರಿ ಡಿಕ್ಕಿ: ರಾಷ್ಟ್ರೀಯ ಹೆದ್ದಾರಿ ಮುಲ್ಕಿಯ ಬಪ್ಪನಾಡು ದೇವಳದ ಸಮೀಪದ ಶಾಂಭವಿ ಸೇತುವೆಯಲ್ಲಿ ಆಂಧ್ರಕ್ಕೆ ಹೋಗುತ್ತಿದ್ದ ವೋಲ್ವೋ ಬಸ್ ಮತ್ತು ಕೇರಳಕ್ಕೆ ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಸೇತುವೆಯ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: ಮೂವರು ಗಂಡು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯರ್ಮಾಳ ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
ಮೃತರನ್ನು ಯರ್ಮಾಳ ಗ್ರಾಮದ ಬಂಗಾರವ್ವ ರಾಮನಗೌಡ ಪಾಟೀಲ(೩೭) ಎಂಬ ಮಹಿಳೆ ತನ್ನ ಮಕ್ಕಳಾದ ಪರಶುರಾಮ(೭) ಮಧು(೫) ಹಾಗೂ ನವೀನ ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ದಿನ ಮಗನೊಬ್ಬನ ಕಾಲಿಗೆ ಒಡೆದ ಬಾಟಲಿ ತಗುಲಿ ಗಾಯವಾಗಿದೆ. ಮಗನ ಕಾಲಿಗೆ ರಾತ್ರಿ ಆರೈಕೆ ಮಾಡುತ್ತಿದ್ದಾಗ ರಾತ್ರಿ ದೀಪ ಉರಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಂಗಾರವ್ವಳ ಮೇಲೆ ಮನೆಯವರೆಲ್ಲ ಸಿಡುಕುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಬಂಗಾರವ್ವ ತನ್ನ ಮೂವರು ಮಕ್ಕಳೊಂದಿಗೆ ಶುಕ್ರವಾರ ರಾತ್ರಿಯೇ ನಾಪತ್ತೆಯಾಗಿದ್ದಳು. ಹುಡುಕಿದಾಗ ಬಂಗಾರವ್ವ ಮತ್ತು ಮೂವರು ಮಕ್ಕಳ ಶವ ಭಾನುವಾರ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಟ್ಲ: ಬೈಕ್ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ರೀತಿ ಗಾಯಗೊಂಡ ಘಟನೆ ವಿಟ್ಲದ ಕಲ್ಲಕಟ್ಟ ಎಂಬಲ್ಲಿ ಶನಿ ವಾರ ನಡೆದಿದೆ. ವಿಟ್ಲ ಮೂಡ್ನೂರು ಗ್ರಾಮ ಮಾಡತ್ತಡ್ಕ ಸಮೀಪದ ಕಲುವಾಜೆ ನಿವಾಸಿ ಕೂಸಪ್ಪ ಎಂಬವರೇ ಗಾಯ ಗೊಂಡವರು ಎಂದು ಗುರುತಿಸಲಾ ಗಿದ್ದು, ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ವಿಟ್ಲದಿಂದ ಮಾಡತ್ತಡ್ಕ ಕಡೆ ಅವರು ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಕಲ್ಲಕಟ್ಟ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದರು. ತಲೆಗೆ ಗಂಭೀರ ರೀತಿಯಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ಲಭ್ಯವಾಗದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡ ಲಾಗಿದೆ.

ಮಂಗಳೂರು: ಕಿನ್ನಿಗೋಳಿ ರಾಜಾಂಗಣದ ಎದುರಿನ ರಾಜ್ಯ ಹೆದ್ದಾರಿಯಲ್ಲಿರುವ ಹಲವು ವರ್ಷಗಳಿಂದ ಇದ್ದ ದೊಡ್ಡದಾದ ಗೋಳಿ ಮರವೊಂದಕ್ಕೆ ನಿನ್ನೆ ಸಂಜೆ ಬೆಂಕಿ ತಗುಲಿ ಮರ ಸಂಪೂರ್ಣ ಸುಟ್ಟು ಹೋಗಿದ್ದು, ಯಾರೋ ಉದ್ದೇಶಪೂರ್ವಕವಾಗಿಯೇ ಬೆಂಕಿ ಹಂಚಿದ್ದಾರೆನ್ನುವ ಸಂಶಯ ಮೂಡಿದೆ.
ಕಿನ್ನಿಗೋಳಿಯ ರಾಜಾಂಗಣದ ಎದುರು ರಾಜ್ಯ ಹೆದ್ದಾರಿಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ತುಂಬ ಹಳೆಯ ಗೋಳಿ ಮರಳಿಗದ್ದು, ಒಣಗಿ ಹೋಗಿದ್ದವು. ಬೆಂಕಿ ವ್ಯಾಪಿಸಿ ಹತ್ತಿರದಲ್ಲಿದ್ದ ಮೆಸ್ಕಾಂನ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ತಗಲಿದ್ದು ಸಿಬ್ಬಂದಿ ಕೂಡಲೆ ಕಾರ್ಯಪ್ರವೃತ್ತರಾ ದ್ದರಿಂದ ಯಾವುದೇ ನಷ್ಟವಾಗಿಲ್ಲ. ಅಗ್ನಿ ಶಾಮಕ ದಳ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

ಮಂಗಳೂರು: ಸಾಲದ ಮರು ಪಾವತಿಗಾಗಿ ನೀಡಿದ್ದ ಚೆಕ್ ಬೌನ್ಸ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ದ್ವಿಗುಣ ಹಣ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ಕಳೆದ ೨೦೦೬ರಲ್ಲಿ ಬಂಟ್ವಾಳ ಸಮೀಪದ ಸಿದ್ದಕಟ್ಟೆ ನಿವಾಸಿ ಲಾರೆನ್ಸ್ ಗೋವಿಯಸ್ ಎಂಬವರು ತಮ್ಮ ಸ್ನೇಹಿತರಾದ ಕಂಕನಾಡಿ, ಕಪಿತಾ ನಿಯೋ ರಸ್ತೆಯ ನಲಪ್ಪಾಡ್ ರೆಸಿಡೆನ್ಸಿ ಯಲ್ಲಿ ವಾಸ್ತವ್ಯ ಹೊಂದಿರುವ ಹೆನ್ರಿ ಅಲ್ಬುಕರ್ಕ್ ಎಂಬವರ ಪುತ್ರ ರಿಚರ್ಡ್ ಅಲ್ಬುಕರ್ಕ್ ಎಂಬವರಿಗೆ ಒಂದು ಲಕ್ಷ ರೂಪಾಯಿ ಸಾಲವನ್ನು ನೀಡಿದ್ದರು. ಈ ವೇಳೆ ಸಾಲ ಮರುಪಾವತಿಗಾಗಿ ತಮ್ಮ ಸ್ವಂತ ಖಾತೆಗೆ ಸಂಬಂಧಪಟ್ಟಂತೆ ಚೆಕ್ ಅನ್ನು ನೀಡಿದ್ದರು. ಆದರೆ ಲಾರೆನ್ಸ್ ಅವರು ಚೆಕ್ ಅನ್ನು ಬ್ಯಾಂಕ್‌ಗೆ ಜಮಾ ಮಾಡಿದ ವೇಳೆ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದು ಕಂಡು ಬಂದಿತ್ತು ಮಾತ್ರವಲ್ಲದೆ ಸ್ಟಾಪ್ ಪೇಮೆಂಟ್ ಎಂಬ ಶರಾದೊಂದಿಗೆ ಬ್ಯಾಂಕ್‌ನಲ್ಲಿ ಹಿಂಬರಹಗಳನ್ನು ನೀಡಿ ರುವ ಬಗ್ಗೆ ಲಾರೆನ್ಸ್ ಅವರು ಮಂಗಳೂರಿನ ಜೆಎಂಎಫ್‌ಸಿ ನಾಲ್ಕನೇ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸದ್ರಿ ದಾವೆಯನ್ನು ವಿಚಾರಣೆ ಗೊಳಪಡಿಸಿದ ನ್ಯಾಯಾಲ ಯವು, ದಾಖಲೆಗಳ ಆಧಾರದಲ್ಲಿ ಆರೋಪಿ ರಿಚರ್ಡ್ ಅಲ್ಬುಕರ್ಕ್ ಅವರಿಗೆ ಲಾರೆನ್ಸ್ ನೀಡಿರುವ ಮೊತ್ತದ ಎರಡುಪಟ್ಟು ಅಂದರೆ ರೂ. ೨,೦೮,೦೦೦ ಅನ್ನು ನೀಡುವಂತೆ ಆದೇಶ ನೀಡಿದೆ. ಹಣ ನೀಡದೇ ಹೋದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಧೀಶೆ ಶಕುಂತಳಾ ಆದೇಶ ಹೊರಡಿಸಿದ್ದಾರೆ. ಲಾರೆನ್ಸ್ ಪರವಾಗಿ ನ್ಯಾಯವಾದಿಗಳಾದ ನವೀನ್ ಚಿಲ್ಪಾರ್ ಮತ್ತು ಪ್ರದೀಪ್ ಕುಮಾರ್.ಕೆ.ಎಲ್. ವಾದಿಸಿದ್ದರು.

ಚೆನ್ನೈ: ಭೋಪಾಲ್‌ನಲ್ಲಿ ಗಣಿ ಮಾಫಿಯಾದಿಂದ ಅಧಿಕಾರಿಯನ್ನು ಹತ್ಯೆ ಮಾಡಿದ ಘಟನೆ ಇನ್ನೂ ಹಸಿರಾಗಿರುವಂತೆ ಚೆನ್ನೈಯಲ್ಲಿ ಮರಳು ಮಾಫಿಯಾಕ್ಕೆ ಯುವಕನೊಬ್ಬ ಬಲಿಯಾದ ಘಟನೆ ನಡೆದಿದೆ.
ಭಾನುವಾರ ತಿರುನಲ್ವೇಲಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಿನಿ ಟ್ರಕ್‌ವೊಂದನ್ನು ತಡೆಯಲು ಹೋದ ಯುವಕನೊಬ್ಬನ ಮೇಲೆ ಟ್ರಕ್ ಹರಿಸಿ ಕೊಲೆ ಮಾಡಲಾಗಿದೆ.
ಸತೀಶ್ ಕುಮಾರ್(೨೩) ಎಂಬಾ ತನೇ ಮೃತ ಯುವಕ. ಇಲ್ಲಿನ ನಂಬಿಯಾರು ನದಿಯಲ್ಲಿ ಅಕ್ರಮವಾಗಿ ಮರಳು ತುಂಬಿಸಲಾಗುತ್ತಿದೆ ಎಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಸತೀಶ್ ಕೆಲವು ಗ್ರಾಮಸ್ಥರೊಡಗೂಡಿ ಟ್ರಕ್ ಅನ್ನು ತಡೆಯಲು ಹೋಗಿದ್ದಾರೆ. ಆದರೆ ಟ್ರಕ್ ಚಾಲಕನು ಸತೀಶನ ಮೇಲೆ ವಾಹನ ಚಲಾಯಿಸಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸತೀಶ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಟ್ರಕ್ ಚಾಲಕ, ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ.

ಮಂಗಳೂರು: ತಂಗಿಯೊಂದಿಗೆ ನಾಟಕ ನೋಡಲೆಂದು ಶಾಲೆಗೆ ಹೋಗಿದ್ದ ಯುವತಿಯೊಬ್ಬಳು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕುಂದಾಪುರದ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮರವಂತೆ ಗ್ರಾಮದ ಗಾಂಧಿನಗರ ಗುಡ್ಡೆಮನೆ ನಿವಾಸಿ ರಾಮ ಅವರ ಪುತ್ರಿ ಸುಗಂಧಿ (೨೦) ನಾಪತ್ತೆಯಾ ದವಳಾಗಿದ್ದು, ಮಾ೧೦ರಂದು ನಾಟಕ ನೋಡಲೆಂದು ತಂಗಿ ಸುಲೋಚನಾ ಳೊಂದಿಗೆ ಅಂದು ಸಂಜೆ ಶಾಲೆಗೆ ಹೋಗಿದ್ದರು. ರಾತ್ರಿ ಸುಲೋಚನಾ ಒಬ್ಬಳೇ ಬಂದಿದ್ದು, ಸುಗಂಧಿ ಬಂದಿ ರಲಿಲ್ಲ. ಸುಗಂಧಿಗೆ ಯುವಕನೊಬ್ಬನ ಪರಿಚಯವಿತ್ತು ಎನ್ನಲಾಗಿದ್ದು, ಒಟ್ಟಿಗೆ ಪರಾರಿ ಯಾಗಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಗೆ ದೂರು ನೀಡಲಾಗಿದೆ.
ವೆಲೆನ್ಸಿಯಾ: ಯುವತಿ ನಾಪತ್ತೆ : ವೆಲೆನ್ಸಿಯಾ ಮರಿಯ ನಗರ ನಿವಾಸಿ ಶಾಲ್ವಿನ್ ಅನುಷಾ ಡಯಾಸ್ (೧೭) ಮಾ. ನಾಲ್ಕರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆಕೆಯ ತಾಯಿ ಜಯಂತಿ ಡಯಾಸ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಚರ್ಚ್‌ಗೆಂದು ಹೋದವಳು ಮರಳಿ ಮನೆಗೆ ಬಾರದೆ ನಾಪತ್ತೆಯಗಿದ್ದು, ೫.೫ ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿರುವ ಈಕೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳನಾಡು: ಎಂಡೋ ಪೀಡಿತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕಳನಾಡಿನ ಅಯ್ಯಂಗೋಳಿ ಯಲ್ಲಿ ನಡೆದಿದೆ. ದಿ. ಚೋಮು ಎಂಬವರ ಪತ್ನಿ ಕಮಲ (೫೬) ಮೃತಪಟ್ಟವರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.


ಕಾರ್ಕಳ: ಇಲ್ಲಿಗೆ ಸಮೀಪದ ಕುಕ್ಕುಂದೂರು ನಕ್ರೆ ಎಂಬಲ್ಲಿ ಮಗು ವಿನೊಂದಿಗೆ ಮಹಿಳೆಯೊಬ್ಬಳು ನಿಗೂಢ ನಾಪತ್ತೆಯಾದ ಘಟನೆ ನಡೆದಿದೆ.
 ಸ್ಮಿತಾ(೨೫) ಎಂಬಾಕೆ ತನ್ನ ಒಂದು ವರ್ಷದ ಮಗನೊಂದಿಗೆ ಮಾರ್ಚ್ ೮ರಿಂದ ನಾಪತ್ತೆಯಾಗಿದ್ದಾರೆ. ಒಂದು ವರ್ಷದ ಹಿಂದೆ ಮುನಿಯಾ ಲುವಿನ ಆನಂದ ಮತ್ತು ಸ್ಮಿತಾ ಪ್ರೇಮಿಸಿ ವಿವಾಹವಾಗಿದ್ದರು.
 ದಾಂಪತ್ಯದಲ್ಲಿ ಒಡಕು ಕಾಣಿಸಿ ಕೊಂಡಿರುವುದೇ ಘಟನೆಗೆ ಕಾರಣ ವೆನ್ನಲಾಗಿದೆ. ನನಗೆ ಗಂಡನ ಮನೆಯ ಲ್ಲಿರಲು ಇಷ್ಟವಿಲ್ಲ. ಎಲ್ಲಿಯಾದರೂ ತೆರಳಿ ಬದುಕುತ್ತೇನೆ ಎಂದು ಸ್ಮಿತಾ ನೆರೆಮನೆಯವರಲ್ಲಿ ತಿಳಿಸಿದ್ದಾರೆನ್ನಲಾ ಗಿದೆ. ಈಕೆಯ ಬಗ್ಗೆ ಠಾಣೆಗೆ ಅಥವಾ ಕಾರ್ಕಳ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಬೇಕೆಂದು ಕೋರಲಾಗಿದೆ.


ವಿಟ್ಲ: ಇಲ್ಲಿನ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಕೆಲ ಸಮಯಗಳ ಹಿಂದೆ ನಿರ್ಮಾಣವಾದ ಕಾಂಕ್ರೀಟ್ ಚರಂಡಿ ತೆರದ ಪರಿಣಾಮ ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಡಂಬು ಸುತ್ತಮುತ್ತಲಿನ ಮನೆಗಳಿಂದ ಬಂದಂತಹ ತ್ಯಾಜ ಮಿಶ್ರಿತ ನೀರು ಕಡಂಬು ಜಂಕ್ಷನ್‌ನಲ್ಲಿರುವ ಈ ಚರಂಡಿಯನ್ನು ಸೇರುತ್ತದೆ. ಕೆಲ ದಿನಗಳ ಹಿಂದೆ ಈ ಚರಂಡಿಯ ಮೇಲ್ಭಾಗ ತೆರೆದ ಪರಿಣಾಮ ಅದರ ದುರ್ನಾತ ಇದೀಗ ಕಡಂಬು ಪರಿಸರದ ಜನರ ನೆಮ್ಮದಿ ಕೆಡಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಬಂಧಪಟ್ಟ ಸ್ಥಳೀಯ ಗ್ರಾ.ಪಂ ಇನ್ನಾದರೂ ಎಚ್ಚೆತ್ತು ಇದಕ್ಕೊಂದು ಮುಕ್ತಿ ತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಮಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ವಿರುದ್ಧದ ಗಣಿ ಹಗರಣದ ಕೇಸ್‌ಗಳನ್ನು ನ್ಯಾಯಾಲಯ ತಾಂತ್ರಿಕ ಕಾರಣಗಳಿಂದ ವಜಾಗೊಳಿಸಿದೆ. ಇದರ ಅರ್ಥ ಯಡಿಯೂರಪ್ಪ ನಿದೋಷಿ ಎಂದಾಗುವುದಿಲ್ಲ. ಲೋಕಾಯುಕ್ತರು ಮತ್ತೆ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಬೇಕು ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಾಯುಕ್ತರ ವರದಿಯ ಆಧಾರದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿದ ತಾಂತ್ರಿಕ ನ್ಯೂನತೆಯೇ ಕೇಸ್ ವಜಾಕ್ಕೆ ಕಾರಣ. ಲೋಕಾಯುಕ್ತ ಪೊಲೀಸ್ ಮತ್ತು ಸರಕಾರ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸರಕಾರ ಲೋಕಾಯುಕ್ತರನ್ನು ನೇಮಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರಕಾರದ ೧೮ ಸಚಿವರ ವಿರುದ್ಧ ಕೇಸ್ ಇದೆ. ಅರಣ್ಯ ಸಚಿವರು ಹಲವು ಕೇಸ್‌ಗಳಲ್ಲಿ ಸಿಲುಕಿದ್ದು ಅವರ ವಿಕೆಟ್ ಸದ್ಯದಲ್ಲೇ ಪತನವಾಗಲಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೊಯ್ಲಿ ಹೇಳಿದರು.
ಈ ಕ್ಷೇತ್ರ ಪ್ರತಿನಿಧಿಸಿದ್ದ ಡಿ.ವಿ. ಸದಾನಂದ ಗೌಡರು ಕ್ಷೇತ್ರಕ್ಕಾಗಲಿ, ಕ್ಷೇತ್ರದ ಜನತೆಗಾಗಲಿ ಏನೂ ಮಾಡಿಲ್ಲ. ಜಯಪ್ರಕಾಶ್ ಹೆಗ್ಡೆ ಸೋತಿದ್ದರೂ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಆದುದರಿಂದ ಜನತೆ ಜಯಪ್ರಕಾಶ್ ಹೆಗ್ಡೆಯವರನ್ನೇ ಸಂಸದರಾಗಿ ಆರಿಸುತ್ತಾರೆ ಎಂದರು.
ಈ ಚುನಾವಣೆಯಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂಬುದನ್ನು ಅರಿತಿರುವ ಬಿಜೆಪಿ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ರೈಲು ಬಜೆಟ್‌ನಲ್ಲಿ ಕಳೆದ ಬಾರಿ ಹಲವು ಸಮೀಕ್ಷೆಗಳನ್ನು ನಡೆಸಲಾಗಿದೆ. ಅವುಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಸಹಕರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಮಂಗಳೂರು: ಸುಳ್ಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ಹಾಳಾದ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುತ್ತಿದ್ದುದನ್ನು ಗ್ರಾಹಕರು ಆಕ್ಷೇಪಿಸಿ ಟ್ಯಾಕ್ಸಿಯಲ್ಲಿದ್ದ ಕಲ್ಲಂಗಡಿಗಳನ್ನು ಹಾಳುಗೆಡವಿದ ಘಟನೆ ಭಾನುವಾರ ನಡೆದಿದೆ.ಕಲ್ಲಂಗಡಿ ಖರೀದಿ ಮಾಡಿದ ಗ್ರಾಹಕ ಮನೆಗೆ ಹೋಗಿ ತುಂಡರಿಸಿದಾಗ ಹಾಳಾಗಿದ್ದು ಕಂಡು ಬಂದಿದ್ದ ಕೂಡಲೇ ವಾಪಾಸು ತಂದು ಮಾರಾಟ ಮಾಡುತ್ತಿದ್ದ ಯುವಕನಲ್ಲಿ ಪ್ರಶ್ನಿಸಿದರು. ಅಲ್ಲದೆ ಟೆಂಪೋದಲ್ಲಿದ್ದ ಇತರ ಹಣ್ಣುಗಳನ್ನು ಪರಿಶೀಲಿಸಿದಾಗ ಅವುಗಳೆಲ್ಲ ಹಾಳಾಗಿದ್ದು ಕಂಡು ಬಂತು. ಅಷ್ಟೊತ್ತಿಗೆ ನೆರೆದ ಸಾರ್ವಜನಿಕರು ಆಕ್ರೋಶಗೊಂಡು ಟೆಂಪೋದಲ್ಲಿದ್ದ ಎಲ್ಲಾ ಕಲ್ಲಂಗಡಿಗಳನ್ನು ಪುಡಿಗೈದರು. ಅಷ್ಟೊತ್ತಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟೆಂಪೋವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.


ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಇದರ ವತಿಯಿಂದ ಪ್ರೆಸ್‌ಕ್ಲಬ್‌ಡೇ ಕಾರ್ಯಕ್ರಮ ನಗರದ ಲೇಡಿಹಿಲ್ ಉರ್ವಾ ಚರ್ಚ್ ಹಾಲ್‌ನಲ್ಲಿ ನಡೆಯಿತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿಶೇಷ ಸಾಧನೆಗೈದು ವಿವಿಧ ಪ್ರಶಸ್ತಿಗೆ ಪಾತ್ರರಾಗಿರುವ ಪತ್ರಕರ್ತರನ್ನು ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ರಾಜೇಂದ್ರಕುಮಾರ್ ಅವರು ಸನ್ಮಾನಿಸಿದರು.
 ಮನಪಾ ಆಯುಕ್ತ ಡಾ. ಹರೀಶ್‌ಕುಮಾರ್ ಅವರು ಪ್ರೆಸ್‌ಕ್ಲಬ್‌ಡೇ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್‌ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಕೆ. ಆನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮಕೃಷ್ಣ ಆರ್. , ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್‌ನ ಅಧ್ಯಕ್ಷ ಬಿ. ರವೀಂದ್ರಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಯೋಗೀಶ್‌ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.


ಪಡುಬಿದ್ರಿ: ಉಡುಪಿ-ಚಿಕ್ಕಮಗ ಳೂರು ಸಂಸದೀಯ ಕ್ಷೇತ್ರದ ಉಪ ಚುನಾವಣೆ ಕಾವೇರುತ್ತಿದ್ದಂತೆ, ಇತ್ತ ಪಡುಬಿದ್ರಿಯಲ್ಲಿ ಮತ್ತೆ ಬೈಪಾಸ್ ವಿರೋಧಿಗಳಿಂದ ಪ್ರತಿಭಟನೆಯೂ ತೀವ್ರತೆ ಪಡೆದುಕೊಂಡಿದೆ.
ಶನಿವಾರ ಸಂಜೆ ನಡೆದ ಪ್ರತಿ ಭಟನಾ ಸಭೆಯಲ್ಲಿ ದಲಿತ ಮುಖಂಡ ಜಯನ್ ಮಲ್ಪೆ ಭಾಗವಹಿಸಿದ್ದು, ಪ್ರತಿಭ ಟನಾಕಾರರರಿಗೆ ಆನೆಬಲ ಬಂದಂತಾ ಗಿದೆ.
ಪ್ರತಿಭಟನಾಕಾರರರನ್ನು ಉದ್ದೇಶಿ ಸಿ ಜಯನ್ ಮಲ್ಪೆ ಮಾತನಾಡಿ, ಹಣವಂತರಿಗಾಗಿ ಕೆಲಸ ಮಾಡುತ್ತಿರುವ ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತು ಉಡುಪಿ ಶಾಸಕ ರಘುಪತಿ ಭಟ್ ಅವರು ಬೈಪಾಸ್ ಯೋಜನೆ ಯನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಇದರಿಂ ದಾಗಿ ದಲಿತ ಕುಟುಂಬಗಳೂ ಸೇರಿ ಹಲವಾರು ಕುಟುಂಬಗಳು ನೆಲೆ ಇಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಜನ ವಿರೋಧಿ ಹಾಗೂ ದಲಿತ ವಿರೋಧಿ ಕೆಲಸ ಮಾಡುತ್ತಿರುವ ಇಬ್ಬರೂ ಶಾಸಕ ರನ್ನು ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆಯ ಬೇಕೆಂದು ಹೇಳಿದ್ದಾರೆ.
ಅತ್ಯಂತ ಪುರಾತನ ಕಾಶಿ ಮಠ ಮತ್ತು ಕೋಟ ಶಿವರಾಮ ಕಾರಂತರು ಜೀವಿತಾವಧಿಯಲ್ಲಿದ್ದ ಅವರ ಮನೆಯ ನ್ನೇ ನೆಲಸಮ ಮಾಡುತ್ತಿರುವ ಹೆದ್ದಾರಿ ಇಲಾಖೆಗೆ, ಪಡುಬಿದ್ರಿಯ ಪೇಟೆಯಲ್ಲಿ ಅನಧಿಕೃತವಾಗಿ ಕಟ್ಟಿದ ಎರಡು ಹೋಟೆಲು ಕಟ್ಟಡಗಳು ಶಿವರಾಮ ಕಾರಂತರ ಮನೆಗಿಂತಲೂ ಅಧಿಕ ಮೌಲ್ಯದ್ದಾಗಿ ಕಂಡು ಬಂದುದು ವಿಶೇಷ ಎನಿಸಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಅವರು ಪಡುಬಿದ್ರಿಯಲ್ಲಿ ಬೈಪಾಸಿಗಿಂತಲೂ ಹೆದ್ದಾರಿ ಅಗಲೀಕರಣ ಸೂಕ್ತ ಎಂಬ ವರದಿ ನೀಡಿದ್ದರೂ, ಯಾಕೆ ಅವರ ವರದಿಯನ್ನು ಅನುಷ್ಠಾಕ್ಕೆ ತಂದಿಲ್ಲ ಎಂದು ಪ್ರಶ್ನಿಸಿದರು.
ವೇದಿಕೆಯಲ್ಲಿ ದಸಂಸ ನೌಕರರ ಘಟಕ ರಾಜ್ಯ ಕಾರ್ಯದರ್ಶಿ ನಾರಾ ಯಣ ವೇಣೂರು, ದಸಂಸ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಶಾಂತ್ ತೊಟ್ಟಂ, ಮಂಗಳೂರು ವಿಭಾಗೀಯ ಸಂಚಾಲಕ ಶೇಖರ ಹೆಜ್ಮಾಡಿ, ಎಸ್‌ಡಿಪಿಐ ನಾಯಕರಾದ ಅಮೀರ್ ಹಂಝ ಮತ್ತು ಅಬೂಬಕ್ಕರ್ ಪಾದೂರು, ಬೈಪಾಸ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಹೋರಾಟ ಸಮಿತಿಯ ಪದಾಧಿಕಾರಿಗಳಾದ ದಿವಾಕರ್ ಭಟ್, ಅಬ್ದುಲ್ ಅಝೀಝ್ ಹೆಜ್ಮಾಡಿ, ಲೋಕೇಶ್ ಕಂಚಿನಡ್ಕ, ಮೋಹನ್ ಪಾದೆಬೆಟ್ಟು, ಮ್ಯಾಕ್ಸಿಂ ಡಿಸೋಜಾ, ಮಿಥುನ್ ಆರ್.ಹೆಗ್ಡೆ, ಅಬ್ದುಲ್ ಹಮೀದ್ ಪಡುಬಿದ್ರಿ, ರಾಜೇಶ್ ಶೆಟ್ಟಿ, ಸುಧಾಕರ ಫಲಿಮಾರು, ಜಯ ಶೆಟ್ಟಿ, ನವೀನ್ ಶೆಟ್ಟಿ, ಶ್ರ್ರೀಧರ ಹೆಜ್ಮಾಡಿ, ಪಿಸಿರ ಮೇಸ್ತ್ರೀ, ಮನೋಹರ್ ಬೊಗ್ಗರ್‌ಲಚ್ಚಿಲ್, ಕೇಶವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಪಾಕಿಸ್ತಾನ ಶುಭಾರಂಭ
ಮಿರ‍್ಪುರ್: ಇಲ್ಲಿ ಬಾಂಗ್ಲಾ ವಿರುದ್ಧ ನಡೆದ ಏಶ್ಯಾ ಕಪ್ ಕೂಟದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಒಂದು ಹಂತದಲ್ಲಿ ಸೋಲಿನೆಡೆಗೆ ಹೆಜ್ಜೆಹಾಕಿದ್ದರೂ ಅಂತಿಮ ಹಂತದಲ್ಲಿ ಅಚ್ಚರಿಯ ರೀತಿಯ ೨೧ ರನ್‌ಗಳ ಗೆಲುವು ಸಾಧಿಸಿ ಕೂಟದಲ್ಲಿ ಶುಭಾರಂಭ ಮಾಡಿದೆ. ಪಾಕ್ ಪರ ಮೊಹ್ಮದ್ ಹಫೀಸ್‌ರ ಅಲ್‌ರೌಂಡಿಂಗ್ ಆಟವು ಪಾಕ್ ಗೆಲುವಿಗೆ ಪ್ರಮುಖವಾಯಿತು.
ಟಾಸ್ ಸೋತ ಪಾಕಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿತು. ಪರಿಣಾಮ ನಿಗದಿತ ೫೦ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೨೬೨ ರನ್ ಕಲೆಹಾಕಿತು. ಆರಂಭಿಕರಾದ ಹಫೀಸ್ (೮೯) ಹಾಗೂ ಜಮ್ಶೆಡ್ (೫೪) ಉತ್ತಮ ಅರ್ಧಶತಕ ದಾಖಲಿಸಿದರು. ಗುರಿ ಬೆನ್ನತ್ತಿದ್ದ ಬಾಂಗ್ಲಾ ಒಂದು ವೇಳೆಯಲ್ಲಿ ಜಯಸಾಧಿಸುವ ವಿಶ್ವಾಸದಲ್ಲಿದ್ದರೂ ಅಂತಿಮ ಹಂತದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ತಂಡ ೪೮.೧ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೨೪೧ ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನತ್ತುವ ಕಾರ್ಯದಲ್ಲಿ ಬಾಂಗ್ಲಾ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿತ್ತು. ಆರಂಭಿಕರಾದ ತಮೀಮ್ ಹಾಗೂ ನಿಜಾಮ್ (೩೦) ಉತ್ತಮ ಆರಂಭ ಹಾಕಿಕೊಟ್ಟರು. ಈ ಜೋಡಿ ೪೫ ರನ್‌ಗಳ ಜೊತೆಯಾಟ ನಡೆಸಿತು. ನಂತರ ಬಂದ ಇಸ್ಲಾಂ (೨೩) ಕೂಡ ಉತ್ತಮ ಆಟ ನೀಡಿದರು. ಆದರೆ ಈ ವೇಳೆ ಆಕರ್ಷಕ ಅರ್ಧಶತಕ ಸಿಡಿಸಿದ್ದ ತಮೀಮ್ (೬೪) ನಿರ್ಗಮಿಸಿದರು. ಮೊಹ್ಮದುಲ್ಲಾ ಕೇವಲ ಸೊನ್ನೆಗೆ ನಿರ್ಗಮಿಸಿದ್ದು, ಪರಿಣಾಮ ಬಾಂಗ್ಲಾ ೧೩೫ ರನ್‌ಗೆ ಐದು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿತ್ತು. ಆದರೆ ನಾಯಕ ಶಕಿಬುಲ್ ಹಾಗೂ ನಾಸೀರ್ ಹೊಸೈನ್ (೪೭) ಐದನೇ ವಿಕೆಟ್‌ಗೆ ೮೯ ರನ್‌ಗಳ ಜೊತೆಯಾಟ ನಡೆಸಿದಾಗ ತಂಡ ಗೆಲುವಿನ ಉತ್ಸಾಹದಲ್ಲಿತ್ತು. ಆದರೆ ಅಬ್ದುರ್ ರಜಾಕ್ (೧) ಹಾಗೂ ಮೊರ್ತಾಜಾ (೧) ಜವಾಬ್ದಾರಿ ಮರೆತು ಆಡಿದರು. ಪರಿಣಾಮ ಬಾಂಗ್ಲಾ ಮುಂದಿನ ೧೭ ರನ್ ಗಳಿಸುವಷ್ಟರಲ್ಲಿ ಎಲ್ಲಾ ನಾಲ್ಕು ವಿಕೆಟ್ ಕಳಕೊಂಡು ಸೋಲುವ ಮೂಲಕ ತವರಿನ ಅಭಿಮಾನಿ ಗಳಿಗೆ ನಿರಾಶೆ ಮೂಡಿ ಸಿತು. ಶಕಿಬುಲ್ (೬೪) ನಿರ್ಗಮಿಸುವುದರೊಂದಿಗೆ ಬಾಂಗ್ಲಾ ಸೋಲಿಗೆ ಶರಣಾಯಿತು. ಪಾಕ್ ಪರ ಉಮರ್ ಗುಲ್ ಮೂರು ವಿಕೆಟ್ ಪಡೆದು ಮಿಂಚಿದರು. ಗುಲ್ ಮೂರು ಹಾಗೂ ಹಫೀಸ್ ಎರಡು ವಿಕೆಟ್ ಪಡೆದರು.


ಮಂಗಳೂರು: ಇತ್ತೀಚಿಗೆ ನಡೆದ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತೀಯ ತಂಡವನ್ನು ಸಮರ್ಥವಾಗಿ ಮನ್ನಡೆಸಿದ ಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖಪಾತ್ರ ವಹಿಸಿದ್ದ ನಾಯಕಿ ಮಮತಾ ಪೂಜಾರಿ ನಿನ್ನೆ ತನ್ನ ತವರೂರು ಮಂಗಳೂರಿಗೆ ಆಗಮಿಸಿದ್ದು, ಅವರಿಗೆ ಭರ್ಜರಿ ಸ್ವಾಗತ ನೀಡಲಾಯಿತು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ಮೇಯರ್ ಗುಲ್ಜಾರ್ ಬಾನು, ಉಪಮೇಯರ್ ಅಮಿತಕಲಾ, ವಿಧಾನಸಭಾ ಉಪ ಸಭಾಪತಿ ಎನ್. ಯೋಗೀಶ್ ಭಟ್ ಸೇರಿದಂತೆ ಹಲವಾರು ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಇದೇ ವೇಳೆ ತನ್ನ ಅಭಿಪ್ರಾಯ ಹಂಚಿಕೊಂಡ ಮಮತಾ, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ತವರಿಗೆ ಬರುವಾಗ ತಂಡದ ಸದಸ್ಯೆಯಾಗಿದೆ. ಆದರೆ ಈಗ ನಾಯಕಿಯಾಗಿ ಬಂದಿದ್ದು, ಸಂತಸ ದ್ವಿಗುಣವಾಗಿದೆ ಎಂದು ಹೇಳಿದರು. ಮಮತಾ ಅವರ ತಂದೆ ಭೋಜ ಪೂಜಾರಿ, ತಾಯಿ ಕಿಟ್ಟಿ ಪೂಜಾರಿ, ಅಣ್ಣ ವಿಶ್ವಾನಾಥ ಪೂಜಾರಿ ಹಾಗೂ ತಂಗಿ ಮಧುರಾ ಪೂಜಾರಿ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸಿ ಸಂತಸ ಪಟ್ಟರು.

ಕ್ಯಾಲಿಫೋರ್ನಿಯಾ: ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಇಂಡಿಯನ್ ವೆಲ್ಸ್ ಡಬ್ಲ್ಯುಟಿಎ ಟೆನಿಸ್ ಕೂಟದಲ್ಲಿ ವಿಶ್ವದ ನಂಬರ್ ವನ್ ಆಟಗಾರ್ತಿ ಕ್ಯಾರೊಳಿನ್ ವೊಜ್ನಿಯಾಕಿ ಹಾಗೂ ಮಾಜಿ ಅಗ್ರಶ್ರೇಯಾಂಕದ ಮರಿಯಾ ಶರಪೋವಾ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ರಶ್ಯಾದ ಇಕಟೆರಿನಾ ಮಕರೊವಾ ವಿರುದ್ಧ ೬-೦, ೬-೨ರ ಅಂತರದಲ್ಲಿ ಗೆದ್ದುಕೊಂಡ ಡೆನ್ಮಾರ್ಕ್‌ನ ವೊಜ್ನಿಯಾಕಿ ಹಾಗೂ ಅರ್ಜೆಂಟೀನಾದ ಗಿಲೆಸಿಯಾ ಡುಲ್ಕೊ ವಿರುದ್ಧ ಅಷ್ಟೇ ಅಂತರದಲ್ಲಿ ಗೆಲುವು ಸಾಧಿಸಿದ ರಶ್ಯಾದ ಶರಪೋವಾ ಕೂಡ ಮೂರನೇ ಸುತ್ತಿಗೆ ಏರಿದರು.

ಲಂಡನ್: ವಿವಾದಾತ್ಮಕ ಡೊವ್ ಕಂಪೆನಿಯನ್ನು ಮುಂಬರುವ ಲಂಡ ನ್ ಒಲಿಂಪಿಕ್ಸ್‌ನಿಂದ ಹೊರಗಿಡುವ ಭಾರತದ ಪ್ರಯತ್ನಕ್ಕೆ ಬಹುತೇಕ ತೆರೆ ಬಿದ್ದಂತಾಗಿದೆ. ಲಂಡನ್ ಒಲಿಂಪಿ ಕ್ಸ್‌ಗೆ ಡೊವ್ ಕೆಮಿಕಲ್ ಪ್ರಾಯೋಜ ಕತ್ವವನ್ನು ನೀಡಲಿದೆ ಎಂದು ಸ್ವತಹ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೊನ್ ಹೇಳುವ ಮೂಲಕ ಭಾರತಕ್ಕೆ ಶಾಕ್ ನೀಡಿದ್ದಾರೆ.
ಡೊವ್ ಕಂಪೆನಿ ಒಲಿಂಪಿಕ್ಸ್‌ನಲ್ಲಿ ಪ್ರಾಯೋಜಕರಾಗಿ ಮುಂದುವರೆಯ ಲಿದ್ದು, ಒಂದು ವೇಳೆ ಭಾರತ ಕೂಟ ವನ್ನು ಬಹಿಷ್ಕರಿಸಿದರೆ ಅದು ದುರದೃ ಷ್ಟವಾಗಲಿದೆ. ಭೋಪಾಲ್‌ನ ಲ್ಲಾದ ದುರಂತದ ಬಗ್ಗೆ ನನಗೆ ಖೇದವಿದೆ. ಜನರು ಈಗಲೂ ಕೂಡ ಅದರ ಪರಿ ಣಾಮಕ್ಕೆ ತುತ್ತಾಗುತ್ತಿದ್ದು, ಮನಕ ಲುಕುವಂತಿದೆ.

ತನಿಖೆ ನಡೆಸಲಿರುವ ಐಸಿಸಿ
ಲಂಡನ್: ಮೊಹಾಲಿಯಲ್ಲಿ ನಡೆ ದಿದ್ದ ಭಾರತ ಹಾಗೂ ಪಾಕಿಸ್ತಾನ ನಡು ವಣ ವಿಶ್ವಕಪ್ ಸೆಮೀಸ್ ಪಂದ್ಯ ಯಾರಿ ಗೆ ತಾನೆ ನೆನಪಿಲ್ಲ. ಆದರೆ ಇದೇ ಪಂದ್ಯ ಫಿಕ್ಸಿಂಗ್ ಆಗಿತ್ತೆಂದು ಪತ್ರಿಕೆಯ ವರದಿ ಯನ್ನು ಐಸಿಸಿ ಈಗ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ವಿಶೇಷ ತಂಡ ರಚಿಸಿದೆ.
ಲಂಡನ್ ಮೂಲದ ‘ಸಂಡೇ ಟೈಮ್ಸ್ ಪತ್ರಿಕೆಯ ವರದಿಯನ್ನಾಧರಿ ಸಿದ ಐಸಿಸಿ ಈ ಕ್ರಮ ತೆಗೆದುಕೊಂಡಿದೆ. ಅಲ್ಲದೆ ಇಂಗ್ಲಿಷ್ ಕೌಂಟಿಯಲ್ಲಿ ಕೂಡ ಫಿಕ್ಸಿಂಗ್ ಕರಿನೆರಳು ಇದ್ದು, ಪಂದ್ಯದ ವೇಳೆ ನಿಧಾನವಾಗಿ ಬ್ಯಾಟಿಂಗ್ ನಡೆಸುವ ದಾಂಡಿಗನಿಗೆ ೪೦ ಸಾವಿರ ಪೌಂಡ್, ರನ್ ನೀಡುವ ಬೌಲರ್‌ಗೆ ೫೦ ಸಾವಿರ ಹಾಗೂ ಪಂದ್ಯದ ಗತಿಯನ್ನೇ ಬದಲಾ ಯಿಸುವ ಆಟಗಾರ ಅಥವಾ ಅಧಿಕಾರಿಗೆ ಇಂತಿಷ್ಟು ಮೊತ್ತ ನೀಡಲಾಗುತ್ತದೆ. ಅಲ್ಲದೆ ದೇಶದ ಬಾಲಿವುಡ್ ನಟಿಯರು ಕೂಡ ಬುಕ್ಕಿಗಳ ಈ ಕಾರ್ಯಕ್ಕೆ ಸಹಾ ಯ ಮಾಡುತ್ತಿದ್ದಾರೆ ಎಂದು ಪತ್ರಿಕೆ ಆರೋಪಿಸಿದೆ. ಆದರೆ ಇಂಡೋ-ಪಾಕ್ ನಡುವಿನ ವಿಶ್ವಕಪ್ ಸೆಮೀಸ್ ಕೂಡ ಕಳಂಕಿತವಾಗಿದೆ ಎಂಬ ವರದಿ ಯನ್ನು ಮಾತ್ರ ಐಸಿಸಿ ಗಂಭೀರವಾಗಿ ತೆಗೆದುಕೊಂಡಿದ್ದು, ಅದರ ಬಗ್ಗೆ ತನಿಖೆಗೆಂದು ವಿಶೇಷ ತಂಡ ರಚಿಸಿದೆ.
ಈ ರೀತಿಯ ವರದಿಯನ್ನು ಮಾಡಿ ಹೆಚ್ಚಿನ ಮಾಹಿತಿ ನೀಡಿದ ಪತ್ರಿಕೆಯ ಕಾರ್ಯವನ್ನು ನಾವು ಮುಕ್ತ ಕಂಠದಿಂದ ಅಭಿನಂದಿಸುತ್ತಿದ್ದೇವೆ. ಪತ್ರಿಕೆ ಮಾಡಿದ ಆರೋಪವನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ, ಅದರ ಬಗ್ಗೆ ಪೂರ್ಣ ರೀತಿಯ ತನಿಖೆಯನ್ನು ನಾವು ಏರ್ಪಡಿ ಸಲಿದ್ದೇವೆ ಎಂದು ಐಸಿಸಿ ವಕ್ತಾರ ರೊಬ್ಬರು ತಿಳಿಸಿದ್ದಾರೆ.

ಮಂಗಳೂರು: ಫಜೀರು ಶ್ರೀ ಅರಸು ಮುಂಡಿತ್ತಾಯ ದೈವದ ಪೆಜತ್ತ ಬಾಕಿಮಾರಿನಲ್ಲಿ ನಡೆಯುವ ದೊಂಪದ ಬಲಿ ಜಾತ್ರೆಯು ಮಾ.೧೧ರಿಂದ ಭಂಡಾರ ಏರಿ ಮಾ.೧೩ನೇ ಸೋಮವಾರ ಶ್ರೀ ಅರಸು ಮುಂಡಿತ್ತಾಯ ದೈವದ ನೇಮ ಹಾಗೂ ಮಾ.೧೩ರಂದು ಜುಮಾದಿ ಬಂಟ ದೈವಗಳ ನೇಮ ನಡೆಯಲಿರುವುದು ಎಂದು ಆಡಳಿತ ಸಮಿತಿಯವರು ಪ್ರಕಟಿಸಿದ್ದಾರೆ.

ಕಡಬ: ಸೋಶಿಯಲ್ ಡೆಮಾ ಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಕಾರ್ಯದರ್ಶಿ ಶ್ರೀಮತಿ ಹೇಮ ಲತಾರವರು ದಿನಾಂಕ ೦೨.೦೩. ೨೦೧೨ರಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಆತೂರು ವಲಯ ಕಛೇರಿಗೆ ಭೇಟಿ ನೀಡಿ ಪಕ್ಷದ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಪಕ್ಷದ ಕಾರ‍್ಯಕರ್ತರಿಗೆ ಶುಭ ಹಾರೈ ಸಿದರು. ರಾಜ್ಯ ಕಾರ‍್ಯದರ್ಶಿ ರವರೊ ಂದಿಗೆ ಬೆಂಗಳೂರಿನ ಎಸ್‌ಡಿಪಿ ಐಯ ಕಚೇರಿಯ ಪ್ರಧಾನ ಕಾರ‍್ಯ ನಿರ್ವಾಹಕ ಇಸ್ಮಾ ಯಿಲ್ ಆತೂ ರು ಇವರು ಉಪಸ್ಥಿತ ರಿದ್ದರು. ಅಲ್ಲದೆ ಜಿಲ್ಲಾ ಸಮಿತಿ ಸದಸ್ಯರು, ರಾಮಕುಂಜ ಗ್ರಾಮ ಪಂಚಾ ಯತ್ ಸದಸ್ಯರು ಮತ್ತು ಕಡಬ ಗ್ರಾಮ ಸಮಿತಿ ಹಾಗೂ ಆತೂರು ವಲಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


ವೇಣೂರು: ಅಂತಾರಾಷ್ಟ್ರೀಯ ಗಣಿತ ಪರೀಕ್ಷೆ ದಾವಣಗೆರೆ ಇವರು ನಡೆಸಿದ ಪ್ರತಿಭಾ ಪರಿಕ್ಷೆಯಲ್ಲಿ ಕುಂಭಾಶ್ರೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರತೀಕ್ಷಾ (೭ನೇ) ರಾಜ್ಯಮಟ್ಟದಲ್ಲಿ ೨ನೇ ರ‍್ಯಾಂಕ್, ಅಬ್ದುಲ್ ರೆಹಮಾನ್ (೨ನೇ) ಜಿಲ್ಲಾ ಮಟ್ಟದ ಪ್ರಥಮ ರ‍್ಯಾಂಕ್ ಪ್ರತೀಕ್ಷಾ (೫ನೇ) ಮೂರನೇ ರ‍್ಯಾಂಕ್ ಪಡೆದಿದ್ದಾರೆ. ೧೯ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕುಂಭಶ್ರೀ ಶಾಲೆಯ ಸಹಶಿಕ್ಷಕಿ ವೇದಾವತಿ ಪರೀಕ್ಷೆಯನ್ನು ಸಂಘಟಿಸಿದ್ದರು.


ಬಂಟ್ವಾಳ: ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶದ ಸಿದ್ಧಕಟ್ಟೆ ಮತ್ತು ಇರ್ವತ್ತೂರು ಪ್ರತ್ಯೇಕ ಶಾಲೆಯಲ್ಲಿ ಓದುತ್ತಿರುವ ಸಹೋದರ-ಸಹೋದರಿ ಯರಿಬ್ಬರು ಕರಾಟೆಯಲ್ಲಿ ಅಂತಾ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಮೋಕ್ಷಿತ್ ಎಂ.ಶೆಟ್ಟಿ ಮತ್ತು ಈತನ ಸಹೋದರಿ ಇರ್ವತ್ತೂರು ಸಮೀಪದ ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ೫ನೇ ತರಗತಿ ವಿದ್ಯಾರ್ಥಿನಿ ಸಹನಾ ಎಂ.ಶೆಟ್ಟಿ ಇವರೇ ಈ ಸೋದರ-ಸೋದರಿ ಕ್ರೀಡಾ ಪ್ರತಿಭೆ. ಮುಂದಿನ ಮೇ ತಿಂಗಳಿನಲ್ಲಿ ನೇಪಾಳದ ಕಠ್ಮಂಡು ವಿನಲ್ಲಿ ನಡೆಯಲಿರುವ ಅಂತಾ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುವ ಇವರಿಬ್ಬರೂ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಕೊರಳಿಗೇರಿಸುವ ವಿಶ್ವಾಸ ಹೊಂದಿದ್ದಾರೆ.
ಬಂಟ್ವಾಳ ತಾಲೂಕಿನ ಮೂಡು ಪಡುಕೋಡಿ ಗ್ರಾಮದ ನರ್ವಲ್ದಡ್ಡ ನಿವಾಸಿ, ಗುತ್ತಿಗೆದಾರ ಎನ್.ಮೋಹನ್ ಶೆಟ್ಟಿ ಮತ್ತು ಹರಿಣಾಕ್ಷಿ ಎಂ.ಶೆಟ್ಟಿ ದಂಪತಿ ಮಕ್ಕಳೇ ಈ ಕರಾಟೆ ಪ್ರತಿಭೆಗಳು. ಇವರಿಬ್ಬರ ಸಾಧನೆಗೆ ಮೂಡುಬಿದ್ರೆ ಕರಾಟೆ ತರಬೇತು ದಾರರಾಗಿರುವ ನದೀಂ ಮತ್ತು ಸರ್ಫರಾಜ್ ತರಬೇತಿ ನೀಡುತ್ತಿದ್ದು, ಶಾಲೆ ಮತ್ತು ಅಲ್ಲಿನ ದೈಹಿಕ ಶಿಕ್ಷಕರು ಮತ್ತಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಪುಟ್ಟ ಕ್ರೀಡಾ ಪ್ರತಿಭೆಗಳ ಸಾಧನೆ ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಇವರನ್ನು ಈಗಾಗಲೇ ಸನ್ಮಾನಿಸಿ ಗೌರವಿಸುವ ಮೂಲಕ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುತ್ತಿವೆ.
Newer Posts Older Posts Home
Recent Updates
Recomment to Your Friends
Current Views
Blog Archive
Copyright © 2012. Basnetg.com. All rights reserved.
Home